ADVERTISEMENT

ಆಳ–ಅಗಲ | ಅಂಜನಾದ್ರಿ: ಹನುಮನ ತವರಲ್ಲಿ ಅಭಿವೃದ್ಧಿಗೆ ಗರ

ಅಂಜನಾದ್ರಿ: ಪ್ರಮುಖ ಪ್ರವಾಸಿ ಹಾಗೂ ಐತಿಹಾಸಿಕ ತಾಣ; ಮೂಲಸೌಕರ್ಯಗಳು ಗೌಣ

ಪ್ರಮೋದ ಕುಲಕರ್ಣಿ
Published 1 ಡಿಸೆಂಬರ್ 2025, 23:30 IST
Last Updated 1 ಡಿಸೆಂಬರ್ 2025, 23:30 IST
ಅಂಜನಾದ್ರಿ ಬೆಟ್ಟದ ವಿಹಂಗಮ ನೋಟ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಅಂಜನಾದ್ರಿ ಬೆಟ್ಟದ ವಿಹಂಗಮ ನೋಟ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ   
ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟವು ಹನುಮ ಜನಿಸಿದ ಸ್ಥಳ ಎಂದೇ ಪ್ರಸಿದ್ಧವಾಗಿದೆ. ಅಂಜನಾದ್ರಿಯಲ್ಲಿ ಮಂಗಳವಾರ (ಡಿ.2) ಹಾಗೂ ಬುಧವಾರ (ಡಿ.3) ಹನುಮಮಾಲೆ ವಿಸರ್ಜನೆ ನಡೆಯಲಿದೆ. ರಾಜ್ಯ ಹಾಗೂ ಹೊರರಾಜ್ಯಗಳ ಭಕ್ತರು ಬೆಟ್ಟದ ಮೇಲಿನ ಆಂಜನೇಯನ ಸನ್ನಿಧಿಯಲ್ಲಿ ಮಾಲೆ ವಿಸರ್ಜನೆ ಮಾಡುತ್ತಾರೆ. ಉತ್ತರ ಭಾರತದಿಂದಲೂ ಅನೇಕ ಭಕ್ತರು ಬೆಟ್ಟಕ್ಕೆ ಬರುತ್ತಾರೆ. ಆದರೆ, ಐತಿಹಾಸಿಕ ಮಹತ್ವ ಇರುವ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ಪ್ರಮುಖವಾಗಿರುವ ಅಂಜನಾದ್ರಿಯು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಸೂಕ್ತ ಸೌಕರ್ಯಗಳನ್ನು ಕಲ್ಪಿಸಿದರೆ, ಅಂಜನಾದ್ರಿಯು ಕಲ್ಯಾಣ ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳವಾಗಿ ಅಭಿವೃದ್ಧಿ ಹೊಂದುವ ಎಲ್ಲ ಸಾಧ್ಯತೆಗಳೂ ಇವೆ

ರಾಮಾಯಣದ ಐತಿಹ್ಯ ಹೊಂದಿರುವ ಕಿಷ್ಕಿಂಧೆ ಪ್ರದೇಶದಲ್ಲಿರುವ ಅಂಜನಾದ್ರಿ ಬೆಟ್ಟವು ಹನುಮ ಜನಿಸಿದ ಸ್ಥಳ ಎನ್ನುವ ನಂಬಿಕೆ ಇದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಿಕ್ಕರಾಂಪುರ ಗ್ರಾಮ ಸಮೀಪದ ಅಂಜನಾದ್ರಿ ಬೆಟ್ಟಕ್ಕೆ ಹನುಮಂತನ ತಾಯಿ ಅಂಜನಾದೇವಿಯಿಂದಲೇ ಈ ಹೆಸರು ಬಂದಿದೆ ಎನ್ನುವ ಪ್ರತೀತಿಯಿದೆ. ಜತೆಗೆ, ಬೆಟ್ಟದ ಸುತ್ತಲೂ ಇರುವ ರಮಣೀಯ ಪರಿಸರವು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಸಮೀಪದಲ್ಲಿಯೇ ವಿಶಾಲವಾಗಿ ಹರಿಯುವ ತುಂಗಭದ್ರಾ ನದಿ, ಹಸಿರಿನಿಂದ ಕಂಗೊಳಿಸುವ ಪ್ರಕೃತಿ, ಬೆಟ್ಟವೇರಿದರೆ ಕಾಣುವ ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳು, ವಾನರ ಚಿನ್ನಾಟ, ಸೂರ್ಯೋದಯ, ಸೂರ್ಯಾಸ್ತದ ಸೊಬಗು ಕಣ್ತುಂಬಿಕೊಳ್ಳಲು ಇರುವ ಅವಕಾಶ, ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಬೆಟ್ಟಗಳ ಸಾಲು ಜನರನ್ನು ಮತ್ತೆ ಮತ್ತೆ ಅಂಜನಾದ್ರಿಗೆ ಬರುವಂತೆ ಪ್ರೇರೇಪಿಸುತ್ತವೆ.

ಪಂಪಾ ಸರೋವರ, ಆನೆಗೊಂದಿ, ನವವೃಂದಾವನ ಗಡ್ಡೆ, ಋಷ್ಯಮುಖ ಪರ್ವತ, ವಿಜಯನಗರ ಕಾಲದ ಪ್ರಮುಖ ರಾಜ ಕೃಷ್ಣದೇವರಾಯನ ಸಮಾಧಿ ಸ್ಥಳವಾದ 64 ಸಾಲುಗಳ ಕಲ್ಲಿನ ಮಂಟಪ, ಗಗನ್‌ ಮಹಲ್‌, ಚಿಂತಾಮಣಿ, ತಳವಾರಘಟ್ಟ, ರಂಗನಾಥಸ್ವಾಮಿ ದೇವಸ್ಥಾನ, ಹುಚ್ಚಪ್ಪನ ಮಠ, ಬಾಳೆನಾರಿನ ಕರಕುಶಲ ಕೇಂದ್ರ, ಸಾಣಾಪುರ ಫಾಲ್ಸ್‌, ಆನೆಗೊಂದಿ ಕೋಟೆ, ದುರ್ಗಾದೇವಿ ದೇವಸ್ಥಾನ, ಬೆಟ್ಟದ ಮೇಲಿರುವ ಬಾಲಾಂಜನೇಯ ದೇವಸ್ಥಾನ ಹೀಗೆ ಅನೇಕ ಐತಿಹಾಸಿಕ ಸ್ಥಳಗಳು ಅಂಜನಾದ್ರಿ ಸಮೀಪದಲ್ಲಿವೆ. ಇವು ಪ್ರವಾಸಪ್ರಿಯರಿಗೆ ಅಚ್ಚುಮೆಚ್ಚಿನ ಪ್ರದೇಶಗಳಾಗಿವೆ. ಉತ್ತರ ಭಾರತದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಇಷ್ಟೆಲ್ಲ ಮಹತ್ವ ಪಡೆದಿರುವ ಅಂಜನಾದ್ರಿ ಕ್ಷೇತ್ರವು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಯಲ್ಲಿದೆ.

ಸೌಲಭ್ಯಗಳ ಕೊರತೆ:

ಪ್ರತಿ ವಾರಾಂತ್ಯದ ದಿನಗಳಂದು ಅಂಜನಾದ್ರಿ ಬೆಟ್ಟವೇರಲು 575 ಮೆಟ್ಟಿಲುಗಳ ಮೇಲೂ ಜನ ಸರತಿಯಲ್ಲಿ ನಿಲ್ಲುತ್ತಾರೆ. ಶನಿವಾರ ಭಕ್ತರ ಸಂಖ್ಯೆ ತುಸು ಹೆಚ್ಚೇ ಇರುತ್ತದೆ. ಪ್ರತಿವರ್ಷ ಹನುಮಮಾಲೆ ವಿಸರ್ಜನೆ ಮತ್ತು ಹನುಮ ಜಯಂತಿ ದಿನಗಳಂದು ರಾಜ್ಯ ಹಾಗೂ ಹೊರರಾಜ್ಯಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನ ಬರುತ್ತಾರೆ. ಬೆಟ್ಟವು ನೆಲಮಟ್ಟದಿಂದ ಸುಮಾರು 550 ಅಡಿ ಎತ್ತರದಲ್ಲಿದ್ದು, ಬೆಟ್ಟದ ಮೇಲಿರುವ ಆಂಜನೇಯನ ಮೂರ್ತಿಯ ದರ್ಶನ ಪಡೆಯಲು ಭಕ್ತರು ಮೆಟ್ಟಿಲುಗಳನ್ನು ಏರುವುದು ಅನಿವಾರ್ಯ. ಬೆಟ್ಟವೇರುವ ಮಾರ್ಗದಲ್ಲಿ ಅಸ್ವಸ್ಥರಾಗಿ ವಯಸ್ಕರೂ ಸೇರಿದಂತೆ ಹಲವರು ಪ್ರಾಣ ಕಳೆದುಕೊಂಡ ಘಟನೆಗಳು ಈ ಹಿಂದೆ ನಡೆದಿವೆ. ಅಂಥ ದುರ್ಘಟನೆಗಳು ನಡೆದಾಗ ತಕ್ಷಣವೇ ತುರ್ತು ಚಿಕಿತ್ಸೆಗೆ ವ್ಯವಸ್ಥೆಯಾಗಬೇಕಿದೆ. ಬೆಟ್ಟವೇರುವ ಮಾರ್ಗದಲ್ಲಿ ಕುಡಿಯುವ ನೀರು, ತುರ್ತು ಚಿಕಿತ್ಸೆಗೆ ವೈದ್ಯಕೀಯ ಸೌಲಭ್ಯ, ಬೆಟ್ಟವೇರಲು ದೈಹಿಕವಾಗಿ ಸಾಧ್ಯವಾಗದಿರುವವರಿಗೆ ರೋಪ್‌ ವೇ, ಉಳಿದುಕೊಳ್ಳಲು ಕೊಠಡಿಗಳು ತುರ್ತಾಗಿ ನಿರ್ಮಾಣವಾಗಬೇಕಾಗಿವೆ.

ADVERTISEMENT

ರಾಜ್ಯ ಸರ್ಕಾರ ಪ್ರವಾಸಿಗರ ಅನುಕೂಲಕ್ಕೆ ಅಂಜನಾದ್ರಿ ಬೆಟ್ಟಕ್ಕೆ ಕೇಬಲ್‌ ಕಾರ್ ಸೌಲಭ್ಯ ಆರಂಭಿಸುವ ಭರವಸೆ ನೀಡಿದ್ದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಶೌಚಾಲಯಗಳು, ಯಾತ್ರಿ ನಿವಾಸ, ವಾಣಿಜ್ಯ ಮಳಿಗೆ ಕಾಮಗಾರಿ ಮಾತ್ರ ಪ್ರಗತಿಯಲ್ಲಿವೆ.

ಅಂಜನಾದ್ರಿ ಮೂರ್ತಿ
ಹಣ ಇದ್ದರೂ, ಆಗಿಲ್ಲ ಪ್ರಗತಿ:
ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ 2022–23ರ ಬಜೆಟ್‌ನಲ್ಲಿ ₹100 ಕೋಟಿ ಘೋಷಣೆ ಮಾಡಿತ್ತು. ಕಾಂಗ್ರೆಸ್‌ ಸರ್ಕಾರವೂ ಕಳೆದ ವರ್ಷದ ಬಜೆಟ್‌ನಲ್ಲಿ ₹100 ಕೋಟಿ ಘೋಷಣೆ ಮಾಡಿದೆ. 2023ರ ಮಾರ್ಚ್‌ನಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿ ಕಾರ್ಯಗಳಿಗೆ ಅಂಜನಾದ್ರಿಯಲ್ಲಿ ಚಾಲನೆ ಕೊಟ್ಟಿದ್ದರೂ ಪ್ರಸ್ತುತ ₹17.15 ಕೋಟಿ ವೆಚ್ಚದ ಕಾಮಗಾರಿಗಳು ಮಾತ್ರ ನಡೆಯುತ್ತಿದ್ದು, ಅವೂ ಮಂದಗತಿಯಲ್ಲಿ ಸಾಗಿವೆ. ಭಕ್ತರಿಂದ ಸಂಗ್ರಹವಾದ ದೇಣಿಗೆ ಮೊತ್ತವೇ ಪ್ರಸ್ತುತ ₹8.07 ಕೋಟಿ ಇದ್ದರೂ ಭಕ್ತರಿಗೆ ಮೂಲಸೌಲಭ್ಯದ ಕೊರತೆ ಕಾಡುತ್ತಿದೆ.

ವರ್ಷದಿಂದ ವರ್ಷಕ್ಕೆ ಈ ಕ್ಷೇತ್ರದ ಖ್ಯಾತಿ ಹೆಚ್ಚಾಗುತ್ತಲೇ ಸಾಗಿದ್ದು, ಭಕ್ತರ ಸಂಖ್ಯೆ ಏರುತ್ತಲೇ ಇದೆ. ಪ್ರತಿ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳಿಗೆ ಅಂಜನಾದ್ರಿಯ ಹನುಮಂತನ ಕ್ಷೇತ್ರವು ಮತಗಳಿಕೆಗೆ ವಸ್ತುವಾಗುತ್ತಿದೆ. ರಾಜಕೀಯ ನಾಯಕರು ಮತಬೇಟೆಯ ಫಸಲು ಗಿಟ್ಟಿಸಿಕೊಳ್ಳಲು ‘ಅಂಜನಾದ್ರಿ ಅಭಿವೃದ್ಧಿಗೆ ಆದ್ಯತೆ’ ಎನ್ನುವ ಹೇಳಿಕೆಯ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಆದರೆ, ಅಭಿವೃದ್ಧಿ ಮಾತ್ರ ನಿರೀಕ್ಷೆಯಂತೆ ಆಗಿಲ್ಲ ಎನ್ನುವ ಬೇಸರ ಜನರಲ್ಲಿದೆ.

ಅಂಜನಾದ್ರಿ ಬೆಟ್ಟದಲ್ಲಿ ಭಕ್ತರ ನೋಟ

ಮಾಲೆ ವಿಸರ್ಜನೆ: ಇಂದು, ನಾಳೆ

ಅಂಜನಾದ್ರಿ ಬೆಟ್ಟದಲ್ಲಿ ಮಂಗಳವಾರ (ಡಿ. 2) ಹಾಗೂ ಬುಧವಾರ (ಡಿ.3) ಹನುಮಮಾಲೆ ವಿಸರ್ಜನೆ ನಡೆಯಲಿದೆ. ತಮ್ಮ ಸಂಕಲ್ಪಕ್ಕೆ ಅನುಗುಣವಾಗಿ ಕೇಸರಿ ಬಣ್ಣದ ಬಟ್ಟೆ ಹಾಗೂ ಕೊರಳಲ್ಲಿ ತುಳಸಿ ಮಾಲೆ ಧರಿಸುವ ಭಕ್ತರು ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದು ಬೆಟ್ಟದ ಮೇಲಿನ ಆಂಜನೇಯನ ಸನ್ನಿಧಿಯಲ್ಲಿ ಮಾಲೆ ವಿಸರ್ಜನೆ ಮಾಡುತ್ತಾರೆ. ದೂರದ ಊರುಗಳಿಂದ ಪಾದಯಾತ್ರೆ ಬರುವುದು ಸಾಮಾನ್ಯ.

ಅಲಂಕೃತ ಅಂಜನಾದ್ರಿ ಮೂರ್ತಿ

ಕಾಂಕ್ರೀಟ್‌ಮಯವಾಗುವ ಆತಂಕ

ಸುತ್ತಲಿನ ಪರಿಸರ ಸುಂದರವಾಗಿರುವ ಕಾರಣಕ್ಕಾಗಿಯೇ ಅಂಜನಾದ್ರಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಈಗ ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ಸುತ್ತಲಿನ ಪ್ರದೇಶವನ್ನು ಕಾಂಕ್ರೀಟ್‌ಮಯವನ್ನಾಗಿ ಮಾಡಲಾಗುತ್ತದೆ ಎನ್ನುವ ಆತಂಕ ಜನರಲ್ಲಿದೆ.

ಬೆಟ್ಟದ ಸುತ್ತಲೂ ಖಾಸಗಿ ಕೃಷಿ ಭೂಮಿ ಹೆಚ್ಚಿದ್ದು ಅದರಲ್ಲಿ ಅಂಜನಾದ್ರಿ ಅಭಿವೃದ್ಧಿಗೆ 95 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಲು ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿದೆ. ಬಹಳಷ್ಟು ರೈತರು ಭೂಮಿ ನೀಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಾಥಮಿಕ ಭೂಸ್ವಾಧೀನ ವೆಚ್ಚಕ್ಕಾಗಿ ಸರ್ಕಾರ ₹29.51 ಕೋಟಿ ಮೀಸಲಿಟ್ಟಿದೆ. ಆದರೆ ಹಂಪಿ ವಿಶ್ವಪರಂಪರೆ ಪ್ರದೇಶದ ವ್ಯಾಪ್ತಿ ಮತ್ತು ಅರಣ್ಯ ಇಲಾಖೆ ಅಧೀನದಲ್ಲಿ ಒಂದಷ್ಟು ಭೂಮಿಯಿರುವುದು ಕೂಡ ಭೂಸ್ವಾಧೀನಕ್ಕೆ ಕಗ್ಗಂಟಾಗಿದೆ.

‘ಪ್ರಾಕೃತಿಕವಾಗಿ ಗಮನ ಸೆಳೆಯುವ ಅಂಜನಾದ್ರಿ ಬೆಟ್ಟದ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು’ ಎಂದು ಇತಿಹಾಸ ಸಂಶೋಧಕ, ಗಂಗಾವತಿಯ ಶರಣಬಸಪ್ಪ ಕೋಲ್ಕಾರ ಆಗ್ರಹಿಸುತ್ತಾರೆ.

ಉತ್ತರ ಭಾರತೀಯರಿಗೆ ಯಾಕೆ ಪವಿತ್ರ?

ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್‌ ರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಿಷ್ಕಿಂಧೆ ಪ್ರದೇಶವಾದ ಪಂಪಾ ಸರೋವರ, ಅಂಜನಾದ್ರಿ ಹಾಗೂ ಋಷ್ಯಮುಖ ಪರ್ವತಕ್ಕೆ ಭೇಟಿ ನೀಡುತ್ತಾರೆ. ಆಯೋಧ್ಯೆಯಲ್ಲಿ ರಾಮನ ದರ್ಶನ ಪಡೆದು ಅಂಜನಾದ್ರಿಯಲ್ಲಿ ಹನುಮನ ಸನ್ನಿಧಿಗೆ ಬಂದರಷ್ಟೇ ತೀರ್ಥಯಾತ್ರೆ ಪರಿಪೂರ್ಣ ಎನ್ನುವ ನಂಬಿಕೆ ಆ ರಾಜ್ಯಗಳ ಜನರಲ್ಲಿದೆ.

ತಿರುಪತಿ ತಿರುಮಲ, ಮಹಾರಾಷ್ಟ್ರದ ನಾಸಿಕ್‌ ಹಾಗೂ ಕೊಪ್ಪಳದ ಅಂಜನಾದ್ರಿ ಹೀಗೆ ಹನುಮಂತ ಎಲ್ಲಿ ಜನಿಸಿದ್ದಾನೆ ಎನ್ನುವ ಚರ್ಚೆ ಹಿಂದೆ ವ್ಯಾಪಕವಾಗಿದ್ದರಿಂದ ಆಯೋಧ್ಯೆಗೆ ತೆರಳಿದ ಭಕ್ತರು ಅಲ್ಲಲ್ಲಿ ಚದುರಿ ಹೋಗುತ್ತಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎನ್ನುವ ನಂಬಿಕೆ ಉತ್ತರ ಭಾರತೀಯರಲ್ಲಿ ಮೂಡಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

‘ಉತ್ತರ ಭಾರತೀಯರ ಮೇಲೆ ಹನುಮಾನ್‌ ಚಾಲೀಸ ಪ್ರಭಾವ ಬಹಳಷ್ಟಿದೆ. ಭಾರತದ ಶ್ರೇಷ್ಠ ಸರೋವರಗಳಲ್ಲಿ ಅಂಜನಾದ್ರಿ ಸಮೀಪದ ಪಂಪಾ ಸರೋವರವೂ ಒಂದಾಗಿದೆ. ರಾಮ ಪಂಪಾ ಸರೋವರಕ್ಕೆ ಬಂದಿದ್ದ ಐತಿಹ್ಯವಿದೆ. ಆದ್ದರಿಂದ ಬೇರೆ ರಾಜ್ಯಗಳ ಭಕ್ತರು ಪಂಪಾ ಸರೋವರಕ್ಕೆ ಬಂದು ಸ್ನಾನಮಾಡಿ ಅಂಜನಾದ್ರಿಗೆ ಬರುತ್ತಾರೆ. ರಾಮ ಹಾಗೂ ಹನುಮಂತ ಮೊದಲ ಬಾರಿಗೆ ಭೇಟಿಯಾದ ಅಂಜನಾದ್ರಿ ಮುಂಭಾಗದಲ್ಲಿರುವ ಋಷ್ಯಮುಖ ಪರ್ವತಕ್ಕೆ ಭೇಟಿ ನೀಡಿದ ಬಳಿಕವೇ ಉತ್ತರ ಭಾರತದ ಜನರ ತೀರ್ಥಯಾತ್ರೆ ಪೂರ್ಣಗೊಳ್ಳುತ್ತದೆ ಎಂದು ಗಂಗಾವತಿಯ ಉಪನ್ಯಾಸಕ ಗುಂಡೂರು ಪವನಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.