
ಜನಸಂಖ್ಯೆಯ ದೃಷ್ಟಿಯಿಂದ ಮತ್ತು ರಾಜಕೀಯ ಪ್ರಾಬಲ್ಯದ ದೃಷ್ಟಿಯಿಂದ ಮಹತ್ವ ಪಡೆದಿರುವ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಅಧಿಕಾರ ಹಿಡಿಯಲು ಎನ್‌ಡಿಎ ಮತ್ತು ‘ಇಂಡಿಯಾ’ ಕೂಟಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಎನ್‌ಡಿಎ ಕೂಟದಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಸಂಖ್ಯೆಯ ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ನಿತೀಶ್‌ಕುಮಾರ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ಬಿಜೆಪಿ ಲೆಕ್ಕಾಚಾರದಿಂದ ಅಡಿ ಇಡುತ್ತಿದೆ. ‘ಇಂಡಿಯಾ’ದಲ್ಲಿ ಆರ್‌ಜೆಡಿ ಪ್ರಮುಖ ಪಕ್ಷವಾಗಿದೆ. ಮಿತ್ರಪಕ್ಷಗಳ ನಡುವಿನ ಹೊಂದಾಣಿಕೆ ಮತ್ತು ಸ್ಥಾನಹಂಚಿಕೆಯ ಕಸರತ್ತು ‘ಇಂಡಿಯಾ’ ಕೂಟಕ್ಕೆ ತೊಡಕಾಗಬಹುದು ಎನ್ನಲಾಗುತ್ತಿದೆ
2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಕೂಟ 125 ಸ್ಥಾನಗಳನ್ನು ಗಳಿಸಿದ್ದರೆ, ಮಹಾಘಟಬಂಧನ ಕೂಟವು 110 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಎನ್‌ಡಿಎಯಷ್ಟೇ (ಶೇ 37) ಮತಪ್ರಮಾಣವನ್ನೂ ಪಡೆದಿತ್ತು. ಮುಖ್ಯವಾಗಿ, 144 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ರಾಷ್ಟ್ರೀಯ ಜನತಾ ದಳವು (ಆರ್‌ಜೆಡಿ) 75ರಲ್ಲಿ ಗೆದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 19ರಲ್ಲಿ ಮಾತ್ರ ಗೆದ್ದಿತ್ತು. ಅದರಿಂದ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕ್ಕಾರಕ್ಕೇರಿತ್ತು.
ಈ ಬಾರಿ ಎರಡೂ ಮೈತ್ರಿಕೂಟಗಳ ಮಟ್ಟಿಗೆ ಪರಿಸ್ಥಿತಿ ಭಿನ್ನವಾಗಿದೆ. ಎನ್‌ಡಿಎ ಕೂಟದಲ್ಲಿ ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಜನತಾದಳ -ಸಂಯುಕ್ತ (ಜೆಡಿಯು) ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. 2020ರ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗೆದ್ದಿದ್ದ ಲೋಕಜನಶಕ್ತಿಗೆ (ಎಲ್‌ಜೆಪಿ) ಎನ್‌ಡಿಎ 29 ಸ್ಥಾನ ಬಿಟ್ಟುಕೊಟ್ಟಿದೆ. ಕಳೆದ ಬಾರಿ ಎನ್‌ಡಿಎ ಕೂಟದಲ್ಲಿ ಇಲ್ಲದೇ ಇದ್ದ ಎಲ್‌ಜೆಪಿಯು ಜೆಡಿಯುನ ನಿರ್ಣಾಯಕ ಪ್ರಮಾಣದ ಮತದಾರರನ್ನು ಸೆಳೆದುಕೊಂಡಿತ್ತು. ಈ ಬಾರಿ ಅಂಥ ‘ಹಾನಿ’ ಮಾಡದಿರಲಿ ಎಂದು ಎಲ್‌ಜೆಪಿಗೆ ಎನ್‌ಡಿಎ ಹೆಚ್ಚು ಸ್ಥಾನಗಳನ್ನು ನೀಡಿದೆ ಎನ್ನಲಾಗುತ್ತಿದೆ. ಜತೆಗೆ, ತೇಜಸ್ವಿ ಯಾದವ್ ವಿರುದ್ಧ ಚಿರಾಗ್ ಪಾಸ್ವಾನ್ ಅವರಂಥ ಯುವ ಮುಖಂಡನನ್ನು ಮುಖಾಮುಖಿಯಾಗಿಸುವುದು ಎನ್‌ಡಿಎ ಉದ್ದೇಶವಾಗಿದೆ. ನಿತೀಶ್ ಸರ್ಕಾರದ ಆಡಳಿತ ವಿರೋಧಿ ಅಲೆಯನ್ನು ಎದುರಿಸಲೂ ಚಿರಾಗ್ ಅವರೇ ಎನ್‌ಡಿಎಗೆ ದಾಳವಾಗಿದ್ದಾರೆ. ಎನ್‌ಡಿಎ ಉಳಿದ ಮಿತ್ರಪಕ್ಷಗಳಾದ ರಾಷ್ಟ್ರೀಯ ಲೋಕಮೋರ್ಚಾ (ಆರ್‌ಎಲ್‌ಎಂ) ಮತ್ತು ಹಿಂದೂಸ್ಥಾನಿ ಅವಾಮಿ ಮೋರ್ಚಾ (ಎಚ್‌ಎಎಂ) ತಲಾ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.
ಜೆಎಂಎಂ ಕೂಡ ಇಂಡಿಯಾ ಕೂಟದ ಭಾಗವಾಗಲು ಯತ್ನಿಸಿ ವಿಫಲವಾಗಿದೆ. ತಮ್ಮ ಮನವಿಗೆ ಆರ್‌ಜೆಡಿ ಕಿವಿಗೊಟ್ಟಿಲ್ಲ, ಕಾಂಗ್ರೆಸ್ ಮಧ್ಯಪ್ರವೇಶ ಮಾಡಿ ತಮಗೆ ನ್ಯಾಯ ದೊರಕಿಸಿಕೊಟ್ಟಿಲ್ಲ ಎಂದು ಜೆಎಂಎಂ ಸಿಟ್ಟಾಗಿದೆ. ಬಿಹಾರ ಚುನಾವಣೆಯಿಂದ ದೂರ ಸರಿಯುವುದಾಗಿ ಜೆಎಂಎಂ ಘೋಷಿಸಿದೆ. ಇದರಿಂದ ಜಾರ್ಖಂಡ್‌ನಲ್ಲಿ ಇಂಡಿಯಾ ಕೂಟದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಎಐಎಂಐಎಂ ಮತ್ತು ಜೆಎಂಎಂ ಪಕ್ಷಗಳಿಂದಾಗಿ ಮುಸ್ಲಿಂ ಪ್ರಭಾವ ಮತ್ತು ಬುಡಕಟ್ಟು ಪ್ರಭಾವದ ಕೆಲವು ಕ್ಷೇತ್ರಗಳಲ್ಲಿ ಇಂಡಿಯಾ ಕೂಟಕ್ಕೆ ಹಿನ್ನಡೆಯಾಗಬಹುದು ಎನ್ನಲಾಗುತ್ತಿದೆ.
ಬಿಹಾರದಲ್ಲಿ 1995ರಿಂದ ಯಾವುದೇ ಪಕ್ಷ ಬಹುಮತ ಪಡೆದೇ ಇಲ್ಲ. ಎರಡು ದಶಕಗಳಿಂದ ಯಾವುದೇ ಪಕ್ಷ ಶೇ 25ರಷ್ಟು ಮತಗಳಿಸಿಲ್ಲ. ಮೈತ್ರಿ ರಾಜಕಾರಣದ ಹಲವು ಪಲ್ಲಟಗಳಿಗೆ ಬಿಹಾರದ ಚುನಾವಣೆ ಸಾಕ್ಷಿಯಾಗಿದ್ದು, ಅದರ ಫಲಿತಾಂಶವು ಮುಂದಿನ ದಿನಗಳಲ್ಲಿ ದೇಶದ ರಾಜಕಾರಣದಲ್ಲಿ ದಿಕ್ಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜಕೀಯ ಪಕ್ಷಗಳು ಜಾತಿ ಸಮೀಕರಣದ ಲೆಕ್ಕಾಚಾರದ ಆಧಾರದಲ್ಲೇ ಟಿಕೆಟ್ ಹಂಚಿಕೆ ಮಾಡಿವೆ. ದೇಶದಲ್ಲಿ ಮೊದಲ ಬಾರಿ ಜಾತಿ ಸಮೀಕ್ಷೆ ನಡೆಸಿರುವ ರಾಜ್ಯ ಬಿಹಾರ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಅತಿ ಹಿಂದುಳಿದ ವರ್ಗಗಳಿಗೆ (ಇಬಿಸಿ) ಸೇರಿದವರು. ಇಬಿಸಿಗಳು ಶೇ 36ರಷ್ಟಿದ್ದರೆ, ಒಬಿಸಿಗಳು ಶೇ 27ರಷ್ಟು ಇದ್ದಾರೆ. ಹಾಗಾಗಿ, ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಈ ವರ್ಗಗಳಿಗೆ ಸೇರಿದ ಸಮುದಾಯಗಳ ಮುಖಂಡರನ್ನು ಪರಿಗಣಿಸಿವೆ.
ತೀವ್ರ ಹಣಾಹಣಿ ನಡೆಯಲಿದೆ ಎಂದು ನಿರೀಕ್ಷಿಸಲಾದ ಕ್ಷೇತ್ರಗಳಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ಸೇರಿದ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬಿಸಿಗಳಲ್ಲಿ 130 ಉಪಜಾತಿಗಳಿವೆ. ಈ ಪೈಕಿ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿಶಾದ, ತೆಲೀ, ಲೋಹಾರ್ ಮತ್ತು ಕುಮ್ಹಾರ್ ಜಾತಿಗಳಿಗೆ ಸೇರಿದವರು ನಿರ್ಣಾಯಕರಾಗಿದ್ದಾರೆ.
ಒಬಿಸಿ, ಇಬಿಸಿಗಳ ಜೊತೆಗೆ ಮೇಲ್ವರ್ಗದ ಅಭ್ಯರ್ಥಿಗಳಿಗೆ ಆದ್ಯತೆ ನೀಡಿರುವ ಎನ್‌ಡಿಎ ಮೈತ್ರಿಕೂಟವು ಮುಸ್ಲಿಂ ಅಭ್ಯರ್ಥಿಗಳಿಗೆ ಹೆಚ್ಚು ಮಣೆ ಹಾಕಿಲ್ಲ. ಇಂಡಿಯಾ ಕೂಟವು ಮುಸ್ಲಿಮರು ಮತ್ತು ಯಾದವ ಸಮುದಾಯದವರಿಗೆ ಹೆಚ್ಚು ಒತ್ತು ನೀಡಿದೆ. ಇದರೊಂದಿಗೆ ಶೇ 19.65ರಷ್ಟಿರುವ ದಲಿತ ಸಮುದಾಯದ ಮತಗಳ ಮೇಲೆ ಎರಡೂ ಮೈತ್ರಿಕೂಟಗಳು ದೃಷ್ಟಿ ನೆಟ್ಟಿವೆ.
ಆಧಾರ: ಪಿಟಿಐ, ಬಿಹಾರ ಚುನಾವಣಾ ಆಯೋಗ ವೆಬ್‌ಸೈಟ್, ಪಿಆರ್‌ಎಸ್‌ಇಂಡಿಯಾ.ಒಆರ್‌ಜಿ, ಇನ್‌ಸ್ಟಿಟ್ಯೂಟ್ ಆಫ್ ಸೌತ್ ಏಷ್ಯನ್ ಸ್ಟಡೀಸ್
ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಹಲವು ಮುಖಂಡರು ಹಾಗೂ ಪಕ್ಷಗಳ ಗೆಲುವಿಗೆ ಶ್ರಮಿಸಿದ್ದ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ (ಪಿಕೆ) ಅವರು ಸ್ಥಾಪಿಸಿರುವ ಜನ ಸುರಾಜ್ ಪಕ್ಷವು 243 ಕ್ಷೇತ್ರಗಳಲ್ಲೂ ಸ್ಪರ್ಧಿಸಿದೆ. (ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ). ಆದರೆ ಪ್ರಶಾಂತ್ ಕಿಶೋರ್ ಸ್ಪರ್ಧಿಸಿಲ್ಲ. ಅವರ ಪಕ್ಷವು ಮೊದಲ ಬಾರಿ ಚುನಾವಣೆ ಎದುರಿಸುತ್ತಿದ್ದು ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಮೂಡಿದೆ.
2015ರಲ್ಲಿ ನಿತೀಶ್‌ಕುಮಾರ್ ನೇತೃತ್ವದ ಮಹಾಘಟಬಂಧನ ಮೈತ್ರಿಕೂಟವು ಬಿಹಾರದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪ್ರಶಾಂತ್ ಕಿಶೋರ್ ಅವರು 2018ರಲ್ಲಿ ಜೆಡಿಯುಗೆ ಸೇರ್ಪಡೆಗೊಂಡು ಅದರ ಉಪಾಧ್ಯಕ್ಷರಾಗಿಯೂ ನೇಮಕಗೊಂಡಿದ್ದರು. 2020ರ ಚುನಾವಣೆಯಲ್ಲೂ ನಿತೀಶ್ ಪರವಾಗಿ ಅವರು ಕೆಲಸ ಮಾಡಿದ್ದರು. 2021ರಲ್ಲಿ ನಡೆದಿದ್ದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿ ಟಿಎಂಸಿಯ ಮಮತಾ ಬ್ಯಾನರ್ಜಿ ಮತ್ತು ಡಿಎಂಕೆಯ ಎಂ.ಕೆ.ಸ್ಟಾಲಿನ್ ಅವರ ಪರವಾಗಿ ಕೆಲಸ ಮಾಡಿದ್ದರು. ಆ ಬಳಿಕ ಚುನಾವಣಾ ತಂತ್ರಗಾರಿಕೆಯಿಂದ ದೂರ ಉಳಿದಿದ್ದ ಅವರು 2022ರಲ್ಲಿ ತಮ್ಮದೇ ಆದ ಜನ ಸುರಾಜ್ ಪಕ್ಷವನ್ನು ಸ್ಥಾಪಿಸಿದ್ದರು. ಈ ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಮೂರು ವರ್ಷಗಳಿಂದ ಬಿಹಾರದಲ್ಲಿ ಪಕ್ಷವನ್ನು ಸಂಘಟಿಸಿರುವ ಅವರು, ಪಕ್ಷ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ.
ಈ ಬಾರಿ, ಎನ್‌ಡಿಎ ಮತ್ತು ಮಹಾಘಟಬಂಧನದ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬರುತ್ತಿರುವ ಸಂದರ್ಭದಲ್ಲಿ ಪ್ರಶಾಂತ್ ಕಿಶೋರ್ ಅವರ ಪಕ್ಷ ದೊಡ್ಡ ಸಾಧನೆ ಮಾಡಲಾರದು ಎಂಬ ಅಭಿಪ್ರಾಯವನ್ನು ರಾಜಕೀಯ ಪಂಡಿತರು ವ್ಯಕ್ತಪಡಿಸುತ್ತಿದ್ದಾರೆ. ಸ್ವತಃ ಪ್ರಶಾಂತ್ ಅವರು ಸ್ಪರ್ಧಿಸಿದ್ದರೆ ಅದು ರಾಜಕೀಯವಾಗಿ ಪ್ರಬಲವಾದ ಸಂದೇಶವನ್ನು ನೀಡುತ್ತಿತ್ತು. ಆದರೆ, ಅವರು ಚುನಾವಣೆಯಿಂದ ದೂರ ಉಳಿದಿರುವುದು ಉತ್ತಮ ನಿರ್ಧಾರವಲ್ಲ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
2020ರ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿಯು ಹಲವು ಕ್ಷೇತ್ರಗಳಲ್ಲಿ ಜೆಡಿಯು ಮತಗಳನ್ನು ಕಸಿದು, ಅದರ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು. ಈ ಬಾರಿ ಚಿರಾಗ್ ಅವರು ಎನ್‌ಡಿಎ ಜೊತೆ ಗುರುತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಎಲ್‌ಜೆಪಿ ಮಾಡಿದ ಕೆಲಸವನ್ನು ಈ ಬಾರಿ ಜನ ಸುರಾಜ್ ಪಕ್ಷ ಮಾಡಬಹುದು ಎಂದು ಹೇಳಲಾಗುತ್ತಿದೆ.
ಆಧಾರ: ಪಿಟಿಐ, ಪಿಆರ್‌ಎಸ್ ಇಂಡಿಯಾ. ಒಆರ್‌ಜಿ, ಬಿಹಾರ ಚುನಾವಣಾ ಆಯೋಗ, ಇನ್‌ಸ್ಟಿಟ್ಯೂಟ್ ಆಫ್ ಸೌತ್ ಏಷ್ಯನ್ ಸ್ಟಡೀಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.