ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರದತ್ತ ಸಾಗುವಾಗ ಕೋಟೇಶ್ವರದ ಬಳಿಯ ಬಲಗಡೆ ತಿರುವಿನ ಹಾಲಾಡಿ ರಸ್ತೆಯಿಂದ ಸುಮಾರು 5 ಕಿಮೀ ದೂರದಲ್ಲಿ ವನರಾಶಿಯ ನಡುವೆ ಕಟ್ಟಡವೊಂದು ಕಾಣುತ್ತಿತ್ತು. ಕಾನನದಂತೆ ಕಾಣುವ ಆ ಅಂಗಳವನ್ನು ಪ್ರವೇಶಿಸಿದಾಗ ಮರಗಳ ಎದುರು ಮಕ್ಕಳು ಸುತ್ತುಗಟ್ಟಿ ನಿಂತಿದ್ದು ಕಂಡಿತು. ಸ್ವಲ್ಪ ಹತ್ತಿರ ಹೋಗಿ ನೋಡಿದರೆ, ಅದು ಶಾಲಾ ಮಕ್ಕಳ ತಂಡ. ಅಲ್ಲಿದ್ದ ಶಿಕ್ಷಕರು ಮರದ ಕೊಂಬೆ ಕಟ್ಟಿದ್ದ ಮಡಿಕೆ ಹಿಡಿದು ಮಾತನಾಡುತ್ತಿದ್ದರು.
‘ಪಕ್ಷಿಗಳಿಗೆ ಆಹಾರ ಸಿಗುತ್ತದೆ. ಆದರೆ ನೀರಿನದ್ದೇ ಸಮಸ್ಯೆ. ಪ್ರತಿ ಮರಕ್ಕೂ ಇಂಥದ್ದೊಂದು ಕುಡಿಕೆ ಕಟ್ಟಿ ನೀರು ಹನಿಸಿಟ್ಟರೆ, ಬಾಯಾರಿದ ಹಕ್ಕಿಗಳು ಈ ಇದರಲ್ಲಿನ ನೀರು ಕುಡಿಯುತ್ತವೆ. ಆಹಾರ- ನೀರು - ಸುರಕ್ಷಿತ ಆವಾಸಸ್ಥಾನವಿದ್ದರೆ, ಪಕ್ಷಿ ಸಂಕುಲ ವೃದ್ಧಿಯಾಗುತ್ತದೆ’ ಎಂದು ಆ ಶಿಕ್ಷಕರು ಮಕ್ಕಳಿಗೆ ವಿವರಿಸುತ್ತಿದ್ದರು. ತದೇಕ ಚಿತ್ತದಿಂದ ಮಾಹಿತಿ ಆಲಿಸಿದ ಮಕ್ಕಳು, ಅಲ್ಲಿಂದ ತೆರಳುವ ಮುನ್ನ, ಟೊಂಗೆಗೆ ಕಟ್ಟಿದ ಮಡಿಕೆಯನ್ನೊಮ್ಮೆ ಕುತೂಹಲದಿಂದ ಇಣುಕಿ ನೋಡಿ, ಶಾಲೆಯತ್ತ ಹೊರಟರು.
ಇದು ಕೋಟೇಶ್ವರದ ಗುರುಕುಲ ವಿದ್ಯಾ ಸಂಸ್ಥೆಯ ಕ್ಯಾಂಪಸ್. ಅಲ್ಲಿ 1400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 36 ಎಕರೆಯಲ್ಲಿರುವ ಕ್ಯಾಂಪಸ್‌ನಲ್ಲಿ ಬಾಳೆ, ಮಾವು, ಗೇರು, ಹಲಸು, ಸಪೋಟ, ರಾಮಫಲ, ಲಕ್ಷ್ಮಣ ಫಲ, ಸೀತಾಫಲ, ನೇರಳೆ ಜತೆಗೆ, ಸ್ಥಳೀಯ ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುವ ಹಣ್ಣು, ಹೂವು, ಕಾಡು ಮರ - ಗಿಡಗಳಿವೆ. ಜತೆಗೆ ಔಷಧೀಯ ಸಸ್ಯಗಳು, ತರಕಾರಿಯನ್ನೂ ಬೆಳೆಸಿದ್ದಾರೆ.
ಈ ಹಸಿರುಕ್ಕುವ ತಾಣವನ್ನು ಅರಸಿಕೊಂಡು ದೂರದ ಊರಿಂದ ಹಕ್ಕಿಗಳು ಬರುತ್ತಿವೆ. ಕೆಲವು ಹಕ್ಕಿಗಳು ನಿರ್ದಿಷ್ಟ ಸಮಯದಲ್ಲಿ ಮಾತ್ರ ಗುಂಪು ಕಟ್ಟಿಕೊಂಡು ಬರುವುದುಂಟು. ವಲಸೆ ಸಮಯದಲ್ಲಿ ಬರುವ ಹಕ್ಕಿಗಳು ಗೂಡುಕಟ್ಟಿ ಸಂಸಾರ ನಡೆಸುತ್ತವೆ. ನಮಗಾಗಿಯೇ ಈ ಜಾಗ ಮಾಡಿದ್ದಾರೇನೋ ಎಂಬ ಸುರಕ್ಷಿತ ಮನೋಭಾವದೊಂದಿಗೆ ನಿರ್ಭಯದಿಂದ ಚಟುವಟಿಕೆಗಳನ್ನು ನಡೆಸುತ್ತವೆ.
ಶಾಲಾ ಅಂಗಳಕ್ಕೆ ಬರುವ ಪಕ್ಷಿಗಳಿಗೆ, ನೀರಾಸರೆಗಾಗಿ ಪ್ರತಿ ಮರದಲ್ಲಿ ಒಂದೊಂದು ಮಡಿಕೆಗಳನ್ನು ಕಟ್ಟಿ ನೀರು ಹನಿಸಿದ್ದಾರೆ ಶಾಲೆಯವರು. ಪಕ್ಷಿಗಳಿಗೆ ಬೇಕಾದ ಸುರಕ್ಷಿತ ವಾತಾವರಣವನ್ನು ಕ್ಯಾಂಪಸ್ ನಲ್ಲಿ ಸೃಷ್ಟಿಸಿದ್ದಾರೆ.
ಇಂಥ ಸಿದ್ಧತೆಯ ನಂತರದ ಹೆಜ್ಜೆಯೇ ‘ಪಕ್ಷಿ ಸಂಕುಲಗಳ ಆಳಿವು-ಉಳಿವು’ ಕಾರ್ಯಕ್ರಮ ಆಯೋಜನೆ. ‘ಪರಿಸರ ಪಾಠಗಳು, ಪರಿಸರದ ನಡುವೆ ನಡೆಯಬೇಕು’ ಎಂಬುದು ಈ ಶಾಲೆಯ ಉದ್ದೇಶ. ಅದಕ್ಕಾಗಿಯೇ ಕಳೆದ ವರ್ಷದಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಈ ಮೂಲಕ ಮಕ್ಕಳಿಗೆ ಪಕ್ಷಿಗಳ ಜೀವನಕ್ರಮ ಪರಿಚಯಿಸುತ್ತಿದ್ದಾರೆ.
ಅಂದ ಹಾಗೆ, ಈ ಕಾರ್ಯಕ್ರಮ ಅನುಷ್ಠಾನಕ್ಕೆ ಮುನ್ನ ಇಂಥ ಪಕ್ಷಿ ರಕ್ಷಣೆಯ ಮಾದರಿ ಅಳವಡಿಸಿಕೊಂಡಿ ರುವ ಪರಿಸರತಜ್ಞ ನಿತ್ಯಾನಂದ ಶೆಟ್ಟಿ ಅವರ ತೋಟಕ್ಕೆ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಕಳುಹಿಸಿ ಮಾಹಿತಿ ಕೊಡಿಸಿದ್ದಾರೆ.
ನಿತ್ಯಾನಂದ ಶೆಟ್ಟಿ ಬಂಟ್ವಾಳ ತಾಲ್ಲೂಕಿನ ಮಾವಿನಕಟ್ಟೆ - ಬೈದ್ಯಾರು ಸಮೀಪದ ಮುಡಾಯಿ ಬೆಟ್ಟು ಎಂಬಲ್ಲಿ ಎರಡೂವರೆ ಎಕ್ರೆ ಕೃಷಿ ಜಮೀನಿನಲ್ಲಿ ಹಕ್ಕಿಗಳ ವಲಸೆ ತಡೆದು ಆಕರ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅಲ್ಲಿ ಕಲಿತು ಬಂದ ಶಿಕ್ಷಕರು, ಪ್ರತಿ ವಾರ ಒಂದು ಅವಧಿಯಂತೆ ಮಕ್ಕಳಿಗೆ ಪಕ್ಷಿಗಳ ಕುರಿತು ಪಾಠ ಮಾಡುತ್ತಿದ್ದಾರೆ. ಅವರ ಕೈಯಲ್ಲೇ ಮರಗಳಿಗೆ ಮಡಿಕೆ ಕಟ್ಟಿಸುವುದು, ನೀರು ಹಾಕಿಸುವಂತಹ ಚಟುವಟಿಕೆ ಮಾಡಿಸುತ್ತಿದ್ದಾರೆ. ಒಂದಷ್ಟು ದಿನ ಈ ಪಾಠ ಕೇಳಿದ ಮಕ್ಕಳು ತಾವೇ ಪ್ರಯೋಗ ಮಾಡಲು ಹೆಜ್ಜೆಯಿಟ್ಟಿದ್ದಾರೆ. ಹೆಚ್ಚು ನೀರಿನ ತಾಣಗಳನ್ನು ಸೃಷ್ಟಿಸಲು ಹೆಚ್ಚು ಹೆಚ್ಚು ಮಡಕೆಗಳನ್ನು ಕಟ್ಟುತ್ತಿದ್ದಾರೆ. ಪಕ್ಷಿಗಳು ಗೂಡು ಕಟ್ಟಲು ಬೇಕಾದ ಪೂರಕ ವಾತಾವರಣ ಸೃಷ್ಟಿಸುತ್ತಿದ್ದಾರೆ.
‘ಶಾಲೆಗೆ ಹೊಸದಾಗಿ ಬಂದ ಮಕ್ಕಳು ಸೀನಿಯರ್ ವಿದ್ಯಾರ್ಥಿಗಳನ್ನು ಅನುಸರಿಸುತ್ತಿದ್ದಾರೆ. ಕಲಿತು ಮುಂದುವರಿಸುವ ಭರವಸೆ ಹುಟ್ಟಿಸುತ್ತಿದ್ದಾರೆ’ ಎಂದು ಶಾಲಾ ವ್ಯವಸ್ಥಾಪಕಿ ಅನುಪಮಾ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.