ADVERTISEMENT

ಒಳನೋಟ: ಅವನತಿಯತ್ತ ಮಂಡಗದ್ದೆ, ಗುಡವಿ ಪಕ್ಷಿಧಾಮ

ಚಂದ್ರಹಾಸ ಹಿರೇಮಳಲಿ
Published 29 ಜನವರಿ 2022, 19:45 IST
Last Updated 29 ಜನವರಿ 2022, 19:45 IST
ಗುಡವಿ ಪಕ್ಷಿಧಾಮ
ಗುಡವಿ ಪಕ್ಷಿಧಾಮ   

ಶಿವಮೊಗ್ಗ: ಪ್ರಸಿದ್ಧ ಪಕ್ಷಿಧಾಮಗಳಾದ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ, ಸೊರಬ ತಾಲ್ಲೂಕಿನ ಗುಡವಿಯಲ್ಲಿ ದಶಕದಿಂದೀಚೆಗೆ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ತುಂಗಾ ಜಲಾಶಯದ ಹಿನ್ನೀರು, ಮುಂಗಾರು ಸಮಯದ ಪ್ರವಾಹದ ಸೆಳೆತಕ್ಕೆ ಸಿಲುಕಿ ಮಂಡಗದ್ದೆ ಪಕ್ಷಿಧಾಮ ಅಪಾಯದ ಸುಳಿಗೆ ಸಿಲುಕಿದೆ. ಗುಡವಿ ಪಕ್ಷಿಧಾಮದ ಸುತ್ತಲ ಹೊಲ, ತೋಟ, ಗದ್ದೆಗಳಲ್ಲಿ ಬೆಳೆಗಳಿಗೆ ರಾಸಾಯನಿಕ ಬಳಸುತ್ತಿರುವ ಪರಿಣಾಮ ಅಪರೂಪದ ಪಕ್ಷಿ ಸಂಕುಲಗಳು ಕಣ್ಮರೆಯಾಗುತ್ತಿವೆ.

ಮಂಡಗದ್ದೆ ಪಕ್ಷಿಧಾಮ: 2006ರಲ್ಲಿ ಗಾಜನೂರಿನ ತುಂಗಾ ಮೇಲ್ದಂಡೆ ಯೋಜನೆ ಪೂರ್ಣಗೊಂಡ ನಂತರ ಹಿನ್ನೀರಿನ ಮಟ್ಟದಲ್ಲಿ ಹೆಚ್ಚಳವಾಗಿ ಪಕ್ಷಿಧಾಮದ ಬಹುತೇಕ ನಡುಗಡ್ಡೆಗಳು ಮುಳುಗಿವೆ. ಅಳಿದುಳಿದ ಮರಗಳಲ್ಲಿ ಪಕ್ಷಿಗಳು ಆಸರೆ ಪಡೆದಿವೆ. ಮೇಲ್ದಂಡೆ ಯೋಜನೆ ಅನುಷ್ಠಾನಗೊಳ್ಳುವ ಮೊದಲು ಮಂಡಗದ್ದೆ ಪಕ್ಷಿಧಾಮ ಬಾನಾಡಿಗಳಿಂದ ಗಿಜಿಗುಡುತ್ತಿತ್ತು. ಪಕ್ಷಿಗಳಿಗೆ ಆಸರೆಯಾಗಿದ್ದ ಮರಗಳ ಸಂಖ್ಯೆ ಕ್ಷೀಣಿಸಿದ್ದರಿಂದ ಪಕ್ಷಿಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ.

ADVERTISEMENT

ಗುಡವಿ ಪಕ್ಷಿಧಾಮ: 186 ಎಕರೆ ವಿಸ್ತಾರದಲ್ಲಿ ವ್ಯಾಪಿಸಿರುವ ಗುಡವಿ ಪಕ್ಷಿಧಾಮದಲ್ಲಿ ಪ್ರತಿವರ್ಷ ಮಳೆಗಾಲ–ಚಳಿಗಾಲದ ಸಮಯದಲ್ಲಿ 15 ಸಾವಿರಕ್ಕೂ ಹೆಚ್ಚು ಪಕ್ಷಿಗಳು ನೆಲೆ ನಿಲ್ಲುತ್ತಿದ್ದವು. ದೊಡ್ಡ ಬೆಳ್ಳಕ್ಕಿ, ಹಾವಕ್ಕಿ, ಬಿಳಿ ಕೆಂಬರಳು, ಕಪ್ಪು ತಲೆ ಬಾತು,ಜಕಣ ಮೊದಲಾದ 43 ಕುಟುಂಬಗಳ 217 ಜಾತಿಯ ಪಕ್ಷಿಗಳು ಅಲ್ಲಿ ಕಾಣಲು ಸಿಗುತ್ತಿದ್ದವು.

ಜೌಗು ಪ್ರದೇಶ ಕಡಿಮೆಯಾಗಿರುವುದು, ಅಡಿಕೆ, ಶುಂಠಿಯಂತಹ ವಾಣಿಜ್ಯ ಬೆಳೆ ಪ್ರದೇಶಗಳ ವಿಸ್ತರಣೆ, ಬೆಳೆಗಳಿಗೆ ರಾಸಾಯನಿಕ ಬಳಕೆ ಪರಿಣಾಮ ಪಕ್ಷಿ ಸಂಕುಲದ ವಿನಾಶವಾಗುತ್ತಿದೆ ಎಂದು ಪಕ್ಷಿ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

***

ಪಕ್ಷಿಗಳ ಆವಾಸಸ್ಥಾನ ನೈಸರ್ಗಿಕ ಕೆರೆಯ ಸುತ್ತಲಿನ ಕೃಷಿ ಭೂಮಿಗಳಲ್ಲಿ ಅತಿಯಾದ ರಾಸಾಯನಿಕ ಬಳಕೆ, ಕೀಟನಾಶಕ ಔಷಧಗಳ ಸಿಂಪಡಣೆ ಪಕ್ಷಿಗಳಿಗೆ ಮಾರಕವಾಗಿದೆ. ಒಂದು ದಶಕದ ಅವಧಿಯಲ್ಲಿ ಪಕ್ಷಿಗಳ ಸಂಖ್ಯೆ ಅರ್ಧಕ್ಕಿಂತ ಕ್ಷಿಣಿಸಿದೆ. ಪಕ್ಷಿಧಾಮ ಪುನಃಶ್ಚೇತನ ತುರ್ತು ಯೋಜನೆ ಜಾರಿ ಮಾಡಬೇಕು.

-ಕೆ.ವೆಂಕಟೇಶ, ಸಂಚಾಲಕ, ವೃಕ್ಷಲಕ್ಷ ಆಂದೋಲನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.