ADVERTISEMENT

ಕರಾಚಿ, ಗುಜರಾತ್‌ನ ಕಛ್‌ಗೆ ಚಂಡಮಾರುತ ಬಿಪೊರ್‌ಜಾಯ್ ಅಪ್ಪಳಿಸುವ ಸಾಧ್ಯತೆ: ಐಎಂಡಿ

ಪಿಟಿಐ
Published 11 ಜೂನ್ 2023, 5:25 IST
Last Updated 11 ಜೂನ್ 2023, 5:25 IST
   

ನವದೆಹಲಿ: ಚಂಡಮಾರುತ ಬಿಪೊರ್‌ಜಾಯ್‌ ಭಾನುವಾರ ಬೆಳಗ್ಗೆ ‘ಅತ್ಯಂತ ತೀವ್ರ’ ಸ್ವರೂಪ ಪಡೆದುಕೊಂಡಿದೆ. ಜೂನ್ 15 ರಂದು ಗುಜರಾತ್‌ನ ಕಛ್‌ ಜಿಲ್ಲೆ ಮತ್ತು ಪಾಕಿಸ್ತಾನದ ಕರಾಚಿ ನಡುವಿನ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಸೌರಾಷ್ಟ್ರ ಮತ್ತು ಕಛ್‌ ಕರಾವಳಿ ಪ್ರದೇಶದ ನಾಗರಿಕರಿಗೆ ಹವಾಮಾನ ಇಲಾಖೆ ಈ ಬಗ್ಗೆ ಎಚ್ಚರಿಕೆ ನೀಡಿದೆ.

‘ಪೂರ್ವ-ಮಧ್ಯ ಅರಬ್ಬಿ ಸಮುದ್ರದಲ್ಲಿರುವ ಬಿಪೊರ್‌ಜಾಯ್‌ ಪ್ರಬಲಗೊಂಡಿದೆ. ಅತ್ಯಂತ ತೀವ್ರ ಸ್ವರೂಪದ ಚಂಡಮಾರುತವಾಗಿ ಮಾರ್ಪಟ್ಟಿದೆ. ಕಳೆದ ಆರು ಗಂಟೆಗಳಲ್ಲಿ ಒಂಬತ್ತು ಕಿಲೊ ಮೀಟರ್‌ ವೇಗದಲ್ಲಿ ಉತ್ತರ-ಈಶಾನ್ಯದತ್ತ ಚಲಿಸಿದೆ’ ಎಂದು ಐಎಂಡಿ ತಿಳಿಸಿದೆ.

ADVERTISEMENT

ಚಂಡಮಾರುತವು ಜೂನ್ 14ರ ವರೆಗೆ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದೆ. ನಂತರ ಈಶಾನ್ಯ ಭಾಗಗಳತ್ತ ಚಲಿಸುತ್ತದೆ. ಜೂನ್ 15 ರ ಮಧ್ಯಾಹ್ನದ ಸುಮಾರಿಗೆ ಮಾಂಡ್ವಿ (ಗುಜರಾತ್) ಮತ್ತು ಕರಾಚಿ (ಪಾಕಿಸ್ತಾನ) ಮೂಲಕ ಸೌರಾಷ್ಟ್ರ, ಕಛ್‌ ಮತ್ತು ಪಾಕಿಸ್ತಾನದ ಕರಾವಳಿಯನ್ನು ದಾಟಲಿದೆ. ಚಂಡಮಾರುತದಿಂದಾಗಿ ಗಂಟೆಗೆ 125-135 ವೇಗದಲ್ಲಿ ಗಾಳಿ ಬೀಸುತ್ತಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತ ನಿರ್ದಿಷ್ಟವಾಗಿ ಯಾವ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು. ‌

ಜೂನ್ 6 ರಂದು ಬಿಪರ್‌ಜೋಯ್ ಚಂಡಮಾರುತವು ರೂಪುಗೊಂಡಿತು. ಅಂದಿನಿಂದ ಇಂದಿನ ವರೆಗೆ ಅದರ ಪಥ ಮತ್ತು ತೀವ್ರತೆ ಅನಿಶ್ಚಿತತೆಯಿಂದಲೇ ಕೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.