ADVERTISEMENT

ಬತ್ತಿದ ಬಾವಿಗಳಿಗೆ ಮರುಜೀವಿ

ಹರ್ಷವರ್ಧನ ಶೀಲವಂತ
Published 8 ಜುಲೈ 2019, 19:30 IST
Last Updated 8 ಜುಲೈ 2019, 19:30 IST
ಬಾವಿಗಳಿಗೆ ಮರುಜೀವ
ಬಾವಿಗಳಿಗೆ ಮರುಜೀವ   

‘ನೆಲದ ಸಂಪತ್ತಿಗಿಂತ ಮಹತ್ವದ್ದು ಜಲ ಸಂಪತ್ತು. ನಮ್ಮ ಜನರಿಗೆ ಇದ್ದ-ಬಿದ್ದ ನೀರಿನಾಸರೆ ಕಾಯಕೋಬೇಕು ಅಂತ ತಿಳಿಯೋವರ್ಗೂ ಉದ್ಧಾರ ಸಾಧ್ಯ ಇಲ್ಲ. ಇನ್ನ ಮುಂದ ಪೈಪ್‍ನೊಳಗ ನೀರ ಬರೋದು ನಿಶ್ಚಿತ ಇಲ್ಲ’ –ಕೃಷಿಕ ಧಾರವಾಡ ಬಳಿ ಮಂಡ್ಯಾಳದ ಕೃಷ್ಣಕುಮಾರ ಭಾಗವತ್ ‘ಕಡ್ಡಿ ಮುರದ್ಹಂಗ’ ಹೇಳಿದ್ರು!

‘ಎಷ್ಟ.. ಉತ್ಕೃಷ್ಟ ಭೂಮಿ, ಮೇಲ್ಮೈ ಮಣ್ಣು ನಮ್ಮ ಹತ್ರ ಇದ್ರೂ, ನೀರಿನ ಆಸರಿ ಇಲ್ದಿದ್ರ.. ಅಷ್ಟ.. ಬದುಕು ಬ್ಯಾಸರ’ –ಅನುಭವಿ ಶಿಕ್ಷಕ-ರೈತ ಹಿಡಕಲ್ ಡ್ಯಾಂನ ಆರ್.ಜಿ.ತಿಮ್ಮಾಪೂರ ಧ್ವನಿ ಗೂಡಿಸಿದ್ರು.

ಈ ಮಾತುಗಳನ್ನ ಕೇಳಿ ಪ್ರೇರಣೆ ಪಡೆದು, ‘ನಮ್ಮೂರ್ನಾಗ ಏನಾದರೂ ಮಾಡಬೇಕು’ ಅಂತ ಯೋಚಿಸಿದವರು ಸಾಮಾಜಿಕ ಕಾರ್ಯಕರ್ತ ಪ್ರಭಾಕರ ದೇಶಪಾಂಡೆ. ಧಾರವಾಡದಿಂದ 25 ಕಿ.ಮೀ. ದೂರದ ಜೀರಿಗಿವಾಡ ಗ್ರಾಮದ ಎರಡು ಬಾವಿಗಳನ್ನು ಶ್ರಮದಾನದ ಮೂಲಕ ಸ್ವಚ್ಛ ಗೊಳಿಸುವ ಗೆಳೆಯರ ಸಂಕಲ್ಪಕ್ಕೆ ಈ ಮಾತುಗಳು ಮುನ್ನುಡಿ ಬರೆದವು. ಎರಡು ಬಾವಿಗಳ ಪೈಕಿ ಒಂದು ಬಾವಿ ಕುಡಿಯಬಹುದಾದ ಸಿಹಿ ನೀರಿನದು. ಈ ಎರಡೂ ಬಾವಿಗಳು ಹತ್ತಾರು ವರ್ಷಗಳಿಂದ ಪಾಳು ಬಿದ್ದಿದ್ದವು. ಮಳೆಗಾಲದ ಹೊಸ್ತಿಲಿನೊಳಗ ಬಾವಿ ಸ್ವಚ್ಛ ಮಾಡಿಕೊಂಡ್ರ ಸೆಲೆ ಜಿನುಗಿ, ನೀರಿನ ಒರತೆ ಹೆಚ್ಚಬಹುದು ಅಂತ ಆಲೋಚಿಸಿತು ಗೆಳೆಯರ ಬಳಗ.

ADVERTISEMENT

ಬಾವಿ ಸ್ವಚ್ಛಗೊಳಿಸಲು ಬೇಕಾದ ಹಗ್ಗವನ್ನು ಶ್ರೀಶೈಲ ರಬ್ಬನ್ನಿ ಹಿಡಕೊಂಡ ಬಂದ್ರು. ಶಿವರುದ್ರ ಹೊಂಗಲ, ಕಂಟಿ ಕಡಿಯಾಕ ಕೊಡ್ಲಿ, ಕಂದ್ಲಿ ಕತ್ತಿ ಸಮೇತ ಬಂದ್ರು. ರಾಮು ಬೆಳವಡಿ ಕಸ ತುಂಬಲಿಕ್ಕೆ ತಿಪ್ಪಿ ಬುಟ್ಟಿ, ಮೌಲಾ ನದಾಫ್ ಗುದ್ಲಿ-ಸಲಕಿ ತಂದ್ರು. ಸಿದ್ದು ಪಾಟೀಲ ಮತ್ತು ಮಂಜುನಾಥ ಬುರ್ಲಿ ಅವರದ್ದು ಬಾವಿಯೊಳಗಿನ ಕಸ ಹೊತ್ತೊಯ್ದು ಸಾಗಿಸೋ ಜವಾಬ್ದಾರಿ! ಪ್ರಕಾಶ ಸಂಬೊಜಿ ಮತ್ತು ಮಾರುತಿ ಪೊಮೊಜಿ ಬಾವಿ ಸುತ್ತಲಿನ ಸ್ವಚ್ಛತೆ ಹೊಣೆ, ಮುತ್ತು ಹೊರಕೇರಿ ಶ್ರಮದಾನಕ್ಕ ಬಂದವರಿಗೆ ಹೊಟ್ಟಿ-ನೆತ್ತಿ ನೋಡೋ ಜವಾಬ್ದಾರಿ. ತಂಡದ ನೇತೃತ್ವ ವಹಿಸಿದ ಪ್ರಭಾಕರ ದೇಶಪಾಂಡೆ ಶ್ರಮದಾನಿಗಳಿಗೆ ಯಾವುದೇ ಪೆಟ್ಟು ಬೀಳದಂತೆ, ಅವಘಡಕ್ಕೆ ಆಸ್ಪದವೀಯದಂತೆ ಯೋಜನೆ ಉಸ್ತುವಾರಿ, ತಜ್ಞರೊಟ್ಟಿಗೆ ಬಾವಿ ಸ್ವಚ್ಛತೆ ಮುಂಜಾಗ್ರತಾ ಕ್ರಮ ಮತ್ತು ಹಂತದ ಹೆಜ್ಜೆಗಳ ಬಗ್ಗೆ ಸಮಾಲೋಚನೆ ಕೆಲಸ.

ನಿತ್ಯ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ, ಸತತ 12 ದಿನ ಶ್ರಮದಾನ ನಡೆಯಿತು. ಕಸದ ತಿಪ್ಪೆಯಂತಾಗಿದ್ದ ಬಾವಿ 30 ವರ್ಷಗಳ ಹಿಂದೆ ಇದ್ದ ಸ್ವರೂಪಕ್ಕೆ ತಿರುಗಿತು. ಹುಡುಗರ ಶ್ರಮ ನೋಡಿ ಗ್ರಾಮದ ತಾಯಂದಿರು, ಅಕ್ಕ-ತಂಗಿಯರು ಚಹಾ, ಉಪ್ಪಿಟ್ಟು, ಅವಲಕ್ಕಿ, ರೊಟ್ಟಿ ಪಲ್ಯ ತಂದು ಕೊಟ್ಟು ‘ನಾವೂ ನಿಮ್ಮ ಸಂಗಡ’ ಅಂತ ಬೆನ್ನು ತಟ್ಟಿದರು. ಹಿಂಗಾಗಿ, ಶ್ರಮದಾನಕ್ಕೆ ಖರ್ಚೇ ಇಲ್ಲ. ಮನಸೊಂದೇ ಹೂಡಿಕೆ. ಎರಡೂ ಬಾವಿ ಸ್ವಚ್ಛತಾ ಕೆಲಸಕ್ಕೆ 10 ಜನ ಸೇರಿ ಖರ್ಚು ಮಾಡಿದ್ದು ಒಟ್ಟೂ ಮೂರು ಸಾವಿರ ರೂಪಾಯಿ ಮಾತ್ರ! ಈಗ ಬಾವಿಗಳು ಥಳಥಳ. ಇಂತಹ ಅನುಕರಣೀಯ ಪ್ರಯತ್ನ ಪ್ರತಿ ಊರಿನ ನೀರಿನಾಸರೆ ಉಳಿಸಬಹುದು.

ಜೀರಿಗಿವಾಡದ ಅಂತರ್ಜಲ ವೃದ್ಧಿಗೆ ಮಳೆಯೇ ಆಧಾರ. ಇಂಥ ಜಲ ಸಂಪತ್ತನ್ನು ಕಾಪಿಡಲು ಜೀರಿಗಿವಾಡ ಗ್ರಾಮದ ಎರಡು ಬಾವಿಗಳನ್ನು ಹುಡುಗರು ಶ್ರಮದಾನ ಮಾಡಿ ಸ್ವಚ್ಛಗೊಳಿಸಿದ್ದಾರೆ. ಈ ಬಾರಿ ಮಳೆ ಬಂದರೆ, ಎರಡೂ ಬಾವಿಗೂ ಒರತೆ ಬರುತ್ತವೆ. ಮೂವತ್ತು ವರ್ಷಗಳ ಮೇಲೆ ಆ ಬಾವಿ ನೀಡು ಕುಡಿಯುವ ಸೌಭಾಗ್ಯ ಆ ಊರಿನವರಿಗೆ ಸಿಗುವಂತಾಗಲಿ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.