ADVERTISEMENT

ಅಪರೂಪದ ಸುಂದರ ಗಿಣಿ ‘ಮಕವ್‌’

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 12:25 IST
Last Updated 16 ಜನವರಿ 2019, 12:25 IST
ಗಿಣಿ ‘ಮಕವ್‌’
ಗಿಣಿ ‘ಮಕವ್‌’   

ನಮಗೆ ಚಿರಪರಿಚಿತವಿರುವ ಹಕ್ಕಿಗಳಲ್ಲಿ ಗಿಣಿಯೂ ಒಂದು. ಇದರಲ್ಲಿ ಹಲವು ಪ್ರಭೇಧಗಳನ್ನು ಗುರುತಿಸಲಾಗಿದೆ. ಇವುಗಳ ಉಪತಳಿಗಳ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಗಿಣಿ ಪ್ರಭೇಧಕ್ಕೆ ಸೇರುವ ಅಪರೂಪದ ಹಕ್ಕಿ ‘ಮಕವ್’. ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಆಕರ್ಷಕ ಪುಕ್ಕದಿಂದ ಗಮನ ಸೆಳೆಯುವ ಈ ಹಕ್ಕಿಯನ್ನು ‘ಬ್ಲ್ಯೂ ಮಕವ್’, ಗೋಲ್ಡ್‌ಮಕವ್‌’ ಎಂದೂ ಕರೆಯುತ್ತಾರೆ.

ಹೇಗಿರುತ್ತದೆ?

ADVERTISEMENT

ನೀಲಿ, ಕಪ್ಪು–ಬಿಳಿ ಮತ್ತು ಚಿನ್ನದ ಬಣ್ಣದ ಪುಕ್ಕದಿಂದ ದೇಹ ಆವರಿಸಿರುತ್ತದೆ. ದೇಹದ ಬಹುತೇಕ ಭಾಗ ನೀಲಿಯಾಗಿರುವುದರಿಂದ ಆಕರ್ಷಕವಾಗಿ ಕಾಣಿಸುತ್ತದೆ. ರೆಕ್ಕೆಗಳು, ಬಾಲ ಮತ್ತು ಬೆನ್ನಿನ ಭಾಗ ನೀಲಿ ಬಣ್ಣದಲ್ಲಿ ಮಿಂದೆದ್ದಂತೆ ಕಾಣಿಸಿದರೆ, ಕತ್ತು ಮತ್ತು ಉದರ ಭಾಗ ಗಾಢ ಹಳದಿ ಬಣ್ಣದಲ್ಲಿ ಕಂಗೊಳಿಸುತ್ತದೆ. ರೆಕ್ಕೆಗಳ ಒಳಭಾಗ ಹಳದಿ ಮಿಶ್ರಿತ ಹಸಿರು ಬಣ್ಣದಲ್ಲಿರುತ್ತದೆ.

ಆಕರ್ಷಕ ಕೊಕ್ಕು ಕಪ್ಪು ಬಣ್ಣದಲ್ಲಿರುತ್ತದೆ. ನೆತ್ತಿಯ ಭಾಗ ತಿಳಿ ಹಸಿರು ಬಣ್ಣದಲ್ಲಿರುತ್ತದೆ. ಇದರ ದೇಹದ ಬಣ್ಣ, ತಳಿಗಳಿಗೆ ಅನುಗುಣವಾಗಿ ಭಿನ್ನವಾಗಿರುತ್ತದೆ. ಅಗಲವಾದ ರೆಕ್ಕೆಗಳನ್ನು ಹೊಂದಿರುವುದರಿಂದ ಹಾರಾಡುವಾಗ ಆಕರ್ಷಕವಾಗಿ ಕಾಣಿಸುತ್ತದೆ. ಮುಖದ ಭಾಗ ಕಪ್ಪು–ಬಿಳಿ ಬಣ್ಣದಲ್ಲಿದ್ದು, ಅಲ್ಲಲ್ಲಿ ಮೂಡಿರುವ ಗೆರೆಗಳು ಇದರ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಕಣ್ಣುಗಳು ಪುಟ್ಟದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ.

ಎಲ್ಲೆಲ್ಲಿದೆ?

ದಕ್ಷಿಣ ಆಫ್ರಿಕಾ, ಅಮೆರಿಕ, ಪೆರು, ಬ್ರೆಜಿಲ್ ಮತ್ತು ವೆನಿಜುವೆಲಾ ದೇಶಗಳಲ್ಲಿ ಇದರ ಸಂತತಿ ಹೆಚ್ಚಾಗಿ ವಿಸ್ತರಿಸಿದೆ.

ಆಹಾರ

ಇದು ಸಂಪೂರ್ಣ ಸಸ್ಯಹಾರಿ ಹಕ್ಕಿ. ಮಳೆಕಾಡು ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತುತ್ತದೆ. ಇಲ್ಲಿ ಸಿಗುವ ವಿವಿಧ ಬಗೆಯ ಹಣ್ಣುಗಳೇ ಇದರ ಪ್ರಮುಖ ಆಹಾರ. ಇದು ಸೇವಿಸುವ ಆಹಾರದಲ್ಲಿ ಕೊಬ್ಬಿನಾಂಶ ಹೆಚ್ಚಿರುತ್ತದೆ. ಹಣ್ಣುಗಳ ಜತೆಗೆ ಬೀಜ, ಕಾಳುಗಳನ್ನೂ ತಿಂದು ಜೀವಿಸುತ್ತದೆ.

ಜೀವನ ಕ್ರಮ ಮತ್ತು ವರ್ತನೆ

ಜೋರಾಗಿ ಶಬ್ದ ಮಾಡುವ ಮೂಲಕ ಮತ್ತೊಂದು ಮಕವ್ ಜತೆ ಸಂವಹನ ನಡೆಸುತ್ತದೆ. ತರಬೇತಿ ನೀಡಿದರೆ ಈ ಗಿಣಿಗೂ ನಮ್ಮ ಮಾತುಗಳನ್ನು ಅನುಕರಿಸಿ ಮಾತನಾಡುವ ಸಾಮರ್ಥ್ಯವಿದೆ.

ವಾಸಿಸುತ್ತಿರುವ ಪ್ರದೇಶದಲ್ಲಿ ಆಹಾರ ಸಿಗದಿದ್ದರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತದೆ.ಇದು ಬಹುತೇಕ ಸಮಯ ಜೋಡಿಯಗಿಯೇ ಕಾಣಿಸಿಕೊಳ್ಳುತ್ತದೆ. ಇದು ಭಿನ್ನವಾದ ಶಬ್ದಗಳ ಮೂಲಕ ಗುಂಪಿನಲ್ಲಿ ಸಂವಹನ ನಡೆಸುತ್ತದೆ. ಮೊಟ್ಟೆಯಿಂದ ಹೊರಬಂದ ಮೇಲೆ ಸುಮಾರು ಆರು ವರ್ಷಗಳಲ್ಲಿ ಪ್ರೌಢಾವಸ್ಥೆಗೆ ತಲುಪುತ್ತದೆ.

ಸಂತಾನೋತ್ಪತ್ತಿ

ಇದು ಆಕರ್ಷಕವಾಗಿ ಗೂಡು ಕಟ್ಟುತ್ತದೆ. ಒಂದು ಬಾರಿಗೆ ಎರಡರಿಂದ ಮೂರು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳಿಗೆ 26ರ ರಿಂದ 28 ದಿನ ಕಾವು ಕೊಟ್ಟು ಮರಿಗಳಿಗೆ ಜನ್ಮ ನೀಡುತ್ತದೆ. ಮರಿಗಳಿಗೆ ಆಹಾರ ಒದಗಿಸುವಲ್ಲಿ ತಾಯಿ ಮಕಾವು ಪ್ರಮುಖ ಪಾತ್ರ ವಹಿಸುತ್ತದೆ. ಸುಮಾರು ಮೂರು ತಿಂಗಳವರೆಗೆ ಮರಿಗಳು ತಾಯಿ ಪೋಷಣೆಯಲ್ಲೇ ಬೆಳೆಯುತ್ತವೆ. ಮೊಟ್ಟೆಗಳ ರಕ್ಷಣೆಯಲ್ಲಿ ಗಂಡು ಮತ್ತು ಹೆಣ್ಣು ಮಕಾವುಗಳು ಸಮಾನ ಕಾಳಜಿ ತೋರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.