ADVERTISEMENT

ಜನ ಸಹಭಾಗಿತ್ವದ ಜಲಾಂದೋಲನ

ಹಿತೇಶ ವೈ.
Published 10 ಡಿಸೆಂಬರ್ 2018, 19:30 IST
Last Updated 10 ಡಿಸೆಂಬರ್ 2018, 19:30 IST
ಕೆರೆ
ಕೆರೆ   

ವರ್ಷದ ಹಿಂದೆ..

ಕೆರೆ ಎನ್ನುವ ಕುರುಹೇ ಇಲ್ಲದಂತೆ ಹೂಳು, ಕಸ ತುಂಬಿಕೊಂಡಿತ್ತು. ಅಲ್ಲಲ್ಲೇ ಗುಂಡಿಯಲ್ಲಿ ಕೊಳಕು ನೀರು ಕಾಣಿಸುತ್ತಿತ್ತು. ಆ ನೀರನ್ನು ಕುಡಿಯಲು ಹೋದ ಅದೆಷ್ಟೋ ಜಾನುವಾರುಗಳು ಹೂಳಿನಲ್ಲಿ ಸಿಕ್ಕಿ ಸಾವನ್ನಪ್ಪಿದ್ದವು. ಕೊಳಕು ನೀರು ಊರಿಗೆಲ್ಲ ದುರ್ವಾಸನೆ ಹರಡುತ್ತಿತ್ತು. ಊರ ಮುಂದಿರುವ ಕೆರೆಯ ಸುತ್ತಾ ಓಡಾಡುವುದಕ್ಕೂ ಅಸಹ್ಯ ಎನ್ನಿಸುತ್ತಿತ್ತು..

ವರ್ಷದ ನಂತರ...

ADVERTISEMENT

ದುರ್ವಾಸನೆ ಬೀರುತ್ತಿದ್ದ ಕಸ ವಿಲೇವಾರಿಯಾಗಿದೆ. ಹೂಳು ತೆಗೆದಿದ್ದಾಗಿದೆ. ಕೆರೆಗೆ ಮೂಲ ರೂಪ ಬಂದಿದೆ. ಒಂದೇ ಮಳೆಗೆ ಕೆರೆಯೂ ತುಂಬಿದೆ. ಕೊಳಕಾಗಿದ್ದ ಕೆರೆಯಲ್ಲೀಗ ಮೀನು ಹಿಡಿಯುವ ಸಂಭ್ರಮ. ಜಾನುವಾರುಗಳಿಗೆ ಕೆರೆಯ ನೀರು ಕುಡಿಯುವ ಖುಷಿ. ಊರಿನಲ್ಲಿ ಬತ್ತಿ ಹೋಗಿದ್ದ ಕೊಳವೆಬಾವಿಗಳೆಲ್ಲ ಮರುಜೀವ. ಪಕ್ಷಿಗಳು ಕೆರೆಯ ಮೇಲೆ ಹಾರುತ್ತಾ ಮೀನು ಹಿಡಿಯುತ್ತಿವೆ. ಚಿಟ್ಟೆಗಳು, ಕೀಟಗಳನ್ನು ಹಿಡಿಯಲು ಕಪ್ಪೆಗಳು ಹಾತೊರೆಯುತ್ತಿವೆ.

ಇದು ಹಾಸನ ಜಿಲ್ಲೆಯ ದೊಡ್ಡಕೊಂಡಗೊಳ ಹಳ್ಳಿಯ ಕೆರೆ ಪುನಶ್ಚೇತನದ ಕಥೆ. ಕಳೆದ ವರ್ಷದ ಮೇ ತಿಂಗಳವರೆಗೂ ಕಸದ ತೊಟ್ಟಿಯಾಗಿದ್ದ ಗ್ರಾಮದ ಕೆರೆ ಈಗ ಸ್ವಚ್ಛಗೊಂಡು ನೀರು ತುಂಬಿಕೊಂಡಿದೆ. ಇದು ಯಾವುದೋ ಸರ್ಕಾರದ ಯೋಜನೆಯಿಂದ ಆದ ಬದಲಾವಣೆಯಲ್ಲ. ಗ್ರಾಮದ ಜನರೇ ಒಗ್ಗಟ್ಟಾಗಿ ಕೈಗೊಂಡ ಶ್ರಮದಾನದ ಫಲ. ಜನ ಸಹಭಾಗಿತ್ವದಲ್ಲಿ ನಡೆದ ಜಲಾಂದೋಲನ. ಈ ಕಾರ್ಯಕ್ಕೆ ಸ್ಪೂರ್ತಿ ತುಂಬಿದ್ದು, ಸಮುದಾಯಕ್ಕೆ ಮಾರ್ಗದರ್ಶನ ನೀಡಿದ್ದು ಹಾಸನದ ‘ಹಸಿರು ಭೂಮಿ ಪ್ರತಿಷ್ಠಾನ’ ಸಂಸ್ಥೆ.

ಸುಲಭದ ದಾರಿಯಾಗಿರಲಿಲ್ಲ...

ಇದು ಏಕಾಏಕಿಯಾದ ಬದಲಾವಣೆಯಲ್ಲ. ಕೆರೆ ಸ್ವಚ್ಛತೆಗಾಗಿ ಜನರನ್ನು ಸಂಘಟಿಸಲು ಪ್ರತಿಷ್ಠಾನದ ಸದಸ್ಯರು ಮತ್ತು ನೂರಾರು ಕಾರ್ಯಕರ್ತರು ತುಂಬಾ ಶ್ರಮಪಟ್ಟಿದ್ದಾರೆ. ಮೊದಲು ಗ್ರಾಮದ ಜನರನ್ನು ಸಂಘಟಿಸಿದ್ದಾರೆ. ಅವರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ಪ್ರತಿ ಸಭೆಯಲ್ಲೂ ಊರಿನ ಜಲಮೂಲಗಳು ಕಲುಷಿತಗೊಂಡಿದ್ದು, ಅದರಿಂದ ಉಂಟಾದ ಸಮಸ್ಯೆಗಳನ್ನು ಜನರಿಂದಲೇ ಹೇಳಿಸಿದ್ದಾರೆ. ಇದೇ ವೇಳೆ ಕೆರೆ ಪುನಶ್ಚೇತನದಿಂದಾಗುವ ಅನುಕೂಲಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಂತಿಮವಾಗಿ ಗ್ರಾಮಸ್ಥರ ನೇತೃತ್ವದಲ್ಲೇ ಜಲಜಾಗೃತಿ ಅಭಿಯಾನ ಮಾಡಿಸಿದ್ದಾರೆ.

ಪರಿಣಾಮವಾಗಿ 2017 ಮೇ ತಿಂಗಳಲ್ಲಿ ಕೆರೆಯ ಹೂಳು ಎತ್ತುವ ಕಾರ್ಯಕ್ಕೆ ಜನರು ಸಜ್ಜಾದರು. ಮೊದಲು ಕಸವಿಲೇವಾರಿ. ನಂತರ ಪಾಳಿ ಮೇಲೆ ಹೂಳು ಎತ್ತುವ ಕಾರ್ಯ ಶುರು. ಗ್ರಾಮಸ್ಥರೊಂದಿಗೆ ಪ್ರತಿಷ್ಠಾನದ ಸದಸ್ಯರು ಶ್ರಮದಾನಕ್ಕೆ ನಿಂತರು. ಆ ಮೂಲಕ, ಜನರಲ್ಲಿ ‘ನಾವು ನಿಮ್ಮೊಂದಿಗಿದ್ದೇವೆ’ ಎಂಬ ವಿಶ್ವಾಸ ಮೂಡಿಸಿದರು. ಸತತ ಹತ್ತು ಹದಿನೈದು ದಿನಗಳವರೆಗೆ ಹೂಳೆತ್ತುವ ಕಾರ್ಯ ನಡೆಯಿತು.

‘ಈ ಕೆರೆಯಲ್ಲಿ ವೈಜ್ಞಾನಿಕವಾಗಿ ಹೂಳು ತೆಗೆಸಿದ್ದೇವೆ. ಹತ್ತು ಅಡಿಯಷ್ಟು ಹೂಳು ತೆಗೆದ ಮೇಲೆ ‘ಜಲದ ಕಣ್ಣು’ (ಕಲ್ಯಾಣಿ ಮತ್ತು ಕೆರೆಗಳಲ್ಲಿ ನೀರುಕ್ಕುವ ಸ್ಥಳ) ಇರುವ ಸ್ಥಳ ಗುರುತಿಸಿ, ಅಲ್ಲಿ ಇನ್ನೂ ಐದಡಿ ಹೆಚ್ಚು ಆಳ ಮಾಡಿಸಿದ್ದೇವೆ. ಇದರಿಂದ ನೀರಿನ ಒರತೆ ಹೆಚ್ಚಾಗಿದೆ’ ಎನ್ನುತ್ತಾರೆ ಹಸಿರು ಭೂಮಿ ಪ್ರತಿಷ್ಠಾನದ ರೂಪಾ ಹಾಸನ.

ತೀರ ಆಳದಲ್ಲಿರುವ ಹೂಳನ್ನು ಎತ್ತಲು ಯಂತ್ರಗಳನ್ನು ಬಳಸಿಕೊಂಡಿದ್ದಾರೆ. ಹೂಳೆತ್ತುತ್ತಿರುವಾಗಲೇ ನೀರಿನ ಸೆಲೆ ಕಾಣಿಸಿಕೊಂಡಿತು. ಅದೃಷ್ಟವೆಂಬಂತೆ, ಹೂಳು ತೆಗೆದ ನಂತರ ಒಂದು ದಿನ ದೊಡ್ಡ ಮಳೆ ಬಂತು. ಒಂದೇ ಮಳೆಗೆ ಕೆರೆ ತುಂಬಿಕೊಂಡಿತು. ಗ್ರಾಮಸ್ಥರಲ್ಲಿ ಸಂಭ್ರಮ ಮನೆಮಾಡಿತು.

ಬಾವಿಗಳಲ್ಲಿ ಜಲಮರುಪೂರಣ

ಕೆರೆಗೆ ನೀರು ಬಂದ ಮೇಲೆ, ಗ್ರಾಮದ ಬಹುತೇಕ ಕೊಳವೆ ಬಾವಿಗಳು ಜಲಮರುಪೂರಣಗೊಂಡಿವು. ಬತ್ತಿ ಹೋಗಿದ್ದ ಬೋರ್‌ವೆಲ್‌ಗಳಲ್ಲೂ ನೀರು ಕಾಣಿಸಿಕೊಂಡಿತು. ಹಿಂದೆ ಜಾನುವಾರುಗಳು ಕೈಪಂಪಿನ (ಬೋರ್‌ವೆಲ್‌) ಮೂತಿಗೆ ಬಾಯೊಡ್ಡಿ ಹನಿ ನೀರಿಗೆ ನಾಲಿಗೆ ಚಾಚುತ್ತಿದ್ದವು. ಈಗ ಅದೇ ರಾಸುಗಳು ಕೆರೆಯ ನೀರಿಗೆ ಮೂತಿ ಇಟ್ಟು ಸಮಾಧಾನದಿಂದ ನೀರು ಹೀರುತ್ತಿವೆ.
‘ನಮ್ಮೂರಲ್ಲಿ ಕಪ್ಪೆಗಳ ಸದ್ದು ಕೇಳಿ ಅದೆಷ್ಟೋ ವರ್ಷಗಳಾಗಿದ್ದವು. ಹಸಿರು ಪ್ರತಿಷ್ಠಾನದ ಸಹಕಾರ ಮತ್ತು ಗ್ರಾಮದ ಜನ ಒಗ್ಗಟ್ಟಾದ ಪ್ರತಿಫಲವಾಗಿ ಈಗ ಚಿತ್ರಣವೇ ಬದಲಾಗಿದೆ’ ಎನ್ನುತ್ತಾ ಹಳ್ಳಿಯಲ್ಲಾಗಿರುವ ಬೆಳವಣಿಗೆಯನ್ನು ಉದಾಹರಣೆಯೊಂದಿಗೆ ವಿವರಿಸುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ವಾಸು.

‘ಕೆರೆಯಲ್ಲಿ ಅದೆಷ್ಟು ಜಾನುವಾರುಗಳು ಬಿದ್ದು ಸಾವನ್ನ ಪ್ಪಿವಿಯೋ ಲೆಕ್ಕವಿಲ್ಲ. ಆಪಾಟಿ ಶಿಟ್ಳು(ಹೂಳು) ತುಂಬಿಕೊಂಡಿತ್ತು. ಜನರೇ ಮುಳುಗುವಷ್ಟು ಹೂಳಿತ್ತು. ಕೆರೆಗೆ ನೀರು ಬಂದ ಮೇಲೆ ಬತ್ತಿ ಹೋಗಿದ್ದ ನಮ್ಮ ಮನೆಯ ಬೋರ್‌ವೆಲ್‌ನಲ್ಲೂ ನೀರು ಕಾಣಿಸಿಕೊಂಡಿದೆ. ಇದರಿಂದ ಗದ್ದೆ ಕೆಲಸಕ್ಕೂ ನೀರು ಸಿಕ್ಕಿದಂತಾಗಿದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ ಪಾಪಚ್ಚಿ.

ಯುವ ಸಮೂಹದ ಉತ್ಸಾಹ

ಒಂದು ಕಾಲದಲ್ಲಿ ಊರು, ಕೆರೆ, ಕಲ್ಯಾಣಿಗೂ ನಮಗೂ ಸಂಬಂಧವೇ ಇಲ್ಲ ಎಂದು ಮೂಗು ಮುರಿಯುತ್ತಿದ್ದ ಯುವ ಸಮೂಹ, ತಾವೇ ಗುಂಪುಗಳನ್ನು ರಚಿಸಿಕೊಂಡು ಊರಿನ ಸ್ವಚ್ಛತೆ ಕಾಪಾಡಲು ಟೊಂಕಕಟ್ಟಿ ನಿಂತಿದ್ದಾರೆ. ‘ಗ್ರಾಮ ಸ್ವರಾಜ್’ ಎಂಬ ತಂಡ ಮಾಡಿಕೊಂಡು, ಪ್ರತಿಷ್ಠಾನದ ನೆರವಿನಿಂದ ಅಂಗನವಾಡಿಯಲ್ಲಿ ಗ್ರಂಥಾಲಯ ಮಾಡಿದ್ದಾರೆ.

ಕೆರೆಯಲ್ಲಿ 15 ಸಾವಿರ ಮೀನುಗಳನ್ನು ಬಿಟ್ಟಿದ್ದಾರೆ. ಮೊದಲ ಫಸಲಾಗಿ 3.5 ಕ್ವಿಂಟಲ್ ಮೀನು ಸಿಕ್ಕಿದೆ. ₹35 ಸಾವಿರದಷ್ಟು ಲಾಭವಾಗಿದೆ. ಇನ್ನೂ ಒಂದೂವರೆ ಲಕ್ಷ ರೂಪಾಯಿ ಸಿಗಬಹುದೆಂಬ ಅಂದಾಜಿದೆ. ಕೆರೆ ಪುನಶ್ಚೇತನ ಅವರಿಗೆ ಆರ್ಥಿಕವಾಗಿಯೂ ನೆರವಾಗುತ್ತಿದೆ. ಇದು ಗ್ರಾಮಸ್ಥರ ಪರಿಶ್ರಮ, ಆಸಕ್ತಿಯ ಪ್ರತಿ ಫಲ.

ಹಸಿರು ಪ್ರತಿಷ್ಠಾನ ದೊಡ್ಡಕೊಂಡಗೊಳ ಹಳ್ಳಿಯಂತೆ ಹಲವು ಹಳ್ಳಿಗಳಲ್ಲಿ ಜನರ ಸಹಭಾಗಿತ್ವದಲ್ಲಿ ಕಲ್ಯಾಣಿ, ಕೆರೆಗಳನ್ನು ಪುನಶ್ಚೇತನಗೊಳಿಸಿದೆ. ಆದರೆ, ಮಳೆ ಬಂದಿಲ್ಲ. ಹಾಗಂತ ಪ್ರತಿಷ್ಠಾನದ ಉತ್ಸಾಹ ಬತ್ತಿಲ್ಲ. ಇಂದಲ್ಲ, ನಾಳೆ ಮಳೆ ಬಂದೇ ಬರುತ್ತದೆ ಎಂಬ ವಿಶ್ವಾಸದೊಂದಿಗೆ ಜಲ ಪಾತ್ರೆಗಳನ್ನು ಅವರು ತೊಳೆದಿಟ್ಟುಕೊಂಡಿದ್ದಾರೆ.

ಹಸಿರು ಭೂಮಿ ಪ್ರತಿಷ್ಠಾನ ಹುಟ್ಟಿದ್ದು...

ಸರ್ಕಾರ 2017ರಲ್ಲಿ ಹಾಸನವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ ನಂತರ, ಬರವನ್ನು ಗೆಲ್ಲುವುದಕ್ಕಾಗಿಯೇ ಸಮಾನ ಮನಸ್ಕರು ಸೇರಿ ‘ಹಸಿರು ಭೂಮಿ ಪ್ರತಿಷ್ಠಾನ’ ಸ್ಥಾಪಿಸಿದ್ದಾರೆ. ಈ ಪ್ರತಿಷ್ಠಾನದಲ್ಲಿ ನಿವೃತ್ತ ಎಂಜಿನಿಯರ್, ಶಾಲಾ ಮುಖ್ಯಸ್ಥರಾಗಿದ್ದವರು, ಬಿಇಒ, ಬರಹಗಾರರು, ಹೋರಾಟಗಾರರು, ವೈದ್ಯರು ಮತ್ತು ಸ್ಥಳೀಯ ಪ್ರತಿಕೆಯ ಸಂಪಾದಕರೂ ಸೇರಿದಂತೆ 27 ಜನ ಸದಸ್ಯರಿದ್ದಾರೆ. ಜತೆಗೆ ನೂರಾರು ಕಾರ್ಯಕರ್ತರು ಪ್ರತಿಷ್ಠಾನದ ಕೆಲಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

35 ಕಲ್ಯಾಣಿಗಳಿಗೆ ಕಾಯಕಲ್ಪ...

ಹಸಿರು ಭೂಮಿ ಪ್ರತಿಷ್ಠಾನ ಎರಡು ವರ್ಷಗಳಿಂದ ಜನರ ಸಹಭಾಗಿತ್ವದಲ್ಲಿ ಹಾಸನ, ಚನ್ನರಾಯಪಟ್ಟಣ, ಅರಕಲಗೂಡು ಭಾಗದ ಹಲವು ಹಳ್ಳಿಗಳಲ್ಲಿ 35 ಕಲ್ಯಾಣಿಗಳು, ಮೂರು ಕೆರೆಗಳನ್ನು ಪುನಶ್ಚೇತನಗೊಳಿಸಿದೆ. ದಶಕದಿಂದಲೂ ಬರಿದಾಗಿದ್ದ 20ಕ್ಕೂ ಹೆಚ್ಚು ಕಲ್ಯಾಣಿಗಳು ನೀರು ತುಂಬಿಕೊಂಡಿವೆ.

ಹಾಸನದ ತಿರುಪತಿಹಳ್ಳಿಯ ಗುಡ್ಡದ ಮೇಲಿರುವ ರಂಗನಾಥ ಸ್ವಾಮಿ ದೇಗುಲದ ಕಲ್ಯಾಣಿಯನ್ನು ಗ್ರಾಮಸ್ಥರೇ ಸ್ವಚ್ಛಗೊಳಿಸಿದ್ದಾರೆ. ಈಗ ಕಲ್ಯಾಣಿಯಲ್ಲಿ ನೀರು ತುಂಬಿದೆ. ಪ್ರಾಣಿ, ಪಕ್ಷಿಗಳಿಗೆ ನೀರಾಸರೆಯಾಗಿದೆ.

ಪ್ರತಿಷ್ಠಾನದ ಜಲಸಂರಕ್ಷಣಾ ಕೆಲಸಕ್ಕೆ ಮುಂದಾದಾಗ ಮೊದಲು ಹಣದ ಕೊರತೆ ಎದುರಾಯಿತು. ಹಣ ಹೊಂದಿಸಲು ‘ರಕ್ತ ವರ್ಣ’ ಎನ್ನುವ ನಾಟಕ ಆಯೋಜಿಸಿ, ಅದಕ್ಕೆ ಟಿಕೆಟ್ ಮಾಡಿ, ಆ ಮೂಲಕ ಒಂದೂವರೆ ಲಕ್ಷ ರೂಪಾಯಿ ಒಟ್ಟು ಮಾಡಲಾಯಿತು. ಹಾಸನದ ಉಪವಿಭಾಗಾಧಿಕಾರಿ ಡಾ.ಎಚ್.ಎಲ್ ನಾಗರಾಜ್ ತಮ್ಮ ಒಂದು ತಿಂಗಳ ಸಂಬಳವನ್ನು ನೀಡಿದರು. ಪ್ರತಿಷ್ಠಾನದ ಹಿರಿಯ ಸದಸ್ಯ 93ರ ಹರೆಯದ ಸಾಲುಮರದ ಪುಟ್ಟಯ್ಯ ವನಮಹೋತ್ಸವಕ್ಕೆ ಕೈ ಜೋಡಿಸಿದ್ದಾರೆ. ಪ್ರತಿಷ್ಠಾನದಿಂದ 2 ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.