ADVERTISEMENT

ಆಳ ಅಗಲ | ವೃದ್ಧಜೀವಗಳಿಗೆ ಕಾನೂನಿನ ಅಭಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 23:30 IST
Last Updated 18 ಮಾರ್ಚ್ 2025, 23:30 IST
   

ವೃದ್ಧ ಪೋಷಕರಿಂದ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಳ್ಳುವ ಮಕ್ಕಳು, ಚಿಕಿತ್ಸೆ ನೆಪದಲ್ಲಿ ಪೋಷಕರನ್ನು ಸರ್ಕಾರಿ ಆಸ್ಪತ್ರೆಗಳಿಗೆ ಸೇರಿಸಿ ಬಳಿಕ ಅವರನ್ನು ಬಿಟ್ಟುಬಿಡುವ ಪ್ರವೃತ್ತಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007ರ ಸೆಕ್ಷನ್‌ 23ರಡಿ ಮಕ್ಕಳ ಆಸ್ತಿ ಹಕ್ಕು ರದ್ದುಗೊಳಿಸಲು ಅವಕಾಶ ನೀಡುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅದು ತೀರ್ಮಾನಿಸಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ರಾಜ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಇಂತಹ ಪ್ರಕರಣಗಳನ್ನು (250) ಮಾತ್ರ ಪ್ರಸ್ತಾಪಿಸಿದ್ದಾರೆ. ಆದರೆ, ಈ ಪ್ರವೃತ್ತಿ ಸರ್ಕಾರಿ ಆಸ್ಪತ್ರೆಗಳಿಗೆ ಸೀಮಿತವಾಗಿಲ್ಲ. ಹೆತ್ತ ತಂದೆ ತಾಯಿಯರ ಆಸ್ತಿಯನ್ನು ಪಡೆದ ಬಳಿಕ ಮಕ್ಕಳು, ಅವರ ಪಾಲನೆಯನ್ನು ಮಾಡದೆ ಮನೆಯಿಂದ ಹೊರಗಟ್ಟುತ್ತಿರುವ, ಅನಾಥಾಶ್ರಮಗಳಲ್ಲಿ ಬಿಟ್ಟು ಹೋಗುತ್ತಿರುವ, ದೂರದ ಊರುಗಳಲ್ಲಿ ಬಿಟ್ಟು ಬರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿರುತ್ತವೆ. ಇದರ ವಿರುದ್ಧ ಕಾನೂನು ಇದ್ದರೂ, ರಾಜ್ಯದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ವೃದ್ಧ ಪೋಷಕರು ಕಾನೂನಿನ ಅರಿವಿನ ಕೊರತೆಯಿಂದ ಅನಾಥರಾಗಿ ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆಯುತ್ತಿರುವ ಕರುಣಾಜನಕ ಕಥೆಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಿಗುತ್ತವೆ.

ಕಾಯ್ದೆಯ ಸೆಕ್ಷನ್‌ 23ರ ಅಡಿಯಲ್ಲಿ ಮಕ್ಕಳಿಗೆ ವರ್ಗಾವಣೆ ಮಾಡಿದ್ದ ಆಸ್ತಿ ಪ್ರಕ್ರಿಯೆ/ ವಿಲ್‌ ಅನ್ನು ಉಪವಿಭಾಗಾಧಿಕಾರಿ (ಎ.ಸಿ) ನ್ಯಾಯಾಲಯಗಳು ರದ್ದು ಮಾಡಿದರೂ ಮಕ್ಕಳಿಗೆ ಅದರ ವಿರುದ್ಧ ಡಿಸಿ ಕೋರ್ಟ್‌ ಸೇರಿದಂತೆ ವಿವಿಧ ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ಅವಕಾಶ ಇದೆ. ನ್ಯಾಯಾಲಯವು ಎ.ಸಿ ಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಬಹುದು ಅಥವಾ ಆದೇಶವನ್ನು ಸಮರ್ಥಿಸಿಕೊಳ್ಳಬಹುದು. ನಂತರದ ಕಾನೂನು ಪ್ರಕ್ರಿಯೆ ನಡೆಯುತ್ತಿರುತ್ತದೆ. ಆದರೆ, ಸರ್ಕಾರದ ಈ ಪ್ರಯತ್ನ ವೃದ್ಧ ಪೋಷಕರಿಗೆ ಪ್ರವಾಹದಲ್ಲಿ ಸಿಕ್ಕ ಹುಲ್ಲಿನ ಕಡ್ಡಿಯಂತಾಗಿದೆ. ಆಸ್ತಿ ಕೈತಪ್ಪುವ ಭಯದಿಂದ ತಂದೆ ತಾಯಿಯರನ್ನು ಮಕ್ಕಳು ಮನೆಯಿಂದ ಹೊರಗಡೆ ಹಾಕುವ ದುಸ್ಸಾಹಸಕ್ಕೆ ಕೈಹಾಕದಿರುವ ಸಾಧ್ಯತೆ ಇರುತ್ತದೆ. ಒಂದು ವೇಳೆ, ಜೀವನದ ಸಂಧ್ಯಾಕಾಲದಲ್ಲಿ ಮಕ್ಕಳು ನೋಡಿಕೊಳ್ಳದಿದ್ದರೂ ಆಸ್ತಿಯಿಂದ ಬರುವ ಆದಾಯದಿಂದ ಕೊನೆಯುಸಿರು ಇರುವವರೆಗೆ ವೃದ್ಧಜೀವಗಳು ಗೌರವದಿಂದ ಬದುಕುವುದಕ್ಕೆ ಅವಕಾಶ ಸಿಗುವ ಸದಾಶಯ ಸರ್ಕಾರದ ನಿರ್ಧಾರದ ಹಿಂದಿದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯ.

ADVERTISEMENT

ಕಾಯ್ದೆ ಏನು ಹೇಳುತ್ತದೆ?

ಭಾರತದಲ್ಲಿ ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಪೋಷಣೆಯ ಹಕ್ಕನ್ನು ಖಾತರಿಪಡಿಸುವ ಸಲುವಾಗಿ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007’ ಅನ್ನು ಜಾರಿಗೊಳಿಸಲಾಗಿದೆ. ಇದರ ಪ್ರಕಾರ, ತಂದೆ, ತಾಯಿ ಮತ್ತು 60 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ಅವರ ಒಡೆತನದ ಆಸ್ತಿಯಿಂದ ಸ್ವಯಂ ಪಾಲನೆ ಪೋಷಣೆ ಮಾಡಿಕೊಳ್ಳಲು ಅಸಮರ್ಥರಾಗಿದ್ದಲ್ಲಿ, ಅವರ ಮಕ್ಕಳು/ವಾರಸುದಾರರು ಅವರ ಜೀವನ ನಿರ್ವಹಣೆಯ ಜವಾಬ್ದಾರಿ ಹೊರಬೇಕಾಗುತ್ತದೆ. ಒಂದು ವೇಳೆ ಮಕ್ಕಳು/ವಾರಸುದಾರರು ಅವರಿಗೆ ಜೀವನ ನಿರ್ವಹಣೆಗೆ ಬೇಕಾಗುವ ಸವಲತ್ತು ಒದಗಿಸಲು ನಿರಾಕರಿಸಿದಲ್ಲಿ ಕಾಯ್ದೆ ಪ್ರಕಾರ ಸಂಬಂಧಿಸಿದ ನ್ಯಾಯಮಂಡಳಿ ಖುದ್ದಾಗಿ ಇಲ್ಲವೇ ನೋಂದಾಯಿತ ಸಂಸ್ಥೆಯ ಮೂಲಕ ಅರ್ಜಿ ಸಲ್ಲಿಸಿ ಪರಿಹಾರ/ಭತ್ಯೆ ಪಡೆಯಲು ಅವಕಾಶವಿರುತ್ತದೆ.

ಸೆಕ್ಷನ್ 23 ಹೇಳುವುದೇನು?

23 (1): ಯಾವುದೇ ಹಿರಿಯ ನಾಗರಿಕ ತನ್ನ ಆಸ್ತಿಯನ್ನು ದಾನಪತ್ರದ ರೂಪದಲ್ಲಿ ಅಥವಾ ಮತ್ಯಾವುದೇ ರೂಪದಲ್ಲಿ ಉತ್ತರಾಧಿಕಾರಿಗೆ ವರ್ಗಾಯಿಸಿದ ನಂತರ, ಅದನ್ನು ಪಡೆದವರು ಅವರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಮತ್ತು ಮೂಲಭೂತ ಅಗತ್ಯಗಳನ್ನು ಪೂರೈಸಬೇಕು. ಹೀಗೆ ಮಾಡಲು ನಿರಾಕರಿಸಿದಲ್ಲಿ ಅಥವಾ ವಿಫಲವಾದಲ್ಲಿ, ನ್ಯಾಯಮಂಡಳಿ ಆ ಆಸ್ತಿಯ ವರ್ಗಾವಣೆಯನ್ನು ಮೋಸದಿಂದ ಅಥವಾ ಒತ್ತಾಯದಿಂದ ಅಥವಾ ಅನುಚಿತ ಪ್ರಭಾವ ಬೀರುವುದರ ಮೂಲಕ ಮಾಡಲಾಗಿದೆ ಎಂದು ಭಾವಿಸುತ್ತದೆ ಮತ್ತು ವರ್ಗಾವಣೆ ಮಾಡಿದವರ ಇಚ್ಛೆಯಂತೆ ಅದನ್ನು ಅನೂರ್ಜಿತ ಎಂದು ಘೋಷಿಸಬಹುದಾಗಿದೆ

23 (2): ಯಾವುದೇ ಹಿರಿಯ ನಾಗರಿಕ ತನ್ನ ಆಸ್ತಿಯಿಂದ ಪಾಲನೆ-ಪೋಷಣೆಯ ಸೌಲಭ್ಯ ಪಡೆಯುವುದಕ್ಕೆ ಹಕ್ಕುಳ್ಳವನಾಗಿರುತ್ತಾನೆ. ಆ ಆಸ್ತಿ ಅಥವಾ ಅದರ ಭಾಗವನ್ನು ಆತ ವರ್ಗಾವಣೆ ಮಾಡಿದ್ದಲ್ಲಿ ವರ್ಗಾವಣೆ ಪಡೆದವನಿಗೆ ಆ ಹಕ್ಕಿನ ಬಗ್ಗೆ ತಿಳಿವಳಿಕೆ ಇದ್ದರೆ ಅಥವಾ ವರ್ಗಾವಣೆ ಪುಕ್ಕಟೆಯಾಗಿದ್ದರೆ ಪಾಲನೆ-ಪೋಷಣೆ ಸೌಲಭ್ಯ ಪಡೆಯುವ ಹಕ್ಕನ್ನು ವರ್ಗಾವಣೆ ಪಡೆದವನ ವಿರುದ್ಧ ಜಾರಿಗೊಳಿಸಬಹುದು. ಆದರೆ, ಯಾವುದೇ ರೀತಿಯ ಪ್ರತಿಫಲ (ಹಣ ಮತ್ತು ಇತರ ಸಂಪತ್ತು) ಪಡೆದು ವರ್ಗಾವಣೆ ಮಾಡಿದ್ದರೆ ಮತ್ತು ವರ್ಗಾವಣೆ ಪಡೆದವನಿಗೆ ಆ ಸಂದರ್ಭದಲ್ಲಿ ಹಕ್ಕಿನ ಬಗ್ಗೆ ತಿಳಿವಳಿಕೆ ಇಲ್ಲದಿದ್ದರೆ, ಆತನ ವಿರುದ್ಧ ಈ ಹಕ್ಕನ್ನು ಚಲಾಯಿಸಲಾಗುವುದಿಲ್ಲ 

23 (3): ಯಾವುದೇ ಹಿರಿಯ ನಾಗರಿಕ (1)ನೇ ಮತ್ತು (2)ನೇ ಸಬ್‌ಸೆಕ್ಷನ್ ಅನುಸಾರ ತನ್ನ ಪಾಲನೆ/ಪೋಷಣೆ ಹಕ್ಕು ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಲು ಅಸಮರ್ಥನಾಗಿದ್ದರೆ, ಸೆಕ್ಷನ್ 5 (1)ರ ಪ್ರಕಾರ, ಅವರ ಪರವಾಗಿ ಇತರೆ ವ್ಯಕ್ತಿ/ಸಂಸ್ಥೆ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಬಹುದು.

ಕಾಯ್ದೆಯ ಸೆಕ್ಷನ್ 5ರ ಪ್ರಕಾರ, ನ್ಯಾಯಮಂಡಳಿ ಈ ಸಂಬಂಧ ಸ್ವಯಂಪ್ರೇರಿತವಾಗಿಯೂ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಳ್ಳಲು ಅವಕಾಶವಿದೆ.

ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿಲ್ಲ ಪ್ರಕರಣ

ರಾಜ್ಯದ 31 ಜಿಲ್ಲೆಗಳಲ್ಲಿ ಒಟ್ಟು 53 ಉಪವಿಭಾಗಗಳಿವೆ. ಪ್ರತಿ ಉಪವಿಭಾಗದಲ್ಲೂ ಉಪವಿಭಾಗಾಧಿಕಾರಿಯವರ (ಎ.ಸಿ) ನ್ಯಾಯಾಲಯವಿದೆ. ಅಂಗವಿಕಲ ಮತ್ತು ಹಿರಿಯನಾಗರಿಕರ ಸಬಲೀಕರಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ–2007ರ ಸೆಕ್ಷನ್‌ 23ರಡಿ ಈವರೆಗೆ 3,010 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 2,007 ಪ್ರಕರಣಗಳು ಇತ್ಯರ್ಥವಾಗಿವೆ. ದಾವಣಗೆರೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈವರೆಗೆ ಒಂದೂ ಪ್ರಕರಣ ದಾಖಲಾಗಿಲ್ಲ. 

ಪೂರಕ ಮಾಹಿತಿ: ಗಣಪತಿ ಹೆಗಡೆ

ಬೆಂಗಳೂರಿನಲ್ಲಿ ಹೆಚ್ಚು:
ಬೆಂಗಳೂರು ನಗರ ಜಿಲ್ಲೆಯಲ್ಲಿ ಬೆಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಉಪವಿಭಾಗಗಳಿದ್ದು, ಎರಡೂ ನ್ಯಾಯಾಲಯಗಳಲ್ಲಿ ಕ್ರಮವಾಗಿ 605 ಮತ್ತು 222 ಪ್ರಕರಣಗಳು ಸೇರಿ 827 ದೂರುಗಳು ದಾಖಲಾಗಿವೆ. ಇದು ರಾಜ್ಯದಲ್ಲೇ ಹೆಚ್ಚು. ಈ ಪೈಕಿ 274 ಪ್ರಕರಣಗಳಷ್ಟೇ ಇರ್ತರ್ಥವಾಗಿದ್ದು, 553 ಪ್ರಕರಣಗಳು ಬಾಕಿ (ಬೆಂಗಳೂರು ಉತ್ತರ 453, ದಕ್ಷಿಣ 100) ಇವೆ. 

ಗದಗ ಜಿಲ್ಲೆಯಲ್ಲಿ ದಾಖಲಾಗಿರುವ 34 ಪ್ರಕರಣಗಳಲ್ಲಿ ಒಂದು ಪ್ರಕರಣವೂ ಇತ್ಯರ್ಥವಾಗಿಲ್ಲ. 

ಆಸ್ತಿ ಪೋಷಕರಿಗೆ ವಾಪಸ್‌

ಮಕ್ಕಳು ತಮ್ಮನ್ನು ಪಾಲನೆ ಮಾಡುತ್ತಿಲ್ಲ. ಹಾಗಾಗಿ, ಅವರಿಗೆ ವರ್ಗಾವಣೆ ಮಾಡಿದ್ದ ಆಸ್ತಿಯನ್ನು ವಾಪಸ್‌ ಕೊಡಿಸುವಂತೆ ದಾಖಲಿಸಿದ್ದ ಪ್ರಕರಣಗಳಲ್ಲಿ ಉಪವಿಭಾಗಾಧಿಕಾರಿ ನ್ಯಾಯಾಲಯಗಳು ವಿಚಾರಣೆ ನಡೆಸಿ, ಪೋಷಕರಿಗೆ ಆಸ್ತಿಯನ್ನು ವಾಪಸ್‌ ಕೊಡಿಸಿದ ಹಲವು ಪ್ರಕರಣಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಹಿಂದೆಯೂ ವರದಿಯಾಗಿದ್ದವು. 

  • 2023ರ ಜನವರಿಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿಯ ಉಪವಿಭಾಗಾಧಿಕಾರಿ ನ್ಯಾಯಾಲಯವು ತಾಯಿಯ ಯೋಗಕ್ಷೇಮ ನೋಡಿಕೊಳ್ಳದ ಮಗಳ ಹೆಸರಿಗೆ ದಾನಪತ್ರದ ಮೂಲಕ ನೀಡಿದ್ದ 6 ಗುಂಟೆ ಆಸ್ತಿಯನ್ನು ತಾಯಿಗೆ ವಾಪಸ್‌ ಕೊಡಿಸಿತ್ತು 

  • ಯಾದಗಿರಿ ಉಪವಿಭಾಗಾಧಿಕಾರಿ ನ್ಯಾಯಾಲಯವು 2022ರ ಡಿಸೆಂಬರ್‌ನಲ್ಲಿ ಎರಡು ಪ್ರಕರಣಗಳಲ್ಲಿ ಪೋಷಕರಿಗೆ ಆಸ್ತಿಯನ್ನು ವಾಪಸ್‌ ಕೊಡಿಸಿತ್ತು. ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದ ನಿವಾಸಿ ರವೀಂದ್ರನಾಥ ಹಿರೇಮಠ ತಮ್ಮ ಮಕ್ಕಳಿಗೆ ಮಾಡಿದ್ದ 10 ಎಕರೆ 12 ಗುಂಟೆ ಜಮೀನಿನ ಆಸ್ತಿ ವರ್ಗಾವಣೆಯನ್ನು ರದ್ದು ಮಾಡಿತ್ತು. ಮತ್ತೊಂದು ಪ್ರಕರಣದಲ್ಲಿ ಗುರುಮಠಕಲ್‌ ತಾಲ್ಲೂಕಿನ ಧರ್ಮಪುರ ಗ್ರಾಮದ ಶಂಕ್ರಮ್ಮ ಅವರು ಮಕ್ಕಳಿಗೆ ನೀಡಿದ್ದ 4 ಎಕರೆ ಜಮೀನನ್ನು ಮರಳಿ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿ, ಶಂಕ್ರಮ್ಮ ಅವರಿಗೆ ಆಸ್ತಿ ಕೊಡಿಸಿತ್ತು

ಬೆಳಗಾವಿ ಜಿಲ್ಲಾ ಆಸ್ಪತ್ರೆಯ ನಿರ್ಗತಿಕರ ವಾರ್ಡಿನ ಗೇಟಿನ ಮುಂದೆಯೇ ಮಗನಿಗಾಗಿ ಕಾಯುತ್ತ ನಿಂತ ಪಾರ್ವತಿ ಅವರನ್ನು ಸಂತೈಸಿದ ಸಿಬ್ಬಂದಿ ದುರ್ಗವ್ವ ಹಂಡೋರಿ ‍

ಜೀವನಾಂಶ ನೀಡಲು ಹೇಳಿದ್ದ ಹೈಕೋರ್ಟ್‌

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ 85 ವರ್ಷ ವಯಸ್ಸಿನ ಅಪ್ಪರಂಡ ಶಾಂತಿ ಬೋಪಣ್ಣ ಎಂಬುವವರ ಪ್ರಕರಣದಲ್ಲಿ ವೃದ್ಧ ತಾಯಿಗೆ ವಾರ್ಷಿಕ ₹7 ಲಕ್ಷ ಜೀವನಾಂಶ ನೀಡಲು ಮುಖ್ಯನ್ಯಾಯಮೂರ್ತಿ ನೇತೃತ್ವದ ಹೈಕೋರ್ಟ್‌ನ ವಿಭಾಗೀಯ ಪೀಠವು ಮಗ ಮತ್ತು ಮೊಮ್ಮಗಳಿಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಆದೇಶಿಸಿತ್ತು. 

ಶಾಂತಿ ಬೋಪಣ್ಣ ಅವರು ತಮ್ಮ 22 ಎಕರೆ ಕಾಫಿ ಎಸ್ಟೇಟ್‌ ಅನ್ನು ಮಗ ಗಣಪತಿ ಹಾಗೂ ಮೊಮ್ಮಗಳು ಪೂಜಾ ಅಲಿಯಾಸ್‌ ಸಂಜನಾ ಸುಬ್ಬಯ್ಯ ಅವರಿಗೆ 2016ರಲ್ಲಿ ‘ದಾನಪತ್ರ’ದ ಮೂಲಕ ನೀಡಿದ್ದರು. ಈ ವೇಳೆ ಶಾಂತಿ ಬೋಪಣ್ಣ ಅವರ ಜೀವನ ನಿರ್ವಹಣೆಗೆ ವಾರ್ಷಿಕ ತಲಾ ₹7 ಲಕ್ಷ ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸುವುದಾಗಿ ಮಗ ಮತ್ತು ಮೊಮ್ಮಗಳು ಭರವಸೆ ನೀಡಿದ್ದರು.  2016ರಿಂದ 2019ರವರೆಗೆ ಹಣ ಪಾವತಿಸಿದ್ದರು. ನಂತರ ನೀಡಿರಲಿಲ್ಲ. ಇದರ ನಡುವೆ ಮಗ ಮತ್ತು ಮೊಮ್ಮಗಳು ಆಸ್ತಿ ಮಾರಾಟಕ್ಕೆ ಯತ್ನಿಸಿದ್ದರು. ಹೀಗಾಗಿ, ‘ದಾನಪತ್ರ ರದ್ದುಪಡಿಸಬೇಕು’ ಎಂದು ಕೋರಿ ಶಾಂತಿ ಅವರು  ಮಡಿಕೇರಿಯ ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಉಪವಿಭಾಗಾಧಿಕಾರಿ ಅವರು ದಾನಪತ್ರ ರದ್ದುಗೊಳಿಸಿ ಆದೇಶಿಸಿದ್ದರು. ಇದನ್ನು ಇಬ್ಬರೂ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. 2023ರ ಮಾರ್ಚ್‌ನಲ್ಲಿ ಜಿಲ್ಲಾಧಿಕಾರಿ ಅವರು ಮಗ ಹಾಗೂ ಮೊಮ್ಮಗಳ ಆಸ್ತಿ ಹಕ್ಕನ್ನು ಮರು ಸ್ಥಾಪಿಸಿದ್ದರಲ್ಲದೆ, ತಾಯಿಯ ಜೀವಿತಾವಧಿವರೆಗೆ ವಾರ್ಷಿಕ ಜೀವನಾಂಶ ಪಾವತಿಸಬೇಕು ಎಂದು ನಿರ್ದೇಶಿಸಿದ್ದರು. 

ಈ ಆದೇಶವನ್ನು ಪ್ರಶ್ನಿಸಿ ಶಾಂತಿ ಬೋಪಣ್ಣ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, 2023ರ ಡಿಸೆಂಬರ್ 20ರಂದು ಅಂತಿಮ ಆದೇಶ ಹೊರಡಿಸಿ ‘ತಲಾ ₹7 ಲಕ್ಷ ಪಾವತಿಸಿ’ ಎಂದು ಮಗ ಮತ್ತು ಮೊಮ್ಮಗಳಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಗ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಭಾಗೀಯ ನ್ಯಾಯಪೀಠ ಕೂಡ ಏಕ ಸದಸ್ಯ ನ್ಯಾಯಪೀಠದ ಆದೇಶ ಎತ್ತಿ ಹಿಡಿದಿತ್ತು. 

ಶರಣ ಪ್ರಕಾಶ ಪಾಟೀಲ
ತಂದೆ-ತಾಯಂದಿರು ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುತ್ತಾರೆ. ಅವರನ್ನು ಸಂಧ್ಯಾಕಾಲದಲ್ಲಿ ಬಿಟ್ಟು ಹೋಗುತ್ತಿರುವ ಮಕ್ಕಳ ವರ್ತನೆ ಅಮಾನವೀಯ ಮಾತ್ರವಲ್ಲ; ಖಂಡನಾರ್ಹ. ಪೋಷಕರನ್ನು ಬಿಟ್ಟು ಹೋಗುವ ಮಕ್ಕಳ ವಿಲ್‌ ರದ್ದು ಮಾಡಲು ಹಾಗೂ ಇತರೆ ಕ್ರಮಗಳನ್ನು ಕೈಗೊಳ್ಳಲು ದೂರು ಸಲ್ಲಿಸುವಂತೆ ನಾವು ಸುತ್ತೋಲೆ ಹೊರಡಿಸಿದ್ದೇವೆ. ದೈವ ಸಮಾನರಾದ ತಂದೆ ತಾಯಿಯನ್ನು ಎಲ್ಲ ಕಾಲದಲ್ಲಿಯೂ ಪ್ರೀತಿಯಿಂದ ನೋಡಿಕೊಳ್ಳಬೇಕು
ಡಾ. ಶರಣ ಪ್ರಕಾಶ್‌ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.