ADVERTISEMENT

ಈಜುಪಟು ಎಲಿಫೆಂಟ್‌ ಸೀಲ್‌

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 19:45 IST
Last Updated 11 ಅಕ್ಟೋಬರ್ 2019, 19:45 IST
ಎಲಿಫೆಂಟ್‌ ಸೀಲ್
ಎಲಿಫೆಂಟ್‌ ಸೀಲ್   

ದೈತ್ಯ ಪ್ರಾಣಿಗಳಲ್ಲಿ ಒಂದಾದ ಎಲಿಫೆಂಟ್‌ ಸೀಲ್‌ನಲ್ಲಿ ಎರಡು ಬಗೆಯಿದೆ.ಫೆಸಿಫಿಕ್‌ ಸಾಗರದ ಉತ್ತರ ಭಾಗದಲ್ಲಿರುವ ಕಡಲು ಪ್ರದೇಶದಲ್ಲಿ ಉತ್ತರ ಎಲಿಫೆಂಟ್‌ ಸೀಲ್‌ಗಳಿವೆ. ಅರ್ಜೆಂಟಿನಾದ ದಕ್ಷಿಣ ಕರಾವಳಿ ತೀರದಲ್ಲಿರುವುದನ್ನು ದಕ್ಷಿಣ ಎಲಿಫೆಂಟ್‌ ಸೀಲ್‌ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಮಿರುಂಗಾ(Mirounga). ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತೆ?

ಸೊಂಡಿಲು ಇರುವ ಆನೆಯಂತೆ ಇದರ ಮುಖವಿದ್ದು, ಎಮ್ಮೆಯಂತೆ ದಪ್ಪ ಚರ್ಮ ಹೊಂದಿರುತ್ತದೆ. ಇದರಿಂದಾಗಿ ಕೊರೆಯುವ ಚಳಿಯಲ್ಲಿಯೂ ದೇಹಕ್ಕೆ ಥಂಡಿ ಹಿಡಿಯುವುದಿಲ್ಲ. ಪ್ರತಿ ವರ್ಷವು ಇದರ ಚರ್ಮವು ಉದುರಿ ಹೊಸ ಚರ್ಮ ಹುಟ್ಟುವುದು. ಆದರೆ, ಸಂತಾನೋತ್ಪತ್ತಿ ಸಂದರ್ಭದಲ್ಲಿ ಮಾತ್ರ ಚರ್ಮ ಬದಲಾಗುವುದಿಲ್ಲ. ಕಡಲತೀರದಲ್ಲಿ ಎಮ್ಮೆಯ ಹಾಗೆ ಬಿದ್ದುಕೊಂಡಿದೆ ಎಂದು ಮೇಲ್ನೋಟಕ್ಕೆ ಅನಿಸಿದರೂ ನೀರಿಗಿಳಿದರೆ ಕ್ರಿಯಾಶೀಲವಾಗಿರುತ್ತದೆ. ಗಂಡು ಸೀಲ್‌ನ ಮುಖ ಬಹಳ ಗಡಸಾಗಿದ್ದು, ನೋಡಲು ಅಷ್ಟೇನೂ ಚಂದ ಎನಿಸುವುದಿಲ್ಲ. ಆದರೆ, ಹೆಣ್ಣು ಸೀಲ್‌ನ ಮುಖ ಮುದ್ದಾಗಿರುತ್ತದೆ.

ADVERTISEMENT

ಎಲ್ಲಿರುತ್ತೆ?

ಇದು ಸಾಮಾನ್ಯವಾಗಿ ಬೆಚ್ಚಗಿನ ಕಡಲ ತೀರದಲ್ಲಿ ಇರಲು ಇಷ್ಟಪಡುತ್ತದೆ.ಮೆಕ್ಸಿಕೊ, ಕೆನಡಾ, ಅಮೆರಿಕ, ಅರ್ಜೆಂಟಿನಾ, ದಕ್ಷಿಣಾ ಆಫ್ರಿಕಾ, ನ್ಯೂಜಿಲೆಂಡ್‌ನಲ್ಲಿ ಇದನ್ನು ನೋಡಬಹುದು.

ಆಹಾರಪದ್ಧತಿ

ಇದು ಮೀನು ಪ್ರಿಯ ಪ್ರಾಣಿ. ಕಡಲಿನಲ್ಲಿ ಸಿಗುವ ತರಹೇವಾರಿ ಮೀನುಗಳನ್ನು ತಿನ್ನುತ್ತದೆ.
ಜತೆಗೆ ಅಕ್ಟೋಪಸ್‌ ಅನ್ನು ಹುಡುಕಿ
ಹುಡುಕಿ ತಿನ್ನುತ್ತದೆ.

ವರ್ತನೆ

ನೀರಿನಲ್ಲಿ ಸರಾಗವಾಗಿ ಇರಬಲ್ಲ ಹಾಗೂ ಕ್ಷಿಪ್ರವಾಗಿ ಈಜಬಲ್ಲ ಪ್ರಾಣಿ ಎಲಿಫೆಂಟ್‌ ಸೀಲ್‌. ಸಮುದ್ರದಲ್ಲಿ ಒಂಟಿಯಾಗಿರುವಂತೆ ಕಂಡರೂ, ತೀರದಲ್ಲಿ ಪರಸ್ಪರ ಒಟ್ಟಿಗೆ ಇರುತ್ತದೆ. ನೆಲದಲ್ಲಿ ಬಹಳ ನಿಧಾನವಾಗಿ ಚಲಿಸುತ್ತದೆ. ಜೀವಿತಾವಧಿಯ ಶೇ 80ರಷ್ಟು ಭಾಗವನ್ನು ಸಾಗರದಲ್ಲಿ ಕಳೆಯುತ್ತದೆ. ದೊಡ್ಡ ಈಜುಪಟು ಪ್ರಾಣಿಯೆಂದೇ ಇದನ್ನು ಗುರುತಿಸಲಾಗಿದೆ. ಉಸಿರನ್ನು ಬಿಗಿ ಹಿಡಿದುಕೊಂಡು ಎರಡು ಗಂಟೆಗಳ ಕಾಲ ನೀರಿನಲ್ಲಿ ಇರಬಲ್ಲದು. 1,500 ಮೀಟರ್‌ ಆಳದವರೆಗೆ ಈಜಬಲ್ಲದು.

ಸಂತಾನೋತ್ಪತ್ತಿ

ಸಂತಾನೋತ್ಪತ್ತಿ ನಡೆಸುವ ಸಲುವಾಗಿ ಇದು ಒಂದು ಪ್ರದೇಶವನ್ನು ಗುರುತಿಸಿಕೊಳ್ಳುತ್ತದೆ. ದೊಡ್ಡದಾಗಿ ಕೂಗಿ ಸದ್ದುಮಾಡುತ್ತದೆ. ಮರಿ ಹಾಕಿದ ಮೂರು ವಾರಗಳ ಕಾಲ ಹಾಲುಡಿಸುತ್ತದೆ. ಒಂದು ತಿಂಗಳ ಬರೀ ಹಾಲು ಕುಡಿದು ಮರಿಗಳು ಇರುವುದರಿಂದ ಅದರ ತೂಕವು ದಿನಕ್ಕೆ ಐದು ಕೆ.ಜಿ. ಹೆಚ್ಚುತ್ತದೆ. ಹೆಣ್ಣು ಎಲಿಫೆಂಟ್‌ ಸೀಲ್‌ಗಳು ಸ್ವಲ್ಪ ತಿಂಗಳಾದ ಮೇಲೆ ಮರಿಗಳನ್ನು ಅದೇ ತೀರದಲ್ಲಿ ಬಿಟ್ಟು ಹಿಂತಿರುಗುತ್ತದೆ. ಮತ್ತೆ ಮರಿ ಹಾಕುವ ಸಲುವಾಗಿಯೇ ಆ ತೀರವನ್ನು ತಲುಪುತ್ತದೆ. ಮರಿಗಳೆಲ್ಲವೂ ಎರಡು ತಿಂಗಳ ಅವಧಿಯಲ್ಲಿ ಸ್ವತಂತ್ರ್ಯವಾಗಿ ಬದುಕಲು ಆರಂಭಿಸುತ್ತದೆ.

ಸ್ವಾರಸ್ಯಕರ ಸಂಗತಿಗಳು

*ಎಲಿಫೆಂಟ್‌ ಸೀಲ್‌ ಹಾಲು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನಾಂಶ ಹೊಂದಿರುತ್ತದೆ. ಮರಿ ಹಾಕಿದ ಆರಂಭದಲ್ಲಿ ಹಾಲಿನಲ್ಲಿ ಶೇ 12ರಷ್ಟು ಕೊಬ್ಬಿನಾಂಶ ಇದ್ದರೆ, ಅದು ಮೂರು ವಾರಗಳ ನಂತರ ಶೇ 50ರಷ್ಟಾಗುತ್ತದೆ. ಹಸುವಿನ ಹಾಲಿನಲ್ಲಿ ಕೇವಲ ಶೇ 3.5 ಕೊಬ್ಬಿನಾಂಶ ಇರುತ್ತದೆ.

*ಇದನ್ನು ಅಳಿವಿನಂಚಿನಲ್ಲಿರುವ ಪ್ರಾಣಿಯೆಂದೇ ಗುರುತಿಸಲಾಗಿದೆ.

ಜೀವಿತಾವಧಿ10ರಿಂದ 16 ಅಡಿಎತ್ತರ,ಗಾತ್ರ900 ಕೆ.ಜಿ. 3 ಸಾವಿರ ಕೆ.ಜಿ,ಜೀವಿತಾವಧಿ 18ರಿಂದ 22 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.