ADVERTISEMENT

ಚಂದದ ಜುಟ್ಟಿನ ಕಪ್ಪು ಕೊಕ್ಕರೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 19:45 IST
Last Updated 24 ಅಕ್ಟೋಬರ್ 2019, 19:45 IST
ಕಪ್ಪು ಕೊಕ್ಕರೆ
ಕಪ್ಪು ಕೊಕ್ಕರೆ   

ಬಹಳ ಮುದ್ದಾಗಿ ಕಾಣುವ ಕಪ್ಪು ಕೊಕ್ಕರೆಯ ವೈಜ್ಞಾನಿಕ ಹೆಸರು ಬಲೆರಿಕಾ ಪವೊನಿನಾ (Balearica pavonina). ಇದರ ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.

ಹೇಗಿರುತ್ತೆ?

ಕಪ್ಪು ಪುಕ್ಕಗಳಿಂದ ಕೂಡಿರುವ ಕೊಕ್ಕರೆಯ ರೆಕ್ಕೆಗಳು ಮಾತ್ರ ಬಿಳಿ ಮತ್ತು ಚಿನ್ನದ ಬಣ್ಣದಲ್ಲಿರುತ್ತದೆ. ಕಣ್ಣಿನ ಕೆಳಭಾಗದಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಪುಕ್ಕಗಳಿರುತ್ತದೆ. ತಲೆಯ ಕೆಳ ಭಾಗದಲ್ಲಿ ಸಣ್ಣ ಚೀಲವಿದ್ದು, ಜೋರಾಗಿ ಕೂಗಲು ಸಹಕಾರಿಯಾಗಿದೆ. ಕಣ್ಣುಗಳು ಕಂದು ಬಣ್ಣದಲ್ಲಿದ್ದು, ಕಾಲು ಹಾಗೂ ಪಾದಗಳು ಕಪ್ಪು ಬಣ್ಣದಲ್ಲಿಯೇ ಇರುತ್ತದೆ. ಸಣ್ಣ ಮರಿಗಳು ಬೂದು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ. ನೋಡಲು ಆಕರ್ಷಕವಾಗಿರುತ್ತದೆ.

ADVERTISEMENT

ಎಲ್ಲಿರುತ್ತೆ?

ಆಫ್ರಿಕಾದ ಸಹರಾ ಮರುಭೂಮಿ, ಸೂಡಾನ್‌, ಪೂರ್ವ ಯುಥೋಪಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸೆನೆಗಲ್‌ , ಗಾಂಬಿಯಾದ ಕರಾವಳಿ ತೀರಗಳಲ್ಲೂ ಕಾಣಬಹುದು. ಪೂರ್ವ ಆಫ್ರಿಕಾದಲ್ಲಿ ಕಪ್ಪು ಕೊಕ್ಕರೆಯು ಹೆಚ್ಚಾಗಿ ತೇವಯುತ ಪ್ರದೇಶವನ್ನು ಅರಸಿಕೊಂಡು ಹೋಗುತ್ತದೆ. ಇದಲ್ಲದೇ ನದಿ ತೀರ, ಸಮುದ್ರ ಪ್ರದೇಶ, ಸಿಹಿನೀರಿನ ಕೊಳಗಳಲ್ಲಿ ಇರಲು ಇಷ್ಟಪಡುತ್ತದೆ.

ಆಹಾರಪದ್ಧತಿ

ಮಿಶ್ರಾಹಾರಿಯಾಗಿದ್ದು, ಸಣ್ಣ ಹುಳುಗಳು, ಹುಪ್ಪಟೆಗಳು, ಹಲ್ಲಿಗಳು, ಮೀನಿನ ಮರಿಗಳು, ಚಿಕ್ಕ ಚಿಕ್ಕ ಮೀನುಗಳನ್ನು ತಿಂದು ಬದುಕುತ್ತದೆ. ಜತೆಗೆ ಬಗೆ ಬಗೆಯ ಹಣ್ಣಿನ ಬೀಜಗಳೆಂದರೆ ಇದಕ್ಕೆ ಇಷ್ಟ.

ವರ್ತನೆ

ಸಾಮಾನ್ಯವಾಗಿ ಆಯಾ ಪ್ರಭೇದಗಳಿಗೆ ಅನುಸಾರವಾಗಿ ತನ್ನ ಗೂಡನ್ನು ಹುಡುಕಿಕೊಳ್ಳುತ್ತದೆ. ಅಪರೂಪಕ್ಕೆ, ಋತುವಿಗೆ ಅನುಸಾರವಾಗಿ ಹಾರಾಟ ನಡೆಸುತ್ತದೆ. ಬೇಸಿಗೆ ಕಾಲದಲ್ಲಿ ಹಲವು ಕೊಕ್ಕರೆಗಳು ಕೂಡಿ ಜೀವನ ನಡೆಸುತ್ತದೆ. ಸಂತಾನೋತ್ಪತ್ತಿ ಸಂದರ್ಭದಲ್ಲಿ ಜೋಡಿ ಕೊಕ್ಕರೆಗಳು ಏಕಾಂತದಲ್ಲಿ ಇರಲು ಬಯಸುತ್ತವೆ. ದಿನವೀಡಿ ಕೊಕ್ಕಿನಿಂದ ಏನಾದರೂ ಹುಡುಕುವ ಕೆಲಸ ಮಾಡುತ್ತದೆ. ಮಣ್ಣು ಅಗೆದು ಆಹಾರ ಹುಡುಕುವುದಕ್ಕಿಂತ ಆರಾಮಾವಾಗಿ ಮಣ್ಣಿನ ಮೇಲ್ಭಾಗದಲ್ಲಿರುವ ಹುಳುಗಳನ್ನು ತಿನ್ನುತ್ತದೆ. ಮೇವು ಅಧಿಕವಾಗಿರುವ ಕಡೆ ಹುಳುಗಳು ಜಾಸ್ತಿ ಇರುವುದರಿಂದ ಈ ಭಾಗದಲ್ಲಿ ಹುಳುಗಳನ್ನು ಕಾಣಬಹುದು.

ಸಂತಾನೋತ್ಪತ್ತಿ

ಕಪ್ಪು ಕೊಕ್ಕರೆಗಳು ಜೀವನದುದ್ದಕ್ಕೂ ಏಕಸಂಗಾತಿಯೊಂದಿಗೆ ಇರಲು ಇಷ್ಟಪಡುತ್ತದೆ. ಸದಾ ಸಂಗಾತಿಯೊಂದಿಗೆ ಒಲುಮೆ ವ್ಯಕ್ತಪಡಿಸುವ ಕೊಕ್ಕರೆ ಈ ಸಂದರ್ಭದಲ್ಲಿ ರಕ್ಕೆ ಬಿಚ್ಚಿ ಹರ್ಷವನ್ನು ವ್ಯಕ್ತಪಡಿಸುತ್ತದೆ. ತುಸು ಎತ್ತರಕ್ಕೆ ಹಾರಾಟ ನಡೆಸಿ, ಸಂಭ್ರಮವನ್ನು ತೋರ್ಪಡಿಸುತ್ತದೆ. ಹೆಣ್ಣು ಕಪ್ಪು ಕೊಕ್ಕರೆಯು ಎರಡರಿಂದ ಮೂರು ಮೊಟ್ಟೆಗಳನ್ನು ಇಡುತ್ತದೆ. 28ರಿಂದ 31 ದಿನಗಳ ಕಾಲ ಮೊಟ್ಟೆಗೆ ಕಾವು ಕೊಡುತ್ತದೆ. ಸಾಮಾನ್ಯವಾಗಿ ರಾತ್ರಿ ಹೊತ್ತು ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ. ಮರಿಗಳು 100 ದಿನಗಳ ಕಾಲ ಪೋಷಕ ಕೊಕ್ಕರೆಯೊಂದಿಗೆ ಜೀವನ ನಡೆಸುತ್ತದೆ. ನಂತರ ಹಾರಾಟ ನಡೆಸುತ್ತದೆ.

ಗಾತ್ರ

ಎತ್ತರ: 90 ರಿಂದ 11 ಸೆಂ.ಮೀ,ಜೀವಿತಾವಧಿ-22 ರಿಂದ 25 ವರ್ಷ,

ಸ್ವಾರಸ್ಯಕರ ಅಂಶಗಳು

* ಪ್ರಣಯ ಕಾಲದಲ್ಲಿ ಅದು ಹೊರಡಿಸುವ ಸದ್ದುಗಳು ಬಹಳ ವಿಶಿಷ್ಟವಾಗಿರುತ್ತದೆ.

* ಕೀನ್ಯಾ ಸಂಸ್ಕೃತಿಯಲ್ಲಿ ಕಪ್ಪು ಕೊಕ್ಕರೆಯನ್ನು ಶಾಂತಿಯ ದೂತಕವೆಂದೇ ಪರಿಗಣಿಸಲಾಗುತ್ತದೆ.

* ಈ ಕೊಕ್ಕರೆಯು ಖುಷಿಯಾದಾಗ ನೃತ್ಯ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.