ADVERTISEMENT

ವಿಶಿಷ್ಟ ದನಿ ಹೊರಡಿಸುವ ಮ್ಯಾಂಗಬೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 19:45 IST
Last Updated 18 ಅಕ್ಟೋಬರ್ 2019, 19:45 IST
ಮ್ಯಾಂಗಬೆ
ಮ್ಯಾಂಗಬೆ   

ಮ್ಯಾಂಗಬೆ ಜಾತಿಯ ಮಂಗವು ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದ್ದು, ಇದರ ಮೂಲ ಆಫ್ರಿಕಾ. ಇದರ ಕಣ್ಣುರೆಪ್ಪೆಗಳು ಶ್ವೇತವರ್ಣದಲ್ಲಿದ್ದು, ಹೊಳೆಯುತ್ತಿರುತ್ತವೆ. ಇದನ್ನು ಸ್ಥಳೀಯವಾಗಿ ನಾಲ್ಕು ಕಣ್ಣಿನ ಮಂಗಗಳೆಂದು ಕರೆಯಲಾಗುತ್ತದೆ. ಒಟ್ಟು 13 ತಳಿಗಳಿದ್ದು, ಇದರ ವೈಜ್ಞಾನಿಕ ಹೆಸರು ಸರ್ಕೊಸಿಬಸ್‌, ಲೊಪೊಸಿಬಸ್‌(Cercocebus; Lophocebus). ಇದರ ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.

ಹೇಗಿರುತ್ತೆ?

ಮ್ಯಾಂಗಬೇ ಪ್ರಬೇಧಗಳಿಗೆ ಅನುಸಾರವಾಗಿಚಿನ್ನದಂಥ ಹಳದಿ ಬಣ್ಣ, ಬೂದು ಬಣ್ಣ, ಕಡುಗಂದು, ಕಪ್ಪು ಬಣ್ಣದಲ್ಲಿರುತ್ತದೆ. ಇದರ ಮರಿಗಳು ಢಾಳ ಬಣ್ಣದಲ್ಲಿಯೇ ಹೆಚ್ಚಾಗಿ ಇರುತ್ತದೆ. ಮೈ ತುಂಬಾ ಹಳದಿ ಮಿಶ್ರಿತ ಬೂದು ಬಣ್ಣದ ತುಪ್ಪಳವಿದ್ದು, ಕಣ್ಣು ತಿಳಿ ಕೆಂಬಣ್ಣದಲ್ಲಿರುತ್ತದೆ. ಎದೆಯಭಾಗದಲ್ಲಿಯೂ ಹಳದಿ ಬಣ್ಣದ ತುಪ್ಪಳವಿರುತ್ತದೆ. ಎರಡೂ ಕೆನ್ನೆಯಲ್ಲಿ ಅಗಲವಾಗಿ ಹರಡಿಕೊಂಡಂತೆ ಕೂದಲುಗಳಿರುತ್ತದೆ. ಕಣ್ಣಿನ ರೆಪ್ಪೆಯ ಜಾಗದಲ್ಲಿ ದಪ್ಪನೆಯ ಬಿಳಿ ರೇಖೆಗಳಿದ್ದು, ದೂರದಿಂದ ನಾಲ್ಕು ಕಣ್ಣುಗಳಿರುವಂತೆ ಕಾಣುತ್ತದೆ. ಮರದಿಂದ ಮರಕ್ಕೆ ಸುಲಭವಾಗಿ ನೆಗೆಯುತ್ತದೆ. ಇದರ ಬಾಲವು ಬಹಳ ಬಲಿಷ್ಠವಾಗಿದ್ದು, ನೆಲಕ್ಕೆ ಬೀಳದಂತೆರಂಬೆಯನ್ನು ಶಕ್ತವಾಗಿ ಹಿಡಿದಿಟ್ಟುಕೊಳ್ಳುವಷ್ಟು ಸಾಮರ್ಥ್ಯವಿರುತ್ತದೆ.

ADVERTISEMENT

ಎಲ್ಲಿರುತ್ತೆ?

ಇದು ಆಫ್ರಿಕಾದಲ್ಲಿ ಮಾತ್ರ ಕಂಡುಬರುವ ಮಂಗವಾಗಿದ್ದು, ಹೆಚ್ಚಾಗಿ ಮರಗಳಲ್ಲಿ ವಾಸಿಸುತ್ತದೆ. ಮರವಿರಲಿ, ನೆಲವಿರಲಿ, ಜೌಗು ಪ್ರದೇಶಗಳೇ ಇರಲಿ. ಎಲ್ಲ ಬಗೆಯ ವಾತಾವರಣದಲ್ಲಿಯೂ ಬದುಕಬಲ್ಲದು.

ಆಹಾರ ಪದ್ಧತಿ

ಮ್ಯಾಂಗ್‌ಬೆ ಹಣ್ಣುಪ್ರಿಯ ಪ್ರಾಣಿ. ಜತೆಗೆ ಬಗೆಯ ಸಸ್ಯದ ಎಲೆಗಳು, ಪೌಷ್ಟಿಕಾಂಶಯುಕ್ತ ಬೀಜಗಳು, ಹುಳು– ಹುಪಟ್ಟೆಗಳು, ಜೇಡಗಳನ್ನು ತಿಂದು ಬದುಕುತ್ತದೆ. ಇದರ ದವಡೆ ಬಹಳ ಬಲಿಷ್ಠವಾಗಿರುವುದರಿಂದಎಷ್ಟೇ ಗಟ್ಟಿಯಾದ ಬೀಜವನ್ನು ಕ್ಷಣಮಾತ್ರದಲ್ಲಿ ಪುಡಿ ಮಾಡುತ್ತದೆ.

ವರ್ತನೆ

ಮ್ಯಾಂಗಬೆ ಮಂಗಗಳು ಪರಸ್ಪರ ಸಂವಹನ ನಡೆಸುವುದು ಬಹಳ ವಿಶೇಷವಾಗಿರುತ್ತದೆ. ಇದು ವಿಶಿಷ್ಟವಾದ ಶಬ್ದಗಳನ್ನು ಹೊರಡಿಸುತ್ತದೆ. ಗಡಸು ದನಿ ಹೊರಡಿಸಲು ಧ್ವನಿಪೆಟ್ಟಿಗೆ ಸಮೀಪವಿರುವ ವಿಶೇಷ ಕೋಶ ಅವಕಾಶ ಮಾಡಿಕೊಟ್ಟಿದೆ. ಅಪಾಯ ಸಂದರ್ಭ ಎದುರಾದಾಗ ಇವು ದೊಡ್ಡದಾಗಿ ಸದ್ದು ಹೊರಡಿಸಿ ಉಳಿದ ಮಂಗಗಳನ್ನು ಎಚ್ಚರಿಸುತ್ತವೆ.ಕೆಲವೊಮ್ಮೆ ಊಳಿಡುವಂತೆ, ಚಿಲಿಪಿಲಿಗುಟ್ಟುವಂತೆ ಶಬ್ದ ಹೊರಡಿಸಿ, ಅವುಗಳ ಇರುವಿಕೆಯನ್ನು ಇತರರಿಗೆ ತಿಳಿಸುತ್ತವೆ. ಈ ಶಬ್ದ ಒಂದು ಕಿ.ಮೀ ವ್ಯಾಪ್ತಿಯವರೆಗೆ ಕೇಳಿಸಬಲ್ಲದು. ಇದು ಗುಂಪು ಗುಂಪಾಗಿ ವಾಸಿಸುವ ಪ್ರಾಣಿಯಾಗಿದ್ದು, ಒಂದು ಗುಂಪಿನಲ್ಲಿ 10ರಿಂದ 40 ಮ್ಯಾಂಗಬೆಗಳಿರುತ್ತದೆ. ಅದರಲ್ಲಿ ಒಂದು ಮಂಗವು ನಾಯಕತ್ವವನ್ನು ವಹಿಸಿಕೊಂಡು, ರಕ್ಷಣೆ ನೀಡುತ್ತದೆ. ಗುಂಪು ಹೆಚ್ಚಾದಂತೆ ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಳ್ಳುತ್ತವೆ.

ಸಂತಾನೋತ್ಪತ್ತಿ

ಮ್ಯಾಂಗಬೆ ಪ್ರಾಯಕ್ಕೆ ಬಂದ ತಕ್ಷಣ ಗುಂಪಿನಿಂದ ಹೊರಬಂದು ಸಂಗಾತಿಯನ್ನು ಹುಡುಕಿ ಹೊರಡುತ್ತದೆ. ಒಂದೊಮ್ಮೆ ಸಂಗಾತಿ ಸಿಗದೇ ಇದ್ದರೆ ಗುಂಪಿಗೆ ವಾಪಸ್‌ ಆಗದೇ ಏಕಾಂತವಾಗಿ ಇರಲು ಬಯಸುತ್ತದೆ. ಸಾಮಾನ್ಯವಾಗಿ ಹೆಣ್ಣು ಮ್ಯಾಂಗಬೆ ಒಂದು ಮರಿಗೆ ಮಾತ್ರ ಜನ್ಮನೀಡುತ್ತದೆ. ಅವಳಿಗೆ ಜನ್ಮನೀಡುವುದು ವಿರಳ.ಮೃದುವಾದ ತುಪ್ಪಳ ಹೊಂದಿರುವ ಈ ಮರಿಯು ತಾಯಿಯ ಕುತ್ತಿಗೆಗೆ ನೇತಾಡಿಕೊಂಡೇ ಇರುತ್ತದೆ. ಇನ್ನೊಂದು ಮರಿ ಹಾಕುವವರೆಗೂ ಮೊದಲ ಮರಿ ತನ್ನ ತಾಯಿಯೊಂದಿಗೆ ವಾಸಿಸುತ್ತದೆ. ಐದು ವರ್ಷಗಳ ನಂತರ ಮರಿ ಮಂಗವು ತನ್ನ ತಾಯಿಯನ್ನು ತೊರೆಯುತ್ತದೆ. ಆದರೆ, ಹೆಣ್ಣಮರಿ ಮಂಗವು ದೊಡ್ಡದಾದ ಮೇಲೂ ತನ್ನ ಗುಂಪಿನೊಂದಿಗೆ ಇರಲು ಇಷ್ಟಪಡುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಸ್ಥಳೀಯ ಭಾಷೆಯಲ್ಲಿ ಇದನ್ನು ಲಿಂಕು ಎಂದು ಕರೆಯಲಾಗುತ್ತದೆ.

* ಸೂರ್ಯೋದಯ ಮುಂಚೆ ಈ ಪ್ರಾಣಿ ಬಹಳ ಕ್ರಿಯಾಶೀಲವಾಗಿರುತ್ತದೆ.

ಉದ್ದ -16ರಿಂದ 29 ಇಂಚು,ಗಾತ್ರ-6ರಿಂದ 14 ಕೆ.ಜಿ.,ಜೀವಿತಾವಧಿ -30 ವರ್ಷ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.