ADVERTISEMENT

ದೇಶದಲ್ಲಿ ಶುದ್ಧ ಗಾಳಿ ಎಲ್ಲೆಲ್ಲಿ..?: ಕರ್ನಾಟಕದ ಈ ನಗರಗಳು ಟಾಪ್‌ 10ರಲ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2025, 9:56 IST
Last Updated 8 ಡಿಸೆಂಬರ್ 2025, 9:56 IST
   

ಬೆಂಗಳೂರು: ಶುದ್ಧ ಗಾಳಿ ಎಂಬುದೇ ಮರೀಚಿಕೆಯಾಗಿರುವ ಕಾಲಘಟ್ಟದಲ್ಲಿ ಕರ್ನಾಟಕದ ನಗರಗಳು ರಾಷ್ಟ್ರ ಮಟ್ಟದ ಶುದ್ಧಗಾಳಿ ಲಭ್ಯವಿರುವ ಪ್ರಮುಖ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಶುದ್ಧ ಗಾಳಿ ಲಭ್ಯವಿರುವ ದೇಶದ ಪ್ರಮುಖ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 

ದೆಹಲಿಯಲ್ಲಿ ಮಿತಿ ಮೀರಿರುವ ವಾಯು ಮಾಲಿನ್ಯವು ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ದೇಶದಲ್ಲಿ ಶುದ್ಧ ಗಾಳಿ ಸಿಗುತ್ತಿರುವ ನಗರಗಳು ಮತ್ತು ಮಾಲಿನ್ಯ ಪ್ರಮಾಣ ಕಳಪೆ ಮಟ್ಟಕ್ಕೆ ಕುಸಿದ ನಗರಗಳ ಪಟ್ಟಿಯನ್ನು ಮಂಡಳಿ ಬಿಡುಗಡೆ ಮಾಡಿದೆ.

ADVERTISEMENT

ಗಾಳಿಯ ಗುಣಮಟ್ಟವನ್ನು ಶೂನ್ಯದಿಂದ 50ರವರೆಗೆ ಉತ್ತಮ, 50ರಿಂದ 100 ಸಮಾಧಾನಕರ, 101ರಿಂದ 200 ತುಸು ಮಟ್ಟಿನ ಮಾಲಿನ್ಯ, 201ರಿಂದ 300ರವರೆಗೆ, 301ರಿಂದ 400ರವರೆಗೆ ಅತ್ಯಂತ ಕಳಪೆ ಹಾಗೂ 401ರಿಂದ 500ರವರೆಗೆ ಅಪಾಯಕಾರಿ ಎಂದು ಗಾಳಿಯ ಮಟ್ಟ ಸೂಚ್ಯಂಕ (AQI) ಹೇಳುತ್ತದೆ.

ಸದ್ಯದ ಮಟ್ಟಿಗೆ ಗಾಳಿಯ ಗುಣಮಟ್ಟವು ದೆಹಲಿಯ ಎನ್‌ಸಿಆರ್‌ನ ಹರ್ಪುರ್ ದೇಶದಲ್ಲೇ ಅತ್ಯಂತ ಅಪಾಯಕಾರಿ (416) ಮಟ್ಟದಲ್ಲಿದೆ. ನೊಯಿಡಾದಲ್ಲಿ 397 ಮತ್ತು ಗಾಜಿಯಾಬಾದ್‌ನಲ್ಲಿ 396ರಷ್ಟು ಮಾಲಿನ್ಯ ಪ್ರಮಾಣವಿದೆ. ಗುರುಗ್ರಾಮ, ಫರೀದಾಬಾದ್‌ನಲ್ಲೂ ಗಾಳಿಯ ಗುಣಮಟ್ಟ ಕ್ರಮವಾಗಿ 286 ಹಾಗೂ 232 ಎಂದು ದಾಖಲಾಗಿದೆ. 

ಇವುಗಳಿಗೆ ಹೋಲಿಸಿದರೆ ದೇಶದ ಈಶಾನ್ಯ ಮತ್ತು ದಕ್ಷಿಣದ ರಾಜ್ಯಗಳಲ್ಲಿನ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಅದರಲ್ಲೂ ಮೇಘಾಲಯದ ಶಿಲ್ಲಾಂಗ್ ಹಾಗೂ ತಮಿಳುನಾಡಿನ ತಂಜಾವೂರಿನಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು 17ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿಯಲ್ಲಿ ದಾಖಲಾಗಿದೆ.

ಡಿ. 7 ಮಾಹಿತಿಯಂತೆ ತಮಿಳುನಾಡಿನ ಹಲವು ನಗರಗಳು ಉತ್ತಮ ಗಾಳಿಯ ಗುಣಮಟ್ಟ ಹೊಂದಿವೆ ಎಂದು ಮಂಡಳಿಯ ದಾಖಲೆಗಳು ಹೇಳುತ್ತವೆ

ಇದರಲ್ಲಿ ಅಗ್ರ ಸ್ಥಾನದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಶ್ರೀ ವಿಜಯಪುರಂ ಇದೆ. ಇಲ್ಲಿನ ಗಾಳಿಯ ಗುಣಮಟ್ಟ ಸೂಚ್ಯಂಕವು 23 ಇದೆ.

ನಂತರದ ಸ್ಥಾನದಲ್ಲಿ ಸಿಕ್ಕಿಂನ ಗ್ಯಾಂಗ್ಟಕ್‌ (29) ಹಾಗೂ ಬಿಹಾರದ ಬೆಗುಸರಾಯ್‌ (3) ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿವೆ.

ನಂತರದ ಸ್ಥಾನದಲ್ಲಿ ಮಧ್ಯಪ್ರದೇಶದ ಡಾಮೋಹ್ (32), ಐಜ್ವಾಲ್‌ (38), ರಾಮನಾಥಪುರಂ (47) ಹಾಗೂ ಜಾನ್ಸಿ (45) ನಗರಗಳಿವೆ.

ಕರ್ನಾಟಕ ಮೂರು ನಗರಗಳಲ್ಲಿನ ಗಾಳಿಯ ಗುಣಮಟ್ಟ ಉತ್ತವಾಗಿದೆ. ಇದರಲ್ಲಿ ಚಿಕ್ಕಮಗಳೂರು (33), ಚಾಮರಾಜನಗರ (45) ಹಾಗೂ ಮಡಿಕೇರಿ (47) ಕ್ರಮವಾಗಿ 5, 8 ಹಾಗೂ 10ನೇ ಸ್ಥಾನದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.