ADVERTISEMENT

ಬಿಳಿ ಹುಬ್ಬಿನ ಪಿಕಳಾರ

ಎಂ.ಆರ್.ಮಂಜುನಾಥ
Published 12 ಜೂನ್ 2018, 13:26 IST
Last Updated 12 ಜೂನ್ 2018, 13:26 IST
   

ಪಕ್ಷಿ ವೀಕ್ಷಣೆಯೆಂದರೆ ನನಗೆ ಇನ್ನಿಲ್ಲದಂತಹ ಆಸಕ್ತಿ. ಎಂದಿನಂತೆ ಮೊನ್ನಿನ ಭಾನುವಾರ ಕೂಡ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಬಾಗೇಪಲ್ಲಿ ಹತ್ತಿರದ ವೀರಾಪುರಕ್ಕೆ ಹೋಗಿದ್ದೆ. ಅಲ್ಲಿನ ಕುರುಚಲು ಕಾಡಿನಲ್ಲಿ ಅಲೆಯುತ್ತಿದ್ದೆ. ಒಂದು ಹಕ್ಕಿಯ ಚಿತ್ರವನ್ನು ಕೂಡ ತೆಗೆಯಲು ಆಗಲಿಲ್ಲ. ನನ್ನ ಕ್ಯಾಮೆರಾ ಮಿತ್ರನಿಗೆ ಯಾರೊಬ್ಬರೂ ಸೆರೆ ಸಿಗಲಿಲ್ಲವಲ್ಲ ಎಂದುಕೊಳ್ಳುತ್ತ ಮತ್ತೊಂದು ಅಂಚಿನಲ್ಲಿ ಸುಮ್ಮನೆ ತಂಪಾದ ಗಾಳಿ ಆನಂದಿಸುತ್ತ ನಡೆಯುತ್ತಿದ್ದೆ. ಆಚೆ ಗಿಡದ ಮರೆಯಲ್ಲಿ ರೆಕ್ಕೆ ಬಡಿದ ಶಬ್ದ ಕೇಳಿಬಂತು. ಕುತೂಹಲಗೊಂಡು ಅತ್ತ ಹೆಜ್ಜೆ ಹಾಕಿದೆ.

ಅಲ್ಲೊಂದು ಹಕ್ಕಿ ಕೂತಿತ್ತು. ಬಿಳಿಬಣ್ಣದ ಹುಬ್ಬಿನ ನಡುವೆ ಕಾಡಿಗೆ ಬಡಿದುಕೊಂಡ ಕಣ್ಣುಗಳು, ಮೊನಚಾದ ಕಪ್ಪುಬಣ್ಣದ ಕೊಕ್ಕು, ತಿಳಿಗಂದು ಮಿಶ್ರಿತ ಎಲೆಹಸಿರು ಬಣ್ಣದ ಮೈಕಾಂತಿ ಅದರದ್ದು. ಈ ಮೋಹಕ ಸುಂದರಿಯನ್ನು ಕಂಡು ಬೆರಗಾದೆ. ತಕ್ಕಮಟ್ಟಿಗೆ ಪಕ್ಷಿಗಳ ಪರಿಚಯವಿರುವ ನನಗೆ ಇದಾವ ಹಕ್ಕಿ ಎಂಬ ಗಲಿಬಿಲಿ. ಕ್ಯಾಮೆರಾ ಮಿತ್ರನ ಕೈಚಳಕ ಸ್ವಲ್ಪ ನಿಧಾನವಾಗಿದ್ದರಿಂದ ಅದು ಜಾಗದಿಂದ ಮಾಯ! ಮತ್ತೆ ಹುಡುಕಾಡಿದೆ. ಎಲ್ಲೂ ಕಾಣಲಿಲ್ಲ. ಬೇಸರದಿಂದ ಸುತ್ತಮುತ್ತ ನೋಡುತ್ತಾ ಸ್ವಲ್ಪ ಮುಂದೆ ಸಾಗಿದೆ.

ಅಲ್ಲಿಯೇ ಅದು ಕುಳಿತಿತ್ತು. ಇನ್ನು ಬಿಟ್ಟರೆ ಇದು ಸಿಗಲ್ಲ ಎಂದು ಕ್ಯಾಮೆರಾ ಮಿತ್ರನಿಗೆ ಸನ್ನೆ ಮಾಡಿದೆ. ಒಂದಿಷ್ಟು ಚಿತ್ರಗಳು ಸಿಕ್ಕವು.

ADVERTISEMENT

ಗಲಿಬಿಲಿಗೊಂಡ ಆ ಹಕ್ಕಿ ತನ್ನ ಮರಿಗಳನ್ನು ಮರೆಮಾಚಿ ಬಿಟ್ಟಿತ್ತು. ಗಿಡಗಂಟೆಗಳ ಸಂದಿನಲ್ಲಿ ತನ್ನ ಮರಿಗಳನ್ನು ಅಡಗಿಸಿಟ್ಟುಕೊಂಡಿತ್ತು. ಜಪ್ಪಯ್ಯ ಎಂದರೂ ಮರಿಗಳ ಬಳಿ ಹೋಗಲು ಬಿಡಲಿಲ್ಲ. ಹೊಸ ಹಕ್ಕಿಯ ಫೋಟೊ ತೆಗೆಯುವ ಕಾತುರ ನನಗೆ. ಆದರೆ ಆ ಹಕ್ಕಿ ನನ್ನನ್ನು ನೋಡಿ ಒಂದೇ ಸಮನೆ ಮರಿಗಳಿಗೆ ಸೂಚನೆ ಕೊಡುತ್ತ ಗಿಡಗಳ ಮರೆಗೆ ಕರೆದುಕೊಂಡು ಹೋಗುತ್ತಿತ್ತು. ಸ್ವಲ್ಪ ಸಮಯ ನಾನು ಕೂಡ ಮರವಾಗಿ ಸುಮ್ಮನೇ ನಿಂತೆ. ಹಕ್ಕಿಯು ಮರಿಗಳ ಬಳಿ ಹೋಗಿ ಅದರ ತುತ್ತಿನ ಚೀಲ ತುಂಬಿಸುತ್ತಿತ್ತು. ಮರಿಗಳಿಗೆ ಆಹಾರ ತಂದು ಕೊಡಲು ಬಂದ ಗಂಡುಹಕ್ಕಿ ನನ್ನನ್ನು ಗಮನಿಸಿತು. ಈ ಶತ್ರು ಇನ್ನೂ ಜಾಗ ಖಾಲಿ ಮಾಡಿಲ್ಲವಲ್ಲ ಎಂದು ಶಪಿಸುತ್ತ ತನ್ನ ಮರಿಗಳನ್ನು ಸುಮಾರು ದೂರ ಕರೆದುಕೊಂಡು ಹೋಯಿತು. ಕೆಲವೇ ಕೆಲವು ಚಿತ್ರಗಳು ದಕ್ಕಿದವು. ಅಲ್ಲಿಂದ ವಾಪಸಾದೆ.

ಪಕ್ಷಿತಜ್ಞ ಡಾ. ನರಸಿಂಹನ್ ಬಳಿ ವಿಚಾರಿಸಿದಾಗ ಇಂಗ್ಲಿಷ್‍ನಲ್ಲಿ ಇದಕ್ಕೆ ‘ವೈಟ್ ಬ್ರೋಡ್‌ ಬುಲ್‍ಬುಲ್’ ಎನ್ನುತ್ತಾರೆ. ಅದೇ ಕನ್ನಡದಲ್ಲಿ ಇದರ ಹೆಸರು ಬಿಳಿ ಹುಬ್ಬಿನ ಪಿಕಳಾರ ಎಂದು ತಿಳಿಸಿದರು. ಇದು ಕಣ್ಣಿಗೆ ಕಾಣಿಸುವುದು ತುಂಬಾ ಅಪರೂಪ. ಶ್ರೀಲಂಕಾ ಮತ್ತು ಭಾರತ ಗಡಿ ಭಾಗದ ಅರಣ್ಯಗಳಲ್ಲಿ ಕಂಡು ಬರುತ್ತದೆ. ಇದು ಹೂದೋಟದಲ್ಲಿ ಕಾಣಸಿಗುವ ಬುಲ್‍ಬುಲ್ (ಪಿಕಳಾರ) ಹಕ್ಕಿಯಂತೆ ಅಲ್ಲ. ಹೆಚ್ಚಾಗಿ ಅರಣ್ಯ ಪ್ರದೇಶದ ಕುರುಚಲು ಕಾಡುಗಳಲ್ಲಿ ಮಾತ್ರ ಕಂಡು ಬರುತ್ತದೆ. ಈ ಹಕ್ಕಿಗಳು ಫೆಬ್ರುವರಿಯಿಂದ ಮಾರ್ಚ್‌ ತಿಂಗಳಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಇವುಗಳ ಆಯುಸ್ಸು ಸುಮಾರು 11 ವರ್ಷಗಳು.

ಇದು ಮೈನಾ ಹಕ್ಕಿಗಿಂತ ಸ್ವಲ್ಪ ದೊಡ್ಡದು. ಈ ಹಕ್ಕಿಯು ಸಾಮಾನ್ಯವಾಗಿ ಬಾಲದಿಂದ ಕೊಕ್ಕಿನವರೆಗೆ 20 ಸೆಂ.ಮೀ ಉದ್ದವಿರುತ್ತದೆ. ಮಳೆ ಬಿದ್ದೊಡನೆ ಏಳುವ ರೆಕ್ಕೆ-ಗೆದ್ದಲುಗಳೆಂದರೆ ಇದಕ್ಕೆ ಬಲು ಇಷ್ಟ. ಎಲೆಗಳ ನಡುವೆ ಅಡಗಿಕೊಂಡಿದ್ದರೂ ಅದು ಹಾಕುವ ಇಂಪಾದ ಸಿಳ್ಳೆಯಿಂದ ಪತ್ತೆ ಹಚ್ಚಬಹುದು. ಇದನ್ನು ಗುರುತಿಸಲು ಇದರ ಬಿಳಿ ಹುಬ್ಬೇ ಕಾರಣ. ಈ ಪಿಕಳಾರದ ಸಿಳ್ಳೆ ಕೇಳಿ ಆನಂದಿಸೋಣ. ಅದರ ಸಂತತಿ ಉಳಿಸೋಣ.
ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.