ADVERTISEMENT

ಮಕ್ಕಳಿಗೆ ಮುದ ನೀಡುವ ಮತ್ಸ್ಯಾಲಯ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 19:46 IST
Last Updated 1 ಏಪ್ರಿಲ್ 2019, 19:46 IST
ಸರ್ಕಾರಿ ಮತ್ಸ್ಯಾಲಯದಲ್ಲಿರುವ ಅಕ್ವೇರಿಯಂನ ನೋಟ -ಪ್ರಜಾವಾಣಿ ಚಿತ್ರಗಳು‌‌‌‌‌‌‌\ ಕೃಷ್ಣಕುಮಾರ್‌ ಪಿ.ಎಸ್‌
ಸರ್ಕಾರಿ ಮತ್ಸ್ಯಾಲಯದಲ್ಲಿರುವ ಅಕ್ವೇರಿಯಂನ ನೋಟ -ಪ್ರಜಾವಾಣಿ ಚಿತ್ರಗಳು‌‌‌‌‌‌‌\ ಕೃಷ್ಣಕುಮಾರ್‌ ಪಿ.ಎಸ್‌   

ಬಣ್ಣಬಣ್ಣದ ಮೀನುಗಳು! ಅದರಲ್ಲೂ ಮನೆಯ ಪುಟ್ಟ ಅಕ್ವೇರಿಯಂನಲ್ಲಿ ನೀರ್ಗುಳ್ಳೆಯ ನಡುವೆ ವಿಹರಿಸುವ ಅವುಗಳನ್ನು ನೋಡುವುದೇ ಚಂದ. ಪುಟ್ಟ ಮಕ್ಕಳು ಮನೆಯಲ್ಲಿದ್ದರೆ ಅವರ ಚಿತ್ತ ಈ ಮೀನುಗಳತ್ತಲೇ. ಅಂಥ ಅಪೂರ್ವ ಮೀನುಗಳ ದರ್ಶನಕ್ಕೆ ಕಬ್ಬನ್ ಪಾರ್ಕ್‌ನ ಸರ್ಕಾರಿ ಮತ್ಸ್ಯಾಲಯಕ್ಕೆ ಒಮ್ಮೆ ಭೇಟಿ ಕೊಡಬಹುದು.

ಕಬ್ಬನ್ ಪಾರ್ಕ್ ಸುತ್ತಾಟ, ಬಾಲಭವನದಲ್ಲಿ ಆಟ ಮುಗಿದ ಮೇಲೆ ಈ ಮತ್ಸ್ಯಾಲಯದಲ್ಲೊಮ್ಮೆ ಕಣ್ಣಾಡಿಸಬಹುದು. ಹತ್ತು ರೂಪಾಯಿ ಪ್ರವೇಶ ದರ. ಮತ್ಸ್ಯಾಲಯದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ವಿವಿಧ ಜಾತಿಯ, ದೇಶಗಳ ನಾನಾ ರೀತಿಯ ಮೀನುಗಳು ನೋಡುಗರನ್ನು ಸೆಳೆಯುತ್ತವೆ.

ಜೈಂಟ್ ಗೌರಾಮಿ, ಡೆವಿಲ್ ಫಿಶ್, ಫಂಗೇಶಿಯಸ್ ಕ್ಯಾಟ್, ಉದ್ದ ಮೂಗಿನ ಗಾರ್ ಮೀನು, ಫೆದರ್ ಬ್ಯಾಕ್, ಪ್ಯಾರೆಟ್, ಹಳದಿ ಬಣ್ಣದಲ್ಲಿ ಮಿರಮಿರ ಮಿರುಗುವ ಎಲ್ಲೋ ಎಲೆಕ್ಟ್ರಿಕ್ ಚಿಚ್ಲಿಡ್, ಫ್ಲವರ್ ಹಾರ್ನ್, ಜಾಗ್ವಾರ್, ಪೆನ್ಸಿಲ್ ಮೀನು, ಕಂದು ಬಣ್ಣದ ಚಾಕೊಲೇಟ್ ಮೂಲಿ, ಮೈಮೇಲೆ ದುಂಡನೆಯ ಕಪ್ಪು ಚುಕ್ಕೆ ಇರುವ ಪಟ್ಟೆಪೈಕ್ ಚಿಚ್ಲಿಡ್, ಜೋಡಿಯಿಲ್ಲದೇ ಒಂಟಿಯಾಗಿರುವ ವಿಡೊ ಟೆಟ್ರಾ, ಮೈಮೇಲೆ ಹುಲಿಯಂತೆ ಪಟ್ಟೆ ಹೊಂದಿರುವ ಟೈಗರ್ ಬಾರ್ಬ್, ಸೀ ಏಂಜಲ್, ಕೆಂಪು ಕಣ್ಣಿನ ರೆಡ್ ಐ ಟೆಟ್ರಾ, ಸಿಲ್ವರ್ ಡಾಲರ್, ಕಪ್ಪು ಏಂಜೆಲ್ ಮೀನು, ಪಂಟಾಸಿಯಾ ಜಾತಿಯ ಮೀನುಗಳು ಆಕರ್ಷಕವಾಗಿವೆ.

ADVERTISEMENT

ಪ್ರತಿ ಅಕ್ವೇರಿಯಂನ ಬಳಿ ಮೀನುಗಳ ವಿವರ, ಅವುಗಳು ಸೇವಿಸುವ ಆಹಾರದ ಭಿತ್ತಿಫಲಕ ಅಳವಡಿಸಲಾಗಿದೆ. ಆದರೆ, ಕತ್ತಲಿನಲ್ಲಿ ಅವು ಕಾಣುವುದು ತುಸು ಕಷ್ಟ. ಮೀನುಗಳನ್ನು ನೋಡಿ ಖುಷಿ ಪಡುವ ಪುಟಾಣಿಗಳನ್ನು ಸರ್ಕಾರಿ ಮತ್ಸ್ಯಾಲಯಕ್ಕೆ ಒಮ್ಮೆ ಕರೆದೊಯ್ಯಲು ಅಡ್ಡಿಯಿಲ್ಲ.

‘ಸರ್ಕಾರಿ ಮತ್ಸ್ಯಾಲಯದಲ್ಲಿ ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಮೀನುಗಳಿವೆ. ಸೋಮವಾರ ಹೊರತು ಪಡಿಸಿದರೆ ವಾರದ ಉಳಿದ ದಿನಗಳು ಬೆಳಿಗ್ಗೆ 10ರಿಂದ ಸಂಜೆ 5.30ರ ತನಕಮತ್ಸ್ಯಾಲಯ ತೆರೆದಿರುತ್ತದೆ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ಭಾನುವಾರವೂ ಮತ್ಸ್ಯಾಲಯ ತೆರೆದಿರುತ್ತದೆ. ಐದು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ. ಐದು ವರ್ಷ ಮೇಲ್ಪಟ್ಟವರಿಗೆ ₹ 10 ಪ್ರವೇಶ ಶುಲ್ಕ’ ಎಂದು ಮಾಹಿತಿ ನೀಡುತ್ತಾರೆ ಸರ್ಕಾರಿ ಮತ್ಸ್ಯಾಲಯದ ಮೀನು ಸಂರಕ್ಷಣಾಧಿಕಾರಿ ಡಾ.ವಿಕಾಸ್ ಎಸ್‌.ಜೆ.

ವಿಳಾಸ: ಸರ್ಕಾರಿ ಮತ್ಸ್ಯಾಲಯ, ಕಸ್ತೂರ ಬಾ ರಸ್ತೆ, ಕಬ್ಬನ್ ಪಾರ್ಕ್ ಆವರಣ. ಸಮಯ: ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5.30. ಸೋಮವಾರ ರಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.