ADVERTISEMENT

ತುಂಟಾಟದ ಹುಡುಗಿಯ ರೀ ಎಂಟ್ರಿ

ವಿದ್ಯಾಶ್ರೀ ಎಸ್.
Published 2 ಜನವರಿ 2020, 19:30 IST
Last Updated 2 ಜನವರಿ 2020, 19:30 IST
ಛಾಯಾ ಸಿಂಗ್‌
ಛಾಯಾ ಸಿಂಗ್‌   

‘ಮುನ್ನುಡಿ’ ಚಿತ್ರದ ಮೂಲದ ಕನ್ನಡ ಸಿನಿರಂಗಕ್ಕೆ ಅಡಿಯಿಟ್ಟ ಇವರು, ಪಂಚಭಾಷೆಗಳಲ್ಲಿ ಮಿಂಚು ಹರಿಸಿದರು.ತುಂಟಾಟದ ಹುಡುಗಿಯೆಂದೇ ಜನಪ್ರಿಯರಾಗಿರುವ ಛಾಯಾ ಸಿಂಗ್‌, ಸದ್ಯ ಕಿರುತೆರೆ ಪ್ರವೇಶಿಸಿ ಅಲ್ಲಿಯೂ ಛಾಪು ಮೂಡಿಸುತ್ತಿದ್ದಾರೆ.

ಅತೀಂದ್ರಿಯ ಕಥನಗಳ ಉಬ್ಬರದ ಸಾಲಿಗೆ ‘ನಂದಿನಿ’ ಧಾರಾವಾಹಿಯೂ ಸೇರುತ್ತದೆ. ಬಹು ಜನಪ್ರಿಯತೆಯನ್ನು ಗಳಿಸಿರುವ ಈ ಧಾರಾವಾಹಿಯಲ್ಲಿ ಒಂದಾನೊಂದು ಕಾಲದಲ್ಲಿ ಸಿನಿಮಾಗಳಲ್ಲಿ ಜನಪ್ರಿಯರಾಗಿದ್ದ ಸಿನಿಮಾ ನಟಿಯರು ಇರುವುದು ವಿಶೇಷ.ಈ ಧಾರಾವಾಹಿಗೆ ಛಾಯಾ ಸಿಂಗ್ ಪ್ರವೇಶವಾಗಿದೆ.ಇದರಲ್ಲಿ ಎರಡು ಭಿನ್ನ ಬಗೆಯ ಪಾತ್ರಕ್ಕೆ ಇವರು ಜೀವ ತುಂಬುತ್ತಿದ್ದಾರೆ.

ಧಾರಾವಾಹಿಯ ಕಥೆ ಕೇಳಿದಾಗ ಮರು ಮಾತನಾಡದೆ ಒಪ್ಪಿಕೊಂಡೆ ಎನ್ನುವ ಇವರು, ತಮ್ಮ ಪಾತ್ರವನ್ನು ನಿರೀಕ್ಷೆಗಿಂತಹೆಚ್ಚು ಪ್ರೀತಿಯಿಂದ ಜನ ಒಪ್ಪಿಕೊಂಡಿರುವುದಕ್ಕೆ ಸಂತಸಗೊಂಡಿದ್ದಾರೆ.

ADVERTISEMENT

‘ನಾನು ನಟನೆಯಿಂದ ದೂರವಾಗಿದ್ದೇನೆ ಎಂದು ಭಾವಿಸಿ ಯಾರೂ ನನ್ನನ್ನು ಸಂಪರ್ಕಿಸಿರಲಿಲ್ಲ. ಆದರೆ, ಈಗ ಒಂದೊಳ್ಳೆ ಅವಕಾಶ ಸಿಕ್ಕಿದೆ. ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದೇನೆ’ ಎಂದು ಮತ್ತೆಬಣ್ಣ ಹಚ್ಚಿದ ಬಗೆಯನ್ನು ವಿವರಿಸಿದರು.

ಸವಾಲೊಡ್ಡುವ ಪಾತ್ರಗಳ ನಿರೀಕ್ಷೆಯಲ್ಲಿದ್ದ ಇವರಿಗೆ,ಮಾಮೂಲಿ ಜಾಡಿಗಿಂತ ವಿಭಿನ್ನವಾಗಿರುವ ಪಾತ್ರವಿದೆ ಎಂಬ ನಿರೀಕ್ಷೆಯನ್ನು ‘ಜನನಿ’ ಪಾತ್ರ ನನಸಾಗಿಸಿದೆಯಂತೆ. ‘ನಂದಿನಿ’ಯಲ್ಲಿನ ಪಾತ್ರ ತುಂಬಾ ಇಷ್ಟವಾಯಿತು. ‘ತುಂಟಾಟ’ ಸಿನಿಮಾದಲ್ಲಿರುವಂತೆ ಇದರಲ್ಲಿಯೂ ಲವಲವಿಕೆಯ ಪಾತ್ರವನ್ನು ನಿಭಾಯಿಸುತ್ತಿದ್ದೇನೆ. ಜನನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ನಂದಿನಿ ಪಾತ್ರಧಾರಿಯ ಆತ್ಮವೂ ನನ್ನಲ್ಲಿ ಆಗಾಗ್ಗೆ ಸೇರುತ್ತದೆ. ಹಾಗಾಗಿ ಎರಡು ವಿಭಿನ್ನ ಪಾತ್ರಗಳನ್ನು ನಿಭಾಯಿಸುವ ಜವಾಬ್ದಾರಿ ನನ್ನ ಮೇಲಿದೆ. ಸವಾಲೆಸುವ ಪಾತ್ರ’ ಎಂದು ಕಣ್ಣರಳಿಸುತ್ತಾರೆ ಛಾಯಾ.

ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಛಾಯಾ ಸಿಂಗ್‌, ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಜಾಣ್ಮೆ ಮೆರೆದಿದ್ದಾರೆ. ತಮಿಳಿನ ‘ರನ್’ ಧಾರಾವಾಹಿಗೂ ಬಣ್ಣ ಹಚ್ಚಿದ್ದು, ತಮಿಳು ಚಿತ್ರಗಳಾದ ‘ಮಹಾ’ ಹಾಗೂ ‘ತಮಿಳರಸನ್’ನಲ್ಲೂ ನಟಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಿಂದ ದೂರಾದಂತೆ ಇತ್ತಲ್ಲಾ ಎಂಬ ಪ್ರಶ್ನೆಗೆ, ‘ಹಾಗೇನು ಇಲ್ಲ. ತಮಿಳು, ತೆಲುಗಿನಲ್ಲಿ ನಟಿಸುತ್ತಿದ್ದೆ. ಆದರೆ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಪಾತ್ರಗಳ ಆಯ್ಕೆಯಲ್ಲಿ ನಾನು ತುಂಬಾ ಚ್ಯೂಸಿ. ಚಿಕ್ಕ ಪಾತ್ರವಾದರೂ ಸರಿಯೇ ಜನರ ಮನಸ್ಸಿನ ಆಳಕ್ಕೆ ಇಳಿಯುವಂತಿರಬೇಕು. ಈ ಕಾರಣಕ್ಕೆ ಹಲವು ಪಾತ್ರಗಳನ್ನು ತಿರಸ್ಕರಿಸಿದ್ದೇನೆ. ಹಾಗಾಗಿ ಅಭಿಮಾನಿಗಳು ನನ್ನನ್ನು ಮಿಸ್‌ ಮಾಡಿಕೊಂಡಿರಬಹುದು’ ಎಂದು ನಗುತ್ತಲೇ ಉತ್ತರಿಸಿದರು.

ಉತ್ತರ ಭಾರತ ಮೂಲದವರಾದರೂ ಬೆಂಗಳೂರಿನಲ್ಲೇ ಬೆಳೆದು ಕನ್ನಡಿಗರೇ ಆಗಿರುವ ಛಾಯಾ ಸಿಂಗ್ ಈ ಹಿಂದೆ ‘ಸರೋಜಿನಿ’, ‘ಪ್ರೇಮಕಥೆಗಳು’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.

ಡಯೆಟ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವರಲ್ಲ ಇವರು.‘ದೇಹ, ಆರೋಗ್ಯ ಚೆನ್ನಾಗಿರಬೇಕು ಅನ್ನುವುದು ನಿಜ. ಆದರೆ ಡಯಟ್‌ ಗಿಯಟ್‌ ಅಂತೆಲ್ಲ ಬಾಯಿಕಟ್ಟುವುದು ನನಗೆ ಸಾಧ್ಯವೇ ಇಲ್ಲ. ಚೆನ್ನಾಗಿ ತಿನ್ನುತ್ತೇನೆ. ಕಣ್ತುಂಬ ನಿದ್ದೆ ಮಾಡುತ್ತೇನೆ. ಮನೆಯಲ್ಲಿಯೇ ವ್ಯಾಯಾಮ ಮಾಡುತ್ತೇನೆ. ಪ್ರತಿದಿನ ತಪ್ಪದೇ ಯೋಗ ಮಾಡುವುದರಿಂದ ಆರೋಗ್ಯಕಾಪಾಡಿಕೊಳ್ಳಲು ಸಹಾಯಕವಾಗಿದೆ.ಹಲವು ವರ್ಷಗಳ ನಂತರ ಬಂದರೂ, ಜನ ನೀವು ಮೊದಲಿನಂತೆಯೇ ಇದ್ದೀರಾ ಎಂದು ಮೆಚ್ಚುಗೆಯ ಮಾತಗಳನ್ನಾಡಿದಾಗ ಉತ್ಸಾಹ ಹೆಚ್ಚುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.