ADVERTISEMENT

ಗದ್ದೆಗಳು: ಕಪ್ಪೆಗಳ ಔತಣತಾಣಗಳು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 19:30 IST
Last Updated 28 ಡಿಸೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗದ್ದೆಗಳಲ್ಲಿ ಕಪ್ಪೆಗಳು ವಾಸಿಸುವುದು ಸಾಮಾನ್ಯ. ಬೆಳೆಗಳನ್ನು ಹಾಳುಮಾಡುವ ಲೀಫ್-ಹಾಪರ್‌ನಂತಹ ಕೀಟಕಗಳನ್ನು ಭಕ್ಷಿಸುವ ಈ ಕಪ್ಪೆಗಳನ್ನು ಜೈವಿಕ ನಿಯಂತ್ರಣ ಸೈನಿಕರೆಂದು ಹೇಳಬಹುದು. ಗಿಡಗಳ ರಸವನ್ನು ಹೀರಿ ಅದರ ಚೈತನ್ಯವನ್ನು ಕಡಿಮೆ ಮಾಡಿ, ಅನೇಕ ರೋಗಗಳನ್ನು ಉಂಟು ಮಾಡುವ ವೈರಸ್‌ ಮತ್ತು ಇತರೆ ರೋಗಕಾರಕ ಕ್ರಿಮಿಗಳ ನಿಯಂತ್ರಣದಲ್ಲೂ ಕಪ್ಪೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇತ್ತೀಚೆಗೆ ಬೆಂಗಳೂರಿನ ಸಂಶೋಧಕರು ಗದ್ದೆಗಳಲ್ಲಿನ ಕಪ್ಪೆಗಳನ್ನು ಸಮೀಕ್ಷಿಸಿ, ಅವುಗಳ ಆಹಾರಕ್ರಮವನ್ನು ವಿಶ್ಲೇಷಿಸಿದ್ದಾರೆ.

ಸಂಶೋಧಕರು ಎರಡು ಕಪ್ಪೆಗಳನ್ನು ಉದಾಹರಣೆಯಾಗಿ ಪರಿಗಣಿಸಿ, ಅವುಗಳ ಆಹಾರಸೇವನೆ ಮತ್ತು ಹೊಟ್ಟೆಯ ವಿವರಗಳ ಬಗ್ಗೆ ಸಾಕಷ್ಟು ವಿಶ್ಲೇಷಣೆಯನ್ನು ಮಾಡಿದ್ದಾರೆ. ಕೀಟಕಗಳನ್ನು ಸಂಹರಿಸಿ, ಬೆಳೆಗಳನ್ನು ರಕ್ಷಿಸುವಲ್ಲಿ ಕಪ್ಪೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂಬುದಕ್ಕೆ ಈ ಅಧ್ಯಯನ ಸಾಕ್ಷಿಯಾಗಿದೆ. ಕೀಟನಾಶಕಗಳ ವಿಪರೀತ ಬಳಕೆಯಿಂದಾಗಿ ಹಲವು ಕೀಟಕಗಳು ನಾಶವಾಗಿವೆ. ಇದರಿಂದಾಗಿ ಕಪ್ಪೆಗಳ ಆಹಾರ ಆಯ್ಕೆ ಕೆಲವೇ ಕೀಟಕಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಬೆಳೆಗಳನ್ನು ನಾಶಮಾಡುವ ಕೀಟಕಗಳನ್ನು ಕಪ್ಪೆಗಳು ಆಹಾರವಾಗಿ ಸೇವಿಸುತ್ತವೆ. ಆದ್ದರಿಂದ ಅವನ್ನು ತೋಟ–ಗದ್ದೆಗಳಂಥ ಪರಿಸರದ ನಿಯಂತ್ರಣ ವ್ಯವಸ್ಥೆಯ ಪ್ರಮುಖ ಪಾತ್ರಧಾರಿಗಳು ಎನ್ನಬಹುದು. ಆದರೆ ಅವುಗಳ ಭವಿಷ್ಯ ಅಪಾಯದಲ್ಲಿದೆ. ಇಂತಹ ಪ್ರದೇಶಗಳಲ್ಲಿ ಆವಾಸಸ್ಥಾನದ ಕೊರತೆ ಮತ್ತು ಅತಿಯಾದ ಕೃಷಿ ರಾಸಾಯನಿಕಗಳ ಬಳಕೆ – ಈ ಎರಡು ಸಂಯೋಜಿತ ವಿಷಯಗಳು ಕಪ್ಪೆಗಳ ಸಂಖ್ಯೆಯ ಇಳಿತಕ್ಕೆ ಮುಖ್ಯ ಕಾರಣವೆಂದು ಹೇಳಬಹುದಾಗಿದೆ.

ADVERTISEMENT

ಕಪ್ಪೆಗಳ ಸಾಂದ್ರತೆ ಮತ್ತು ಅವುಗಳ ಆಹಾರಪದ್ಧತಿಯನ್ನು ಸಂಶೋಧಿಸಲು ಸಂಶೋಧಕರು ಕಪ್ಪೆಗಳಿರುವ ಬತ್ತದ ಗದ್ದೆಗಳನ್ನು ಸಮೀಕ್ಷಿಸಿದರು. ಬಹಳ ಸಾಮಾನ್ಯವಾಗಿ ಕಂಡುಬರುವ ಮಿನಿರ್ವಾರ್ಯ ಕಾಪೆರಾಟಾ ಮತ್ತು ಮೈಕ್ರೊಹೈಲ ಓರ್ನಾಟ ಎಂಬ ಎರಡು ಕಪ್ಪೆಗಳ ಪ್ರಭೇದವನ್ನು ಸಂಗ್ರಹಿಸಿ, ಅವುಗಳ ಹೊಟ್ಟೆಯ ಅಂಶಗಳನ್ನು ಪರಿಶೀಲಿಸಲಾಯಿತು. ಸಮೀಕ್ಷಿಸಿದ 60 ಗದ್ದೆಗಳಲ್ಲಿ ಆರು ಪ್ರಭೇದಕ್ಕೆ ಸೇರಿದ 1705 ಕಪ್ಪೆಗಳಿದ್ದವು. ಮುಖ್ಯವಾಗಿ ಈ ಎರಡು ಪ್ರಭೇದದ ಕಪ್ಪೆಗಳ ಹೊಟ್ಟೆಯ ಭಾಗಗಳನ್ನು ಹೊರತೆಗೆದು ಪರೀಕ್ಷಿಸಿದಾಗ 261 ಬಗೆಯ ಕೀಟಕಗಳು ಕಂಡುಬಂದವು. ನಂತರ ಅವುಗಳನ್ನು ವಿಂಗಡಿಸಿ ವಿಶ್ಲೇಷಿಸಲಾಯಿತು.

‘ಈ ಎರಡು ಪ್ರಭೇದಗಳು ಒಟ್ಟಾಗಿ ಇದ್ದಲ್ಲೆಲ್ಲ ಬಗೆಬಗೆಯ ಕೀಟಗಳನ್ನು ಅವು ತಿನ್ನುತ್ತಿದ್ದವು ಎಂಬುದು ಮುಖ್ಯವಾಗಿ ಕಂಡುಬಂದಿದೆ’ ಎನ್ನುತ್ತಾರೆ, ಈ ಸಂಶೋಧನೆಯ ನೇತೃತ್ವ ವಹಿಸಿದ ಡಾ. ಕೆ. ಎಸ್. ಶೇಷಾದ್ರಿ. ಮಿನಿರ್ವಾರ್ಯ ಕಾಪೆರಾಟಾ ಕಪ್ಪೆಗೆ ವಿವಿಧ ರೀತಿಯ ಕೀಟಗಳಾದ ಜೀರುಂಡೆ, ಲಾರ್ವ ಮತ್ತು ಜೇಡಗಳು ತಿನ್ನಲು ಆದ್ಯತೆ. ಆದರೆ ಮೈಕ್ರೊಹೈಲ ಓರ್ನಾಟ ಕಪ್ಪೆಯ ಆದ್ಯತೆ ಬೇರೆಯಂತೆ. ಅವು ಕೀಟಗಳ ವರ್ಗಕ್ಕೆ ಸೇರಿದ ಕಣಜಗಳು, ಇರುವೆಗಳು ಮತ್ತು ಗೆದ್ದಲುಗಳನ್ನು ಹೆಚ್ಚು ತಿನ್ನುತ್ತವೆಯಂತೆ. ಸಾಮಾನ್ಯವಾಗಿ ಈ ಲಾರ್ವ/ಮರಿಹುಳುಗಳು, ಕಣಜಗಳು ಮತ್ತು ಜೀರುಂಡೆಗಳು ಬತ್ತದ ಗದ್ದೆಗಳನ್ನು ನಾಶ ಮಾಡುವ ಕೀಟಕಗಳೇ! ಸಂಶೋಧಕರಿಗೆ ಕಪ್ಪೆಗಳ ಹೊಟ್ಟೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಣ್ಣ ಕಲ್ಲು ಮತ್ತು ಮಣ್ಣಿನ ಅಂಶಗಳೂ ಸಿಕ್ಕಿವೆ. ಕೀಟಕಗಳಲ್ಲಿನ ಕ್ಯಾರಾಪೇಸ್‌ನಂತಹ ಜೀರ್ಣವಾಗಲು ಕಷ್ಟಕರವಾಗಿರುವ ಭಾಗವನ್ನು ಸುಲಭವಾಗಿ ಒಡೆದು ಜೀರ್ಣಿಸಲು ಕಪ್ಪೆಗಳಿಗೆ ಈ ಕಲ್ಲುಗಳು ಸಹಾಯ ಮಾಡುತ್ತವೆ ಎಂದೂ ಊಹಿಸಲಾಗಿದೆ.

ಕಪ್ಪೆಗಳು ಕೆಲವು ಕೀಟಕಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಅವನ್ನು ಆಹಾರವಾಗಿ ಸೇವಿಸುತ್ತವೆ. ಹೀಗೆಯೇ ವಿಭಿನ್ನ ಬಗೆಯ ಬೇಟೆಯ ತಂತ್ರಗಳನ್ನು ಕಪ್ಪೆಗಳು ಅಳವಡಿಸಿಕೊಂಡಿರುತ್ತವೆ. ಪರಿಸರದ ಹಿನ್ನೆಲೆ ಮತ್ತು ಬಣ್ಣಕ್ಕೆ ತಕ್ಕ ಹಾಗೆ ತನ್ನನ್ನು ಬದಲಿಸಿಕೊಂಡು, ಅವಿತು ಕುಳಿತು ಬೇಟೆಗೆ ಕಾಯುವುದು ಮಿನಿರ್ವಾರ್ಯ ಕಾಪೆರಾಟಾ ಕಪ್ಪೆಯ ವೈಶಿಷ್ಟ್ಯ. ಬೇಟೆಗಾರನಂತೆ ಒಮ್ಮೆಲೆ ದಾಳಿ ಮಾಡಿ ಕೀಟಕಗಳನ್ನು ಹಿಡಿದು ಸೇವಿಸುವುದು ಮೈಕ್ರೊಹೈಲ ಓರ್ನಾಟ ಕಪ್ಪೆಯ ಕ್ರಮ. ಕೀಟಕಗಳೇ ಕಪ್ಪೆಗಳ ಔತಣವಾದರೂ, ಅವುಗಳ ಆಯ್ಕೆಯಲ್ಲಿ ಕಪ್ಪೆಯಿಂದ ಕಪ್ಪೆಗೆ ವ್ಯತ್ಯಾಸ ಇರುವುದು ಗಮನಾರ್ಹ. ಮುಂದಿನ ದಿನಗಳಲ್ಲಿ, ಕಪ್ಪೆಗಳ ಆಹಾರಪದ್ಧತಿ ಮತ್ತು ಕಪ್ಪೆಗಳ ಮೇಲೆ ಕೀಟನಾಶಕಗಳ ಪರಿಣಾಮದ ಬಗ್ಗೆ ಹೆಚ್ಚು ಗಂಭೀರ ಅಧ್ಯಯನ ಅಗತ್ಯವೆನ್ನುತ್ತಾರೆ ಸಂಶೋಧಕರು.

ಬೇರೆ ಕೀಟಕಗಳಂತೆ ಧಾನ್ಯಗಳನ್ನು ಸೇವಿಸುವ ಕೀಟಕಗಳು ಕೀಟನಾಶಕಗಳ ವಿರುದ್ಧ ಪ್ರತಿರೋಧವನ್ನು ಬೆಳೆಸಿಕೊಳ್ಳಬಹುದು. ಆದರೆ ಅವು ಜೈವಿಕ ನಿಯಂತ್ರಣ ಸೈನಿಕರೆಂದು ಹೆಸರು ಪಡೆದ ಕಪ್ಪೆಗಳಿಂದ ತಪ್ಪಿಸಿಕೊಳ್ಳಲು ಅಸಾಧ್ಯ. ಕಪ್ಪೆಗಳು ಈ ಕೀಟಕಗಳನ್ನು ಆಹಾರವನ್ನಾಗಿ ಸೇವಿಸುವುದರಿಂದ ಕೀಟನಾಶಕಗಳ ಹಾನಿಕಾರಕವಾದ ಉಪಯೋಗವನ್ನು ತಡೆಯಬಹುದು. ಮಾತ್ರವಲ್ಲ, ಕೀಟನಾಶಕಗಳಿಗೆ ಖರ್ಚು ಮಾಡಬೇಕಾದ ಹಣವನ್ನೂ ಉಳಿಸುತ್ತದೆ; ಜೊತೆಗೆ ಪ್ರಕೃತಿಯ ವೈವಿಧ್ಯನಾಶವನ್ನೂ ತಡೆಗಟ್ಟಬಹುದು. ಪರಿಸರಹಾನಿಯನ್ನು ಉಂಟುಮಾಡುವ ಕೀಟನಾಶಕ ಬೇಕೇ ಅಥವಾ ನಿಸರ್ಗದ ಆಹಾರಜಾಲವು (ಫೂಡ್ ವೆಬ್‌ನಿಂದ) ಸಹಜವಾಗಿಯೇ ಸಿದ್ಧಗೊಳಿಸಲಾಗಿರುವ ಜೈವಿಕ ನಿಯಂತ್ರಣ ಸೈನಿಕನಾದ ಕಪ್ಪೆಗಳು ಬೇಕೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ.

(ಲೇಖಕಿ: ಸಂಶೋಧಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.