ADVERTISEMENT

ಡಿಜಿಟಲ್ ಪ್ರದರ್ಶನ ಫಲಕವುಳ್ಳ ಕಬ್ಬನ್ ಪಾರ್ಕ್!

ಮಂಜುಶ್ರೀ ಎಂ.ಕಡಕೋಳ
Published 9 ಏಪ್ರಿಲ್ 2019, 19:45 IST
Last Updated 9 ಏಪ್ರಿಲ್ 2019, 19:45 IST
ಕಬ್ಬನ್ ಪಾರ್ಕ್‌ನಲ್ಲಿ ಅಳವಡಿಸಲಾಗಿರುವ ನೂತನ ಡಿಜಿಟಲ್ ಪ್ರದರ್ಶನ ಫಲಕ ಚಿತ್ರ: ಜನಾರ್ದನ ಬಿ.ಕೆ.
ಕಬ್ಬನ್ ಪಾರ್ಕ್‌ನಲ್ಲಿ ಅಳವಡಿಸಲಾಗಿರುವ ನೂತನ ಡಿಜಿಟಲ್ ಪ್ರದರ್ಶನ ಫಲಕ ಚಿತ್ರ: ಜನಾರ್ದನ ಬಿ.ಕೆ.   

ಕಬ್ಬನ್ ಪಾರ್ಕ್ ಶೀಘ್ರದಲ್ಲೇ ದೇಶದ ಮೊದಲ ಡಿಜಿಟಲ್ ಪ್ರದರ್ಶನ ಫಲಕವುಳ್ಳ ಪಾರ್ಕ್ ಆಗಲಿದೆ. ಉದ್ಯಾನದಲ್ಲಿ ಬೆಸ್ಕಾಂ ವತಿಯಿಂದ 750 ಸ್ಮಾರ್ಟ್ ಲೈಟ್, 50 ಪ್ರದರ್ಶನ ಫಲಕಗಳು ಹಾಗೂ 50 ಸೂಕ್ಷ್ಮಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಕಂಬಗಳನ್ನು ಅಳವಡಿಸಲಾಗುತ್ತಿದೆ.₹ 4 ಕೋಟಿ ವೆಚ್ಚದ ಈ ಕಾರ್ಯ ಮೇ ತಿಂಗಳ ಹೊತ್ತಿಗೆ ಸಂಪೂರ್ಣ ಕಾರ್ಯಗತವಾಗಲಿದೆ.

ಸ್ಮಾರ್ಟ್ ಲೈಟ್ ವಿಶೇಷ
ಒಟ್ಟು 750 ಲೈಟ್ ಕಂಬಗಳಿಗೆ ಎಲ್ಇಡಿ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಇವು ರಾತ್ರಿ 11ರಿಂದ ಬೆಳಗಿನ ಜಾವ 4.30 ತನಕ ಮಂಕಾಗಿ ಉರಿಯುತ್ತವೆ. ಸೆನ್ಸರ್‌ ವ್ಯವಸ್ಥೆ ಅಳವಡಿಕೆಯಿಂದಾಗಿ ಇದರ ಕೆಳಗೆ ಮನುಷ್ಯರು, ಪ್ರಾಣಿಗಳು ಸಂಚರಿಸಿದರೆ ತಕ್ಷಣವೇ ಈ ಕಂಬಗಳ ದೀಪಗಳು ಪ್ರಖರವಾಗಿ ಬೆಳಗುತ್ತವೆ.

ಕಬ್ಬನ್ ಪಾರ್ಕ್‌ನಲ್ಲಿ ರಜಾದಿನ ಹೊರತುಪಡಿಸಿ ನಿತ್ಯವೂ ಏಳು ಗೇಟ್‌ಗಳಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 10ತನಕ ವಾಹನಗಳ ಪ್ರವೇಶಕ್ಕೆ ಅನುಮತಿಯಿದೆ. ರಾತ್ರಿ 11ರ ನಂತರವೂ ಲೈಟ್ ಕಂಬಗಳು ಪ್ರಖರವಾಗಿ ಬೆಳಗುತ್ತಿದ್ದರಿಂದ ಹೆಚ್ಚು ವಿದ್ಯುತ್ ಬೇಕಾಗುತ್ತಿತ್ತು. ಕಂಬದ ಅಕ್ಕಪಕ್ಕದ ಗಿಡಮರಗಳಿಗೆ ದೀಪದ ಶಾಖವೂ ತಟ್ಟುತ್ತಿತ್ತು. ಈಗ ಹೊಸ ಸ್ಮಾರ್ಟ್ ಎಲ್‌ಇಡಿ ವ್ಯವಸ್ಥೆಯಿಂದ ಗಿಡಮರಗಳಿಗೆ ರಾತ್ರಿ ಹೊತ್ತು ಅಷ್ಟಾಗಿ ಶಾಖ ತಟ್ಟುವುದಿಲ್ಲ.

ADVERTISEMENT

50 ಡಿಜಿಟಲ್ ಪ್ರದರ್ಶನ ಫಲಕ
ಕಬ್ಬನ್ ಪಾರ್ಕ್ ಆಯಕಟ್ಟಿನ ಸ್ಥಳಗಳಲ್ಲಿ 50 ಡಿಜಿಟಲ್ ಪ್ರದರ್ಶನ ಫಲಕಗಳನ್ನು ಅಳವಡಿಸಲಾಗುತ್ತಿದೆ. ಈ ಫಲಕಗಳಲ್ಲಿ ನಗರದ ದಿನದ ಉಷ್ಣಾಂಶ, ತೇವಾಂಶದ ಪ್ರಮಾಣ, ಮಾಲಿನ್ಯದ ಮಟ್ಟವನ್ನೂ ಪ್ರದರ್ಶಿಸಲಾಗುತ್ತದೆ. ಇದರಿಂದ ಪಾರ್ಕ್‌ನಲ್ಲಿ ಆಮ್ಲಜನಕದ ಪ್ರಮಾಣವನ್ನು ಸುಲಭವಾಗಿ ಅರಿಯಬಹುದು. ಫಲಕಗಳಲ್ಲಿ ಕಬ್ಬನ್ ಪಾರ್ಕ್‌ಗೆ ಸಂಬಂಧಿಸಿದ ವಿಡಿಯೊಗಳನ್ನೂ ಪ್ರದರ್ಶಿಸಲಾಗುವುದು. ಪಾರ್ಕ್ ಸಂರಕ್ಷಣೆಗೆ ಏನು ಮಾಡಬೇಕು? ಯಾವ ಚಟುವಟಿಕೆ ನಿಷೇಧಿಸಿದೆ? ಸೇರಿದಂತೆ ಪ್ರತಿ ಭಾನುವಾರ ನಡೆಯುವ ಬ್ಯಾಂಡ್ ಸ್ಟ್ಯಾಂಡ್‌ನ ಕಾರ್ಯಕ್ರಮಗಳ ವಿವರಗಳೂ ಇರಲಿವೆ.

ಕಬ್ಬನ್ ಪಾರ್ಕ್‌ನಲ್ಲಿ ಪ್ರತಿವರ್ಷ ನವೆಂಬರ್‌ನಲ್ಲಿ ನಡೆಯುವ ಪುಷ್ಪ ಪ್ರದರ್ಶನದ ವಿವರಗಳ ಜತೆಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯೂ ಜನರಿಗೆ ಸುಲಭವಾಗಿ ಸಿಗಲಿದೆ. ಅಪರೂಪದ ಪ್ರಾಣಿ–ಪಕ್ಷಿಗಳ ಪರಿಚಯ, ವಿವರಗಳ ಪ್ರದರ್ಶನವೂ ಮಾಡಲಾಗುತ್ತದೆ. ಈ ಪ್ರದರ್ಶನ ಫಲಕಗಳನ್ನು ವಾಣಿಜ್ಯೀಕರಣ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ ಮಹಾಂತೇಶ್.

**

ಕಬ್ಬನ್ ಪಾರ್ಕ್‌ನಲ್ಲಿ 50ವರ್ಷಗಳಷ್ಟು ಹಳೆಯದಾದ ಲೈಟ್ ಕಂಬಗಳಿದ್ದವು. ಕೇಬಲ್ ಸುಟ್ಟು ಹೋಗಿದ್ದವು. ಕೆಲವು ವೈರ್‌ಗಳು ಪೈಪ್‌ನಿಂದ ಹೊರಗೆ ಇಣುಕುತ್ತಿದ್ದವು. ಈ ಬಗ್ಗೆ ವಾಯುವಿಹಾರಿಗಳು ತೋಟಗಾರಿಕೆ ಇಲಾಖೆಯ ಗಮನ ಸೆಳೆದಿದ್ದರು. ಬೆಸ್ಕಾ ಎಂ.ಡಿ. ಪಾರ್ಕ್‌ಗೆ ಭೇಟಿ ಕೊಟ್ಟು ಸ್ಮಾರ್ಟ್ ಲೈಟಿಂಗ್ ಮತ್ತು ಡಿಜಿಟಲ್ ಪ್ರದರ್ಶನ ಫಲಕದ ಪ್ರಸ್ತಾವ ಮುಂದಿಟ್ಟರು. ಅದರ ಫಲವೇ ಕಬ್ಬನ್ ಪಾರ್ಕ್ ಸ್ಮಾರ್ಟ್ ಅಂಡ್ ಡಿಜಿಟಲ್ ಆಗುತ್ತಿದೆ.
-ಮಹಾಂತೇಶ್ ಮುರಗೋಡ, ತೋಟಗಾರಿಕೆ ಇಲಾಖೆ (ಕಬ್ಬನ್ ಪಾರ್ಕ್) ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.