ADVERTISEMENT

ಕನ್ನಡ ಮೇಡಂ ಕ್ಯಾಮೆರಾ ಕ್ಲಿಕ್‌‌

ಕೃಷ್ಣಿ ಶಿರೂರ
Published 23 ಸೆಪ್ಟೆಂಬರ್ 2019, 19:30 IST
Last Updated 23 ಸೆಪ್ಟೆಂಬರ್ 2019, 19:30 IST
ಲೀಲಾ ಅಪ್ಪಾಜಿ ಕ್ಲಿಕ್ಕಿಸಿದ ಪಕ್ಷಿ ಚಿತ್ರ
ಲೀಲಾ ಅಪ್ಪಾಜಿ ಕ್ಲಿಕ್ಕಿಸಿದ ಪಕ್ಷಿ ಚಿತ್ರ   

ವೃತ್ತಿಯಿಂದ ನಿವೃತ್ತಿಯಾದ ಮೇಲೆ, ಸಾಮಾನ್ಯವಾಗಿ ವಿಶ್ರಾಂತ ಜೀವನವೇ ಬಹುತೇಕರ ಆಯ್ಕೆ. ಆದರೆ, ಕೆಲವರು ವೃತ್ತಿ ಜೀವನದಲ್ಲಿ ಕಳೆದುಕೊಂಡಿದ್ದ ‘ಖುಷಿಯ’ ಕ್ಷಣಗಳನ್ನು ವಾಪಸ್ ಪಡೆಯಲು ಹೊಸ ಹವ್ಯಾಸ ಆರಂಭಿಸುತ್ತಾರೆ. ಬದುಕಿನ ಏಕತಾನತೆ ಕಳೆದುಕೊಳ್ಳಲು ಸಾಹಸದ ಕೆಲಸಗಳಿಗೂ ಕೈ ಹಾಕುತ್ತಾರೆ.

ಕನ್ನಡ ಮೇಡಂ ಲೀಲಾ ಅಪ್ಪಾಜಿ, ಎರಡನೇ ವಿಭಾಗಕ್ಕೆ ಸೇರಿದವರು. ಅವರು ನಿವೃತ್ತಿ ನಂತರ ಫೋಟೊಗ್ರಫಿಯನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಮಂಡ್ಯ ಮೂಲದ ಅವರು, ಅರವತ್ನಾಲ್ಕರ ಹರೆಯದಲ್ಲೂ ಹೆಗಲ ಮೇಲೆ ಮಣಭಾರದ ಕ್ಯಾಮೆರಾ ಹೊತ್ತು, ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಸುತ್ತಾಡುತ್ತಾರೆ. ‘ಲೀವ್ ವಿತ್ ಪೇನ್’ ಅಂತಾರಲ್ಲಾ ಹಾಗೆ, ಕಾಲು ನೋವಿನೊಂದಿಗೆ ಓಡಾಡುತ್ತಾ, ಅಪರೂಪದ ಪಕ್ಷಿಗಳ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದಾರೆ.

ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ 2015ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬರ್ಡ್ಸ್‌ ಫೋಟೊಗ್ರಫಿಯನ್ನು ಹವ್ಯಾಸವಾಗಿಸಿಕೊಂಡರು. ಪಕ್ಷಿಗಳ ಫೋಟೊಗಳನ್ನು ಕ್ಲಿಕ್ಕಿಸುವ ಹವ್ಯಾಸಿ ಛಾಯಾಗ್ರಾಹಕರ ಸಂಸ್ಥೆಗಳಲ್ಲಿ ನೋಂದಣಿ ಮಾಡಿಸಿ ಲಡಾಕ್‌, ಉತ್ತರಾಖಂಡ, ಪಶ್ಚಿಮ ಬಂಗಾಳ, ಒಡಿಶಾ, ಅಂಡಮಾನ್‌, ರಾಜಸ್ಥಾನ, ಕೇರಳ ಅಲ್ಲದೇ, ದೇಶದ ಗಡಿ ದಾಟಿ ಭೂತಾನ್‌ನಲ್ಲಿಯೂ ಹಕ್ಕಿಗಳ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ನಾಲ್ಕು ವರ್ಷಗಳಿಂದ ಅವರು ಸೆರೆ ಹಿಡಿದಿರುವ ಪಕ್ಷಿಗಳ ಫೋಟೊ ಸಂಖ್ಯೆ 600 ದಾಟಿದೆ.

ADVERTISEMENT

ಒಮ್ಮೆ ಫೇಸ್‌ಬುಕ್‌ನಲ್ಲಿ ಸ್ಕ್ರಾಲ್ ಮಾಡುತ್ತಿದ್ದಾಗ, ಲೀಲಾ ಮೇಡಂ ಅವರ ಖಾತೆಯಲ್ಲಿ ವಿಶಿಷ್ಟ ಹಕ್ಕಿಗಳ, ವಿಭಿನ್ನ ಭಾವಗಳಿರುವಂತಹ ಪಕ್ಷಿಗಳ ಚಿತ್ರಗಳನ್ನು ಕಂಡೆ. ಅದರಲ್ಲಿ ಮರಕುಟಿಕ ಪಕ್ಷಿಯ ಚಿತ್ರ ನನ್ನನ್ನು ಸೆಳೆಯಿತು. ಪಕ್ಷಿ ಮರ ಕುಕ್ಕುತ್ತಿದ್ದ ಭಂಗಿಯಲ್ಲಿತ್ತು. ತದೇಕ ಚಿತ್ತದಿಂದ ಚಿತ್ರವನ್ನು ಗಮನಿಸುತ್ತಿದ್ದೆ. ಮರ ಕುಕ್ಕುವಾಗಿನ ಆ ಪಕ್ಷಿಯ ಭಾವಗಳು ಕಾಣಿಸಿತು. ಅವರು ತೆಗೆದ ಚಿತ್ರಗಳು ಒಂದಕ್ಕಿಂತ ಒಂದು ಚಂದ. ಅಷ್ಟೇ ಅಲ್ಲ ಶಾರ್ಪ್‌ ಎನಿಸುವ ಇಮೇಜ್‌.

‘ಬರ್ಡ್ಸ್‌ ಫೀಲಿಂಗ್ಸ್‌ ಕಾನ್ಸೆಪ್ಟ್ ಮೇಲೆ ನಾನು ಫೋಟೊಗ್ರಫಿ ಮಾಡುತ್ತಿದ್ದೇನೆ. ನಾನು ಕ್ಲಿಕ್ಕಿಸಿದ ಫೋಟೊಗಳಲ್ಲಿರುವ ಹಕ್ಕಿಗಳ ಫೀಲಿಂಗ್ಸ್‌ ಕವಿತೆ–ಕಾವ್ಯವಾಗಬಹುದು’ ಎನ್ನುತ್ತಾರೆ ಲೀಲಾ.

ಇದನ್ನೂ ಓದಿ...ಬಾಯ್ಕಳಕ ಬಯಲಾಟ

‘ಹಕ್ಕಿಗಳು ಒಮ್ಮೆ ಸಂಗಾತಿಯ ಆಗಮನಕ್ಕೋ ಮರಿಗಳು ಅಪ್ಪ–ಅಮ್ಮನ ಬರುವಿಕೆಗಾಗಿಯೋ ಅವುಗಳು ತರುವ ತುತ್ತಿಗಾಗಿಯೋ ಕಾಯುತ್ತಿರುತ್ತವೆ. ಇಂಥ ಸನ್ನಿವೇಶವನ್ನು ಕ್ಲಿಕ್ಕಿಸಿದರೆ, ಒಂದೊಂದು ಫೋಟೊ ಅದೆಷ್ಟೊ ಭಾವಗಳನ್ನು ಕಟ್ಟಿಕೊಡುತ್ತದೆ. ಆ ಕ್ಷಣವನ್ನು ಕ್ಯಾಮೆರಾದಲ್ಲಿ ಹಿಡಿದಿಡುವುದು ಒಂದು ರೀತಿಯ ತಪಸ್ಸಿನಂತೆ’ ಎಂದು ತಮ್ಮ ಫೋಟೊಗ್ರಫಿ ಅನುಭವವನ್ನು ಸುದೀರ್ಘವಾಗಿ ವಿವರಿಸುತ್ತಾರೆ.

ಲೀಲಾ ಅವರು, ತಾವು ಕ್ಲಿಕ್ಕಿಸಿದ ಪಕ್ಷಿ ಫೋಟೊವನ್ನು ಎಂಜಾಯ್ ಮಾಡುತ್ತಾರೆ ಹೊರತು, ಆ ಪಕ್ಷಿಗಳ ಕುರಿತು ಅಧ್ಯಯನ ಮಾಡಲು ಹೋಗಿಲ್ಲ. ಕೇವಲ ದಾಖಲಾತಿಗಾಗಿ ಅವುಗಳ ಜೀವನಕ್ರಮವನ್ನು ತಿಳಿದುಕೊಳ್ಳುತ್ತಾರಂತೆ.

‘ನೀವು ಪ್ರಾಧ್ಯಾಪಕಿ. ಈ ಫೋಟೊಗ್ರಫಿ ಕ್ಷೇತ್ರಕ್ಕೆ ಬಂದಿದ್ದು ಹೇಗೆ. ಏನಾದರೂ ಫ್ಯಾಮಿಲಿ ಹಿಸ್ಟರಿ ಇದೆಯಾ’ ಎಂದು ಕೇಳಿದರೆ, ‘ಅದೆಲ್ಲ ಏನೂ ಇಲ್ಲ. ಫೋಟೊಗ್ರಫಿ ನನಗೆ ಪ್ಯಾಷನ್‌. ಡಿಜಿಟಲ್‌ ಕ್ಯಾಮೆರಾ ಬರುವ ಮೊದಲು ರೋಲ್‌ ಕ್ಯಾಮೆರಾ ಬಳಸುತ್ತಿದ್ದೆ. ನಂತರ ಸೋನಿ ಕ್ಯಾಮೆರಾ ಇತ್ತು. ಅದರಲ್ಲೇ ಫ್ಯಾಮಿಲಿ ಗ್ರೂಫ್‌ ಫೋಟೊ ತೆಗೆಯುತ್ತಿದ್ದೆ. ಇದನ್ನು ಪ್ರವೃತ್ತಿಯಾಗಿ ತಗೋಬೇಕು ಎನ್ನಿಸಿತು. ಆಮೇಲೆ ಕ್ಯಾನನ್‌ ಕ್ಯಾಮೆರಾ ಬಳಸಿದೆ. ಈಗ ಕ್ಯಾನನ್‌ 5 ಡಿ ಮಾರ್ಕ್‌ 3 ಫುಲ್‌ಫ್ರೇಮ್‌, 7 ಡಿ ಮಾರ್ಕ್‌ 4 ಬಳಸುತ್ತಿದ್ದೇನೆ’ ಎನ್ನುತ್ತಾ, ಬಂದೂಕದಂತಹ ಲೆನ್ಸ್‌ ಇರುವ ಕ್ಯಾಮೆರಾ ತೆಗೆದು ತೋರಿಸಿದರು ಲೀಲಾ.

ಭಾರದ ಕ್ಯಾಮೆರಾ ಹೊತ್ತು ಸಾಗುವುದು ಕಷ್ಟ. ಹಕ್ಕಿಗಳ ಫೋಟೊ ತೆಗೆಯಲು ತಾಳ್ಮೆ, ಸಂಯಮ ಜತೆಗೆ ದೀರ್ಘಕಾಲ ಒಂದೇ ಕಡೆ ನಿಲ್ಲಬೇಕು ಅಥವಾ ಕುಳಿತಿರಬೇಕು. ಮಂಡಿನೋವು ಹೊರತುಪಡಿಸಿದರೆ ಉಳಿದಂತೆ ಆರೋಗ್ಯ ಚೆನ್ನಾಗಿದೆ ಎನ್ನುತ್ತಾರೆ ಅವರು. ‘ಹಕ್ಕಿಗಳ ಫೋಟೊ ತೆಗೆಯುವುದಕ್ಕಾಗಿ ದೇಶ ಸುತ್ತುವಾಗ ಸಿಗುವ ಅನುಭವಗಳು, ಜೀವನದ ಪಾಠ ಕಲಿಸಿವೆ. ಪಕ್ಷಿಗಳ ಫೋಟೊಗಳು, ನನಗೆ ವಯಸ್ಸಾಗಿದೆ ಎಂಬುದನ್ನೇ ಮರೆಸಿವೆ’ ಎಂದು ಖುಷಿಯಿಂದ ಹೇಳುತ್ತಾರೆ.

ಇಷ್ಟೆಲ್ಲ ಪಕ್ಷಿಗಳ ಚಿತ್ರ ತೆಗೆದಿದ್ದರೂ, ಅವುಗಳಲ್ಲಿ ಒಂದನ್ನೂ ಪ್ರಿಂಟ್ ಹಾಕಿಸಿಲ್ಲ. ಎಲ್ಲಿಯೂ ಪ್ರದರ್ಶನ ಮಾಡಿಲ್ಲ. ಯಾವ ಚಿತ್ರಗಳನ್ನೂ ಪ್ರಶಸ್ತಿ, ಪುರಸ್ಕಾರಕ್ಕಾಗಿ ಕಳುಹಿಸಿಲ್ಲ. ‘ಯಾಕೆ ಹೀಗೆ’ ಎಂದರೆ, ‘ನಾನು ಆಯ್ದುಕೊಂಡ ಪ್ರವೃತ್ತಿ ನನ್ನಿಚ್ಛೆಯ ವಿರುದ್ಧ ದಿಕ್ಕಿನಲ್ಲಿ ಸಾಗಬಹುದೆಂಬ ಆತಂಕ. ಪ್ರದರ್ಶನ, ಪ್ರಶಸ್ತಿಯ ಹಿಂದೆ ಹೋದರೆ ನನ್ನೀ ಖುಷಿಗೆ ಅಡ್ಡಿಯಾಗಬಹುದು. ಪಕ್ಷಿ ಫೋಟೊಗ್ರಫಿ ಕೇವಲ ನನ್ನ ಖುಷಿಗಾಗಿ ಅಷ್ಟೆ’ ಎನ್ನುತ್ತಾರೆ ಲೀಲಾ.

ಕ್ಯಾಮೆರಾ ಜತೆಗಿನ ಪಯಣದ ಬಗ್ಗೆ ಮಾತನಾಡುತ್ತಿದ್ದ ಲೀಲಾ ಅಪ್ಪಾಜಿ ಮಾತು ಮುಗಿಸುತ್ತಲೇ, ಗದಗ ಸಮೀಪದ ಮಾಗಡಿ ಕೆರೆ, ಆಲಮಟ್ಟಿ ಹಿನ್ನೀರಿನತ್ತ ಹೊರಡಲು ಅಣಿಯಾಗುತ್ತಿದ್ದರು. ‘ಅಲ್ಲಿಗೆ ಬಾರ್‌ ಹೆಡ್ಡೆಡ್‌ ಗೂಸ್‌ ಹಕ್ಕಿಗಳು ವಲಸೆ ಬರುತ್ತವೆ. ಆಲಮಟ್ಟಿ ಹಿನ್ನೀರಿಗೆ ಫ್ಲೆಮಿಂಗೋಗಳು ಬಂದಿವೆ. ಅವುಗಳ ಚಿತ್ರ ತೆಗೆಯಬೇಕು’ ಎನ್ನುತ್ತಾ ಹೊರಟರು.

ನಿಜ; ಲೀಲಾ ಮೇಡಮ್‌ ಅವರ ಫೇಸ್‌ಬುಕ್‌ ವಾಲ್‌ ಗಮನಿಸಿದರೆ, ಅವರು ಹಕ್ಕಿಗಳ ಸುಂದರ ಫೋಟೊಗಳ ಜೊತೆಗೆ ಅವುಗಳ ಭಾವನೆಗಳು ಕವಿತೆ ರೂಪದಲ್ಲೋ, ಪ್ಯಾರಾ ರೂಪದಲ್ಲೋ ನಮಗೂ ಖುಷಿ ಕೊಡುವುದು ಖಂಡಿತ.

ವಿಭಿನ್ನ ಅನುಭವ..

ಪ್ರತಿ ಪಕ್ಷಿಯ ಫೋಟೊಗ್ರಫಿ ಮಾಡುವಾಗಲೂ ವಿಭಿನ್ನ ಅನುಭವವಾಗಿದೆ. ಕೆಲವೊಮ್ಮೆ ಅಪಾಯಕ್ಕೂ ಸಿಲುಕಿದ ಉದಾಹರಣೆಗಳಿವೆಯಂತೆ. ಅದಕ್ಕೆ ಅವರು ಒಂದು ಘಟನೆಯನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ; ‘2018ರ ಜೂನ್‌ನಲ್ಲಿ ಲಡಾಕ್‌, ಲೇಹ್‌ನಲ್ಲಿ ಬರ್ಡ್ಸ್‌ ಫೋಟೊಗ್ರಫಿಗೆ ಹೋದಾಗ ಅಲ್ಲಿಯ ವಾತಾವರಣ ಅಷ್ಟು ಪೂರಕವಾಗಿರಲಿಲ್ಲ. ಆಮ್ಲಜನಕದ ಕೊರತೆಯಿಂದ ಉಸಿರಾಟದ ಸಮಸ್ಯೆಯಾಗಿ, ಕೋಮಾಗೆ ಜಾರಿದ್ದೆ. ಐಸಿಯುನಲ್ಲಿದ್ದ ನನ್ನನ್ನು ನನ್ನ ಮಗಳು ಬಂದು ಕರೆದೊಯ್ದಿದ್ದಳು. ಎಷ್ಟೊ ಬಾರಿ ಕಾಲು ನೋವು ಹೆಚ್ಚಾದಾಗ ನನ್ನ ಜೊತೆಗಾರರು ನನ್ನ ಬಿಟ್ಟು ಹೋಗಿರುವ ಸಂದರ್ಭಗಳೂ ಇವೆ. ಹತ್ತಿರ ಹತ್ತಿರ 8 ಕೆಜಿ ಭಾರದ ಕ್ಯಾಮೆರಾವನ್ನು ಹೊತ್ತು ಸಾಗುವುದು ಕಷ್ಟವೆನಿಸುತ್ತದೆ’ ಎನ್ನುತ್ತಾರೆ ಲೀಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.