ಶ್ರೀರಾಮನ ಜನ್ಮಸ್ಥಳ ಎಂದು ನಂಬಲಾಗುವ ಅಯೋಧ್ಯೆಯ ನಿವೇಶನದಲ್ಲಿ ಭವ್ಯ ಮಂದಿರ ನಿರ್ಮಾಣದ ಕಾಮಗಾರಿಗೆ ಬುಧವಾರ ಚಾಲನೆ ದೊರೆಯಲಿದೆ. ಭಾರತದ ಇತಿಹಾಸದಲ್ಲಿಯೇ ಅತ್ಯಂತ ದೀರ್ಘವಾದ ಕಾನೂನು ಸಮರ ಮತ್ತು ರಾಜಕೀಯ–ಸಾಮಾಜಿಕ ಸಂಘರ್ಷಕ್ಕೆ ಕಾರಣವಾದ ನಿವೇಶನ ವಿವಾದವನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ಪರಿಹರಿಸಿತ್ತು. ಇದು, ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಮಂದಿರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ದೇಗುಲ ನಿರ್ಮಾಣಕ್ಕೆ ದಾರಿ ಸುಗಮ ಮಾಡಿಕೊಟ್ಟಿದೆ. ಮುಂದಿನ ಮೂರು ವರ್ಷಗಳಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅದರೊಂದಿಗೆ, ಭಾರತದ ತೀರ್ಥ ಕ್ಷೇತ್ರಗಳಲ್ಲಿ ಅತ್ಯಂತ ಮಹತ್ವದ ತಾಣವಾಗಿ ಅಯೋಧ್ಯೆಯು ಗುರುತಿಸಿಕೊಳ್ಳಲಿದೆ. ದಿನವೂ ಸಾವಿರ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರಲಿದ್ದಾರೆ. ಅದಕ್ಕೆ ಬೇಕಾದಂತೆ ಅಯೋಧ್ಯೆ ನಗರವನ್ನು ಮಾರ್ಪಡಿಸುವ ಯೋಜನೆಯನ್ನು ಉತ್ತರ ಪ್ರದೇಶ ಸರ್ಕಾರ ಸಿದ್ಧಮಾಡಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರ ಸಂಕೀರ್ಣವು ಜಗತ್ತಿನಲ್ಲಿ ಮೂರನೇ ಅತ್ಯಂತ ದೊಡ್ಡ ದೇವಾಲಯ ಸಂಕೀರ್ಣ ಎನಿಸಿಕೊಳ್ಳಲಿದೆ. ನೂತನ ರಾಮಮಂದಿರದ ವಿನ್ಯಾಸವನ್ನು 1988ರಲ್ಲಿ ರೂಪಿಸಲಾಗಿತ್ತು. ಆ ವಿನ್ಯಾಸವನ್ನು ಉಳಿಸಿಕೊಂಡೇ ಈಗ, ನೂತನ ವಿನ್ಯಾಸವನ್ನು ರೂಪಿಸಲಾಗಿದೆ. ಹಿಂದಿನ ಮಾದರಿಗಿಂತ ಹೊಸ ಮಾದರಿಯು ವ್ಯಾಪ್ತಿ ಮತ್ತು ಎತ್ತರದಲ್ಲಿ ದೊಡ್ಡದಾಗಿದೆ. ದೇವಾಲಯದ ವಿಸ್ತೀರ್ಣ ಹಿಗ್ಗಿದೆ. ಎತ್ತರ ಹೆಚ್ಚಾಗಿದೆ. ಕಂಬಗಳ ಸಂಖ್ಯೆ ಏರಿಕೆಯಾಗಿದೆ. ಗುಮ್ಮಟಗಳ ಸಂಖ್ಯೆಯೂ ಮೂರರಿಂದ ಐದಕ್ಕೆ ಏರಿಕೆಯಾಗಿದೆ.
2024ರ ವೇಳೆಗೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮಂದಿರ ನಿರ್ಮಾಣದ ಜತೆಜತೆಗೆ, ಇಡೀ ಅಯೋಧ್ಯೆ ನಗರಕ್ಕೆ ಹೊಸ ರೂಪ ನೀಡಲು ಉತ್ತರ ಪ್ರದೇಶ ಸರ್ಕಾರ ಯೋಜನೆಗಳನ್ನು ರೂಪಿಸಿದೆ.
ರಾಮ ಮಂದಿರ ನಿರ್ಮಾಣದ ನಂತರ ಅಯೋಧ್ಯೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಅಭಿವೃದ್ಧಿ ಮತ್ತು ಆರ್ಥಿಕ ವಿಚಾರಗಳಲ್ಲಿ ಹಿಂದೆ ಉಳಿದಿರುವ ಈ ನಗರವು ಭವಿಷ್ಯದಲ್ಲಿ ಪ್ರಮುಖ ಯಾತ್ರಾ ಕೇಂದ್ರ ಹಾಗೂ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಲಿದೆ ಎಂಬುದು ಸರ್ಕಾರದ ನಿರೀಕ್ಷೆ. ಮಂದಿರದ ಶಂಕುಸ್ಥಾಪನೆಯ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ.
ನವ್ಯ ಅಯೋಧ್ಯಾ
ಅಯೋಧ್ಯೆ ಮತ್ತು ಫೈಜಾಬಾದ್‌ನ ನಡುವೆ ಅತ್ಯಾಧುನಿಕ ಟೌನ್‌ಶಿಪ್ ‘ನವ್ಯ ಅಯೋಧ್ಯಾ’ವನ್ನು ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ಯೋಜನೆ ಹಾಕಿಕೊಂಡಿದೆ. ಸರಯೂ ನದಿಯ ದಂಡೆಯಲ್ಲಿ ಮತ್ತು ಲಖನೌ–ಗೋರಖಪುರ ಎಕ್ಸ್‌ಪ್ರೆಸ್‌ವೇಗೆ ಹೊಂದಿಕೊಂಡಂತೆ ಈ ನಗರವನ್ನು ನಿರ್ಮಾಣ ಮಾಡಲಾಗುತ್ತದೆ.
ಅಯೋಧ್ಯೆ ಮತ್ತು ಫೈಜಾಬಾದ್‌ಗಳ ಮಧ್ಯೆ ಎರಡು ಹಳ್ಳಿಗಳ 500 ಎಕರೆ ಜಮೀನನ್ನು ಈಗಾಗಲೇ ಸ್ವಾಧೀನ ಮಾಡಿಕೊಳ್ಳಲಾಗಿದೆ. ನಗರ ನಿರ್ಮಾಣಕ್ಕೆ ಈ ಭೂಮಿ ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಲು ಮಣ್ಣಿನ ಪರೀಕ್ಷೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ 100 ಎಕರೆಯಷ್ಟು ಪ್ರದೇಶವನ್ನು ಮಾತ್ರ ಅಭಿವೃದ್ಧಿಪಡಿಸಲಾಗುತ್ತದೆ. ನಂತರ ಹಂತಹಂತವಾಗಿ ಪೂರ್ಣ ನಗರವನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಒಳಚರಂಡಿ ವ್ಯವಸ್ಥೆ, ನೀರಿನ ಪೂರೈಕೆ ವ್ಯವಸ್ಥೆ ಮತ್ತು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸರ್ಕಾರವೇ ವಾಣಿಜ್ಯ ಸಂಕೀರ್ಣಗಳು, ಸಿನಿಮಾ ಮಂದಿರ, ಐಷಾರಾಮಿ ಹೋಟೆಲ್‌ಗಳು, ವಸತಿಗೃಹಗಳನ್ನು ನಿರ್ಮಿಸಲಿದೆ. ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ, ಎಲ್ಲಾ ಸವಲತ್ತುಗಳೂ ಒಂದೇ ಸ್ಥಳದಲ್ಲಿ ಲಭ್ಯವಿರುವಂತೆ ಈ ನಗರವನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಮಂದಿರ ನಿರ್ಮಾಣಕ್ಕೆ ಎಷ್ಟು ಖರ್ಚು?
ರಾಮಮಂದಿರ ನಿರ್ಮಾಣಕ್ಕೆ ಎಷ್ಟು ಖರ್ಚು ತಗುಲಲಿದೆ ಎಂದು ಈವರೆಗೆ ಅಧಿಕೃತವಾಗಿ ಎಲ್ಲಿಯೂ ಪ್ರಕಟವಾಗಿಲ್ಲ. ಒಂದು ಅಂದಾಜಿನ ಪ್ರಕಾರ, ಮಂದಿರ ಕಟ್ಟಡ ನಿರ್ಮಾಣಕ್ಕೆ ಸುಮಾರು ₹300 ಕೋಟಿ ವೆಚ್ಚವಾಗಲಿದೆ. ಮಂದಿರ ಪ್ರಾಂಗಣದ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ₹1,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಮೂರರಿಂದ ಮೂರೂವರೆ ವರ್ಷಗಳಲ್ಲಿ ದೇಗುಲ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಪರಿಷ್ಕೃತ ವಿನ್ಯಾಸದ ಪ್ರಕಾರ ಮಂದಿರ ನಿರ್ಮಾಣಕ್ಕೆ ನೂರಾರು ಕೋಟಿ ಖರ್ಚಾಗಲಿದೆ ಎಂಬ ಮಾತೂ ಇದೆ. ನಿರ್ಮಾಣ ಉಸ್ತುವಾರಿ ವಹಿಸಿರುವ ‘ರಾಮಜನ್ಮಭೂಮಿ ತೀರ್ಥ ಕ್ಷೇತ್ರ’ದ ಖಾತೆಯಲ್ಲಿ ಈಗ ಇರುವ ಹಣ ₹30 ಕೋಟಿ ಮಾತ್ರ. ರಾಮಜನ್ಮಭೂಮಿ ನ್ಯಾಸದ ಕಡೆಯಿಂದ ₹10 ಕೋಟಿ ಟ್ರಸ್ಟ್‌ಗೆ ವರ್ಗಾವಣೆಯಾಗಿದೆ. ಫೆಬ್ರುವರಿಯಲ್ಲಿ ಸ್ಥಾಪನೆಯಾದ ಟ್ರಸ್ಟ್, ಈವರೆಗೆ ₹20 ಕೋಟಿ ದೇಣಿಗೆ ಸಂಗ್ರಹಿಸಿದೆ. ಕೋವಿಡ್ ಕಾರಣದಿಂದ ದೇಣಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ ಎಂದು ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ಸಿಂಗ್ ಗಿರಿ ಅವರು ಹೇಳಿದ್ದಾರೆ. ಮಂದಿರ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ ಎಂದಿರುವ ಅವರು ಭೂಮಿಪೂಜೆ ಬಳಿಕ ದೇಣಿಗೆ ಸಂಗ್ರಹ ಕಾರ್ಯ ಚುರುಕುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
* ಈ ಮೊದಲು ದೇವಾಲಯವನ್ನು ವಿನ್ಯಾಸ ಮಾಡಿದ್ದ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪು ರಾ ಅವರ ಮಕ್ಕಳಾದ ನಿಖಿಲ್ ಸೋಂಪು ರಾ ಮತ್ತು ಆಶಿಶ್ ಸೋಂಪು ರಾ ಅವರು ನೂತನ ಮಾದರಿಯನ್ನು ವಿನ್ಯಾಸ ಮಾಡಿದ್ದಾರೆ.
* ಈ ಹಿಂದಿನ ವಿನ್ಯಾಸಕ್ಕೆ ಅನುಗುಣವಾಗಿ ಕೆತ್ತಲಾಗಿರುವ ಕಂಬಗಳನ್ನು ಬಳಸಿಕೊಂಡೇ ಹೊಸ ವಿನ್ಯಾಸದಂತೆ ದೇವಾಲಯ ನಿರ್ಮಿಸಲಾಗುತ್ತದೆ.
* ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ನಾಗರ ಶೈಲಿಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ.
ಜಗತ್ತಿನ ಎತ್ತರದ ಪ್ರತಿಮೆ
ಅಯೋಧ್ಯೆ ವಿಮಾನ ನಿಲ್ದಾಣದಿಂದ ರಾಮ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ಕಾರಿಡಾರ್‌ನಲ್ಲಿ ಜಗತ್ತಿನ ಅತ್ಯಂತ ಎತ್ತರದ ರಾಮನ ಪ್ರತಿಮೆ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ಯೋಜನೆ ಹಾಕಿಕೊಂಡಿದೆ. ನಿರ್ಮಾಣಕಾರ್ಯ ಪೂರ್ಣಗೊಂಡ ನಂತರ ಇದು ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಎನಿಸಿಕೊಳ್ಳಲಿದೆ. ಇದನ್ನು ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿಸುವುದು ಸರ್ಕಾರದ ಉದ್ದೇಶ.
ದೇವಾಲಯದಿಂದ ದೂರದಲ್ಲೇ ಈ ಪ್ರತಿಮೆ ನಿರ್ಮಿಸಲಾಗುತ್ತದೆ. 2018ರಲ್ಲೇ 100 ಮೀಟರ್ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಬಾಬರಿ ಮಸೀದಿ–ರಾಮಜನ್ಮಭೂಮಿ ನಿವೇಶನ ವಿವಾದದ ತೀರ್ಪು ಬಂದ ನಂತರ ಯೋಜನೆಯನ್ನು ಬದಲಿಸಲಾಯಿತು. ಈಗ ಪೀಠವೂ ಸೇರಿ 221 ಮೀಟರ್ ಎತ್ತರದ ಪ್ರತಿಮೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಪ್ರತಿಮೆಯ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ.
ವಿಮಾನ ನಿಲ್ದಾಣಕ್ಕೆ ₹ 400 ಕೋಟಿ
ಅಯೋಧ್ಯೆಯಲ್ಲಿ ಪ್ರಸಕ್ತ ಇರುವ ಸಣ್ಣ ವಿಮಾನ ನಿಲ್ದಾಣವನ್ನು ಉನ್ನತೀಕರಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಉತ್ತರಪ್ರದೇಶ ಸರ್ಕಾರ ಈಗಾಗಲೇ ₹ 400 ಕೋಟಿ ಬಿಡುಗಡೆ ಮಾಡಿದೆ.
ಪ್ರಸಕ್ತ ಇರುವ 1.5 ಕಿ.ಮೀ. ಉದ್ದ ಹಾಗೂ 30 ಮೀ. ಅಗಲದ ಏರ್‌ಸ್ಟ್ರಿಪ್ ಅನ್ನು ದೊಡ್ಡ ವಿಮಾನಗಳ ಕಾರ್ಯಾಚರಣೆಗೂ ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸಲಾಗುವುದು. ಒಟ್ಟಾರೆ ಯೋಜನೆಗೆ 465 ಎಕರೆ ಭೂಮಿ ಅಗತ್ಯವಿದೆ.
ರೈಲು ನಿಲ್ದಾಣಕ್ಕೆ ಹೊಸರೂಪ
ಅಯೋಧ್ಯೆ ರೈಲು ನಿಲ್ದಾಣದ ಆಧುನೀಕರಣ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಮಂದಿರದ ಮಾದರಿಯಲ್ಲಿಯೇ ರೈಲು ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. 2021ರ ಜೂನ್ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ. ಅಭಿವೃದ್ಧಿ ಕಾಮಗಾರಿ ಎರಡು ಹಂತದಲ್ಲಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಹಾಗೂ ಮೂರು ಪ್ಲಾಟ್‌ಫಾರ್ಮ್ ಅಭಿವೃದ್ಧಿ.
ನಿಲ್ದಾಣ ಆಧುನೀಕರಣ ಕಾಮಗಾರಿಗೆ ಬಜೆಟ್‌ನಲ್ಲಿ ₹ 80 ಕೋಟಿ ಮೀಸಲಿಡಲಾಗಿತ್ತು. ಅದನ್ನು ಆನಂತರ ₹ 104 ಕೋಟಿಗೆ ಹೆಚ್ಚಿಸಲಾಗಿದೆ.
ಏನೇನು ಸೌಲಭ್ಯ?: ಈಗಿರುವ ನಿರೀಕ್ಷಣಾ ಕೊಠಡಿಯ ವಿಸ್ತರಣೆ, ಹವಾನಿಯಂತ್ರಣ ವ್ಯವಸ್ಥೆಯ ಮೂರು ನಿರೀಕ್ಷಣಾ ಕೊಠಡಿಗಳು, ಪುರುಷರಿಗಾಗಿ 17 ಹಾಸಿಗೆಗಳ ಡಾರ್‌ಮೆಟ್ರಿ, ಮಹಿಳೆಯರಿಗಾಗಿ 10 ಹಾಸಿಗೆಗಳ ಡಾರ್‌ಮೆಟ್ರಿ, ಶೌಚಾಲಯಗಳು, ಒಂದು ಪ್ರವಾಸಿ ಕೇಂದ್ರ, ಟ್ಯಾಕ್ಸಿ ಬೂತ್, ವಿಐಪಿ ಲಾಂಜ್, ಸಭಾಂಗಣ ಹಾಗೂ ವಿಶೇಷ ಅತಿಥಿ ಗೃಹಗಳು ಇಲ್ಲಿ ನಿರ್ಮಾಣವಾಗಲಿವೆ.
ಈವರೆಗಿನ ಕೆಲಸ
* ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದ ನಂತರ 20ಕ್ಕೂ ಹೆಚ್ಚುಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದಾರೆ
* ಫೈಜಾಬಾದ್ ಜಿಲ್ಲೆಯ ಹೆಸರನ್ನು ‘ಅಯೋಧ್ಯೆ’ ಎಂದು 2018ರಲ್ಲಿ ಬದಲಿಸಲಾಗಿದೆ
* ನಗರವನ್ನು ಮಹಾನಗರಪಾಲಿಕೆಯಾಗಿ ಉನ್ನತೀಕರಿಸಲಾಗಿದೆ
* ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ಐದು ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲಾಗಿದೆ
* ಸುಮಾರು ₹350 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ
ಮುಂದಿನ ಯೋಜನೆ
* ಸರಯೂ ನದಿ ತೀರದಲ್ಲಿ ರಾಮನ ಕಂಚಿನ ಭವ್ಯ ಮೂರ್ತಿ ಸ್ಥಾಪನೆ
* ರಾಮಮಂದಿರದಿಂದ ಸರಯೂ ತೀರದ ಮೂರ್ತಿಯವರೆಗೆ ‘ರಾಮ ಕಾರಿಡಾರ್’ ನಿರ್ಮಾಣ
* ಅಯೋಧ್ಯೆ– ಫೈಜಾಬಾದ್ ಮಧ್ಯೆ ₹1,200 ಕೋಟಿ ವೆಚ್ಚದಲ್ಲಿ ‘ನವ್ಯ ಅಯೋಧ್ಯಾ’ ಟೌನ್‌ಷಿಪ್ ನಿರ್ಮಾಣ
* 6 ಪಂಚತಾರಾ ಹೋಟೆಲ್, 7 ತ್ರಿತಾರಾ ಹೋಟೆಲ್‌ಗಳು ಮತ್ತು 4000 ಧರ್ಮಶಾಲೆಗಳ ನಿರ್ಮಾಣ
* ಪ್ರಮುಖ ರಸ್ತೆಗಳ ಅಗಲೀಕರಣ, ಸಾರಿಗೆ, ಮೂಲಸೌಲಭ್ಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ
* ಅಯೋಧ್ಯೆಯ ಎಲ್ಲಾ ಮಠ–ಮಂದಿರ, ಬಡಾವಣೆಗಳ ನವೀಕರಣ
* ರಾಮ ಮಂದಿರ ಸಂಕೀರ್ಣದಲ್ಲಿ ಈಗ ಇರುವ 9 ದೇವಾಲಯಗಳನ್ನು ಕೆಡವಲಾಗುತ್ತದೆ. ನೂತನ ಸಂಕೀರ್ಣದಲ್ಲಿ ಇಷ್ಟೂ ದೇವಾಲಯಗಳನ್ನು ನಿರ್ಮಿಸಲಾಗುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.