ADVERTISEMENT

ಆಳ ಅಗಲ | ಮಂಜಾದ ಕಣ್ಣುಗಳಲ್ಲಿ ಬತ್ತಿ ಹೋಗದ ಭರವಸೆ

ಸಂತೋಷ ಈ.ಚಿನಗುಡಿ
Published 18 ಮಾರ್ಚ್ 2025, 23:30 IST
Last Updated 18 ಮಾರ್ಚ್ 2025, 23:30 IST
<div class="paragraphs"><p>ಬೆಳಗಾವಿ ಜಿಲ್ಲಾ ಆಸ್ಪತ್ರೆಯ ನಿರ್ಗತಿಕರ ವಾರ್ಡಿನಲ್ಲಿ ಆಶ್ರಯ ಪಡೆದ, ಗದಗ ಜಿಲ್ಲೆಯ ಹುಲಕೋಟಿಯ ಪರಶುರಾಮ ಲಕ್ಷ್ಮಣಸಾ ಹಬೀಬ್‌ </p></div>

ಬೆಳಗಾವಿ ಜಿಲ್ಲಾ ಆಸ್ಪತ್ರೆಯ ನಿರ್ಗತಿಕರ ವಾರ್ಡಿನಲ್ಲಿ ಆಶ್ರಯ ಪಡೆದ, ಗದಗ ಜಿಲ್ಲೆಯ ಹುಲಕೋಟಿಯ ಪರಶುರಾಮ ಲಕ್ಷ್ಮಣಸಾ ಹಬೀಬ್‌

   

–‍ಪ್ರಜಾವಾಣಿ ಚಿತ್ರ

ಬೆಳಗಾವಿ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ನಿರ್ಗತಿಕರ ವಾರ್ಡಿಗೆ ಕಾಲಿಟ್ಟರೆ ಸಾಕು; ನೂರಾರು ಜೀವಗಳ ಕಣ್ಣೀರ ಕಥೆಗಳು ಬಿಚ್ಚಿಕೊಳ್ಳುತ್ತವೆ. ಮಕ್ಕಳು, ಪಾಲಕರು, ಬಂಧುಗಳು, ಸ್ನೇಹಿತರು, ಆಸ್ತಿ ಇದ್ದೂ ‘ನಿರ್ಗತಿಕ’ ಎಂಬ ಹಣೆಪಟ್ಟಿ ಕಟ್ಟಿಕೊಂಡವರು ಇವರು. ವರ್ಷಗಳೇ ಉರುಳಿವೆ. ಇಂದಲ್ಲ ನಾಳೆ ನಮ್ಮವರು ಬರುತ್ತಾರೆ, ಮರಳಿ ಊರಿಗೆ ಕರೆದುಕೊಂಡು ಹೋಗುತ್ತಾರೆ ಎಂದು ಭರವಸೆಯ ಕಣ್ಣುಗಳು ಈಗಲೂ ಕಿಟಕಿಯ ಆಚೆಗೆ ನೋಡುತ್ತಲೇ ಇವೆ.

ADVERTISEMENT

ಈ ವಾರ್ಡಿನಲ್ಲಿ ಹಣ್ಣು– ಹಣ್ಣಾದ ಹಿರಿಯರಿದ್ದಾರೆ, ಗೃಹಿಣಿಯರಿದ್ದಾರೆ, ಮತಿಭ್ರಮಣೆ ಆದವರಿದ್ದಾರೆ; ತಾನ್ಯಾರು– ಎಲ್ಲಿಯವ ಎಂಬುದರ ಅರಿವಿಲ್ಲದವರೂ ಇದ್ದಾರೆ. ಬದುಕಿನ ಕೊನೆಯ ದಿನಗಳನ್ನು ನೆಮ್ಮದಿಯಿಂದ ಕಳೆಯಬೇಕಿದ್ದ ಅಜ್ಜ– ಅಜ್ಜಿ ಯರಂತೂ ಮನಲ್ಲಿ ನೋವು ತುಂಬಿಕೊಂಡು ಬದುಕುತ್ತಿದ್ದಾರೆ.

‘ಪ್ರಜಾವಾಣಿ’ ಪ್ರತಿನಿಧಿ ವಾರ್ಡಿಗೆ ಕಾಲಿಟ್ಟ ತಕ್ಷಣ ಬಹುಪಾಲು ಜನ ಥಟ್ಟೆಂದು ಎದ್ದು ಕುಳಿತರು. ಕಣ್ಣು–ಕಣ್ಣು ಬಿಟ್ಟು ದಿಟ್ಟಿಸಿದರು. ನಮ್ಮವರೇ ಯಾರೋ ಬಂದಿದ್ದಾರೇನೋ ಎಂಬ ಆಸೆಯ ಹೊನಲು ಕಣ್ಣಾಲಿಗಳಲ್ಲಿ ಚಿಮ್ಮಿತು.

‘ಇಲ್ಲಿ ಹೀಗೇ ಸರ್. ಯಾರೇ ಬಂದರೂ ನಮ್ಮವರೇ ಬಂದರು ಎಂಬ ಆಸೆಯಿಂದ ನೋಡುತ್ತಾರೆ. ನಿಮ್ಮವರಲ್ಲ ಎಂದು ಹೇಳಿದರೂ ಕೇಳುವುದಿಲ್ಲ. ಖುದ್ದಾಗಿ ನೋಡಿದ ಮೇಲೆಯೇ ನಂಬುತ್ತಾರೆ. ಕೆಲವರು ವರ್ಷ, ಮತ್ತೆ ಕೆಲವರು ಮೂರು ವರ್ಷ, ಐದು ವರ್ಷಗಳಿಂದ ಇಲ್ಲೇ ಇದ್ದಾರೆ. ಆದರೆ, ಭರವಸೆ ಕಮರಿಲ್ಲ’ ಎಂದರು ಆಸ್ಪತ್ರೆಯ ಸಿಬ್ಬಂದಿ ವಿಶಾಲ್‌ ತಾಕಡೆ. ಒಬ್ಬೊಬ್ಬರದೂ ಒಂದೊಂದು ಮನಕಲಕುವ ಕಥೆ. ಕರುಳಬಳ್ಳಿಗಳೇ ಕನಿಷ್ಠ ಕಕ್ಕುಲಾತಿ ಇಲ್ಲದೇ ಇಲ್ಲಿ ಬಿಟ್ಟು ಹೋದ ಕಥೆಗಳನ್ನು ಹೇಳಿದರು.

‘ನಾನಿಲ್ಲಿ ಇರುವುದು ನನ್ನ ಮಗನಿಗೆ ಗೊತ್ತೇ ಇಲ್ಲ. ಗೊತ್ತಿದ್ದರೆ ಓಡಿ ಬರುತ್ತಿದ್ದ. ಮಗನಿಗೆ ಸುದ್ದಿ ಮುಟ್ಟಿಸಿ’ ಎಂದು ಕೈ ಮುಗಿಯುವ ಗದಗ ಜಿಲ್ಲೆಯ ಹುಲಕೋಟಿಯ ಪರಶುರಾಮ ಲಕ್ಷ್ಮಣಸಾ ಹಬೀಬ್‌ ಅವರನ್ನು ಅವರ ಮಗನೇ ಇಲ್ಲಿ ಬಿಟ್ಟುಹೋಗಿದ್ದಾನೆ!

152 ಜನರ ಸ್ಥಳಾಂತರ:

‘ಎರಡು ವರ್ಷಗಳಲ್ಲಿ ದಾಖಲಾಗಿದ್ದ 152 ನಿರ್ಗತಿಕರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದೇವೆ. ಈ ಪೈಕಿ ಶೇ 60ರಷ್ಟು ಹಿರಿಯ ನಾಗರಿಕರೇ ಇದ್ದಾರೆ. ಸುರಕ್ಷಿತವಾಗಿ ಮನೆ ಮತ್ತು ವೃದ್ಧಾಶ್ರಮಗಳಿಗೆ ಅವರನ್ನು ತಲುಪಿಸಿದ್ದೇವೆ. ಆದರೆ, ಬಹಳಷ್ಟು ಜನರನ್ನು ಅವರ ಮಕ್ಕಳು ಕರೆದುಕೊಂಡು ಹೋಗಲು ಬಂದಿಲ್ಲ. ನಾವಾಗಿಯೇ ವಿಳಾಸ ಹುಡುಕಿ ಹೇಳಿದ್ದೇವೆ. ಮೊಬೈಲ್‌ ಕರೆ ಮಾಡಿ ತಿಳಿಸಿದ್ದೇವೆ. ನಮಗೆ ಏನೂ ಸಂಬಂಧ ಇಲ್ಲ ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಮೊಬೈಲ್‌ ಅನ್ನೇ ಸ್ವಿಚ್‌ಆಫ್‌ ಮಾಡಿಕೊಳ್ಳುತ್ತಾರೆ’ ಎಂದು ಜಿಲ್ಲಾಸ್ಪತ್ರೆಯ ಸ್ಥಳೀಯ ವೈದ್ಯಾಧಿಕಾರಿ ಡಾ.ಸರೋಜಾ ತಿಗಡಿ ಹೇಳಿದರು.

‘ರೈಲು ನಿಲ್ದಾಣ, ಬಸ್‌ ನಿಲ್ದಾಣ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದವರನ್ನು ಪೊಲೀಸರು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕರು ಆಸ್ಪತ್ರೆಗೆ ಕರೆತಂದು ದಾಖಲಿಸುತ್ತಾರೆ. ಕೆಲ ಕುಟುಂಬಸ್ಥರೇ ಆಸ್ಪತ್ರೆಗೆ ಬಂದು ಬಿಟ್ಟು ಹೋಗುತ್ತಾರೆ. ಅಂಥವರಿಗೆ ಚಿಕಿತ್ಸೆ ನೀಡಿದ ನಂತರ, ಕುಟುಂಬಸ್ಥರನ್ನು ಸಂಪರ್ಕಿಸಿ ಕಳುಹಿಸುತ್ತೇವೆ. ಯಾರೂ ಬಾರದಿದ್ದರೆ ವೃದ್ಧಾಶ್ರಮಕ್ಕೆ ಸೇರಿಸುತ್ತೇವೆ’ ಎಂದರು.

‘60ಕ್ಕೂ ಅಧಿಕ ರೋಗಿಗಳನ್ನು ಅವರ ಮಕ್ಕಳು ಮತ್ತು ಕುಟುಂಬದವರೇ ಇಲ್ಲಿಗೆ ಕರೆತಂದು ಬಿಟ್ಟುಹೋಗಿರುವುದು ಗಮನಕ್ಕೆ ಬಂದಿದೆ. ಕುಟುಂಬದವರನ್ನು ಸಂಪರ್ಕಿಸಿದರೂ ಬಾರದ್ದರಿಂದ ಬೆಳಗಾವಿ, ಬೈಲಹೊಂಗಲ ಮತ್ತು ಗದುಗಿನ ವೃದ್ಧಾಶ್ರಮಗಳಿಗೆ ಸೇರಿಸಿದ್ದೇವೆ’ ಎಂದರು.

ಮತಿಭ್ರಮಣೆಯಿಂದ ಬಂದವರು, ವಯೋಸಹಜ ಮರೆವಿನಿಂದ ದಾಖಲಾದವರೂ ಇದ್ದಾರೆ. ಗುಣಮುಖರಾದ ಬಳಿಕ ಯಾರೂ ಕರೆದುಕೊಂಡು ಹೋಗಿಲ್ಲ. ಕೆಲವೊಮ್ಮೆ ವೃದ್ಧಾಶ್ರಮದವರೂ ಕರೆದೊಯ್ಯುವುದಿಲ್ಲ. ಹಲವು ರೀತಿಯ ತಕರಾರು ತೆಗೆಯುತ್ತಾರೆ. ಇಂಥ 27 ಜನ ಇನ್ನೂ ಈ ವಾರ್ಡಿನಲ್ಲಿದ್ದಾರೆ ಎನ್ನುತ್ತಾರೆ ಸಿಬ್ಬಂದಿ.

ಇಲ್ಲಿರುವ ನಿರ್ಗತಿಕ ವೃದ್ಧಜೀವಗಳಿಗೆ ವಿಶಾಲ್‌ ತಾಕಡೆ, ದುರ್ಗವ್ವ ಹಂಡೋರಿ ಹಾಗೂ ಸಿಬ್ಬಂದಿಯೇ ತಂದೆ–ತಾಯಿ– ಮಕ್ಕಳು ಎಲ್ಲವೂ ಆಗಿದ್ದಾರೆ.

ಪೂರಕ ಮಾಹಿತಿ: ಪ್ರಮೋದ ಕುಲಕರ್ಣಿ

ಮಗನ ನಿರೀಕ್ಷೆಯಲ್ಲಿ...

ಮಹಾರಾಷ್ಟ್ರದ ಹಲಕರ್ಣಿ ಎಂಬ ಊರಿನ ಪಾರ್ವತಿ (70 ವರ್ಷ) ಎಂಬ ಅಜ್ಜಿ ಈ ವಾರ್ಡ್‌
ನಲ್ಲಿದ್ದಾರೆ. ಮಕ್ಕಳು ಅವರನ್ನು ಮನೆಯಿಂದ ಕರೆತಂದು ಬಿಟ್ಟುಹೋದವರು ಮರಳಿ ಬಂದಿಲ್ಲ. ಪೊಲೀಸರ ಪ್ರಯತ್ನದ ಬಳಿಕ ಅವರ ಮಗ ಒಮ್ಮೆ ಬಂದು ನೋಡಿಕೊಂಡು ಹೋದ. ‘ಮನೆಯಲ್ಲಿ ಮದುವೆ ಕಾರ್ಯವಿದೆ. ಈಕೆಗೆ ಹುಚ್ಚು ಹಿಡಿದಿದ್ದು ಗೊತ್ತಾದರೆ ಮದುವೆ ನಿಂತು ಹೋಗುತ್ತದೆ. ಮದುವೆ ನಂತರ ಕರೆದುಕೊಂಡು ಹೋಗುತ್ತೇನೆ’ ಎಂದು ಹೇಳಿ ಹೋದ.

ಮಗ ಹೋಗುವಾಗ ತಾಯಿ ದೈನೇಸಿಯಿಂದ ‘ಟಾಟಾ’ ಮಾಡಿದ್ದಳು. ನಂತರ ಮೊಬೈಲ್‌ ನಂಬರ್‌ ಬದಲಾಯಿಸಿಕೊಂಡ ಮಗ ಇನ್ನೂ ಬಂದೇ ಇಲ್ಲ. ಈಗಲೂ ಆ ಹಿರಿಯ ಜೀವ ಮಗ ಬಿಟ್ಟುಹೋದ ವಾರ್ಡಿನ ಬಾಗಿಲು ಬಳಿಯೇ ನಿಂತು ಕಾಯುತ್ತಿದೆ.

‘ಬುದ್ಧಿವಾದ ಹೇಳುತ್ತೇವೆ’

‘ಮನೆಯಲ್ಲಿ ವೃದ್ಧ ತಂದೆ–ತಾಯಿ ಇದ್ದಾರೆ. ತಿಂಗಳಿಗೆ ಎಷ್ಟಾದರೂ ಶುಲ್ಕ ಪಾವತಿಸುತ್ತೇವೆ. ಅವರನ್ನು ಪಾಲನೆ ಮಾಡುವಂತೆ ಒಳ್ಳೆಯ ಉದ್ಯೋಗದಲ್ಲಿರುವ ಜನರು ಕರೆ ಮಾಡುತ್ತಾರೆ. ನಾವು ಅವರಿಗೆ ಬುದ್ಧಿವಾದ ಹೇಳುವ ಕೆಲಸ ಮಾಡುತ್ತೇವೆ’ ಎಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ವೃದ್ಧರ ಆರೈಕೆ ಕೇಂದ್ರ ನಡೆಸುತ್ತಿರುವ ಧಾರವಾಡದ ವೀರಭದ್ರ ಚಾರಿಟೆಬಲ್ ಟ್ರಸ್ಟ್ ಮುಖ್ಯಸ್ಥ ಈರಪ್ಪ ಬಿಳಿಜಾಡರ ಹೇಳಿದರು.

‘ಅನಾಥ, ನಿರ್ಗತಿಕ ವೃದ್ಧರನ್ನು ಮಾತ್ರ ನಾವು ಸಲಹುತ್ತೇವೆ. ದಿಕ್ಕುದೆಸೆಯಿಲ್ಲದ, ಭಾಷೆ ಗೊತ್ತಿಲ್ಲದೆ ಊರೂರು ಅಲೆಯುವ ವೃದ್ಧರಿಗೆ ವರ್ಷಾನುಗಟ್ಟಲೆ ಆರೈಕೆ ಮಾಡಲಾಗುತ್ತಿದೆ. ಸತ್ತರೆ ಅವರ ಅಂತ್ಯಕ್ರಿಯೆಯನ್ನು ನಡೆಸುತ್ತೇವೆ. ಆದರೆ, ಆರ್ಥಿಕವಾಗಿ ಸಬಲರಾಗಿದ್ದರೂ ಹೆತ್ತ ತಂದೆ–ತಾಯಿಯನ್ನು ಆರೈಕೆ ಮಾಡಿ ಎಂಬ ಕರೆ ಬಂದಾಗ ಮಾತ್ರ ಬೇಸರವಾಗುತ್ತದೆ’ ಎಂದರು.

‘ಯಲ್ಲಾಪುರದ ವೃದ್ಧಾಶ್ರಮದಲ್ಲಿ ನಿರ್ಗತಿಕ ವೃದ್ಧರ ನಡುವೆ ಪೊಲೀಸ್ ಅಧಿಕಾರಿಯೊಬ್ಬರ ತಂದೆಯನ್ನೂ ಆರೈಕೆ ಮಾಡಲಾಗುತ್ತಿದೆ. ಒಳ್ಳೆಯ ಹುದ್ದೆಯಲ್ಲಿದ್ದರೂ ತಂದೆಯನ್ನು ವೃದ್ಧಾಶ್ರಮಕ್ಕೆ ಕಳಿಸಿದ ಅಧಿಕಾರಿಗೆ ತಂದೆಯನ್ನು ಕರೆದುಕೊಂಡು ಹೋಗುವಂತೆ ಹಲವು ಬಾರಿ ಕೋರಲಾಗಿತ್ತು. ಆದರೆ, ಅವರ ಬಳಿ ಹೋಗಲು ತಂದೆಯೇ ಸಿದ್ಧರಿರಲಿಲ್ಲ’ ಎಂದು ಮಲ್ಲಿಕಾರ್ಜುನ ಜನಸೇವಾ ಸಂಘದ ಮುಖ್ಯಸ್ಥ ಮಲ್ಲಿಕಾರ್ಜುನ ಕೊತ್ ತಿಳಿಸಿದರು.

ಬೆಳಗಾವಿ ಜಿಲ್ಲಾಸ್ಪತ್ರೆಯ ನಿರ್ಗತಿಕರ ವಾರ್ಡಿನಲ್ಲಿ ಹಿರಿಯ ಜೀವಕ್ಕೆ ಆರೈಕೆ ಮಾಡಿದ ಸಿಬ್ಬಂದಿ ದುರ್ಗವ್ವ ಹಂಡೋರಿ ‍ಪ್ರಜಾವಾಣಿ ಚಿತ್ರ

7 ತಿಂಗಳಿಂದ ಆಸ್ಪತ್ರೆಯಲ್ಲಿ...

ಬಿ.ರಾಮಾಂಜನೇಯಲು ಎಂಬ 72 ವರ್ಷದ ವೃದ್ಧರನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯೇ ಏಳು ತಿಂಗಳಿಂದ ಆರೈಕೆ ಮಾಡುತ್ತಿದ್ದಾರೆ.

ಅವರು ಕಳೆದ ವರ್ಷದ ಜುಲೈನಲ್ಲಿ ಚಿಕಿತ್ಸೆಗೆಂದು ಬಂದಿದ್ದರು. ಆಗಾಗ, ಆಸ್ಪತ್ರೆಯಿಂದ ಒಬ್ಬರೇ ಹೋಗಿ ಬಂದು, ಹೋಗಿ ಬಂದು ಮಾಡುತ್ತಿದ್ದಾರೆ. ಫೆಬ್ರುವರಿ 14ರಂದು ಮರಳಿ ಬಂದವರು ಈಗಲೂ ಆಸ್ಪತ್ರೆಯಲ್ಲಿದ್ದಾರೆ. ಅವರಿಗೆ ಆಗಾಗ ಎದೆನೋವು ಕಾಣಿಸಿಕೊಳ್ಳುತ್ತದೆ. ವಿಪರೀತ ಮಂಡಿ ನೋವಿರುವ ಕಾರಣ ಒಬ್ಬರೇ ಓಡಾಡುವ ಸ್ಥಿತಿಯಲ್ಲಿಲ್ಲ. ಅವರೇ ಹೇಳುವ ಪ್ರಕಾರ ಪತ್ನಿ ತೀರಿಕೊಂಡಿದ್ದು, ಇಬ್ಬರು ಮಕ್ಕಳಿದ್ದಾರೆ.

‘ಐವರು ಸಹೋದರರಲ್ಲಿ ಒಬ್ಬ ನನ್ನ ಎರಡು ಮನೆಗಳನ್ನು ಕಿತ್ತುಕೊಂಡಿದ್ದಾನೆ. ನನ್ನ ಕುಟುಂಬದವರಿಂದಲೇ ವಂಚನೆಯಾಗಿದೆ. ಇರುವ ಆಸ್ತಿ ಕಸಿದುಕೊಂಡಿದ್ದರಿಂದ ಅನಾಥನಂತೆ ಆಸ್ಪತ್ರೆಯಲ್ಲಿ ಬದುಕುವಂತಾಗಿದೆ. ಮಕ್ಕಳು ಕೂಡ ಹತ್ತಿರ ಬರುತ್ತಿಲ್ಲ. ಅವರಿಗೆಲ್ಲ ಶಿಕ್ಷೆ ಕೊಡಿಸಿ’ ಎಂದು ರಾಮಾಂಜನೇಯಲು ಕೈ ಮುಗಿದು ಕೇಳಿಕೊಂಡರು. ‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.