ಗುಬ್ಬಿ
ಬೆಂಗಳೂರು: ಪ್ರತಿ ವರ್ಷ ಮಾರ್ಚ್ 20ರಂದು ‘ವಿಶ್ವ ಗುಬ್ಬಿ ದಿನ’ವನ್ನು ಆಚರಿಸಲಾಗುತ್ತಿದೆ. 2010ರಿಂದ ಜಾಗತಿಕವಾಗಿ ಗುಬ್ಬಿ ದಿನ ಆಚರಣೆ ಪ್ರಾರಂಭವಾಯಿತು.
ಪ್ರತಿ ವರ್ಷ ಒಂದೊಂದು ಧ್ಯೇಯದೊಂದಿಗೆ ಗುಬ್ಬಚ್ಚಿ ದಿನವನ್ನು ಆಚರಣೆ ಮಾಡಲಾಗುತ್ತದೆ. ‘ಗುಬ್ಬಿಗಳನ್ನು ಪ್ರೀತಿಸೋಣ‘ ಈ ವರ್ಷದ ಧ್ಯೇಯವಾಗಿದೆ.
ಗುಬ್ಬಚ್ಚಿಯನ್ನು ಮಾತ್ರ ಉಳಿಸುವ ಸಂಚಲನವಾಗಿರದೆ ಆ ಮೂಲಕ ನಶಿಸುತ್ತಿರುವ ಎಲ್ಲ ಜೀವವೈವಿಧ್ಯಗಳ ಬಗ್ಗೆ ಮತ್ತು ಅವುಗಳ ಸಹಜ ಪರಿಸರವನ್ನು ಕಾಪಾಡುವ ಅಗತ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನು ಮೂಡಸುವುದು ಈ ದಿನಾಚರಣೆ ಉದ್ದೇಶವಾಗಿದೆ.
‘ನೇಚರ್ ಫಾರೆವರ್‘ (NFS) ಎಂಬ ಪಕ್ಷಿ ಸಂರಕ್ಷಣೆ ಸಂಸ್ಥೆ ವಿಶ್ವ ಗುಬ್ಬಿ ದಿನ ಆಚರಣೆಗೆ ಕರೆ ನೀಡಿತು. ಇದಕ್ಕೆ ವಿಶ್ವಸಂಸ್ಥೆಯು ಕೂಡ ಮಾನ್ಯತೆ ನೀಡಿದೆ.
ಫ್ರಾನ್ಸ್ ದೇಶದ ಇಕೋ-ಸಿಸ್ ಆ್ಯಕ್ಷನ್ ಫೌಂಡೇಶನ್ ಸಹಕಾರದಲ್ಲಿ ‘ನೇಚರ್ ಫಾರೆವರ್‘ ಸಂಸ್ಥೆ ವಿಶ್ವದ 50 ದೇಶಗಳಲ್ಲಿ ಗುಬ್ಬಚ್ಚಿಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿದೆ. ಹಾಗೇ ಜನರಲ್ಲಿ ಗುಬ್ಬಚ್ಚಿಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.
ಗುಬ್ಬಿಗಳು ಪರಿಸರ ವ್ಯವಸ್ಥೆಗಳಿಗೆ ಅತ್ಯಗತ್ಯವಾಗಿವೆ. ಕೀಟಗಳ ಸಂಖ್ಯೆಯನ್ನು ನಿಯಂತ್ರಿಸುವುದು, ಪರಾಗಸ್ಪರ್ಶಕ್ಕೆ ಸಹಾಯ ಮಾಡುವುದು ಮತ್ತು ಬೀಜಗಳನ್ನು ಹರಡುವ ಮೂಲಕ ಪರಿಸರವನ್ನು ಸಮತೋಲನ ಮಾಡುವ ಕೆಲಸ ಮಾಡುತ್ತಿವೆ.
ಲಂಡನ್‌ನ ರಾಯಲ್ ಸೊಸೈಟಿಯ 2018ರ ವರದಿಯ ಪ್ರಕಾರ, ಮಾನವರು ಮತ್ತು ಗುಬ್ಬಚ್ಚಿಗಳ ನಡುವಿನ ಸಂಬಂಧವು 11,000 ವರ್ಷಗಳ ಹಿಂದಿನದು, ಇದು ನಮ್ಮ ಇತಿಹಾಸದಲ್ಲಿ ಅವುಗಳ ದೀರ್ಘಕಾಲೀನ ಉಪಸ್ಥಿತಿಯನ್ನು ವಿವರಿಸುತ್ತದೆ ಎಂದು ವರದಿ ಹೇಳಿದೆ.
ನೇಚರ್ ಫಾರೆವರ್ ಸೊಸೈಟಿಯನ್ನು ಭಾರತದ ಪಕ್ಷಿ ತಜ್ಞ ಹಾಗೂ ಪರಿಸರವಾದಿ ಮೊಹಮ್ಮದ್ ದಿಲಾವರ್ ಸ್ಥಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.