ADVERTISEMENT

ಕಾಳಿಂಗನ ಗೆದ್ದ ಗೌರಿಶಂಕರ

ಆರ್. ಮಂಜುನಾಥ್
Published 2 ಜುಲೈ 2023, 1:27 IST
Last Updated 2 ಜುಲೈ 2023, 1:27 IST
ಪುನೀತ್‌ ರಾಜಕುಮಾರ್ ಅವರೊಂದಿಗೆ ಗೌರಿಶಂಕರ
ಪುನೀತ್‌ ರಾಜಕುಮಾರ್ ಅವರೊಂದಿಗೆ ಗೌರಿಶಂಕರ   

ಹಾವು ಎಂದ ಕೂಡಲೇ ಕಾಲು ಮಾರುದ್ದ ಹಿಂದೆ ಸರಿಯುತ್ತದೆ... ಇನ್ನು ಕಾಳಿಂಗ ಸರ್ಪ... ಎಂದರೆ, ಎಲ್ಲೆಂದರಲ್ಲಿ ಓಟ... ಅಷ್ಟು ಭಯ ಹುಟ್ಟಿಸುವ ಕಾಳಿಂಗ ಸರ್ಪ ಜೊತೆಯೇ ಗೌರಿಶಂಕರ್‌ ಅವರದ್ದು ಸುದೀರ್ಘಾವಧಿ ಪಯಣ. ಅದರ ಸಂಶೋಧನೆಯಲ್ಲೇ ಎರಡು ದಶಕಗಳು ಉರುಳಿವೆ. ಕಾಳಿಂಗನ ಜೀವನಕ್ರಮ ಅರಿತು, ಪ್ರಭೇದಗಳನ್ನು ಶೋಧಿಸಿ ಅದನ್ನು ಪ್ರಧಾನ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಇದಕ್ಕಾಗಿ ಅವರಿಗೆ ಡಾಕ್ಟರೇಟ್‌ ಪದವಿ ಸಂದಿದೆ.

ಗೌರಿಶಂಕರ್ 2005ರಲ್ಲಿ ಈ ಪಯಣದ ಆರಂಭದಲ್ಲಿದ್ದಾಗ ಮೂರು ಕಾಳಿಂಗ ಸರ್ಪಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾದರು. ಆಗ ಒಂದು ಕಾಳಿಂಗ ಸರ್ಪ ಇವರನ್ನು ಕಚ್ಚಿತು. ಹಲವು ಚಿಕಿತ್ಸಾ ಪ್ರಯೋಗಗಳ ನಂತರ ಗೌರಿಶಂಕರ್‌ ಬದುಕುಳಿದರು. ಅದಾದ ನಂತರ ಆರಂಭವಾಗಿದ್ದು ಕಾಳಿಂಗನ ‘ಡಿಎನ್‌ಎ ಪ್ರೊಫೈಲ್‌’ ಅಧ್ಯಯನ.

ಸೇನಾಧಿಕಾರಿ ಮಗನಾದ ಗೌರಿಶಂಕರ್‌ ಹುಟ್ಟಿದ್ದು–ಬೆಳೆದದ್ದು, ಕಲಿತದ್ದು–ಓದಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಅವರು ಆಗ ವಾಸಿಸುತ್ತಿದ್ದ ಕೆ.ಆರ್. ಪುರ ಪ್ರದೇಶದಲ್ಲಿ ಹಾವುಗಳು ನೂರಾರು ಸಂಖ್ಯೆಯಲ್ಲಿರುತ್ತಿದ್ದವು. ಕೆಲವು ಮನೆಗೆ ಬಂದು ಸೇರಿಕೊಳ್ಳುತ್ತಿದ್ದವು. ಅವುಗಳಿಗೆ ಹಾನಿ ಮಾಡದೆ, ದೂರದ ಪ್ರದೇಶಕ್ಕೆ ಬಿಡುವುದನ್ನು ಅಭ್ಯಾಸ ಮಾಡಿಕೊಂಡರು. 13ನೇ ವಯಸ್ಸಿನಲ್ಲಿಯೇ ಹಾವುಗಳನ್ನು ರಕ್ಷಿಸುವ ಕಾಯಕ ಆರಂಭವಾಗಿತ್ತು. ಇಂತಹ ಆಸಕ್ತಿಯಿಂದಲೇ ಅವರ ಪದವಿ ಕೂಡ ಪರಿಸರಕ್ಕೆ ಸಂಬಂಧಿಸಿದ್ದೇ ಆಯಿತು. ಮದ್ರಾಸ್‌ನ ಕ್ರೊಕೊಡೈಲ್‌ ಬ್ಯಾಂಕ್‌ನಲ್ಲಿ ಶಿಕ್ಷಕರಾಗಿದ್ದರು. ನಂತರ, ಸಂರಕ್ಷಣಾಧಿಕಾರಿಯಾಗಿ ಆಗುಂಬೆ ರೈನ್‌ ಫಾರೆಸ್ಟ್‌ ಸಂಶೋಧನಾ ಕೇಂದ್ರ ಸ್ಥಾಪಿಸಲು ನೆರವಾದರು. ‘ಕರುಣಾ’ದಲ್ಲಿ ಪ್ರಾಣಿಗಳ ಇನ್‌ಸ್ಪೆಕ್ಟರ್‌ ಆಗಿ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯಲು ಕಾರ್ಯನಿರ್ವಹಿಸಿದರು. ನಂತರದ ಪಯಣ ಸಾಗಿದ್ದು ಸಂಶೋಧನೆಯತ್ತ.

ADVERTISEMENT
ಕಾಳಿಂಗ

ರೋಮುಲುಸ್‌ ವೈಟೇಕರ್ ಅವರಿಗೆ ವನ್ಯಜೀವಿ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವ ಹಂತದಲ್ಲಿ ಕೆಲಸ ಮಾಡಿದರು. ‘ದ ಕಿಂಗ್‌ ಆ್ಯಂಡ್ ಐ’, ‘ಸೀಕ್ರೆಟ್ಸ್‌ ಆಫ್‌ ದ ಕಿಂಗ್‌ ಕೋಬ್ರಾ’, ‘ಏಷ್ಯಾಸ್‌ ಡೆಡ್ಲಿಯೆಸ್ಟ್‌ ಸ್ನೇಕ್‌’, ‘ಒನ್‌ ಮಿಲಿಯನ್‌ ಸ್ನೇಕ್‌ ಬೈಟ್ಸ್‌’ ಮತ್ತು ‘ವೈಲ್ಡೆಸ್ಟ್‌ ಇಂಡಿಯಾ’ ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲಿ ಇವರು ಭಾಗಿಯಾಗಿದ್ದಾರೆ. ಆಗುಂಬೆ ಸೇರಿದಂತೆ ಪಶ್ಚಿಮಘಟ್ಟದ ಕಾಡಿನಲ್ಲಿ ಕಾಳಿಂಗ ಸರ್ಪಗಳು ಅವುಗಳ ಮೊಟ್ಟೆಗಳನ್ನು ರಕ್ಷಿಸುವ ಕಾಯಕವನ್ನೂ ಮಾಡುತ್ತಿದ್ದರು.

ಕಾಳಿಂಗ ಸರ್ಪದೊಂದಿಗೆ ಗೌರಿಶಂಕರ

‘ಆಗುಂಬೆ ಪ್ರದೇಶದಲ್ಲಿ ಮೂರು ಕಾಳಿಂಗ ಸರ್ಪಗಳನ್ನು ರಕ್ಷಿಸಬೇಕಾಗಿತ್ತು. ಕಾಳಿಂಗನನ್ನು ಹಾಕಿಕೊಳ್ಳುವ ಒಂದೇ ಚೀಲ ನನ್ನ ಬಳಿ ಇತ್ತು. ಒಂದನ್ನು ಹಾಕಿ, ಮತ್ತೊಂದನ್ನು ಗೋಣಿಚೀಲದಲ್ಲಿ ಹಾಕಿದೆವು. ಇನ್ನೊಂದು ಸರ್ಪವನ್ನು ಚಿಕ್ಕಬ್ಯಾಗ್‌ಗೆ ಹಾಕುವ ಸಂದರ್ಭದಲ್ಲಿ ಒಳಗಿನಿಂದಲೇ ಕಾಳಿಂಗ ನನ್ನ ಕೈಗೆ ಕಚ್ಚಿಬಿಟ್ಟ. ತಪ್ಪು ಅವನದ್ದಲ್ಲ, ನಾನು ಜಾಗೃತನಾಗಿರಲಿಲ್ಲ. ಅಲ್ಲಿಂದ 25 ಕಿ.ಮೀ ದೂರದ ಮಂಗಳೂರಿನಲ್ಲಿರುವ ಮಣಿಪಾಲ್‌ ಆಸ್ಪತ್ರೆಗೆ ನನ್ನ ಸ್ನೇಹಿತ ಜೀಪ್‌ನಲ್ಲಿ ಕರೆದೊಯ್ದ. ಕಾಳಿಂಗ ಸರ್ಪದ ವಿಷಕ್ಕೆ ಮದ್ದಿಲ್ಲ ಎಂಬುದು ಗೊತ್ತಿತ್ತು. ಆದರೆ, ಥಾಯ್ಲೆಂಡ್‌ನಲ್ಲಿ ಬಳಸಲಾಗುತ್ತಿದ್ದ ‘ಆಂಟಿ ವೆನಮ್‌’ ನಮ್ಮಲ್ಲಿತ್ತು. ಅದು ಪ್ರಯೋಜನಕ್ಕೆ ಬರಲಿಲ್ಲ. ಮೂರು ದಿನ ಅನುಭವಿಸಿದ ಆ ಭಯಾಯನಕ ನೋವಿನಿಂದ ನನ್ನನ್ನು ಸಾಯಲು ಬಿಡಿ ಎಂದೂ ಕೇಳಿದ್ದ. ವೈದ್ಯರು ಚಿಕಿತ್ಸೆಯಲ್ಲಿ ಹಲವು ರೀತಿಯ ಪ್ರಯೋಗಗಳನ್ನು ಮಾಡಿದರು. ಕಾಳಿಂಗ ಸರ್ಪ ಕಚ್ಚಿದರೆ 30 ನಿಮಿಷದಲ್ಲಿ ಆನೆಯೇ ಸಾಯುತ್ತದೆ. ಆದರೆ, ಕಾಳಿಂಗನ ಕರುಣೆಯಿಂದ ಮೂರು ದಿನಗಳ ದೀರ್ಘ ಹೋರಾಟದ ನಂತರ ಬದುಕುಳಿದೆ’ ಎಂದು ಗೌರಿಶಂಕರ್‌ ನೆನಪಿಸಿಕೊಂಡರು.

ಕಾಳಿಂಗ

‘ಒಫಿಫೀಗುಸ್‌ ಹೆನ್ನ ಎಂದು ಕರೆಯಲಾಗುವ ಹಾವನ್ನೇ ತಿನ್ನುವ ಕಾಳಿಂಗ ಇದೆ. ಪ್ರಥಮವಾಗಿ 1836ರಲ್ಲಿ ಕಾಳಿಂಗ ಪ್ರಭೇದವನ್ನು ವರ್ಗೀಕರಿಸಲಾಗಿತ್ತು. 1945ರಲ್ಲಿ ವೈಜ್ಞಾನಿಕ ಹೆಸರು ನೀಡಲಾಯಿತು. ಇದಾದ ನಂತರ ಹೆಚ್ಚಿನ ಅಧ್ಯಯನ ನಡೆದಿರಲಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಓಡಾಡಿದೆ. ಒಡಿಶಾದ ಬರಿಪಾಡದಲ್ಲಿರುವ ಶ್ರೀರಾಮಚಂದ್ರ ಭಂಜ ಡಿಯೊ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಮಾಡಲು ಪ್ರವೇಶ ಪಡೆದೆ. ಮಾರ್ಗದರ್ಶಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಆ ವಿವಿ ಆಯ್ಕೆ ಮಾಡಿಕೊಂಡೆ. ವಿದ್ಯಾರ್ಥಿಗಳ ವಿನಿಮಯದ ಕಾರ್ಯಕ್ರಮದಲ್ಲಿ ‘ಎರಾಸ್ಮಸ್‌ ಮುಂಡಸ್‌’ ಸ್ಕಾಲರ್‌ಶಿಪ್‌ ಪಡೆದು, ಸ್ವೀಡನ್‌ನ ಉಪ್ಪಸಲ ವಿಶ್ವವಿದ್ಯಾಲಯಕ್ಕೆ ಹೋದೆ. ಅಲ್ಲಿನ ಅಧ್ಯಯನದಿಂದ ಬೇರೆ ಭಾಗದ ಕಾಳಿಂಗ ಸರ್ಪದ ವಿಮರ್ಶೆ ಸಾಧ್ಯವಾಯಿತು. ಮಾಲಿಕ್ಯುಲರ್‌ ಟಾಕ್ಸೊನೊಮಿ ಮತ್ತು ಡಿಎನ್‌ಎ ಬಾರ್‌ಕೋಡಿಂಗ್‌ನಂತರ ಹೊಸ ತಂತ್ರಜ್ಞಾನದಿಂದ ಕಾಳಿಂಗ ಸರ್ಪದ ಆನುವಂಶಿಕ ಮತ್ತು ಹೊರ ದೇಹದ ರಚನೆಯನ್ನು ಅರ್ಥೈಸಲು ಸಾಧ್ಯವಾಯಿತು. ಹೀಗಾಗಿ, ಪ್ರಪಂಚದಲ್ಲಿ ಒಂದು ಪ್ರಭೇದವಲ್ಲ, ನಾಲ್ಕು ಪ್ರಭೇದದ ಕಾಳಿಂಗ ಸರ್ಪಗಳಿವೆ ಎಂಬುದನ್ನು ಕಂಡುಹಿಡಿಯಲಾಯಿತು. ಅದಕ್ಕೇ ನನಗೆ ಆಗುಂಬೆಯಲ್ಲಿ ಕಚ್ಚಿದ ಕಾಳಿಂಗನ ವಿಷಕ್ಕೆ ಥಾಯ್ಲೆಂಡ್‌ನಿಂದ ತಂದ ಆಂಟಿ ವೆನಮ್‌ ಪರಿಣಾಮ ಬೀರಲಿಲ್ಲ’ ಎನ್ನುತ್ತಾರೆ ಗೌರಿಶಂಕರ್‌.

ಕಾಳಿಂಗ

ಪಿಎಚ್‌ಡಿ: 9 ವರ್ಷಗಳ ಅಧ್ಯಯನ

ಪೂರ್ವ, ಉತ್ತರ ಭಾರತ, ಅಂಡಮಾನ್‌, ದಕ್ಷಿಣ ಚೀನ, ತೈವಾನ್‌, ಥಾಯ್ಲೆಂಡ್‌ನ ಕೇಂದ್ರಭಾಗದ ಇಂಡೊಚೈನೀಸ್‌ ಪೆನಿಸುಲದಲ್ಲಿ ಒಂದು ಪ್ರಭೇದವಿದ್ದರೆ, ಮತ್ತೊಂದು ಇಂಡೊನೇಷ್ಯಾ, ದಕ್ಷಿಣ–ಕೇಂದ್ರಭಾಗದ ಫಿಲಿಪೀನ್ಸ್‌ನಲ್ಲಿ ಕಂಡುಬರುವ ಈ ಕಾಳಿಂಗ ಸರ್ಪಗಳನ್ನು ಒಫಿಫೀಗುಸ್‌ ಬಂಗಾರಸ್‌ ಎಂದು ವರ್ಗೀಕರಿಸಲಾಗಿದೆ. ಇದಲ್ಲದೆ, ಇನ್ನೆರಡು ಪ್ರಭೇದಗಳು ಭಾರತದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಫಿಲಿಪೀನ್ಸ್‌ನ ಉತ್ತರ ಭಾಗದ ಲೂಜಾನ್‌ ಪ್ರದೇಶದಲ್ಲಿವೆ. 2014ರಲ್ಲಿ ಆರಂಭವಾದ ಈ ಅಧ್ಯಯನ 2023ರ ಮೇನಲ್ಲಿ  ಡಾಕ್ಟರೇಟ್‌ ಪ‍ಡೆದಾಗ ಒಂದು ಹಂತಕ್ಕೆ ಸಾಕಾರಗೊಂಡಿತು.

ಗೌರಿಶಂಕರ್‌ ಅವರು ತಮ್ಮ ಮೂರು ದಶಕಗಳ ಸಂಶೋಧನಾ ಸಂದರ್ಭದಲ್ಲಿ ಈವರೆಗೆ 400ಕ್ಕೂ ಕಾಳಿಂಗ ಸರ್ಪಗಳನ್ನು ರಕ್ಷಿಸಿ, ಸುರಕ್ಷತಾ ತಾಣಗಳಿಗೆ ಬಿಟ್ಟಿದ್ದಾರೆ.  50ಕ್ಕೂ ಹೆಚ್ಚು ಕಾಳಿಂಗ ಸರ್ಪಗಳ ಗೂಡುಗಳನ್ನು ನಿಗಾವಹಿಸಿದ್ದಾರೆ. ಕಾಳಿಂಗ ಸರ್ಪಗಳ ಮೇಲಿನ ಪ್ರಥಮ ಪ್ರಯೋಗವಾದ ರೇಡಿಯೊ ಟೆಲಿಮೇಟರಿ ಅಧ್ಯಯನದಿಂದ ಇವರನ್ನು ‘ಕಿಂಗ್‌ ಕೊಬ್ರಾ ಮ್ಯಾನ್‌ ಆಫ್‌ ಇಂಡಿಯಾ’ ಎಂದೂ ಕರೆಯಲಾಗುತ್ತದೆ.

ಕಾಳಿಂಗ ಸರ್ಪದೊಂದಿಗೆ ಗೌರಿಶಂಕರ
ಕಾಳಿಂಗ ಸರ್ಪ ಹಿಡಿಯುತ್ತಿರುವ ಗೌರಿಶಂಕರ

ಗೌರಿಶಂಕರ್‌ ತಮ್ಮ ಕನಸಿನಂತೆ ಆಗುಂಬೆಯಲ್ಲಿ ಕಾಳಿಂಗ ಸೆಂಟರ್‌ ಫಾರ್‌ ರೈನ್‌ಫಾರೆಸ್ಟ್‌ ಎಕೊಲಜಿ (ಕೆಸಿಆರ್‌ಇ) ಅನ್ನು ತಮ್ಮ ಪತ್ನಿ ಶರ್ಮಿಳಾ ಅವರೊಂದಿಗೆ 2012ರಲ್ಲಿ ಸ್ಥಾಪಿಸಿದ್ದಾರೆ. ಶಿವಮೊಗ್ಗ ತೀರ್ಥಹಳ್ಳಿ ತಾಲ್ಲೂಕು, ಆಗುಂಬೆಯ ಗುಡ್ಡೇಕೆರೆಯಲ್ಲಿರುವ ‘ಕಾಳಿಂಗ ಮನೆ’ಯಲ್ಲಿ ಗೌರಿಶಂಕರ್‌ ಹಾಗೂ ಕುಟುಂಬದ ವಾಸ. ಇದು ಕೆಸಿಆರ್‌ಇ ತಾಣವೂ ಹೌದು.

ಕಾಳಿಂಗ ಸರ್ಪದೊಂದಿಗೆ ಗೌರಿಶಂಕರ
ಅವಿಸ್ಮರಣೀಯ ಆ ಮೂರು ದಿನ...
ಕನ್ನಡ ಚಿತ್ರರಂಗದ ಮೇರುನಟ ಪುನೀತ್‌ ರಾಜ್‌ಕುಮಾರ್‌ ಎಲ್ಲರ ಮೆಚ್ಚಿನ ಅಪ್ಪು ಅವರೊಂದಿಗೆ ಕಳೆದ  ಮೂರು ದಿನ ಜೀವನದ ಅತ್ಯಂತ ಅವಿಸ್ಮರಣೀಯ ಸಮಯ. ‘ಗಂಧದ ಗುಡಿ’– ಸಾಕ್ಷ್ಯಚಿತ್ರಕ್ಕಾಗಿ ಕ್ಯಾಮೆರಾ ಚಾಲನೆಯಾಗಿದ್ದು ನಮ್ಮ ಕಾಳಿಂಗ್ ಸೆಂಟರ್‌ ಫಾರ್ ರೈನ್‌ಫಾರೆಸ್ಟ್‌ ಎಕೊಲಾಜಿಯಲ್ಲೇ (ಕೆಸಿಆರ್‌ಇ). ಚಿತ್ರದಲ್ಲಿ ಅದು ಮಧ್ಯದಲ್ಲಿ ಬರುತ್ತದೆ. ನನ್ನ ಗೆಳೆಯ ಅಮೋಘ ಅವರು ಪುನೀತ್‌ ಅವರನ್ನು ಪರಿಚಯ ಮಾಡಿಸಿದರು. ಅವರು ತುಂಬಾ ಸರಳ ಹಸನ್ಮುಖಿ. ನಮ್ಮ ಕಾಳಿಂಗ ಸರ್ಪ ಕಂಡಾಂಗಲಂತೂ ತುಂಬಾ ಭಯ ಪಟ್ಟಿದ್ದರು. ಕಾಳಿಂಗನ  ಶೂಟಿಂಗ್‌ ಮಾಡುವಾಗ ಮೂರು ಅಡಿ ಎತ್ತರ ಹಲಗೆ ಮೇಲೆ ನಿಂತಿದ್ದರು. ನಂತರ ಆಸಕ್ತಿಯಿಂದ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ನಮ್ಮೊಂದಿಗೆ ಕುಳಿತು ಊಟ ಮಾಡಿದರು ತಿಂದ ತಟ್ಟೆಯನ್ನು ತೊಳೆದರು. ತಮ್ಮ ತಂದೆಯವರ ಬಗ್ಗೆ ಚಿತ್ರದಲ್ಲಿ ಹಾವು ಸುತ್ತಿಕೊಂಡ ಬಗ್ಗೆಯ ಸನ್ನಿವೇಶವನ್ನೆಲ್ಲ ಹೇಳಿದರು. ವಾಹ್‌.. ಇಂತಹ ಅತ್ಯಂತ ಸರಳ ಹಾಗೂ ಮಹಾನ್‌ ವ್ಯಕ್ತಿಯನ್ನು ನಾನು ಭೇಟಿಯೇ ಮಾಡಿರಲಿಲ್ಲ. ನಾನು ಪ್ರಥಮ ಬಾರಿಗೆ ಒಬ್ಬ ವ್ಯಕ್ತಿಯ ಅಭಿಮಾನಿಯಾಗಿಬಿಟ್ಟಿದ್ದೇನೆ... ಎಂದು ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ಹೇಳುವಾಗ ಗೌರಿಶಂಕರ್‌ ಮಾತಿನಲ್ಲಿ ಹೆಮ್ಮೆ ಇತ್ತು ಗೌರವಪೂರ್ವಕ ಮಾತುಗಳಲ್ಲಿ ಅಭಿಮಾನವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.