ADVERTISEMENT

ಕಥೆಯೇ ಆತ್ಮ

ರಾಘವೇಂದೆ ಕೆ.
Published 25 ಏಪ್ರಿಲ್ 2019, 12:54 IST
Last Updated 25 ಏಪ್ರಿಲ್ 2019, 12:54 IST
pg49
pg49   

ದಿವ್ಯಾ ಅವರು ರಾವ್‌ ಸ್ಟಾರ್‌ ಸುವರ್ಣದ ‘ನನ್ನ ಹೆಂಡ್ತಿ ಎಂಬಿಬಿಎಸ್‌’ನ ಗೀತಾ ಆಗಿ ನಟಿಸುತ್ತಿದ್ದಾರೆ. ತಮ್ಮ ಪಾತ್ರದ ಕುರಿತು ಅವರಿಲ್ಲ ಮಾತನಾಡಿದ್ದಾರೆ.

ನಿಮ್ಮ ನಟನೆ ಆರಂಭ ಹೇಗಾಯ್ತು?

ಓದುವ ದಿನಗಳಲ್ಲಿ ಡಾನ್ಸ್‌ ಮಾಡ್ತಾ ಇದ್ದೆ. ಸಾಂಸ್ಕೃತಿಕವಾಗಿ ಸಿಗುವ ಎಲ್ಲ ಅವಕಾಶಗಳನ್ನು ತಪ್ಪದೆ ಉಪಯೋಗಿಸುತ್ತಿದ್ದೆ. ಕಾಲೇಜು ದಿನಗಳ ನಂತರ ಮಾಡೆಲಿಂಗ್‌ ಆರಂಭಿಸಿದೆ. ಅದೃಷ್ಟಕ್ಕೆ ಅವಕಾಶ ಎನ್ನುವುದು ಅದೇ ಹುಡುಕಿಕೊಂಡು ಬಂದಿದೆ. ಮೊದಲು ಸಿನಿಮಾ ಮಾಡಿದೆ. ನಂತರ ತೆಲುಗು ಸಿನಿಮಾಕ್ಕಾಗಿ ಕಾಯುತ್ತಿದ್ದಾಗಲೇ ಈ ಅವಕಾಶ ಸಿಕ್ಕಿತು. ಇದೇ ನನ್ನ ಮೊದಲ ಧಾರಾವಾಹಿ. ಎರಡು ವರ್ಷದ ಹಿಂದೆ ‘ಮಿಸ್‌ ಸೌತ್‌ ಇಂಡಿಯಾ’ ಪುರಸ್ಕಾರಕ್ಕೆ ಆಯ್ಕೆ ಆಗಿದ್ದೆ.

ADVERTISEMENT

ಮೊದಮೊದಲು ನಟನೆ ಎನ್ನುವುದು ಪ್ಯಾಶನ್‌ ಆಗಿತ್ತು. ಆದರೀಗ ಅದು ವೃತ್ತಿಯಾಗಿ ರೂಪಾಂತರಗೊಂಡಿದೆ. ಸ್ಮರಣೀಯ ದಾಖಲೆ ಎನ್ನುವುದು ನನ್ನ ವೃತ್ತಿ ಜೀವನದಲ್ಲಿ ಮಾಡಬೇಕು ಎನ್ನುವ ಆಶೆ ಇದೆ. ಏನಾದರೂ ಮಾಡಿಯೇ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸ ನನಗಿದೆ. ಗಾಳಿ ಬೀಸಿದಂತೆ ಒಮ್ಮೆ ಸುಳಿದು ಹೋದರೆ ಪ್ರಯೋಜನ ಇಲ್ಲ ಎಂದುಕೊಂಡಿದ್ದೇನೆ.

ದೈಹಿಕ ಮತ್ತು ಮಾನಸಿಕ ಫಿಟ್‌ನೆಸ್‌ಗೆ ನೀವು ತೆಗೆದುಕೊಳ್ಳುವ ಕಾಳಜಿ ಏನು?

ನನ್ನ ದೈಹಿಕ ಆರೋಗ್ಯ ಪ್ರಕೃತಿಯ ವರದಾನವಾಗಿದೆ. ಎತ್ತರ, ಮೈಕಟ್ಟಿನ ರಚನೆ ಸಹಜ ಆಕರ್ಷಣೀಯವಾಗಿದೆ. ತಿನ್ನುವ ವಿಷಯದಲ್ಲಿ ಡಯಟ್‌ ಮಾಡಿ ಗೊತ್ತೇ ಇಲ್ಲ. ಮಾಡೆಲಿಂಗ್‌ ಮಾಡುವಾಗ ಜಿಮ್‌ಗೆ ಹೋಗುತ್ತಿದ್ದೆ, ಈಗ ಇಲ್ಲ. ಮಾನಸಿಕವಾಗಿ ‘ಡೋಂಟ್‌ ಕೇರ್‌’ ಅಂತರಲ್ಲ ಹಾಗಿರಬೇಕು. ನಾವು ಸರಿಯಾಗಿದ್ದರೆ ಮುಗೀತು. ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳಬಾರದು. ಅವರ ಬಾಯಿ ನೋಯುವತನಕ ಮಾತನಾಡುತ್ತಾರೆ ಎಂದು ಸುಮ್ಮನಾಗಬೇಕು. ತಲೆಕೆಡಿಸಿಕೊಂಡರೆ ಮಾತ್ರ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅದನ್ನು ಕಾಪಾಡಿಕೊಂಡರೆ ಮುಗೀತು.

ನಿಮ್ಮನ್ನು ನೀವು ಪರಿಚಯಿಸಿಕೊಳ್ಳಿ ಎಂದರೆ...

ಹಾಗೆಂದರೆ, ಮೊದಲು ನಾನು ನನ್ನ ಅಮ್ಮನನ್ನು ಪರಿಚಯಿಸಲು ಇಷ್ಟಪಡುತ್ತೇನೆ. ನಮ್ಮದು ಕೃಷಿ ಕುಟುಂಬ. ಅಮ್ಮ ಚಂದ್ರಕಲಾ ಅವರು ಯಾವತ್ತೂ ನನ್ನ ಆಸೆಯನ್ನು ಹತ್ತಿಕ್ಕಿಲ್ಲ. ಅವರಿಗೆ ನಾನು ಮಾಡುವ ಯಾವುದಾದರೂ ಕೆಲಸ ಇಷ್ಟ ಆಗದಿದ್ದ ಪಕ್ಷದಲ್ಲಿ ಹೀಗೆ ಮಾಡು ಎಂದು ಸಲಹೆ ನೀಡುತ್ತಾರೆಯೇ ವಿನಃ ಅದನ್ನು ಮಾಡದಂತೆ ಒತ್ತಡ ಹಾಕುವುದಿಲ್ಲ. ಸದಾ ನನ್ನ ಬೆಂಬಲಕ್ಕೆ ಅವರು ನಿಂತಿದ್ದಾರೆ. ಅವರು ನನಗೆ ಬೆನ್ನೆಲುಬಾಗಿ ನಿಂತಿದ್ದರಿಂದಲೇ ಏನಾದರೂ ಮಾಡಲು ಸಾಧ್ಯವಾಗಿದೆ. ‌ಅಪ್ಪ ಸುರೇಶ್‌ ಕನಕಪುರದಲ್ಲಿ ಇದ್ದಾರೆ. ಅಣ್ಣ ಸಾಫ್ಟ್‌ವೇರ್‌ ಎಂಜಿನಿಯರ್‌. ಅವನು, ಅಮ್ಮ ಮತ್ತು ನಾನು ಬೆಂಗಳೂರಿನಲ್ಲಿ ಇದ್ದೇವೆ.

ಸಿನಿಮಾ– ಸೀರಿಯಲ್‌ಗಳ ಅನುಭವ ಹೇಗೆನಿಸುತ್ತದೆ?

ಸಿನಿಮಾ ಐದಾರು ತಿಂಗಳಲ್ಲಿ ಒಂದು ಪ್ರಾಜೆಕ್ಟ್‌ ಮುಗಿದು ಹೋಗುತ್ತದೆ. ಸುತ್ತಾಟವೂ ಚೆನ್ನಾಗಿ ಇರುತ್ತದೆ. ಧಾರಾವಾಹಿ ಒಂದು ರೀತಿಯಲ್ಲಿ ಮತ್ತೊಂದು ಶಾಲೆಯಂತೆ ಕಾಣಿಸುತ್ತಿದೆ. ಬೆಳಿಗ್ಗೆ 5ಗಂಟೆಗೆ ಹೋಗುತ್ತೇವೆ. ರಾತ್ರಿ 9.30ಕ್ಕೆ ಬರುತ್ತೇವೆ. ಶೂಟಿಂಗ್‌ ಮನೆಯಲ್ಲಿ ಕೌಟುಂಬಿಕ ವಾತಾವರಣ ನಿರ್ಮಾಣವಾಗಿದೆ. ಸ್ನೇಹ ಸಂಬಂಧ ಚೆನ್ನಾಗಿರುತ್ತದೆ. ನನಗೆ ಸಿನಿಮಾನೇ ಚೆನ್ನಾಗಿರುತ್ತದೆ ಎಂದೆನಿಸುತ್ತದೆ.

ಗೀತಾ– ದಿವ್ಯಾ ಇಬ್ಬರೂ ಹೇಗೆ ನಿಮ್ಮಲ್ಲಿ ಹೊಂದಿಕೊಂಡು ಒಂದಾಗಿದ್ದಾರೆ?

ಗೀತಾಗೂ, ದಿವ್ಯಾಗೂ ಹೆಚ್ಚಿನ ವ್ಯತ್ಯಾಸ ಏನೂ ಇಲ್ಲ. ಎರಡೂ ಒಂದೇ ರೀತಿ ಅಂತ ಅನಿಸುತ್ತದೆ. ಗೀತಾ ಸವಾಲನ್ನು ತೆಗೆದುಕೊಳ್ಳುವ ಹುಡುಗಿ. ಆಕೆಗೆ ಮದುವೆಯಾಗಿದೆ. ಡಾಕ್ಟರ್‌ ಆಗಬೇಕು ಎನ್ನುವ ಆಸೆ ಅವಳದು. ಶಿಕ್ಷಣ ಪಡೆಯದ ಕುಟುಂಬಕ್ಕೆ ಸೊಸೆಯಾಗಿ ಹೋಗಿದ್ದಾಳೆ. ಸಂಸಾರ, ಹಿರಿಯರನ್ನು ನಿಭಾಯಿಸುವ ಜೊತೆಗೆ ಆಕೆಯ ಆಶೆಯಂತೆ ಓದಿಗೆ ಆದ್ಯತೆ ನೀಡುತ್ತಾಳೆ. ಒಂದು ರೀತಿಯಲ್ಲಿ ಆದರ್ಶ ಪಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.