ADVERTISEMENT

ಇಂತಿ ನಿಮ್ಮ ಪ್ರೀತಿಯ ವರುಣಾ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 23:46 IST
Last Updated 14 ಫೆಬ್ರುವರಿ 2026, 23:46 IST
ವರುಣಾ ನಾಲೆಯನ್ನು ವಿರೋಧಿಸಿ ಮಂಡ್ಯದ ರೈತರು ಚಡ್ಡಿ–ಬನಿಯನ್‌ ಧರಿಸಿ ಪ್ರತಿಭಟಿಸಿದ್ದರು.
ವರುಣಾ ನಾಲೆಯನ್ನು ವಿರೋಧಿಸಿ ಮಂಡ್ಯದ ರೈತರು ಚಡ್ಡಿ–ಬನಿಯನ್‌ ಧರಿಸಿ ಪ್ರತಿಭಟಿಸಿದ್ದರು.   
ವರುಣಾ ನಾಲೆ ಕನ್ನಂಬಾಡಿ ಕಟ್ಟೆಯ ಕೂಸು. ನಾಲೆ ಬೇಕು ಎನ್ನುವುದು ಮೈಸೂರು ಜಿಲ್ಲೆ ಜನರ ಆಗ್ರಹ. ಮಾಡಬೇಡಿ ಎನ್ನುವುದು ಮಂಡ್ಯ ಜಿಲ್ಲೆಯ ಜನರ ಒತ್ತಾಯ. ಬೇಕು–ಬೇಡಗಳ ಹೋರಾಟದ ನಡುವೆಯೇ ವರುಣಾ ನಾಲೆ ನಿರ್ಮಾಣವಾಯಿತು. ಆದರೆ, ಈಗಿನ ವಾಸ್ತವ ಸ್ಥಿತಿ ಏನಿದೆ ಎನ್ನುವುದನ್ನು ಸ್ವತಃ ವರುಣಾ ನಾಲೆಯೇ ಇಲ್ಲಿ ನಿವೇದಿಸಿಕೊಂಡಿದೆ!

ನಮಸ್ಕಾರ,

ನನ್ನ ಹೆಸರು ವರುಣಾ ನಾಲೆ. ಸರ್ಕಾರಿ ದಾಖಲೆಗಳಲ್ಲಿ ‘ಡಿ.ಡಿ.ಅರಸು ನಾಲೆ’. ಗೊತ್ತಾಗಲಿಲ್ಲವೇ? ‘ಡಿ.ದೇವರಾಜ ಅರಸು ನಾಲೆ’. ನಾನು ಕನ್ನಂಬಾಡಿ ಕಟ್ಟೆಯ ಕೂಸು.

70ರ ದಶಕದಲ್ಲಿ ಮೈಸೂರು ಜಿಲ್ಲೆಯ ಜನ ನನಗೋಸ್ಕರ ದೊಡ್ಡ ಹೋರಾಟವನ್ನೇ ಮಾಡಿದ್ದರು. ನನ್ನ ವಿರುದ್ಧ ಪಕ್ಕದ ಜಿಲ್ಲೆ ಮಂಡ್ಯದ ಜನ ಹೆಚ್ಚು ಕಡಿಮೆ ಒಂದು ದಶಕ ಪ್ರತಿಭಟಿಸಿದ್ದರು. ವಿಪರ್ಯಾಸ ನೋಡಿ, ನನ್ನ ಪರ–ವಿರುದ್ಧ ಇದ್ದವರೆಲ್ಲರೂ ಮೈಸೂರು ಪ್ರಾಂತ್ಯದವರೇ ಆಗಿದ್ದರು.

ADVERTISEMENT

‘ಜೀವ ನದಿ ಕಾವೇರಿ ನಾಡು’ ಎಂದೇ ಗುರುತಿಸಲ್ಪಡುವ ಈ ಪ್ರಾಂತ್ಯದ ಜನರ ನಡುವೆ ದ್ವೇಷ, ವೈಮನಸ್ಯಕ್ಕೂ ಕಾರಣವಾಗಿದ್ದೆ. ‘ನಮ್ಮ ಕನ್ನಂಬಾಡಿ ನೀರನ್ನು ಮೈಸೂರಿಗೆ ಕೊಟ್ಟರೆ ನಮ್ಮ ಕೃಷಿಯ ಗತಿ ಏನು? ಸಕ್ಕರೆ ಕಾರ್ಖಾನೆಗಳು, ಸಾವಿರಾರು ಆಲೆಮನೆಗಳನ್ನು ಮುಚ್ಚಬೇಕೇನು’ ಎಂಬುದು ಮಂಡ್ಯದವರ ಪ್ರಶ್ನೆಯಾಗಿತ್ತು.

‘ಹುರಳಿ ಬಿಟ್ಟರೆ ಬೇರೇನೂ ಬೆಳೆಯಲಾರೆವು. ಕೆರೆ, ಕಟ್ಟೆ, ಬಾವಿಗಳಲ್ಲಿ ನೀರಿಲ್ಲ. ಕುಡಿಯುವ ನೀರಿಗೂ ಪರದಾಡುತ್ತಾ, ಬರಗಾಲವನ್ನೇ ಹಾಸಿಕೊಂಡು, ಹೊದ್ದು, ಹೊಟ್ಟೆ ತುಂಬ ಉಣ್ಣಲಾಗದ ಸ್ಥಿತಿಯಲ್ಲಿದ್ದೇವೆ. ನಮಗೂ ಕೃಷಿಗೋಸ್ಕರ ಸ್ವಲ್ಪ ನೀರು ಬೇಕು’ ಎಂಬುದು ಮೈಸೂರಿನ ರೈತರ ಆಗ್ರಹವಾಗಿತ್ತು.

ವರುಣಾ ನಾಲೆಯ ಮೇಲ್ಗಾಲುವೆ ಮೇಲಿಂದ ಕಾಣುವ ಮೈಸೂರು ತಾಲ್ಲೂಕಿನ ಬೆಲವತ್ತ ಗ್ರಾಮದಲ್ಲಿ ಎದ್ದಿರುವ ಕಟ್ಟಡಗಳ ನೋಟ.

ಈ ‘ಕೃಷಿ ಕಾರಣ’ವು ‘ಹೋರಾಟದ ರಾಜಕಾರಣ’ಕ್ಕೂ ದಾರಿ ಮಾಡಿದ್ದು ಎರಡೂ ಜಿಲ್ಲೆಯ ಜನರ ಮನದಲ್ಲಿ ಇನ್ನೂ ಹಾಗೇ ಇದೆ. ಅಂದಿನ ಮುಖ್ಯಮಂತ್ರಿ, ನೀರಾವರಿ ಖಾತೆಯ ಹೊಣೆಯನ್ನೂ ಹೊತ್ತಿದ್ದ ಡಿ.ದೇವರಾಜ ಅರಸು ಮೈಸೂರು ರೈತರಿಗೆ ಒತ್ತಾಸೆಯಾಗಿ ನಿಂತಿದ್ದರು. ಆದರೆ ಅವರ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿದ್ದ, ಮಂಡ್ಯದ ಎಸ್‌.ಎಂ.ಕೃಷ್ಣ ಅವರೇ, ‘ವರುಣಾ, ಮಂಡ್ಯ ಜಿಲ್ಲೆ ಜನರ ಮರಣ’ ಎಂದು ಹೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅದು ಸರ್ಕಾರದ ಒಳಗೇ ಎದ್ದಿದ್ದ ವಿರೋಧ. ಹೊರಗೆ, ‘ವರುಣಾ ನಾಲಾ ವಿರೋಧಿ ಹೋರಾಟ ಸಮಿತಿ’ ರಚನೆಯಾಗಿತ್ತು. ‘ಬೆಂಗಳೂರು ಚಲೋ’, ಉಪವಾಸ ಸತ್ಯಾಗ್ರಹ, ಬಂದ್‌, ಪಿಕೆಟಿಂಗ್ ನಡೆದಿತ್ತು. ರೈತರು ಪಟಾಪಟಿ ಚಡ್ಡಿ, ಬನಿಯನ್ ಧರಿಸಿ ಚಳವಳಿ ನಡೆಸಿದ್ದರು. ಅದು ‘ಚಡ್ಡಿ ಚಳವಳಿ’ ಎಂದೇ ಪ್ರಸಿದ್ಧ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಬೆಂಗಳೂರಿಗೆ ಬಂದಾಗ ಅವರ ಮುಂದೆ ಕಪ್ಪು
ಬಾವುಟವನ್ನೂ ಪ್ರದರ್ಶಿಸಿದ್ದರು.

ಇದೇ ವೇಳೆಯಲ್ಲಿ, ನನಗೋಸ್ಕರ ಮೈಸೂರು ಜಿಲ್ಲೆಯಾದ್ಯಂತ ಪ್ರತಿಭಟನೆಗಳು, ಸಭೆಗಳು ತಾರಕಕ್ಕೇರಿದ್ದವು. ‘ನಾಲೆ ಬೇಕೇ ಬೇಕು’ ಎಂಬ ಆಗ್ರಹ ಮೇರೆ ಮೀರಿತ್ತು. ‘ನಾಲೆ ಬೇಕೆ?’ ಎಂಬ ಬಗ್ಗೆ ವರದಿ ತಯಾರಿಸಲೆಂದೇ ಎರಡು ಸಮಿತಿಗಳು ರಚನೆಯಾಗಿದ್ದವು. ನನಗೋಸ್ಕರ ಎರಡು ಸರ್ಕಾರಗಳು ಬಂದು ಹೋದವು. ಎರಡೂ ಜಿಲ್ಲೆಗಳಿಗೆ ನಾನು ‘ಅಸ್ಮಿತೆ’ ಮತ್ತು ‘ಅಸ್ತಿತ್ವ’ದ ಪ್ರಶ್ನೆಯಾಗಿದ್ದೆ.

ಕನ್ನಂಬಾಡಿ ಅಣೆಕಟ್ಟೆಯ ಬಲದಂಡೆಯಲ್ಲಿ ಒಂದು ತೂಬು ಇಡಬಹುದು ಎಂದು ಬಿ.ಸುಬ್ಬರಾವ್ ಎಂಬ ಎಂಜಿನಿಯರ್‌ ನೀಡಿದ್ದ ವರದಿಯ ಅಂಶವೇ ಮೈಸೂರಿನ ರೈತರಲ್ಲಿ ಆಸೆಯನ್ನು ಮೂಡಿಸಿತ್ತು.ಅದು, ನನ್ನನ್ನು ನಿರ್ಮಿಸಿ ಅಣೆಕಟ್ಟೆಯಿಂದ ನೀರು ಪಡೆದು ಬದುಕು ಕಟ್ಟಿಕೊಳ್ಳುವ ಆಸೆ. ಆಸೆಯೇ ಹೋರಾಟಕ್ಕೂ, ನೀರಾವರಿ ಒಪ್ಪಂದದ ಮೂಲಕ ಉತ್ತಮ ಬದುಕಿಗೂ ಮೂಲವಾಯಿತು. ಅರಸು ಒತ್ತಾಸೆ ಇದ್ದ ಕಾರಣಕ್ಕೇ ಅವರ ಹೆಸರನ್ನೇ ನನಗಿಟ್ಟರು. ಆಮೇಲೆ ವರುಣಾ ಎಂಬ ಹೆಸರೂ ಬಂತು.

ಮೊದಲಿಗೆ ನಿರ್ಮಾಣವಾದ ಅಣೆಕಟ್ಟೆಯ ಎಡದಂಡೆ ನಾಲೆ (ವಿಶ್ವೇಶ್ವರಯ್ಯ ನಾಲೆ)ಯಿಂದ ಮಂಡ್ಯದ ರೈತರಿಗೆ ನೀರು ಹರಿದರೆ, ಬಲದಂಡೆಯಲ್ಲಿ ತೋಡಿದ ನನ್ನ ಮೂಲಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಮೈಸೂರು ಜಿಲ್ಲೆಯ ಮೈಸೂರು, ತಿ.ನರಸೀಪುರ, ನಂಜನಗೂಡು ಮತ್ತು ಎಚ್‌.ಡಿ.ಕೋಟೆ ತಾಲ್ಲೂಕಿನ ನೂರಾರು ಹಳ್ಳಿಗಳ ಅಂದಾಜು 80 ಸಾವಿರ ಎಕರೆ ಜಮೀನಿಗೆ ಪ್ರತಿ ವರ್ಷ ಆರು ತಿಂಗಳು ನೀರು ಹರಿಯುತ್ತದೆ. ಇದು ಅರೆ ನೀರಾವರಿ ಬೆಳೆಯಲಷ್ಟೇ. ಇನ್ನಾರು ತಿಂಗಳು ಎಂಜಿನಿಯರ್‌ಗಳಿಗೆ ನನ್ನ ನಿರ್ವಹಣೆಯ ಕೆಲಸ.

127 ಕಿ.ಮೀ ಇರುವ ನನ್ನುದ್ದಕ್ಕೂ 55 ವಿತರಣಾ ನಾಲೆಗಳು ಹಾಗೂ 74 ನೇರ ತೂಬುಗಳಿವೆ. ಎಂಟು ಮೇಲ್ಗಾಲುವೆ (ಅಕ್ವಾಡಕ್ಟ್‌) ಗಳಿವೆ. ನನಗೆ ಒತ್ತಾಸೆಯಾಗಿದ್ದ ಅರಸು ಅವರ ಬಳಿಕ, ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದಾಗ ನೀಡಿದ ಅನುದಾನ, ಆದ್ಯತೆಯೂ ದೊಡ್ಡದು. ಅಂದಹಾಗೆ, ನನ್ನಿಂದ ಹೆಚ್ಚು ಪ್ರಯೋಜನ ಪಡೆಯುವ ರೈತರು ಯಾರು ಗೊತ್ತಾ? ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಿ ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದವರು.

ಅನ್ಯಕ್ರಾಂತ, ನಾನು ಚಿಂತಾಕ್ರಾಂತೆ...

‘ಬರಗಾಲದೆದೆಗೆ ಗುರಿಯಿಟ್ಟು ಕಟ್ಟೆಯ ಕೋವಿ ಕಟ್ಟಿದಂತಿದೆ...’ –‘ಕನ್ನಂಬಾಡಿ ಕಟ್ಟೆ’ ಹೆಸರಿನ ತಮ್ಮ ಪದ್ಯದಲ್ಲಿ ಕೆಆರ್‌ಎಸ್‌ ಕುರಿತು ಕುವೆಂಪು ಹೀಗೆ ಉದ್ಗರಿಸಿದ್ದರು.

ಮಳೆಯಾಶ್ರಿತ ಕೃಷಿಯನ್ನೇ ನೆಚ್ಚಿಕೊಂಡು, ಬರಗಾಲವೇ ಬದುಕಾಗಿದ್ದ ಮೈಸೂರು ಭಾಗದ ಜನರ ಅನ್ನದ ತಟ್ಟೆಯಲ್ಲಿ ನೀರಾವರಿ ಕೃಷಿಯಿಂದ ದೊರಕಬಹುದಾದ ಸಮಾಧಾನ, ಸಂತೃಪ್ತಿಯನ್ನು ಕಟ್ಟೆಯು ಸಾಧ್ಯವಿದ್ದಷ್ಟೂ ತುಂಬಿಸಿದೆ. ರೈತರೇ ಹೇಳುವಂತೆ, ಇದುವರೆಗೆ ಮೂರು ತಲೆಮಾರುಗಳಿಗೆ ನೀರು ಹರಿದುಹೋಗಿದೆ.

ಅರೆ ನೀರಾವರಿಯಾದರೂ ರೈತರು ಕಬ್ಬು, ಭತ್ತ, ತಾಜಾ ತರಕಾರಿಗಳು ಸೇರಿ ತಮಗೆ ಬೇಕಾದದ್ದನ್ನು ಬೆಳೆದು ಸ್ಥಿತಿವಂತರಾಗಿದ್ದಾರೆ. ಈಗಲೂ ಬೆಳೆಯುತ್ತಿದ್ದಾರೆ. ಕಟ್ಟೆಯ ನೀರನ್ನು ಹರಿಸಿದ ನಾನು ನೆಪ ಮಾತ್ರ. ಆದರೆ ಈಗ ನನ್ನ ಕಷ್ಟ ಕೇಳುವವರಿಲ್ಲ ಎಂಬುದೇ ನನ್ನ ಸಂಕಟ.

ಕನ್ನಂಬಾಡಿ ಕಟ್ಟೆಗೆ ಅಂಟಿಕೊಂಡು ಇರುವ ನಾನು, ಮೊದಲು ಪ್ರವೇಶಿಸುವುದು ಶ್ರೀರಂಗಪಟ್ಟಣ ತಾಲ್ಲೂಕಿನ ಹೊಂಗಳ್ಳಿಯನ್ನು. ಎಚ್.ಡಿ.ಕೋಟೆ ತಾಲ್ಲೂಕಿನ ವಡವಿನಕಟ್ಟೆ ನನ್ನ ಕೊನೆಯ ನಿಲ್ದಾಣ. ಇಲ್ಲಿವರೆಗೆ 80 ಸಾವಿರ ಎಕರೆ ಜಮೀನಿಗೆ ನೀರು ಉಣಿಸುವ ಗುರಿ ನನ್ನದು. ಆದರೀಗ ಅದರ ಹತ್ತು ಸಾವಿರ ಎಕರೆಗಿಂತಲೂ ಹೆಚ್ಚು ಕೃಷಿ ಭೂಮಿ ಅನ್ಯಕ್ರಾಂತವಾಗಿದೆ.

ಅರ್ಥವಾಗಲಿಲ್ಲವೇ, ‘ಡಿಸಿ ಕನ್ವರ್ಷನ್‌ ಆಗಿದೆ’ ಎಂದರೆ ನಿಮಗೆ ಸುಲಭವಾಗಿ ಅರ್ಥವಾಗಿಬಿಡುತ್ತದೆ. ನನ್ನುದ್ದಕ್ಕೂ ಅಲ್ಲಲ್ಲಿ ಕೃಷಿಭೂಮಿ ಅನ್ಯ ಉದ್ದೇಶಕ್ಕೆ ಪರಿವರ್ತನೆಯಾಗಿದೆ. ಅಂದರೆ, ಕೃಷಿಗೆ ಆದ್ಯತೆ ಇಲ್ಲ. ನಾನು ಇದ್ದರೂ ನೀರು ಪ್ರಯೋಜನಕ್ಕಿಲ್ಲ. ಹಳ್ಳಿಗಳಲ್ಲಿ ನನ್ನ ನೀರೇ ರಾಜ. ಹಾದುಹೋಗಿರುವ ನಗರ, ಪಟ್ಟಣಗಳಲ್ಲಿ ಮಾತ್ರ ಅನಾಥ. ಇದು ಸದ್ಯದ ಸ್ಥಿತಿಗತಿ.

ಒಮ್ಮೆ ಇಲ್ಲಿಗೆ ಬನ್ನಿ...

ಬೆಂಗಳೂರು–ಮೈಸೂರು ಹೆದ್ದಾರಿ ಕೊನೆಗೊಂಡು ಮೈಸೂರಿಗೆ ಪ್ರವೇಶಿಸುವ ಜಂಕ್ಷನ್‌ನಲ್ಲಿ ನನ್ನನ್ನು ಮೇಲ್ಭಾಗದಿಂದ ಹರಿಯುವಂತೆ (ಅಕ್ವಾಡಕ್ಟ್‌) ಮಾಡಿದ್ದಾರೆ.ಇದು ನಿಮ್ಮ ಗಮನ ಸೆಳೆಯುತ್ತಲೇ ಇರುವುದನ್ನು ನೀವೂ ಬಲ್ಲಿರಿ. ಅದು ಕೆಲವು ಕ್ಷಣಗಳ ಸುಂದರ, ಮೋಹಕ ನೋಟ.

ಆದರೆ, ಸ್ವಲ್ಪ ಬಿಡುವು ಮಾಡಿಕೊಂಡು ನನ್ನ ಕೆಳಗೆ ಸುಮ್ಮನೆ ನಡೆದುಕೊಂಡು ಹೋದರೆ ನಿಮಗೆ ಕಟು ವಾಸ್ತವದ ಅರಿವಾಗುತ್ತದೆ; ಹೋರಾಟ ಮಾಡಿ ಪಡೆದ ನನ್ನ ನೀರನ್ನು ಬಳಸಿ ಕೃಷಿ ನಡೆಯಬೇಕಾದ ಕಡೆಯೆಲ್ಲ ಬಡಾವಣೆಗಳು ಹರಡಿಕೊಂಡಿವೆ. ಅಲ್ಲಿಗೆ ನನ್ನ ಪಕ್ಕದ ಜಾಗವೇ ಸಂಪರ್ಕ ರಸ್ತೆ. ಅದರೊಂದಿಗೆ ಹೋಟೆಲು, ಗ್ಯಾರೇಜು, ಕಾರ್ಖಾನೆ ಮತ್ತಿತರೆ ಕಟ್ಟಡಗಳು ತಲೆ ಎತ್ತಿವೆ. ಕೆಲವು ಶಾಶ್ವತ, ಕೆಲವು ತಾತ್ಕಾಲಿಕ ರಚನೆಯ ಹೆಸರಿನಲ್ಲಿ ದಶಕಗಳಿಂದಲೂ ಇವೆ. ನನ್ನನ್ನೂ ಸೇರಿಸಿ ಖಾತೆ ಮಾಡಿದ ಬಗ್ಗೆ ಪಂಚಾಯಿತಿ ಸಿಬ್ಬಂದಿಗಳ ವಿರುದ್ಧವೇ ದಾಖಲಾದ ಕ್ರಿಮಿನಲ್‌ ‍ಪ್ರಕರಣಗಳೇನೂ ಕಡಿಮೆ ಇಲ್ಲ.

ಮೈಸೂರಿನ ಹೊರವಲಯದಲ್ಲಿ ಸಾಗುವ ವರುಣಾ ನಾಲೆಯ ನೋಟ  

ಕಸ ಸುರಿಯಲು, ಅದನ್ನು ಸುಡಲೂ ನಾನೇ ಬೇಕು. ನನ್ನನ್ನು ಒತ್ತುವರಿ ಮಾಡಿಕೊಳ್ಳುವ ಮೂಲಕ ಕೃಷಿಯೇ ಇಲ್ಲಿ ಒತ್ತುವರಿಯಾಗಿದೆ. ರೈತರೇ ಕೃಷಿ ಬಿಟ್ಟು ಜಮೀನು ಮಾರಿದ್ದಾರೆ, ಮಾರುತ್ತಿದ್ದಾರೆ. ಹೆದ್ದಾರಿ ಬದಿ ಜಮೀನು ಎಂದರೆ ಏನು ಕಡಿಮೆಯೇ? ಚಿನ್ನಕ್ಕಿಂತ ದುಬಾರಿ. ಈ ನಡುವೆಯೂ ಮೇಲ್ಗಾಲುವೆಯ ಇನ್ನೊಂದು ಬದಿ, ಹರಿದ ಬಟ್ಟೆಗೆ ತೇಪೆ ಹಾಕಿದಂತೆ, ಅಲ್ಲಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿರುವುದನ್ನೂ ಕಾಣಬಹುದು.

ನಾನು ಮೊದಲಿಗೆ ಹರಿದು ಬರುವ ಕೆಆರ್‌ಎಸ್‌ ರಸ್ತೆಯ ಬೆಳಗೊಳದ ಬಳಿಗೆ ಬನ್ನಿ. ಅಲ್ಲಿ ನನಗೇ ಅಂಟಿಕೊಂಡೇ ರಸ್ತೆಗಳಾಗಿವೆ. ಬಡಾವಣೆಗಳಾಗಿವೆ. ಚರಂಡಿ ನೀರು ನೇರ ನನ್ನ ಒಡಲಲ್ಲೇ ಹರಿಯುತ್ತಿರುವುದು ಕಾಣುತ್ತದೆ.

‘ಏಕೆ ಹೀಗೆ ಮಾಡಿದಿರಿ’ ಎಂದು ರೈತರನ್ನು ಕೇಳಿ. ‘ಕೃಷಿಯನ್ನು ನೆಚ್ಚಿಕೊಂಡು ಬದುಕಲು ಸಾಧ್ಯವಿಲ್ಲ’ ಎಂಬ ಹತಾಶೆಯ ನುಡಿಗಳು ಕೇಳಿ ಬರುತ್ತವೆ. ಜೊತೆಗೆ, ‘ಒಂದು ಎಕರೆಗೆ ಒಂದು ಕೋಟಿ ರುಪಾಯಿ ಬೆಲೆ ಇದೆ. ಜೀವನಪೂರ್ತಿ ಜಮೀನಿನಲ್ಲಿ ದುಡಿದರೂ ಅಷ್ಟು ಸಂಪಾದಿಸಲು ಆಗುವುದಿಲ್ಲ’ ಎಂಬ ಪ್ರತಿಪಾದನೆಯೂ ಬರುತ್ತದೆ. ನಾನು ಹರಿದುಹೋಗಿರುವ ಪ್ರದೇಶವು ಎಲ್ಲೆಲ್ಲಿ ಅಭಿವೃದ್ಧಿಯಾಗಿದೆಯೋ ಅಲ್ಲೆಲ್ಲ ಇದೇ ಪರಿಸ್ಥಿತಿ. ಬರಗಾಲಕ್ಕೆ ಸಡ್ಡು ಹೊಡೆಯಲೆಂದೇ ಹೋರಾಟ ಮಾಡಿ ಪಡೆದ ನನ್ನ ಮಹತ್ವವು ಅಭಿವೃದ್ಧಿಯ ನಾಗಾಲೋಟದಲ್ಲಿ ಕರಗುತ್ತಿದೆ.

‘ನನ್ನ ಅಚ್ಚುಕಟ್ಟು ಪ್ರದೇಶವನ್ನು ಹಸಿರು ವಲಯ ಎಂದು ಘೋಷಿಸಿಲ್ಲವೇ’ ಎಂದು, ಕಾವೇರಿ ಜಲಾನಯನ ಯೋಜನೆಗಳನ್ನು ನಿರ್ವಹಿಸಬೇಕಾದ ಕಾವೇರಿ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ)ದ ಎಂಜಿನಿಯರುಗಳನ್ನು ಕೇಳಿ. ನಿರುಮ್ಮಳವಾಗಿ ‘ಇಲ್ಲ’ ಎನ್ನುತ್ತಾರೆ. ‘ಅಷ್ಟಕ್ಕೂ ಅದು ರೈತರ ಜಮೀನು. ಅವರ ಆಸ್ತಿ. ಅದನ್ನು ಮಾರಬೇಡಿ ಎಂದು ನಾವು ಹೇಳಲು ಬರುವುದಿಲ್ಲ’ ಎಂಬ ಸಮಜಾಯಿಷಿಯೂ ಸಿದ್ಧ. ಹಸಿರು ವಲಯ ಎಂದು ಘೋಷಿಸಲು ಏನು ಅಡ್ಡಿ? ಇದಕ್ಕೆ ಯಾರ ಬಳಿಯೂ ಉತ್ತರವಿಲ್ಲ.

ನನ್ನ ಉದ್ದಕ್ಕೂ ಸೋರಿಕೆ ಪ್ರತಿ ವರ್ಷದ ಸಮಸ್ಯೆ. ಅದು ಆರಂಭದಿಂದಲೂ ಇದೆ. ಆರು ತಿಂಗಳು ನೀರು ಹರಿಸಿ, ಇನ್ನಾರು ತಿಂಗಳು ನಿರ್ವಹಣೆ ಮಾಡಬೇಕಾದ ಕೆಲಸವೂ ಸಮರ್ಪಕವಾಗಿ ನಡೆಯದ ಕಾರಣ, ಕಾಡಾ ಎಂಜಿನಿಯರುಗಳು ರೈತರಿಂದ ಪೂರ್ಣ ಅಂಕ ಪಡೆಯಲು ಆಗಿಲ್ಲ. ಆದರೂ ಕೋಟಿ ಕೋಟಿ ವೆಚ್ಚದಲ್ಲಿ ದುರಸ್ತಿ ಮಾತ್ರ ನಡೆಯುತ್ತಲೇ ಇದೆ!

ಬಡಾವಣೆಗಳ ಕೊಳಚೆ ನೀರು ಯಾವ ತಡೆಯೂ ಇಲ್ಲದೆ ನನ್ನೊಡಲಲ್ಲಿ ಹರಿಯುತ್ತಿದೆ ಎಂಬುದು ಕಾಡಾಕ್ಕೆ, ಸ್ಥಳೀಯ ಪಂಚಾಯಿತಿಗಳ ಎಲ್ಲರಿಗೂ ಗೊತ್ತು. ಆದರೆ ಅದನ್ನು ನಿಲ್ಲಿಸುವ ಪ್ರಯತ್ನ ಮಾತ್ರ ಕಾಗದ ಪತ್ರಗಳಲ್ಲಿ ಮಾತ್ರ ನಡೆದಿದೆ. ಗ್ರಾಮ ಪಂಚಾಯಿತಿಗಳಿಗೆ ಎಂಜಿನಿಯರುಗಳು ಬರೆದ ಪತ್ರಗಳು, ಪಂಚಾಯಿತಿಗಳ ನಿರ್ಲಿಪ್ತ ಉತ್ತರಗಳೂ ಅಸಂಖ್ಯ. ನನ್ನೊಡಲು ನೀರು, ಚರಂಡಿ ನೀರು ಒಂದೇ. ಇದೇ ನೀರು ಕೆರೆ, ಕಟ್ಟೆಗಳನ್ನೂ ಸೇರುತ್ತಿದೆ. ಯಾವುದೋ ಒಂದು ರೂಪದಲ್ಲಿ ಜನರ ಹೊಟ್ಟೆಯನ್ನೂ ಸೇರುತ್ತಿದೆ.

ಸೇರಿಸಿ...ಸೇರಿಸಬೇಡಿ...

ಕೃಷಿಯಿಂದ ವಿಮುಖರಾಗಿರುವ ಮೈಸೂರು ಭಾಗದ ನನ್ನ ಫಲಾನುಭವಿ ರೈತರ ನಡುವೆ ಇನ್ನೊಂದು ಸಂಘರ್ಷ ಏರ್ಪಡುವ ದಿನಗಳೂ ಬಂದಿವೆ. ಬೃಹತ್‌ ಮೈಸೂರು ಮಹಾನಗರ ಪಾಲಿಕೆಯನ್ನು ರಚಿಸಲು ಇತ್ತೀಚೆಗೆ ಅಧಿಸೂಚನೆ ಹೊರಡಿಸಿರುವ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿರುವ ಆಕ್ಷೇಪಣೆಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ.

ನಾನು ಹರಿದು ಹೋಗುವ ವರುಣಾ ಕ್ಷೇತ್ರದ ಕೆಲವರು, ‘ಅಲ್ಲಿನ ಹಳ್ಳಿಗಳನ್ನು ಪಾಲಿಕೆಗೆ ಸೇರಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸಭೆಗಳನ್ನೂ ನಡೆಸಿದ್ದಾರೆ. ಇದೇ ವೇಳೆ, ‘ನಾಲೆ ಹರಿದು ಹೋಗುವ ಹಳ್ಳಿಗಳನ್ನು ಯಾವುದೇ ಕಾರಣಕ್ಕೂ ಪಾಲಿಕೆ ವ್ಯಾಪ್ತಿಗೆ ಸೇರಿಸಬಾರದು. ಅಲ್ಲಿನ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಬೇಕು. ಅಷ್ಟೋ ಇಷ್ಟೋ ಉಳಿದಿರುವ ಹಸಿರು ವಲಯವನ್ನು ಉಳಿಸಬೇಕು’ ಎಂದು ರೈತರು ಆಗ್ರಹಿಸಿ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ.

ನಾನೀಗ ಇಬ್ಬಗೆಯ ರೈತರ ಹಗ್ಗಜಗ್ಗಾಟದಲ್ಲಿ ಸಿಲುಕಿದ್ದೇನೆ. ಒಬ್ಬರು, ಏನಾದರೂ ಸರಿ, ಕೃಷಿಯನ್ನು ಬಿಟ್ಟು ಬದುಕನ್ನು ಹುಡುಕಿಕೊಳ್ಳಬೇಕೆಂದು ಹೊರಟವರು. ಇನ್ನೊಬ್ಬರು, ಕೃಷಿಯೇ ಬದುಕೆಂದುಕೊಂಡವರು.
ಇನ್ನೊಂದು ವರ್ಗವಿದೆ. ನನ್ನ ಅಚ್ಟುಕಟ್ಟು ಪ್ರದೇಶವನ್ನು ಹಸಿರು ವಲಯವೆಂದು ಘೋಷಿಸಬೇಕು. ನನ್ನ ನಿರ್ಮಾಣದ ಉದ್ದೇಶವನ್ನು ಕಾಪಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿರುವವರು.

ಇದರ ನಡುವೆ, ನಾಲ್ಕು ದಶಕದ ಅವಧಿಯಲ್ಲಿ ನನ್ನ ಬದಿಯ ಅಚ್ಚುಕಟ್ಟು ಪ್ರದೇಶದ ರೈತರ ಅನ್ನದ ತಟ್ಟೆಯಂತೂ ಇಷ್ಟಿಷ್ಟೇ ಬರಿದಾಗುತ್ತಿದೆ. ಆದರೆ, ನಾನೂ ಉಳಿಯಬೇಕು. ಜನರ ನಾಳೆಯೂ ಉಳಿಯಬೇಕು. ಅಭಿವೃದ್ಧಿಯೂ ಆಗಬೇಕು. ಅದು ಹೇಗೆ? ನೀವೇ ಯೋಚಿಸಿ...

-ವಂದನೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.