ADVERTISEMENT

ಬಣ್ಣದ ಪುಕ್ಕದ ಸುಂದರ ಹಕ್ಕಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 19:30 IST
Last Updated 12 ಜೂನ್ 2019, 19:30 IST
ಮುದ್ದು ಸನ್‌ಬರ್ಡ್
ಮುದ್ದು ಸನ್‌ಬರ್ಡ್   

ಹಕ್ಕಿಗಳು ಎಂದ ಕುಡಲೇ ಅವುಗಳ ಆಕರ್ಷಕ ದೇಹರಚನೆ, ಬಣ್ಣ ಬಣ್ಣದ ಪುಕ್ಕ ಗಮನ ಸೆಳೆಯುತ್ತದೆ. ಸೌಂದರ್ಯಕ್ಕೆ ಪ್ರತೀಕ ಎಂಬಂತಿರುವ ಹಕ್ಕಿಗಳು ಕೆಲವು ಇವೆ. ಅವುಗಳಲ್ಲಿ ಸನ್‌ಬರ್ಡ್‌ ಕೂಡ ಒಂದು. ಹೀಗಾಗಿಯೇ ಇದನ್ನು ಬ್ಯೂಟಿಫುಲ್‌ ಸನ್‌ಬರ್ಡ್ (Beautiful Sunbird) ಎಂದು ಕರೆಯುತ್ತಾರೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಸಿನಿರಿಸ್‌ ಪಲ್ಚೆಲಸ್‌ (Cinnyris pulchellus). ಇದು ನೆಕ್ಟಾರಿನಿಡೆ (Nectariniidae) ಕುಟುಂಬಕ್ಕೆ ಸೇರಿದೆ. ಇದರ ಪ್ರಭೇದಗಳನ್ನು ಪಲ್ಚೆಲಸ್ ಎಂದು ಕರೆಯುತ್ತಾರೆ. ಇದರಲ್ಲಿ ಈವರೆಗೆ ಸುಮಾರು 100 ತಳಿಗಳನ್ನು ಗುರುತಿಸಲಾಗಿದೆ.

ಹೇಗಿರುತ್ತದೆ?
ಹಸಿರು, ಕಪ್ಪು, ಕೆಂಪು, ಹಳದಿ ಮತ್ತು ನೀಲಿ ಬಣ್ಣದ ಪುಕ್ಕದಿಂದ ದೇಹ ಆವರಿಸಿರುತ್ತದೆ. ತಲೆ, ಕತ್ತು, ಕುತ್ತಿಗೆ, ಕೆನ್ನೆ, ಬೆನ್ನಿನ ಅರ್ಧಭಾಗದವರೆಗೆ ಮತ್ತು ಎದೆಯ ಭಾಗದವರೆಗೆ ಹಸಿರು ಬಣ್ಣದ ಪುಕ್ಕವಿದ್ದು, ಹೊಳೆಯುತ್ತಿರುತ್ತದೆ. ಸೊಂಟದ ಭಾಗದಲ್ಲಿ ಹಳದಿ ಬಣ್ಣದ ಪುಕ್ಕವಿದ್ದರೆ, ಉದರದ ಮಧ್ಯಭಾಗದಲ್ಲಿ ಕೆಂಪು ಬಣ್ಣದ ಪುಕ್ಕವಿರುತ್ತದೆ. ಕಾಲುಗಳು, ಉದರದ ಕೆಳಭಾಗ ಮತ್ತು ಬೆನ್ನಿನ ಮಧ್ಯಭಾಗದವರೆಗೆ ಕಪ್ಪು ಬಣ್ಣದ ಪುಕ್ಕವಿರುತ್ತದೆ. ಬಾಲ ನೀಳವಾಗಿದ್ದು, ನೀಲಿ ಬಣ್ಣದ ಪುಕ್ಕದಿಂದ ಕೂಡಿರುತ್ತದೆ. ಕೊಕ್ಕು ಚೂಪಾಗಿ ಮತ್ತು ನೀಳವಾಗಿದ್ದು, ತುದಿಯಲ್ಲಿ ಬಾಗಿರುತ್ತದೆ. ಕಾಲುಗಳು ನೀಳವಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ನಾಲ್ಕು ಬೆರಳುಗಳಿದ್ದು, ಉಗುರುಗಳು ನೀಳವಾಗಿ ಬೆಳೆದಿರುತ್ತವೆ. ಹೆಣ್ಣಿಗಿಂತ ಗಂಡು ಹಕ್ಕಿ ಹೆಚ್ಚು ಸುಂದರವಾಗಿರುತ್ತದೆ.

ADVERTISEMENT

ಎಲ್ಲಿದೆ?
ಪೂರ್ವ ಆಫ್ರಿಕಾ ಮತ್ತು ಪಶ್ಚಿಮ ಆಫ್ರಿಕಾದ ಹಲವು ಪ್ರದೇಶಗಳಲ್ಲಿ ಇದನ್ನು ಕಾಣಬಹುದು. ಆಫ್ರಿಕಾದ ಸವನ್ನಾ ಹುಲ್ಲುಗಾವಲು ಪ್ರದೇಶ, ಅರೆಕಾಡು ಪ್ರದೇಶ, ಕುರುಚಲು ಗಿಡ ಬೆಳೆಯುವ ಪ್ರದೇಶ, ಕಾಡಿಗೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ.

ಜೀವನಕ್ರಮ ಮತ್ತು ವರ್ತನೆ
ಇದು ಒಂಟಿಯಾಗಿರಲು ಇಷ್ಟಪಡುವ ಹಕ್ಕಿ. ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರ ಗಂಡು ಮತ್ತು ಹೆಣ್ಣು ಹಕ್ಕಿಗಳು ಜೊತೆಯಾಗಿರುತ್ತವೆ. ಆಹಾರ ಅರಸುತ್ತಾ ದಿನವಿಡೀ ಸುತ್ತಾಡುತ್ತದೆ. ಕತ್ತಲಾಗುತ್ತಿದ್ದಂತೆಯೇ ಮರಗಳ ಮೇಲೆ ವಿಶ್ರಾಂತಿ ಪಡೆಯುತ್ತದೆ. ಆಹಾರ ಮತ್ತು ನೀರು ಹೆಚ್ಚಾಗಿ ಸಿಗುವಂತಹ ಪ್ರದೇಶಗಳ ಬಳಿ ಗೂಡು ಕಟ್ಟಿಕೊಳ್ಳುತ್ತದೆ. ಗಂಡು ಹಕ್ಕಿ ನಿರ್ದಿಷ್ಟ ಗಡಿ ಗುರುತಿಸಿಕೊಂಡು ಜೀವಿಸುತ್ತದೆ. ತನ್ನ ಗಡಿಯೊಳಗೆ ಹೆಣ್ಣು ಹಕ್ಕಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸುತ್ತದೆ. ದೇಹಕ್ಕೆ ಬೇಕಾಗುವಷ್ಟು ಆಹಾರ ದೊರೆತ ನಂತರ ನೀರು ಇರುವಂತಹ ಪ್ರದೇಶಗಳನ್ನು ಹುಡುಕಿ ಗರಿಗಳನ್ನು ಸ್ವಚ್ಛ ಮಾಡಿಕೊಳ್ಳುತ್ತದೆ.

ಆಹಾರ
ಇದು ಮಿಶ್ರಾಹಾರಿ ಹಕ್ಕಿ. ಹೂವಿನ ಮಕರಂದವನ್ನು ಹೀರುವುದಕ್ಕೆ ಹೆಚ್ಚು ಇಷ್ಟಪಡುತ್ತದೆ. ಬೆರ್‍ರಿಗಳು, ವಿವಿಧ ಬಗೆಯ ಹಣ್ಣುಗಳನ್ನು ಹೆಚ್ಚು ಇಷ್ಟಪಡುತ್ತದೆ. ಪ್ರೊಟೀನ್‌ಗಳಿಗಾಗಿ ವಿವಿಧ ಬಗೆಯ ಕೀಟಗಳು, ಜೇಡ ಹುಳುಗಳನ್ನು ಭಕ್ಷಿಸುತ್ತದೆ.

ಸಂತಾನೋತ್ಪತ್ತಿ
ಮಳೆಗಾಲ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಈ ಅವಧಿಯಲ್ಲಿ ಒಣಗಿದ ಹುಲ್ಲು, ಕಡ್ಡಿಗಳು, ಎಲೆಗಳು, ಮರದ ಕಾಂಡಗಳು, ವಿವಿಧ ಹಕ್ಕಿಗಳ ಉದುರಿದ ಪುಕ್ಕವನ್ನು ಸಂಗ್ರಹಿಸಿ ಮರದ ಕವಲುಗಳಲ್ಲಿ ಹೆಣ್ಣು ಹಕ್ಕಿ ಗೂಡು ಕಟ್ಟುತ್ತದೆ. ಹೆಣ್ಣು ಸನ್‌ಬರ್ಡ್‌ನ ಗಮನ ಸೆಳೆಯಲು ಗಂಡು ಹಕ್ಕಿಗಳು ತಮ್ಮ ಸುಂದರ ಗರಿಗಳನ್ನು ಹರಡಿಸಿ, ಇಂಪಾಗಿ ಹಾಡುತ್ತಾ ವಿವಿಧ ಕಸರತ್ತುಗಳನ್ನು ನಡೆಸುತ್ತವೆ. ಹೆಣ್ಣು ತನಗಿಷ್ಟವಾದ ಗಂಡು ಹಕ್ಕಿಯ ಜೊತೆ ಕೂಡಿ ಬಾಳಲು ಆರಂಭಿಸುತ್ತದೆ. ಒಂದು ಬಾರಿಗೆ 1 ಅಥವಾ 2 ಮೊಟ್ಟೆಗಳನ್ನು ಇಡುತ್ತದೆ. 14ರಿಂದ 15ದಿನಗಳ ವರೆಗೆ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಗಳಿಗೆ ಪುಕ್ಕ ಮೂಡಿರುವುದಿಲ್ಲ. 14ರಿಂದ 18 ದಿನಗಳ ನಂತರ ಪುಕ್ಕ ಮೂಡಿದ ಮೇಲೆ ಹಾರಲು ಆರಂಭಿಸುತ್ತದೆ. ಹಾರಲು ಆರಂಭಿಸಿದ ಎರಡು ವಾರಗಳ ನಂತರವೂ ತಾಯಿ ಆರೈಕೆಯಲ್ಲೇ ಬೆಳೆಯುತ್ತದೆ.

ಸ್ವಾರಸ್ಯಕರ ಸಂಗತಿಗಳು
* ಇದರ ಹಲವು ಲಕ್ಷಣಗಳು ಸ್ಪೈಡರ್ ಹಂಟರ್ ಹಕ್ಕಿಯನ್ನು ಹೋಲುತ್ತವೆ.
* ಇದು ಮನುಷ್ಯರೊಂದಿಗೆ ಹೊಂದಿಕೊಳ್ಳುವ ಗುಣ ಹೊಂದಿದ್ದು, ಹಲವರು ಇದನ್ನು ಮನೆಗಳಲ್ಲಿ ಸಾಕಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ.
* ದೊಡ್ಡ ಗಾತ್ರದ ಹಕ್ಕಿಗಳು ಇವನ್ನು ಹೆಚ್ಚಾಗಿ ಬೇಟೆಯಾಡುತ್ತವೆ. ಹೀಗಾಗಿ ಈ ಹಕ್ಕಿ ತನ್ನನ್ನು ರಕ್ಷಿಸಿಕೊಳ್ಳಲು ಇತರೆ ಹಕ್ಕಿಗಳ ಗುಂಪಿನಲ್ಲೂ ಇರುತ್ತದೆ.
* ಕನ್ನಡಿಯಲ್ಲಿ ತನ್ನ ರೂಪ ಗುರುತಿಸಿಕೊಳ್ಳುವ ಸಾಮರ್ಥ್ಯ ಈ ಹಕ್ಕಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.