ADVERTISEMENT

World Environment Day| ನೆಟ್ಟ ಸಸಿಗಳಿಗೆ ದೈವ ರಕ್ಷೆ

ಬಿಡುವಿನ ವೇಳೆಯಲ್ಲಿ ನೂರಾರು ಗಿಡಗಳನ್ನು ಬೆಳೆಸಿದ ಸದಸ್ಯರು

ನಾ.ಮಂಜುನಾಥ ಸ್ವಾಮಿ
Published 5 ಜೂನ್ 2022, 5:15 IST
Last Updated 5 ಜೂನ್ 2022, 5:15 IST
ದೇವಾಲಯದ ಸುತ್ತ ಇರುವ ಸಾಲು ಗಿಡಗಳು
ದೇವಾಲಯದ ಸುತ್ತ ಇರುವ ಸಾಲು ಗಿಡಗಳು   

ಯಳಂದೂರು:ತಾಲ್ಲೂಕಿನ ಆಮೆಕೆರೆ ರಸ್ತೆಗೆ ಹೊರಳಿಕೊಳ್ಳುತ್ತಿದ್ದಂತೆ ಸಮೀಪದ ಶಿವ ಪಾರ್ವತಿ ದೇವಾಲಯ ತಿರುವು ಹಾದಿ ಕಾಣಿಸಿಕೊಳ್ಳುತ್ತದೆ. ಈ ದಾರಿಯ ಎರಡೂ ಬದಿಗಳಲ್ಲಿ ನೂರಾರು ಸಸಿಗಳು ಈಗ ನಳನಳಿಸುತ್ತಿವೆ. ಈ ಗಿಡಗಳಿಗೆ ದೈವ ರಕ್ಷೆಯೂ ಇದೆ!

ಮಲಾರಪಾಳ್ಯ ಗ್ರಾಮದ ಲಾರ್ಡ್ ಶಿವ ಪುರುಷರ ಸ್ವಸಹಾಯ ಸಂಘದ ಸದಸ್ಯರು, ಪರಿಸರ ಪ್ರಿಯರು, ಯುವಕರು ಬಿಡುವಿನ ವೇಳೆಯಲ್ಲಿ ನೆಟ್ಟ ಸಸಿಗಳು ಒಂದೆರಡು ವರ್ಷಗಳಲ್ಲಿ ಆಳೆತ್ತರ ಬೆಳೆದು ನಿಂತಿವೆ. ಬಿಸಿಲಿನ ಬೇಗೆಯಲ್ಲಿ ದೇಗುಲಕ್ಕೆ ತೆರಳುವ ಜನರಿಗೆ ನೆರಳು ಮತ್ತು ಪ್ರಾಣವಾಯು ನೀಡುವ ಧಾವಂತದಲ್ಲಿ ಬೆಳೆಯುತ್ತಲೇ ಇವೆ. ಹೊಂಗೆ, ಅರಳಿ, ನೇರಳೆ, ಮಹಾಗನಿ, ನೆಲ್ಲಿ ಹಾಗೂ ಸುಗಂಧ ಸೂಸುವ ಸಂಪಿಗೆ ಸಸಿಗಳನ್ನು ಇಲ್ಲಿ ನಾಟಿ ಮಾಡಲಾಗಿದೆ.

'ಮೂರುವರ್ಷಗಳಿಂದ ಶಿವ ಪಾರ್ವತಿ ದೇವಾಲಯಕ್ಕೆ ಬರುವವರು ಒಂದು ಕಿ.ಮೀ. ದೂರವನ್ನು ಬಿರು ಬಿಸಿಲಿನಲ್ಲಿ ನಡೆದು ಬರುತ್ತಿದ್ದರು. ಇದನ್ನು ಗಮನಿಸಿದ ಗ್ರಾಮದ ಯುವಕರ ತಂಡ ಸಂಜೆಯಾಗುತ್ತಲೇ ಗುಂಡಿಗಳನ್ನು ತೋಡಿ ಅಲ್ಲಲ್ಲಿ ಸಸಿಗಳನ್ನು ಹಾಕುತ್ತಾ ಬಂದರು. ಪ್ರತಿ ಗಿಡಕ್ಕೂ ಪರಿಸರದ ಮಹತ್ವ ಬಿಂಬಿಸುವ ಧ್ಯೇಯ ವಾಕ್ಯಗಳನ್ನು ಬರೆದು ಅದರ ಪಟ್ಟಿಯನ್ನು ಕಟ್ಟುತ್ತಾ ಬಂದರು’ ಎಂದು ಸಾಲು ಗಿಡಗಳನ್ನು ಸಂರಕ್ಷಣೆ ಮಾಡುತ್ತಿರುವ ದೇವಳದ ಅರ್ಚಕ ರಾಮಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಮಾರ್ಗದಲ್ಲಿ ಬರುವ ವಿದ್ಯಾರ್ಥಿಗಳು, ನಿಸರ್ಗ ಪ್ರಿಯರು ಪ್ರತಿ ಮರದ ಬಳಿ ನಿಂತು ಮರ ಗಿಡಗಳ ಮಹತ್ವವನ್ನು ತಿಳಿಯುತ್ತಾ ದೇವಾಲಯದತ್ತ ಸಾಗುವುದನ್ನು ನೋಡಬಹುದು. ‘ಮರದಿಂದ ಮಳೆ, ಮಳೆಯಿಂದ ಬೆಳೆ’, ‘ಅರಣ್ಯ ಇಲ್ಲದೆ ಇಳೆ ಇಲ್ಲ, ಮರ ಇಲ್ಲದೆ ಭವಿಷ್ಯ ಇಲ್ಲ’, ‘ಮರ ಬೆಳೆಸಿ, ತಾಪ ಇಳಿಸಿ’ ಮೊದಲಾದ ನಿಸರ್ಗ ಸ್ನೇಹಿ ಬರಹಗಳು ವೃಕ್ಷ ಸಂತತಿಯ ಮಹತ್ವವನ್ನು ಇಂದಿನ ಮಕ್ಕಳಿಗೆ ಮನಗಾಣಿಸುತ್ತವೆ’ ಎಂದು ಅವರು ವಿವರಿಸಿದರು.

200ಕ್ಕೂ ಹೆಚ್ಚು ಗಿಡಗಳು

‘ಸುಮಾರು 200 ಹೆಚ್ಚು ಸಸಿಗಳು ಇಲ್ಲಿ ಬೆಳೆಯುತ್ತಿವೆ. ಜಾನುವಾರು ಹಾಗೂ ಕುರಿ ಸಾಕಣೆದಾರರು ಗಿಡಗಳನ್ನು ದೈವ ವೃಕ್ಷವೆಂದು ತಿಳಿದು ಅತ್ತ ಸಾಕುಪ್ರಾಣಿಗಳನ್ನು ಬಿಡದೆ ಗಿಡಗಳನ್ನು ಕಾಪಾಡುತ್ತಿದ್ದಾರೆ. ಹರಕೆ ಹೊತ್ತವರು ಒಂದೊಂದು ಗಿಡವನ್ನು ನೆಡುವ ಸಂಪ್ರದಾಯಗಳನ್ನು ಇಲ್ಲಿ ಪಾಲಿಸುತ್ತಿದ್ದಾರೆ. ವಿಹಾರಾರ್ಥವಾಗಿ ಸಂಜೆ ಬರುವ ವಿದ್ಯಾರ್ಥಿಗಳು ಯುವಜನರು ಗಿಡಗಳಿಗೆ ನೀರು ನೀಡಿ ಪೋಷಣೆಯ ಕೈ ಕೈಂಕರ್ಯವನ್ನು ಜತನದಿಂದ ಪೂರೈಸುತ್ತಾರೆ ಎಂದು ಸ್ಕೌಟ್ಸ್‌ ಅಂಡ್‌ ಗೈಡ್ಸ್‌ನ ಜಿಲ್ಲಾ ಯುವ ಸಮಿತಿ ಅಧ್ಯಕ್ಷ ಪ್ರದೀಪ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.