ADVERTISEMENT

ಇಂದು ವಿಶ್ವ ಭೂಮಿ ದಿನ: ತಿಳಿಯಿರಿ ಈ ದಿನದ ಮಹತ್ವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 3:07 IST
Last Updated 22 ಏಪ್ರಿಲ್ 2022, 3:07 IST
ಪುರಿ: ಮರಳು ಕಲಾವಿದ ಮಾನಸ್ ಸಾಹೂ ಅವರು 'ವಿಶ್ವ ಭೂ ದಿನ'ದ ಮುನ್ನಾದಿನದಂದು ಮರಳು ಶಿಲ್ಪವನ್ನು ರಚಿಸಿದ್ದರು– ಪಿಟಿಐ ಚಿತ್ರ
ಪುರಿ: ಮರಳು ಕಲಾವಿದ ಮಾನಸ್ ಸಾಹೂ ಅವರು 'ವಿಶ್ವ ಭೂ ದಿನ'ದ ಮುನ್ನಾದಿನದಂದು ಮರಳು ಶಿಲ್ಪವನ್ನು ರಚಿಸಿದ್ದರು– ಪಿಟಿಐ ಚಿತ್ರ   

ಇಂದು ವಿಶ್ವ ಭೂಮಿ ದಿನ. ಇದನ್ನು‘ಅಂತರರಾಷ್ಟ್ರೀಯ ಮಾತೃಭೂಮಿ ದಿನ’ ಎಂದೂ ಕರೆಯುತ್ತಾರೆ. ಪ್ರತೀ ವರ್ಷ ಏಪ್ರಿಲ್ 22 ರಂದು ಆಚರಿಸಲಾಗುತ್ತದೆ. ನಮ್ಮ ಪರಿಸರವನ್ನು ರಕ್ಷಿಸುವ ತೀವ್ರ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಹಲವು ದೇಶಗಳು ಈ ದಿನವನ್ನು ಆಚರಿಸುತ್ತವೆ.

ಈ ವಿಶೇಷ ದಿನದಂದು, ಮಿತಿಮೀರಿದ ಜನಸಂಖ್ಯೆ, ಜೀವವೈವಿಧ್ಯತೆಯ ನಷ್ಟ, ಓಝೋನ್ ಪದರದ ಸವಕಳಿ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಸೇರಿದಂತೆ ಹಲವು ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು, ಜವಾಬ್ದಾರಿಯಿಂದ ವರ್ತಿಸಲು ಈ ದಿನ ಒತ್ತು ನೀಡುತ್ತದೆ

ಏಪ್ರಿಲ್ 22 ರಂದು ವಿಶ್ವ ಭೂಮಿ ದಿನದ ಆಚರಣೆಯು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ, ಈ ಸಮಯದಲ್ಲಿ ಉತ್ತರ ಗೋಳಾರ್ಧದಲ್ಲಿ ವಸಂತಕಾಲ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಶರತ್ಕಾಲವಿರುತ್ತದೆ. ಹಾಗಾಗಿ, ಹವಾಮಾನ ಸಹ ಸಹನೀಯವಾಗಿರುವುದರಿಂದ, ಭೂ ದಿನದ ಆಚರಣೆ ಹೆಚ್ಚು ಆಹ್ಲಾದಕರವಾಗಿರುತ್ತದೆ.

ADVERTISEMENT

'ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿ' ಎಂಬುದು 2022ರ ಭೂಮಿ ದಿನದ ಥೀಮ್. 'ನಮ್ಮ ಭೂಮಿಯನ್ನು ಮರುಸ್ಥಾಪಿಸಿ' ಎಂಬುದು 2021ರ ಥೀಮ್ ಆಗಿತ್ತು.

ಭೂಮಿ ದಿನದ ಇತಿಹಾಸ

ಏಪ್ರಿಲ್ 22, 1970 ರಂದು ಭೂಮಿ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ‌

ಸ್ಯಾನ್ ಫ್ರಾನ್ಸಿಸ್ಕೋದ ಯುನೆಸ್ಕೊ ಸಮ್ಮೇಳನದಲ್ಲಿ ಶಾಂತಿ ಹೋರಾಟಗಾರ ಜಾನ್ ಮೆಕ್ ಕಾನ್ನೆಲ್ ಮಾತೃ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ಒಂದು ದಿನ ಬೇಕೆಂದು ಪ್ರಸ್ತಾಪಿಸಿದ್ದರು. ಬಳಿಕ, ಮಾರ್ಚ್ 21, 1970ರಂದು ಉತ್ತರ ಗೋಳಾರ್ಧದಲ್ಲಿ ವಿಶ್ವ ಭೂ ದಿನವನ್ನು ವಸಂತ ದಿನವಾಗಿ ಆಚರಿಸಲು ನಿರ್ಧರಿಸಲಾಗಿತ್ತು. ಆ ನಂತರ, ಅಮೆರಿಕದ ಸೆನೆಟ್ ಸದಸ್ಯ ಗೇಲಾರ್ಡ್ ನೆಲ್ಸನ್ ಅವರು ಏಪ್ರಿಲ್ 22, 1970 ರಂದು ರಾಷ್ಟ್ರವ್ಯಾಪಿ ಪರಿಸರ ಜ್ಞಾನೋದಯ ದಿನವನ್ನು ಆಚರಿಸಲು ಪ್ರಸ್ತಾವನೆ ಇಟ್ಟಿದ್ದರು. ನಂತರ ಅದನ್ನು 'ಅರ್ಥ್ ಡೇ' ಎಂದು ಮರುನಾಮಕರಣ ಮಾಡಲಾಯಿತು.

ಭೂಮಿಯ ದಿನವನ್ನು ಏಕೆ ಆಚರಿಸಲಾಗುತ್ತದೆ?

ಜಾಗತಿಕ ತಾಪಮಾನ ಏರಿಕೆ, ಮಾಲಿನ್ಯ ಹೆಚ್ಚಳ ಇವೇ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಸಮಕಾಲೀನ ಹಾಗೂ ಹೊಸ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಒಳಗೊಂಡಿದೆ. ವಿಶ್ವ ಭೂಮಿಯ ದಿನದಂದು ಪರಿಸರ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಲಕ್ಷಾಂತರ ಜನರು ಒಟ್ಟಿಗೆ ಸೇರುತ್ತಾರೆ. ಈ ದಿನದ ಹೆಸರಲ್ಲಿ ವಿವಿಧ ಹವಾಮಾನ ಸಮಸ್ಯೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು, ಪರಿಸರ ಸಾಕ್ಷರತೆಯ ವಿಷಯಗಳ ಕುರಿತು ಚರ್ಚೆಗಳನ್ನು ನಡೆಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.