ADVERTISEMENT

ವೇಸ್ಟ್‌ ಡಿಕಂಪೋಸರ್

ಆತ್ರೇಯ
Published 13 ಮೇ 2019, 19:30 IST
Last Updated 13 ಮೇ 2019, 19:30 IST
   

ಸಾವಯವ ಕೃಷಿಕರಿಗೆ ದೊಡ್ಡ ಪ್ರಮಾಣದಲ್ಲಿ ಸಾವಯವ ಗೊಬ್ಬರ ತಯಾರಿಸಿಕೊಳ್ಳುವುದು ಒಂದು ಸವಾಲಿನ ಕೆಲಸ. ಹಿಡುವಳಿ ಹೆಚ್ಚಾದರೆ, ಆ ಸವಾಲು ಮತ್ತಷ್ಟು ಕಠಿಣವಾಗುತ್ತದೆ. ಏಕೆಂದರೆ, ದೊಡ್ಡ ಹಿಡುವಳಿಗೆ ಟನ್‌ಗಟ್ಟಲೆ ಗೊಬ್ಬರ ಬೇಕು. ಅದನ್ನು ತಯಾರಿಸಲು ದೊಡ್ಡ ಪ್ರಮಾಣದಲ್ಲಿ ಕಚ್ಚಾ ವಸ್ತುಗಳು ಬೇಕು. ಮಾತ್ರವಲ್ಲ, ಗೊಬ್ಬರ ತಯಾರಿಸಲು ತಿಂಗಳುಗಟ್ಟಲೆ ಕಾಯಬೇಕು.

ಈ ಎಲ್ಲ ಸಮಸ್ಯೆಗೆ ಪರಿಹಾರವಾಗಿ ದೆಹಲಿಯ ಕೇಂದ್ರೀಯ ಸಾವಯವ ಕೃಷಿ ಕೇಂದ್ರ ‘ವೇಸ್ಟ್‌ ಡಿಕಂಪೋಸರ್’ ಎಂಬ ಸೂಕ್ಷ್ಮಾಣುಜೀವಿ ದ್ರಾವಣವನ್ನು ಅಭಿವೃದ್ಧಿಪಡಿಸಿದೆ. ಇದನ್ನು ರಾಸುಗಳ ಸಗಣಿಯ ಲೋಳೆಯಲ್ಲಿರುವ (ಮ್ಯೂಕಸ್) ಸೂಕ್ಷ್ಮಾಣುಗಳನ್ನು ಬೇರ್ಪಡಿಸಿ ತಯಾರಿಸಲಾಗಿದೆ. 30 ಮಿ.ಲೀಟರ್‌ನಷ್ಟು ಈ ದ್ರಾವಣವನ್ನು ಬಳಸಿಕೊಂಡು ಒಂದು ಲಕ್ಷ ಮೆಟ್ರಿಕ್ ಟನ್‌ ತ್ಯಾಜ್ಯವನ್ನು ಒಂದು ತಿಂಗಳಲ್ಲಿ ಕಳಿಸಬಹುದು ಅಥವಾ ಗೊಬ್ಬರವಾಗಿ ಪರಿವರ್ತಿಸಬಹುದು. ಅಷ್ಟೇ ಅಲ್ಲ. ಬೆಳೆಗಳ ಇಳುವರಿ ಹೆಚ್ಚಳಕ್ಕೆ, ಮಣ್ಣಿನ ಫಲವತ್ತತೆ ಉತ್ಕೃಷ್ಟಗೊಳಿಸಲು ಇದು ನೆರವಾಗುತ್ತದೆ. ಬೀಜೋಪಚಾರಕ್ಕೆ, ಬೆಳೆಯುಳಿಕೆ, ತ್ಯಾಜ್ಯಗಳನ್ನು ಬೇಗ ಕಳಿಸಿ ಕೊಬ್ಬರ ಮಾಡಲು ಈ ದ್ರಾವಣ ಉಪಯೋಗವಾಗುತ್ತದೆ.

ಸಾಮಾನ್ಯವಾಗಿ ಸಾವಯವ ವಸ್ತುಗಳು ಸ್ವಾಭಾವಿಕವಾಗಿ ಕಳಿತು ಗೊಬ್ಬರವಾಗಲು 100 ರಿಂದ 120 ದಿನಗಳು ಬೇಕು. ಆದರೆ, ವೇಸ್ಟ್ ಡಿಕಂಪೋಸರ್ ಬಳಸಿದರೆ 40 ದಿನಗಳಲ್ಲಿ ಗೊಬ್ಬರ ತಯಾರಿಸಬಹುದು.

ADVERTISEMENT

ತಯಾರಿಸುವ ವಿಧಾನ

200 ಲೀಟರ್ ನೀರಿಗೆ 2 ಕೆ.ಜಿ ಯಿಂದ 4 ಕೆ.ಜಿವರೆಗೆ ಬೆಲ್ಲ ಬೆರೆಸಿ. ಬಳಸುವ ಬೆಲ್ಲ ಸಾವಯವದ್ದಾಗಿದ್ದರೆ ಒಳ್ಳೆಯದು. ಅದು ಲಭ್ಯವಾಗದಿದ್ದರೆ ದನಗಳಿಗೆ ತಿನ್ನಿಸುವ ಬೆಲ್ಲ ಇದ್ದರೆ ಸಾಕು. ನೀರಿಗೆ ಬೆರೆಸಿದ ಬೆಲ್ಲವನ್ನು ಚೆನ್ನಾಗಿ ಕರಗಿಸಿ. ಅವಕಾಶವಿದ್ದರೆ, ಮೊದಲೇ ಬೆಲ್ಲವನ್ನು ಒಂದು ಬಕೆಟ್‌ ನೀರಿನಲ್ಲಿ ಕರಗಿಸಿಟ್ಟುಕೊಂಡು ದ್ರಾವಣ ಮಾಡಿಟ್ಟುಕೊಳ್ಳಬಹುದು. ಇದಾದ ನಂತರ ಡ್ರಮ್‌ನಲ್ಲಿರುವ ಬೆಲ್ಲದ ದ್ರಾವಣವನ್ನು ಕೋಲಿನಿಂದ ಚೆನ್ನಾಗಿ ಗೊಟಾಯಿಸಬೇಕು. ಬೆಲ್ಲ ಕರಗಿ ದ್ರಾವಣ ತಯಾರಾಗುತ್ತದೆ.

ಶೀಷೆಯಲ್ಲಿರುವ (30 ಮಿ.ಲೀ) ವೇಸ್ಟ್‌ಡಿಕಂಪೋಸರ್‌ ಅನ್ನು ಡ್ರಮ್‌ನಲ್ಲಿರುವ ದ್ರಾವಣಕ್ಕೆ ಪೂರ್ಣ ಸುರಿಯಿರಿ (ಕೈಯಿಂದ ಮುಟ್ಟಬೇಡಿ). ಮಿಶ್ರಣವನ್ನು ಚೆನ್ನಾಗಿ ಕೋಲಿನಿಂದ ತಿರುಗಿಸಿ. ಡ್ರಮ್‌ ಬಾಯಿಯನ್ನು ಮುಚ್ಚಿರಿ. ಪ್ರತಿ ದಿನ ಒಂದು ಸಲ ಕೋಲಿನಿಂದ ಮಿಶ್ರಣ ತಿರುಗಿಸುತ್ತಿರಿ.

ನಾಲ್ಕು ದಿನ ಅಥವಾ ಏಳು ದಿನಗಳ ಒಳಗೆ ಡ್ರಮ್‌ನ ಮುಚ್ಚಳ ತೆಗೆಯಿರಿ. ಆಗ ದ್ರಾವಣದ ಮೇಲ್ಪದರದಲ್ಲಿ ಕೆನೆ ರೀತಿ ವಸ್ತು ಕಾಣುತ್ತದೆ. ಇದು ದ್ರಾವಣ ಬಳಸುವ ಸೂಚನೆ. ಈ ಸೂಚನೆಯ ನಂತರ ಇದನ್ನು ಬಳಸುವ ಮುನ್ನ, ಒಂದು ಬಕೆಟ್‌ನಲ್ಲಿ(10 ಲೀ. ನಿಂದ 20ಲೀ ನಷ್ಟು) ಸಿದ್ಧ ದ್ರಾವಣವನ್ನು ತೆಗೆದಿಟ್ಟುಕೊಳ್ಳಿ. ಈ ದ್ರಾವಣವನ್ನು ಪುನಃ ಬಳಸಿ, ಮತ್ತೆ 200 ಲೀಟರ್‌ ವೇಸ್ಟ್‌ಡಿಕಂಪೋಸರ್ ದ್ರಾವಣ ಸಿದ್ಧಗೊಳಿಸಬಹುದು. ಇದನ್ನು ಮೂರು ವರ್ಷ ಹೀಗೇ ಇಟ್ಟರೂ ಹಾಳಾಗುವುದಿಲ್ಲ.

ದ್ರಾವಣ ಬಳಕೆ ಹೇಗೆ?

ಸಿದ್ಧವಾದ ವೇಸ್ಟ್‌ಡಿಕಂಪೋಸರ್ ದ್ರಾವಣವನ್ನು ತ್ಯಾಜ್ಯ ಕರಗಿಸಿ ಗೊಬ್ಬರವಾಗಿಸಲು, ಬೆಳೆಯ ಇಳುವರಿ ಹೆಚ್ಚಿಸಲು, ಮಣ್ಣಿನ ಫಲವತ್ತತೆ ವೃದ್ಧಿ ಮಾಡಲು, ಬೀಜೋಪಚಾರ, ಬೆಳೆಗಳಿಗೆ ಕೀಟ–ರೋಗ ಬಾಧೆ ನಿಯಂತ್ರಣ... ಹೀಗೆ ಯಾವ ರೀತಿ ಬೇಕಾದರೂ ಬಳಸಬಹುದು. ಉದಾಹರಣೆಗೆ, ತ್ಯಾಜ್ಯವನ್ನು ಕರಗಿಸಬೇಕಾದರೆ, ಹೀಗೆ ಮಾಡಬೇಕು.

ಒಂದು ಟನ್ ತ್ಯಾಜ್ಯವನ್ನು ನೆಲದ ಮೇಲೆ ಹರಡಿ. ಅದರ ಮೇಲೆ ವೇಸ್ಟ್‌ ಡಿಕಂಪೋಸರ್ ಮಿಶ್ರಣದ ದ್ರಾವಣ ಚಿಮುಕಿಸಿ. ಅದರ ಮೇಲೆ ಇನ್ನೊಂದು ಪದರ ತ್ಯಾಜ್ಯ ಹರಡಿ. ಅದರ ಮೇಲೂ ದ್ರಾವಣ ಚಿಮುಕಿಸಿ. ತ್ಯಾಜ್ಯದಲ್ಲಿ ಸದಾ ತೇವಾಂಶವಿರುವಂತೆ ನೋಡಿಕೊಳ್ಳಿ. ಹೀಗೆ ಮಾಡಿದ 30 ರಿಂದ 40 ದಿನಗಳ ನಂತರ ಒಂದು ಟನ್ ತ್ಯಾಜ್ಯ ಗೊಬ್ಬರವಾಗಿ ಪರಿವರ್ತಿತವಾಗಿರುತ್ತದೆ. ‌
ಈ ದ್ರಾವಣವನ್ನು ಗೊಬ್ಬರಕ್ಕಷ್ಟೇ ಅಲ್ಲದೇ, ಎಲ್ಲ ರೀತಿಯ ಬೆಳೆಗಳಿಗೂ ಏಳು ದಿನಕ್ಕೊಮ್ಮೆ ಬಳಸಬಹುದು. ತರಕಾರಿ ಬೆಳೆಗಾದರೆ ಮೂರು ದಿನಕ್ಕೊಮ್ಮೆ, ಹಣ್ಣಿನ ಬೆಳಗಳಿಗಾದರೆ ಏಳು ದಿನಕ್ಕೊಮ್ಮೆ ಸಿಂಪಡಿಸಬಹುದು.

ಒಂದು ಎಕರೆಗೆ 200 ಲೀಟರ್‌ ದ್ರಾವಣವನ್ನು ಹನಿ ನೀರಾವರಿ ಮೂಲಕ ಹರಿಸಿದರೆ, ಮಣ್ಣು ಫಲವತ್ತಾಗಿ, ಬೆಳೆ ಇಳುವರಿಯೂ ಹೆಚ್ಚಾಗುತ್ತದೆ.

ಯಾವುದೇ ರೀತಿಯ ಬಿತ್ತನೆ ಬೀಜದ ಮೇಲೆ ದ್ರಾವಣವನ್ನು ಚಿಮುಕಿಸಿ, ಚೆನ್ನಾಗಿ ಕಲಸಿ, ನೆರಳಲ್ಲಿನಲ್ಲಿ ಅರ್ಧ ಗಂಟೆ ಒಣಗಿಸಬೇಕು. ನಂತರ ಬಿತ್ತಬೇಕು.

ಜಮೀನಿನ ಮಣ್ಣಿಗೆ ಈ ದ್ರಾವಣ ಸಿಂಪಡಿಸುವುದರಿಂದ, ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಪ್ರಮಾಣ ವೃದ್ಧಿಸುತ್ತದೆ. ಹಾಗೆಯೇ ಎರೆಹುಳುಗಳ ಸಂಖ್ಯೆಯೂ ಹೆಚ್ಚಾಗುತ್ತದೆ.

ವೇಸ್ಟ್‌ಡಿಕಂಪೋಸರ್ ಎಲ್ಲಿ ಸಿಗುತ್ತದೆ

30 ಮಿ.ಲೀ ಬಾಟಲ್‌ಗಳ ಪ್ಯಾಕ್‌ನಲ್ಲಿ ವೇಸ್ಟ್‌ಡಿಕಂಪೋಸರ್ ದ್ರಾವಣ ಲಭ್ಯ. ಇದು ಅಮೆಜಾನ್ ಡಾಟ್ ಕಾಮ್ ಆನ್‌ಲೈನ್‌ ನಲ್ಲಿ (Waste Decomposer Siddi bio (Pack of 4) https://www.amazon.in/dp) ಪಡೆಯಬಹುದು. ಪ್ರತಿ ಬಾಟಲ್‌ ಬೆಲೆ ₹20. ಒಂದು ಸಾರಿ ಇದನ್ನು ಖರೀದಿಸಿದರೆ ಸಾಕು. ಮುಂದೆ ಇದೇ ದ್ರಾವಣದಿಂದಲೇ ಇನ್ನಷ್ಟು ಮಿಶ್ರಣವನ್ನು ತಯಾರಿಸಬಹುದು.

ದ್ರಾವಣ ತಯಾರಿಕೆ; ಎಚ್ಚರಿಕೆ ಇರಲಿ

‘ದ್ರಾವಣ ತಯಾರಿಕೆ ಕೆಟ್ಟ ವಾಸನೆ ಹೊರ ಹೊಮ್ಮುತ್ತಿದ್ದರೆ, ದ್ರಾವಣಕ್ಕೆ ಬಳಸಿರುವ ವೇಸ್ಟ್‌ಡಿಕಂಪೋಸರ್‌ ಕಲಬೆರಕೆಯಾಗಿದೆ ಎಂದು ಅರ್ಥ. ಆದರೆ ಈ ತರಹ ಆಗುವುದು ತೀರಾ ಅಪರೂಪದಲ್ಲಿ ಅಪರೂಪ. ಹಾಗೇನಾದರೂ ಕೆಟ್ಟ ವಾಸನೆ ಬಂದರೆ ದ್ರಾವಣ ತಯಾರಿಕೆ ನಿಲ್ಲಿಸಿ. ಹೊಸದಾಗಿ ದ್ರಾವಣದ ಬಾಟಲ್ ತೆಗೆದುಕೊಂಡು ಮಿಶ್ರಣ ತಯಾರಿಸಿ’ ಎಂದು ಸಲಹೆ ನೀಡುತ್ತಾರೆ ಪ್ರಾದೇಶಿಕ ಸಾವಯವ ಕೃಷಿ ಕೇಂದ್ರದ ವಿಜ್ಞಾನಿ ಡಾ. ಹರಿಶ್ರೀವತ್ಸ್.

‘ವೇಸ್ಟ್‌ಡಿಕಂಪೋಸರ್ ಮಿಶ್ರಣ ಮಾಡಿದ ಡ್ರಮ್‌ / ಪಾತ್ರೆಯ ಮೇಲೆ ಮರೆಯದೇ ಮುಚ್ಚಬೇಕು. ಇಲ್ಲದಿದ್ದರೆ, ಸೊಳ್ಳೆ ಅಥವಾ ಬೇರೆ ಕೀಟಗಳು ಈ ದ್ರಾವಣದ ಮೇಲೆ ಮೊಟ್ಟೆಗಳನ್ನಿಟ್ಟು, ಇಡೀ ದ್ರಾವಣವನ್ನೇ ಹಾಳು ಮಾಡುತ್ತವೆ’ ಎಂದು ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗೆ

ಪ್ರಾದೇಶಿಕ ಸಾವಯವ ಕೃಷಿ ಕೇಂದ್ರ, ಕನ್ನಮಂಗಲ ಕ್ರಾಸ್, ವೈಟ್‌ಫೀಲ್ಡ್ – ಹೊಸಕೋಟೆ ರಸ್ತೆ, ಕಾಡುಗೋಡಿ ಅಂಚೆ, ಬೆಂಗಳೂರು – 70, ದೂರವಾಣಿ: 080-58450503 (ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9 ರಿಂದ ಸಂಜೆ 5.30ರವರೆಗೆ) ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.