ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಎರಡನೆಯ ಅವಧಿಯಲ್ಲೂ ‘ಅಮೆರಿಕ ಮೊದಲು’ ನೀತಿಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಬ್ರಿಕ್ಸ್ ಕರೆನ್ಸಿ ಬಳಕೆಗೆ ಬಂದರೆ, ವಿಶ್ವ ಮಾರುಕಟ್ಟೆಯಲ್ಲಿ ಡಾಲರ್ ಏಕಸ್ವಾಮ್ಯಕ್ಕೆ ಪೆಟ್ಟು ಬೀಳುತ್ತದೆ ಎಂದು ಭಾವಿಸಿರುವ ಟ್ರಂಪ್, ಬ್ರಿಕ್ಸ್ ರಾಷ್ಟ್ರಗಳ ವಿರುದ್ಧ ಶೇ 100ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದಾರೆ. ಆದರೆ, ಹಲವು ವರ್ಷಗಳಿಂದ ಬ್ರಿಕ್ಸ್ ಕರೆನ್ಸಿ ಬಳಕೆಗೆ ತರುವ ದಿಸೆಯಲ್ಲಿ ಮಾತುಕತೆ ನಡೆಯುತ್ತಿದೆಯಾದರೂ ಸದ್ಯಕ್ಕೆ ಅದು ಕಾರ್ಯಸಾಧ್ಯವಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಡೊನಾಲ್ಡ್ ಟ್ರಂಪ್ ಅವರು ಒಂದೊಂದಾಗಿ ತಮ್ಮ ಮುಖ್ಯ ನಿಲುವುಗಳನ್ನು ಪ್ರಕಟಿಸುತ್ತಿದ್ದಾರೆ. ಅಮೆರಿಕದಲ್ಲಿ ಹುಟ್ಟಿದ ಮಕ್ಕಳ ಪೌರತ್ವದ ವಿಚಾರ ಚರ್ಚೆಯಲ್ಲಿರುವಾಗಲೇ, ಬ್ರಿಕ್ಸ್ ಕರೆನ್ಸಿ ಬಳಕೆಗೆ ತರುವ ಪ್ರಯತ್ನದ ಬಗ್ಗೆ ಅವರು ಎಚ್ಚರಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್‌ಗೆ ಪರ್ಯಾಯವಾಗಿ ಬ್ರಿಕ್ಸ್ ರಾಷ್ಟ್ರಗಳು ಬೇರೊಂದು ಕರೆನ್ಸಿಯನ್ನು ಬಳಕೆಗೆ ತಂದರೆ ಈ ರಾಷ್ಟ್ರಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ 2024ರ ಡಿಸೆಂಬರ್‌ನಲ್ಲಿ ಟ್ರಂಪ್ ಇದೇ ಮಾತನ್ನು ಹೇಳಿದ್ದರು. ‘ಬ್ರಿಕ್ಸ್ ಕರೆನ್ಸಿ ಜಾರಿಗೆ ತರುವುದಿಲ್ಲ ಎಂದೂ, ಅಮೆರಿಕದ ಬಲಿಷ್ಠ ಡಾಲರ್‌ಗೆ ಪರ್ಯಾಯವಾಗಿ ಯಾವುದೇ ಕರೆನ್ಸಿಯನ್ನು ಬೆಂಬಲಿಸುವುದಿಲ್ಲ ಎಂದೂ ಈ ರಾಷ್ಟ್ರಗಳಿಂದ ನಾವು ಮಾತು ಪಡೆಯುವ ಅಗತ್ಯವಿದೆ. ಇಲ್ಲದಿದ್ದರೆ, ಅವರು ಶೇ 100ರಷ್ಟು ಸುಂಕವನ್ನು ಎದುರಿಸಬೇಕಾಗುತ್ತದೆ ಮತ್ತು ಅಮೆರಿಕದ ಅದ್ಭುತವಾದ ಮಾರುಕಟ್ಟೆಯಲ್ಲಿ ಅವರ ವಸ್ತುಗಳನ್ನು ಮಾರಾಟ ಮಾಡುವ ಅವಕಾಶ ಕಳೆದುಕೊಳ್ಳಬೇಕಾಗುತ್ತದೆ’ ಎಂದಿದ್ದರು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಆಧಿಪತ್ಯ ಸಾಧಿಸಿದ್ದು, ಶೇ 90ರಷ್ಟು ವ್ಯಾಪಾರ–ವ್ಯವಹಾರಗಳು ಡಾಲರ್‌ನಲ್ಲಿಯೇ ನಡೆಯುತ್ತಿವೆ. ತೀರಾ ಇತ್ತೀಚಿನವರೆಗೂ ಶೇ 100ರಷ್ಟು ತೈಲ ವ್ಯಾಪಾರವು ಡಾಲರ್‌ನಲ್ಲಿಯೇ ನಡೆಯುತ್ತಿತ್ತು. 2023ರಿಂದ ಈಚೆಗೆ ಐವರು ವ್ಯಾಪಾರಿಗಳಲ್ಲಿ ಒಬ್ಬರು ಡಾಲರ್‌ಗೆ ಹೊರತಾದ ಕರೆನ್ಸಿ ಬಳಸಿ ತೈಲ ವ್ಯಾಪಾರ ಮಾಡುತ್ತಿದ್ದಾರೆ.
ಡಾಲರ್ ಪ್ರಭಾವ ತಗ್ಗಿಸುವ ಗುರಿ: 2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುತ್ತಿದ್ದಂತೆಯೇ, ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಅಂತರರಾಷ್ಟ್ರೀಯ ಪಾವತಿ ವ್ಯವಸ್ಥೆಯಿಂದ (ಸ್ವಿಫ್ಟ್) ರಷ್ಯಾವನ್ನು ಹೊರಗಿಟ್ಟಿದ್ದು ಮಾತ್ರವಲ್ಲದೇ, ಅದರ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರಿದವು (2012ರಲ್ಲಿ ಇರಾನ್ ಅನ್ನೂ ಸ್ವಿಫ್ಟ್‌ನಿಂದ ಹೊರಗಿಡಲಾಗಿತ್ತು). ಈ ಬೆಳವಣಿಗೆ ನಂತರ ಡಾಲರ್‌ಗೆ ಪರ್ಯಾಯವಾದ ಪಾವತಿ ವ್ಯವಸ್ಥೆ ಕಂಡುಕೊಳ್ಳಬೇಕೆನ್ನುವ ಒತ್ತಡ ತೀವ್ರವಾಯಿತು. ಡಾಲರ್ ಪಾರಮ್ಯವನ್ನು ಕುಗ್ಗಿಸುವುದರ ಜೊತೆಗೆ ಅಮೆರಿಕ ಹೇರುವ ಆರ್ಥಿಕ ನಿರ್ಬಂಧಗಳನ್ನು ನಿಭಾಯಿಸುವ ಉದ್ದೇಶವೂ ಪರ್ಯಾಯ ಕರೆನ್ಸಿ ಪ್ರಸ್ತಾವದ ಹಿಂದಿದೆ.
2022ರಲ್ಲಿ ನಡೆದ 14ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಹೊಸ ಜಾಗತಿಕ ಕರೆನ್ಸಿಯ ಅಗತ್ಯದ ಬಗ್ಗೆ ಪ್ರಸ್ತಾಪಿಸಿ, ಈ ಸಂಬಂಧ ಎಲ್ಲ ಮಾರುಕಟ್ಟೆ ಪಾಲುದಾರರ ಜತೆ ಚರ್ಚಿಸಲು ತಾವು ಸಿದ್ಧವಿರುವುದಾಗಿ ಹೇಳಿದ್ದರು. 2023ರಲ್ಲಿ ಜೊಹಾನಸ್‌ಬರ್ಗ್‌ನಲ್ಲಿ ನಡೆದಿದ್ದ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ್ದ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಕೂಡ, ಬ್ರಿಕ್ಸ್ ಕರೆನ್ಸಿ ಬಳಕೆಗೆ ತರುವುದರಿಂದ ಪಾವತಿಯ ಸಾಧ್ಯತೆಗಳು ಹೆಚ್ಚುವುದಲ್ಲದೇ ನಮ್ಮ ಆರ್ಥಿಕ ಹಿತಾಸಕ್ತಿಗಳನ್ನೂ ರಕ್ಷಿಸಿಕೊಳ್ಳಬಹುದು ಎಂದಿದ್ದರು.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು 2024ರ ಅಕ್ಟೋಬರ್‌ನಲ್ಲಿ ರಷ್ಯಾದ ಕಜಾನ್‌ನಲ್ಲಿ ನಡೆದಿದ್ದ ಬ್ರಿಕ್ಸ್ ಶೃಂಗಸಭೆಯಲ್ಲಿ ಡಾಲರ್ ಸಾರ್ವಭೌಮತ್ವದ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿದ್ದರು. ‘ಡಾಲರ್ ಅನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಹೀಗೆ ಮಾಡುವುದು ದೊಡ್ಡ ತಪ್ಪು’ ಎಂದು ಹೇಳಿದ್ದರು. ಅದಕ್ಕೆ ಧ್ವನಿಗೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ‘ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಆರ್ಥಿಕ ಏಕೀಕರಣಕ್ಕೆ ಭಾರತ ಒಲವು ಹೊಂದಿದೆ. ಸ್ಥಳೀಯ ಕರೆನ್ಸಿಗಳ ಮೂಲಕ ವ್ಯಾಪಾರ ಮಾಡುವುದು ಮತ್ತು ಗಡಿಯಾಚೆಗಿನ ಸುಗಮ ಪಾವತಿಗಳು ನಮ್ಮ ಆರ್ಥಿಕ ಸಹಕಾರವನ್ನು ಬಲಪಡಿಸುತ್ತವೆ’ ಎಂದಿದ್ದರು.
ಬ್ರಿಕ್ಸ್ ಏಕೆ ಮುಖ್ಯ?: ಜಾಗತಿಕ ಮಾರುಕಟ್ಟೆಯ ವಿಚಾರದಲ್ಲಿ ಅಮೆರಿಕ ಹೇಗೆ ಮುಖ್ಯವೋ, ಬ್ರಿಕ್ಸ್ ರಾಷ್ಟ್ರಗಳು ಕೂಡ ಅಷ್ಟೇ ಮುಖ್ಯ. ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ 2006ರಲ್ಲಿ ‘ಬ್ರಿಕ್’ ಸಂಘಟನೆ ಹುಟ್ಟುಹಾಕಿದವು. ನಾಲ್ಕು ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಕೂಡ ಸೇರಿ, ಇದು ‘ಬ್ರಿಕ್ಸ್’ ಎನ್ನುವ ಹೆಸರು ಪಡೆಯಿತು. ವರ್ಷದಿಂದ ವರ್ಷಕ್ಕೆ ಬ್ರಿಕ್ಸ್ ಸದಸ್ಯತ್ವ ಪಡೆಯುತ್ತಿರುವ ಮತ್ತು ಪಡೆಯಲು ಬಯಸುತ್ತಿರುವ ರಾಷ್ಟ್ರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸದ್ಯ 10 ದೇಶಗಳು ಸದಸ್ಯತ್ವ ಹೊಂದಿದ್ದು, ಆರ್ಥಿಕ ಮತ್ತು ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವ ಪ್ರಯತ್ನ ನಡೆಸುತ್ತಿವೆ. ಜಗತ್ತಿನ ಶೇ 40ರಷ್ಟು ಜನಸಂಖ್ಯೆ ಈ ರಾಷ್ಟ್ರಗಳಲ್ಲಿದ್ದರೆ, ಜಾಗತಿಕ ಜಿಡಿಪಿಯ ಮೂರನೇ ಒಂದು ಭಾಗದಷ್ಟು ಪಾಲು ಈ ರಾಷ್ಟ್ರಗಳದ್ದಾಗಿದೆ. ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಪಶ್ಚಿಮದ ಬಲಾಢ್ಯ ದೇಶಗಳಿಗೆ ಪರ್ಯಾಯವಾದ ಶಕ್ತಿಯನ್ನು ಹುಟ್ಟುಹಾಕುವ ಇರಾದೆ ಈ ರಾಷ್ಟ್ರಗಳದ್ದು.
ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮಾದರಿಯಲ್ಲೇ ಬ್ರಿಕ್ಸ್ ರಾಷ್ಟ್ರಗಳು ರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್ (ಎನ್‌ಡಿಬಿ) ಮತ್ತು ಆಪದ್ಧನ ವ್ಯವಸ್ಥೆಯನ್ನೂ (ಸಿಆರ್‌ಎ) ರೂಪಿಸಿವೆ. ಬ್ರಿಕ್ಸ್ ಕರೆನ್ಸಿಯನ್ನು ಹುಟ್ಟುಹಾಕುವುದು ಇದರ ಮುಂದಿನ ಯೋಜನೆ. ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಅಮೆರಿಕದ ಸಾರ್ವಭೌಮತ್ವವನ್ನು ಎದುರಿಸಲು, ಡಾಲರ್ ಅವಲಂಬನೆಯನ್ನು ತಪ್ಪಿಸಲು, ತಮ್ಮ ದೇಶಗಳ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪ್ರತ್ಯೇಕ ಕರೆನ್ಸಿ ಅವಶ್ಯಕ ಎನ್ನುವುದು ಈ ರಾಷ್ಟ್ರಗಳ ನಂಬಿಕೆ.
ಒಮ್ಮತ ಸುಲಭವಲ್ಲ
ಅಮೆರಿಕದ ದಿಗ್ಭಂಧನಗಳನ್ನು ಎದುರಿಸುತ್ತಿರುವ ರಷ್ಯಾ ಮತ್ತು ಜಗತ್ತಿನ ದೊಡ್ಡ ಆರ್ಥಿಕತೆ ಎಂಬ ಸ್ಥಾನಕ್ಕಾಗಿ ಅಮೆರಿಕದೊಂದಿಗೆ ಜಿದ್ದಾಜಿದ್ದಿಗೆ ಬಿದ್ದಿರುವ ಚೀನಾ ಪರ್ಯಾಯ ಕರೆನ್ಸಿಯ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸುತ್ತಾ ಬಂದಿವೆ. ಬ್ರಿಕ್ಸ್ ಕರೆನ್ಸಿ ಪರಿಕಲ್ಪನೆ ಇನ್ನೂ ಶೈಶವಾವಸ್ಥೆಯಲ್ಲಿದೆ. ಹೊಸ ಕರೆನ್ಸಿ ಬಳಕೆಗೆ ಎಲ್ಲ ಸದಸ್ಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಬೇಕು. ಅದು ಅಷ್ಟು ಸುಲಭವಲ್ಲ. ಹಾಗಾಗಿ, ಬ್ರಿಕ್ಸ್ ಕರೆನ್ಸಿ ಚಾಲ್ತಿಗೆ ಬರಲು ಸುದೀರ್ಘ ಸಮಯವೇ ಬೇಕಾಗಬಹುದು.
ಬ್ರಿಕ್ಸ್ ರಾಷ್ಟ್ರಗಳ ಪೈಕಿ ಚೀನಾ, ರಷ್ಯಾ ಬಿಟ್ಟು, ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ. ಹಾಗಾಗಿ, ಏಕಾಏಕಿ ಅಮೆರಿಕದ ವಿರುದ್ಧವಾದ ಧೋರಣೆಯನ್ನು ಈ ರಾಷ್ಟ್ರಗಳು ತಳೆಯಲಾರವು. ಜೊತೆಗೆ, ಈ ಎಲ್ಲ ರಾಷ್ಟ್ರಗಳ ಆರ್ಥಿಕ ಸ್ಥಿತಿಗತಿಗಳು ಬೇರೆ ಬೇರೆ. ಈ ರಾಷ್ಟ್ರಗಳ ನಡುವಿನ ವ್ಯಾಪಾರ ಕೊರತೆ ತೀವ್ರವಾಗಿದೆ. ಈ ದೇಶಗಳ ವಿತ್ತೀಯ, ವ್ಯಾಪಾರ, ರಾಜಕೀಯ ನೀತಿಗಳಲ್ಲಿ ಭಿನ್ನತೆ ಇದೆ. ರಾಷ್ಟ್ರಗಳ ಕರೆನ್ಸಿಗಳ ವಿನಿಮಯ ದರಗಳಲ್ಲೂ ವ್ಯತ್ಯಾಸವಿದೆ. ಭಾರತ–ಚೀನಾ ಸೇರಿದಂತೆ ಕೆಲವು ಸದಸ್ಯ ರಾಷ್ಟ್ರಗಳ ನಡುವೆ ನಂಬಿಕೆಯ ಕೊರತೆಯೂ ಇದೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತರೆ ಮಾತ್ರ ಪರ್ಯಾಯ ಕರೆನ್ಸಿ ಪರಿಕಲ್ಪನೆ ಕಾರ್ಯರೂಪಕ್ಕೆ ಬರಬಹುದು. ಆದರೆ, ಅದಷ್ಟು ಸುಲಭವಲ್ಲ ಎಂದು ಹೇಳುತ್ತಾರೆ ತಜ್ಞರು.
ಡಾಲರ್ ಮೇಲೆ ಏನು ಪರಿಣಾಮ?
ಪರ್ಯಾಯ ಕರೆನ್ಸಿ ಇನ್ನೂ ಪ್ರಸ್ತಾವದ ಹಂತದಲ್ಲಿದೆಯಷ್ಟೆ. ಹಾಗಿದ್ದರೂ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಬ್ರಿಕ್ಸ್ ರಾಷ್ಟ್ರಗಳ ವಿರುದ್ಧ ಗುಡುಗಿದ್ದಾರೆ. ಏಕೆಂದರೆ, ಜಾಗತಿಕ ರಾಷ್ಟ್ರಗಳ ಪ್ರಭಾವಿ ಗುಂಪುಗಳಲ್ಲಿ ‘ಬ್ರಿಕ್ಸ್’ ಕೂಡ ಒಂದು. ಅಮೆರಿಕವನ್ನು ಅವಲಂಬಿಸಿರುವ ಹಲವು ರಾಷ್ಟ್ರಗಳು ಅದರ ಸದಸ್ಯರು. ಒಂದು ವೇಳೆ ಬ್ರಿಕ್ಸ್ ರಾಷ್ಟ್ರಗಳು ಪರ್ಯಾಯ ಕರೆನ್ಸಿಯಲ್ಲಿ ವ್ಯವಹಾರ ಆರಂಭಿಸಿದರೆ, ಜಾಗತಿಕ ಮಟ್ಟದಲ್ಲಿ ಡಾಲರ್ ಬೇಡಿಕೆ ಕಡಿಮೆಯಾಗಲಿದೆ. ಜಗತ್ತಿನ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಕಳೆದುಕೊಳ್ಳಲಿದೆ. ಇದರಿಂದ ಅಮೆರಿಕದ ಅರ್ಥವ್ಯವಸ್ಥೆಗೆ ಧಕ್ಕೆಯಾಗುವುದಲ್ಲದೇ, ಜಾಗತಿಕ ಆರ್ಥಿಕತೆ ಮೇಲಿನ ವಿಶ್ವದ ‘ದೊಡ್ಡಣ್ಣ’ನ ಹಿಡಿತವೂ ಸಡಿಲವಾಗಲಿದೆ. ಹಾಗಾದ ಪಕ್ಷದಲ್ಲಿ ಜಾಗತಿಕವಾಗಿ ಚೀನಾ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಬಹುದು. ಜಗತ್ತಿನ ಆಗುಹೋಗುಗಳಲ್ಲಿ ಚೀನಾ, ರಷ್ಯಾ, ಭಾರತದಂತಹ ಬ್ರಿಕ್ಸ್ ರಾಷ್ಟ್ರಗಳ ಕೈ ಮೇಲಾಗಿ, ತನ್ನ ಪ್ರಭಾವ ಕಡಿಮೆಯಾಗಬಹುದು ಎಂಬ ಆತಂಕ ಅಮೆರಿಕದ್ದು.
ಪರ್ಯಾಯ ಕರೆನ್ಸಿ ಚಾಲ್ತಿಗೆ ಬಂದರೆ, ಅಮೆರಿಕ ಮಾತ್ರವಲ್ಲ, ಡಾಲರ್ ಅನ್ನೇ ಅವಲಂಬಿಸಿರುವ ಜಾಗತಿಕ ಆರ್ಥಿಕತೆಯ ಮೇಲೂ ನಕಾರಾತ್ಮಕ ಪ್ರಭಾವ ಬೀರಬಹುದು ಎಂದೂ ಹೇಳಲಾಗುತ್ತಿದೆ.
ಭಾರತದ ನಿಲುವೇನು?
ಡಾಲರ್‌ಗೆ ಪರ್ಯಾಯವಾದ ಕರೆನ್ಸಿ ಹೊಂದುವ ಬಗ್ಗೆ ಭಾರತ ಹೆಚ್ಚು ಉತ್ಸುಕವಾಗಿದ್ದಂತೆ ಕಾಣುತ್ತಿಲ್ಲ. ‘ಜಾಗತಿಕ ವ್ಯಾಪಾರದಲ್ಲಿ ಡಾಲರ್ ಬಳಕೆಯನ್ನು ಪೂರ್ಣವಾಗಿ ನಿಲ್ಲಿಸುವುದು ಅಥವಾ ಈಗಿನ ಡಾಲರ್ ವ್ಯವಸ್ಥೆ ಬದಲಿಸುವುದು ತನ್ನ ಗುರಿಯಲ್ಲ’ ಎಂಬುದನ್ನು ಅದು ಈಗಾಗಲೇ ಸ್ಪಷ್ಟಪಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ಚಿಂತನ–ಮಂಥನ ಕಾರ್ಯಕ್ರಮವೊಂದರಲ್ಲಿ ಈ ವಿಚಾರದಲ್ಲಿ ಭಾರತದ ನಿಲುವನ್ನು ಮುಂದಿಟ್ಟಿದ್ದಾರೆ.
ಆದರೆ, ರೂಪಾಯಿಯನ್ನು ಜಾಗತಿಕ ಮಟ್ಟದ ಕರೆನ್ಸಿಯನ್ನಾಗಿಸಲು ಭಾರತ ಪ್ರಯತ್ನಿಸುತ್ತಿದೆ. ತಾನು ನಡೆಸುವ ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಡಾಲರ್ ಅವಲಂಬನೆ ತಗ್ಗಿಸಲು ರೂಪಾಯಿಯನ್ನೇ ಬಳಸುವ ಉದ್ದೇಶವನ್ನು ಹೊಂದಿದೆ. 2022ರಿಂದ ಭಾರತವು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ರೂಪಾಯಿಯನ್ನೂ ಬಳಸಲು ಆರಂಭಿಸಿದೆ.
ಡಾಲರ್ ಕೊರತೆ ಎದುರಿಸುತ್ತಿರುವ ರಾಷ್ಟ್ರಗಳಲ್ಲಿ, ಅಮೆರಿಕದ ದಿಗ್ಬಂಧನಕ್ಕೆ ಗುರಿಯಾದ ರಾಷ್ಟ್ರಗಳೊಂದಿಗೆ ಸುಗಮವಾಗಿ ವ್ಯವಹಾರ ನಡೆಸಲು ರೂಪಾಯಿ ಇಲ್ಲವೇ ಪರ್ಯಾಯ ಕರೆನ್ಸಿಯಲ್ಲಿ ವಹಿವಾಟು ನಡೆಸುವುದು ಅನಿವಾರ್ಯ. ಭವಿಷ್ಯದಲ್ಲಿ ಜಗತ್ತಿನ ಪ್ರಭಾವಿ ಕರೆನ್ಸಿಗಳಿಂದ ಎದುರಾಗಬಹುದಾದ ಸವಾಲುಗಳನ್ನು ನಿಭಾಯಿಸಲು ಮತ್ತು ದೇಶದ ವಿತ್ತೀಯ ಹಿತಾಸಕ್ತಿ ಕಾಪಾಡುವುದಕ್ಕಾಗಿ ರೂಪಾಯಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಅವಶ್ಯಕತೆ ಇದೆ ಎಂಬ ನಿಲುವು ಭಾರತದ್ದು.
ನೆರೆಯ ಭೂತಾನ್, ಶ್ರೀಲಂಕಾ, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಭಾರತವು ಈಗಾಗಲೇ ರೂಪಾಯಿಯಲ್ಲೇ ವಹಿವಾಟು ನಡೆಸುತ್ತಿದೆ. ಉಕ್ರೇನ್ ಮೇಲೆ ಯುದ್ಧ ಸಾರಿದ ಕಾರಣಕ್ಕೆ ರಷ್ಯಾದ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನಗಳನ್ನು ಹೇರಿದ ನಂತರ ಅಮೆರಿಕದ ವಿರೋಧದ ನಡುವೆಯೂ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಖರೀದಿಸುತ್ತಾ ಬಂದಿದೆ. ಈ ವಹಿವಾಟಿಗೆ ರೂಪಾಯಿಯಲ್ಲೇ ಹಣ ಪಾವತಿಸುತ್ತಿದೆ. ಅಂತರರಾಷ್ಟ್ರೀಯ ವ್ಯವಹಾರದ ಹಣವನ್ನು ರೂಪಾಯಿಯಲ್ಲೇ ಪಾವತಿಸಲು ಅನುವು ಮಾಡುವುದಕ್ಕಾಗಿ ಹೊರದೇಶಗಳು ಭಾರತದಲ್ಲಿ ವೋಸ್ಟ್ರೊ ಖಾತೆಯನ್ನು (ಒಂದು ಬ್ಯಾಂಕ್, ಇನ್ನೊಂದು ಬ್ಯಾಂಕ್‌ನ ಪರವಾಗಿ ಹೊಂದಿರುವ ಖಾತೆ) ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಿದೆ. ರಷ್ಯಾ, ಬ್ರಿಟನ್, ಇಸ್ರೇಲ್, ಜರ್ಮನಿ ಸೇರಿದಂತೆ 22 ದೇಶಗಳು ಭಾರತದಲ್ಲಿ ವೋಸ್ಟ್ರೊ ಖಾತೆಗಳನ್ನು ಹೊಂದಿವೆ.
‘ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳಾದ ರಷ್ಯಾ, ಚೀನಾಗಳ ಪೈಕಿ ಭಾರತವು ರಷ್ಯಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೂ ಚೀನಾದೊಂದಿಗಿನ ಸಂಬಂಧ ಅಷ್ಟಕ್ಕಷ್ಟೇ. ಬ್ರಿಕ್ಸ್ ರಾಷ್ಟ್ರಗಳಲ್ಲೇ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೀನಾ ಯಾವುದೇ ವಿಚಾರದಲ್ಲಿ ಇತರ ರಾಷ್ಟ್ರಗಳ ಮೇಲೆ ಪ್ರಭಾವ ಬೀರಬಹುದು. ಪರ್ಯಾಯ ಕರೆನ್ಸಿ ವಿಷಯದಲ್ಲೂ ಅದು ಪ್ರಭಾವ ಬೀರಲು ಯತ್ನಿಸಬಹುದು ಮತ್ತು ತನ್ನ ಕರೆನ್ಸಿ ಯುವಾನ್ ಅನ್ನೇ ಪರ್ಯಾಯ ಕರೆನ್ಸಿಯಾಗಿ ಮಾಡಲೂ ಯತ್ನಿಸಬಹುದು. ಭಾರತ ಇದನ್ನು ಯಾವುದೇ ಕಾರಣಕ್ಕೂ ಒಪ್ಪದು. ಹಾಗಾಗಿ, ಬ್ರಿಕ್ಸ್ ಕರೆನ್ಸಿ ಬಗ್ಗೆ ಅದು ಉತ್ಸಾಹ ತೋರುವ ಸಾಧ್ಯತೆ ಕಡಿಮೆ’ ಎಂಬುದು ಹಣಕಾಸು ತಜ್ಞರ ವಿಶ್ಲೇಷಣೆ.
ಆಧಾರ: ಪಿಟಿಐ, ರಾಯಿಟರ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.