ADVERTISEMENT

ಗಂಟೆಗೆ 64 ಕಿ.ಮೀ ವೇಗದಲ್ಲಿ ಓಡುವ ಹೆಮ್ಮೊಲ!

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 19:48 IST
Last Updated 18 ನವೆಂಬರ್ 2018, 19:48 IST
 ಹೆಮ್ಮೊಲ
ಹೆಮ್ಮೊಲ   

ವಿಶ್ವದಲ್ಲಿ ಅತಿ ವೇಗವಾಗಿ ಓಡುವ ಪ್ರಾಣಿ ಎಂದ ಕೂಡಲೇ ಚಿರತೆಯೇ ನೆನಪಾಗುತ್ತದೆ. ಅದೇ ರೀತಿ ಕುದುರೆ, ಜಿಂಕೆ ಕೂಡ ವೇಗವಾಗಿ ಓಡುತ್ತವೆ. ಇವು ಗಾತ್ರದಲ್ಲಿ ದೊಡ್ಡದಾಗಿರುವ ಪ್ರಾಣಿಗಳು. ಆದರೆ ನಾವಿಲ್ಲಿ ಪರಿಚಯಿಸುತ್ತಿರುವಪ್ರಾಣಿ ಗಾತ್ರದಲ್ಲಿ ಚಿಕ್ಕದಾಗಿದ್ದರೂ ವೇಗವಾಗಿ ವೇಗವಾಗಿ ಓಡುತ್ತದೆ.

ಆ ಪ್ರಾಣಿ ಯಾವುದೆಂದರೆ ಹೆಮ್ಮೊಲ. ಇದನ್ನು ಇಂಗ್ಲಿಷ್‌ನಲ್ಲಿ ಜಾಕ್ ರ್‍ಯಾಬಿಟ್ ಎಂದು ಕೆರಯುತ್ತಾರೆ. ಇದರ ವೈಜ್ಞಾನಿಕ ಹೆಸರು ಲೆಪಸ್ (Lepus). ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ADVERTISEMENT

ಮೊಲಗಳ ವರ್ಗಕ್ಕೆ ಸೇರಿದ ಅತಿ ದೊಡ್ಡ ಗಾತ್ರದ ಪ್ರಾಣಿ ಹೆಮ್ಮೊಲ. ಇದು ಸಸ್ತನಿಗಳ ‘ಲೆಪೋರಿಡೆ’ ಕುಟುಂಬಕ್ಕೆ ಸೇರಿದ ಪ್ರಾಣಿ. ಇದರಲ್ಲಿ ಈವರೆಗೆ ಐದು ಪ್ರಭೇದಗಳನ್ನು ಗುರುತಿಸಲಾಗಿದೆ.ಉದ್ದವಾದ ಕಿವಿಗಳನ್ನು ಹೊಂದಿದ್ದು, ಮುಂಗಾಲುಗಳಿಗಿಂತ ಹಿಂಗಾಲುಗಳು ಉದ್ದವಾಗಿರುತ್ತವೆ.ಇದರ ದೇಹದ ತುಪ್ಪಳವು ಗಾಢ ಕಂದು ಬಣ್ಣದಿಂದ ಕೂಡಿದ್ದು, ಅದರ ಮೇಲೆ ಕಪ್ಪು ಪಟ್ಟಿಗಳು ಇರುತ್ತವೆ.

ಎಲ್ಲೆಲ್ಲಿವೆ?‌

ಇದು ಹೆಚ್ಚಾಗಿ ಉತ್ತರ ಅಮೆರಿಕ ಖಂಡದ ಮಧ್ಯ ಮತ್ತು ಪಶ್ಚಿಮ ಭಾಗದ ಬಯಲು ಪ್ರದೇಶ, ಅರಣ್ಯ, ಹುಲ್ಲುಗಾವಲು, ಹೊಲಗಳಲ್ಲಿ ಕಂಡುಬರುತ್ತದೆ.

ಆಹಾರ:ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಹುಲ್ಲು, ವಿವಿಧ ಬಗೆಯ ಕಾಳುಗಳು, ಹಣ್ಣುಗಳನ್ನು ತಿನ್ನುತ್ತದೆ.

ವರ್ತನೆ ಮತ್ತು ಜೀವನ ಕ್ರಮ:ಇದು ಹಗಲಿಗಿಂತ ರಾತ್ರಿಯಲ್ಲಿ ಹೆಚ್ಚು ಚುರುಕಾಗಿರುತ್ತದೆ. ಹೆಚ್ಚಾಗಿ ಒಂಟಿಯಾಗಿ ಜೀವಿಸಲು ಇಷ್ಟಪಡುತ್ತದೆ. ಆಹಾರಕ್ಕಾಗಿ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ತಿನ್ನುತ್ತದೆ. ಇದು ಉತ್ತಮವ ವಾಸನೆ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು ಇದರಿಂದ ವೈರಿ ಪ್ರಾಣಿಗಳನ್ನು ದೂರದಿಂದಲೇ ಗುರುತಿಸುತ್ತದೆ.

ತೋಳ, ನರಿ, ದೈತ್ಯ ರಣಹದ್ದುಗಳು ಇವುಗಳನ್ನು ಹೆಚ್ಚಾಗಿ ಬೇಟೆಯಾಡುತ್ತವೆ. ಇದು ಗಂಟೆಗೆ 64 ಕಿ.ಮೀ ವೇಗದಲ್ಲಿ ಓಡುತ್ತದೆ.

ಓಡುವಾಗ ಒಮ್ಮೆಗೆ ಸುಮಾರು 10 ಅಡಿ ದೂರ ಜಿಗಿಯುತ್ತಾ, ವಕ್ರ ವಕ್ರವಾಗಿ ಓಡುತ್ತಾ ವೈರಿ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹುಲ್ಲನ್ನು ಬಳಸಿಕೊಂಡುನೆಲದಲ್ಲೇ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತದೆ.

ಸಂತಾನೋತ್ಪತ್ತಿ

ಫೆಬ್ರುವರಿಯಿಂದ ಜೂನ್ ತಿಂಗಳ ನಡುವಿನ ಸಮಯವು ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. 45 ದಿನಗಳು ಗರ್ಭ ಧರಿಸಿದ ನಂತರ ಹೆಣ್ಣು ಹೆಮ್ಮೊಲ 1 ರಿಂದ 6 ಮರಿಗಳಿಗೆ ಜನ್ಮ ನೀಡುತ್ತದೆ.

ಮರಿಗಳು ಬೆಳೆದು ಸ್ವತಂತ್ರವಾಗಿ ಜೀವಿಸುವವರೆಗೆ ತಾಯಿಯ ಪೋಷಣೆಯಲ್ಲಿ ಬೆಳೆಯುತ್ತವೆ. ಸಂತತಿ ಅಧಿಕವಾಗಿದ್ದರೂಅತಿಯಾದ ಬೇಟೆಗಾರಿಕೆ ಮತ್ತು ವಾಸಸ್ಥಾನಗಳ ನಾಶದಿಂದ ಇವುಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ.

ಗಾತ್ರ ಮತ್ತು ಜೀವಿತಾವಧಿ

ದೇಹದ ಉದ್ದ:56 ರಿಂದ 67 ಸೆಂ.ಮೀ

ತೂಕ:2.5 ರಿಂದ 4.3 ಕೆ.ಜಿ

ಜೀವಿತಾವಧಿ:6 ರಿಂದ 7 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.