ಎಐ ಚಿತ್ರ: ಹಳೇಮನಿ
ಸತತ 30 ದಿನ ಜೈಲುವಾಸಕ್ಕೆ ಒಳಗಾದರೆ ಪ್ರಧಾನಿ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ ಮತ್ತು ಸಚಿವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿದೆ. ಜನರ ಆಶಯ ಮತ್ತು ಆಶೋತ್ತರಗಳನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ರಾಜಕೀಯ ಹಿತಾಸಕ್ತಿ ಮೀರಿ ಕೆಲಸ ಮಾಡುವ ದಿಸೆಯಲ್ಲಿ ಕಾಯ್ದೆ ರೂಪಿಸಲು ಮುಂದಾಗಿದ್ದೇವೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಆದರೆ, ವಿರೋಧ ಪಕ್ಷಗಳು ಮಸೂದೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳನ್ನು ಬಳಸಿ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ಇದಾಗಿದ್ದು, ಇದು ಅಸಾಂವಿಧಾನಿಕ ಎಂದು ಆರೋಪಿಸಿವೆ..
–––––––
ಕೇಂದ್ರ ಸರ್ಕಾರವು ಪ್ರಧಾನಿ, ಮುಖ್ಯಮಂತ್ರಿ ಮತ್ತು ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಚಿವರನ್ನು ಹುದ್ದೆಯಿಂದ ಪದಚ್ಯುತಿಗೊಳಿಸಲು ಸಾಧ್ಯವಾಗುವಂತಹ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದೆ. ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025, ಕೇಂದ್ರಾಡಳಿತ ಸರ್ಕಾರ ತಿದ್ದುಪಡಿ ಮಸೂದೆ, ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ತಿದ್ದುಪಡಿ ಮಸೂದೆ– 2025 ಅನ್ನು ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ್ದಾರೆ.
ನೈತಿಕತೆ, ಉತ್ತಮ ಆಡಳಿತ ಮತ್ತು ಸಾರ್ವಜನಿಕ ನಂಬಿಕೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಮಸೂದೆಗಳನ್ನು ಮಂಡಿಸಲಾಗಿದೆ; ಜನಪ್ರತಿನಿಧಿಗಳು ರಾಜಕೀಯ ಹಿತಾಸಕ್ತಿ ಮೀರಿ, ಅನುಮಾನಕ್ಕೆ ಆಸ್ಪದವಿಲ್ಲದಂತೆ ವರ್ತಿಸಬೇಕು; ಈ ದಿಸೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಲು ಮುಂದಾಗಿರುವುದಾಗಿ ಕೇಂದ್ರ ಸರ್ಕಾರವು ಪ್ರತಿಪಾದಿಸಿದೆ. ಆದರೆ, ವಿರೋಧ ಪಕ್ಷಗಳು ಕಾಯ್ದೆ ದುರ್ಬಳಕೆಯಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಮಸೂದೆಯ ಹಿಂದೆ, ರಾಜ್ಯ ಸರ್ಕಾರಗಳನ್ನು ಅಭದ್ರಗೊಳಿಸುವ ನರೇಂದ್ರ ಮೋದಿ ಸರ್ಕಾರದ ತಂತ್ರಗಾರಿಕೆ ಮತ್ತು ಪಿತೂರಿ ಅಡಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ವಿರೋಧ ಪಕ್ಷಗಳು ಹೇಳುವುದೇನು?
* ಮಸೂದೆಗಳು ತೀವ್ರ ತುರ್ತುಪರಿಸ್ಥಿತಿಯತ್ತ (ಸೂಪರ್ ಎಮರ್ಜೆನ್ಸಿ) ಇಟ್ಟಿರುವ ಹೆಜ್ಜೆಯಾಗಿವೆ; ಭಾರತದಲ್ಲಿ ಎಂದೆಂದಿಗೂ ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸುವ ಪ್ರಯತ್ನವಾಗಿದೆ
* ಮಸೂದೆಯು ಕ್ರಿಮಿನಲ್ ನ್ಯಾಯದ ನ್ಯಾಯಶಾಸ್ತ್ರಕ್ಕೆ ವಿರುದ್ಧವಾಗಿದ್ದು, ಸಂಸದೀಯ ಪ್ರಜಾಪ್ರಭುತ್ವವನ್ನು ವಿರೂಪಗೊಳಿಸುತ್ತದೆ. ಅಧಿಕಾರ ದುರುಪಯೋಗಕ್ಕೆ ಬಾಗಿಲು ತೆರೆಯಲಿದ್ದು, ಸಂವಿಧಾನದತ್ತವಾದ ಎಲ್ಲ ರಕ್ಷೆಗಳನ್ನೂ ಗಾಳಿಗೆ ತೂರುತ್ತದೆ
* ಸರ್ಕಾರದ ಮುಖ್ಯ ಹುದ್ದೆಗಳಲ್ಲಿರುವವರು 30 ದಿನ ಜೈಲುವಾಸ ಅನುಭವಿಸಿದರೆ, ವಿಚಾರಣೆಯ ಹಂತದಲ್ಲೇ ಅವರನ್ನು ಪದಚ್ಯುತಗೊಳಿಸಲು ಮಸೂದೆಯು ಅವಕಾಶ ನೀಡುತ್ತದೆ. ಆದರೆ, ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾಗುವವರೆಗೆ ಅವರು ಕೇವಲ ಆರೋಪಿ ಆಗಿರುತ್ತಾರೆ ಎನ್ನುವುದು ನಮ್ಮ ಸಂವಿಧಾನದ ಮುಖ್ಯ ಅಂಶವಾಗಿದೆ. ಹಾಗಾಗಿ ಈ ಮಸೂದೆ ಸಂವಿಧಾನ ವಿರೋಧಿ
* ಇದು ಅಧಿಕಾರಗಳ ಪ್ರತ್ಯೇಕತೆಯ ನಿಯಮಕ್ಕೆ ವಿರುದ್ಧವಾಗಿದ್ದು, ಕಾರ್ಯಾಂಗವೇ ನ್ಯಾಯಾಂಗದಂತೆ ತೀರ್ಪು ನೀಡುವ ಸಂದರ್ಭ ಸೃಷ್ಟಿಗೆ ಕಾರಣವಾಗುತ್ತದೆ. ಚುನಾಯಿತ ಸರ್ಕಾರದ ಮೇಲೆ ಪ್ರಯೋಗಿಸಲಾಗುವ ಮಾರಣಾಂತಿಕ ಪ್ರಹಾರವಾಗಲಿದೆ. ದೇಶದಲ್ಲಿ ಪೊಲೀಸ್ ಪ್ರಭುತ್ವ ಸ್ಥಾಪಿಸಲು ಈ ತಿದ್ದುಪಡಿ ತರಲಾಗುತ್ತಿದೆ
* ಯಾವುದೇ ಸರ್ಕಾರ ಯಾವುದೇ ಸಚಿವರ ಬಗ್ಗೆಯಾದರೂ ಪ್ರಕರಣಗಳನ್ನು ದಾಖಲಿಸಬಹುದು. ಪ್ರಸ್ತುತ, ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ, ಸಿಬಿಐ ಅತ್ಯಂತ ವಿವಾದಾಸ್ಪದವಾಗಿವೆ. ಈ ಸಂಸ್ಥೆಗಳು ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ಯಾವುದೇ ರಾಜ್ಯದ ಮುಖ್ಯಮಂತ್ರಿ ಅಥವಾ ಸಚಿವರ ಬಗ್ಗೆ ಬೇಕಿದ್ದರೂ ವಿಚಾರಣೆ ಆರಂಭಿಸಬಹುದು, ಆ ಪ್ರಕರಣಗಳಿಗೆ ಸಂಬಂಧಿಸಿ ಅವರನ್ನು ಜೈಲಿಗೆ ಕಳುಹಿಸಬಹುದು. ಇದು ಕಾನೂನಿನ ಸಹಜ ನ್ಯಾಯದ ತತ್ವಗಳಿಗೆ ವಿರುದ್ಧ
* ದಮನಕಾರಿ ಉದ್ದೇಶದ ಈ ಮಸೂದೆ ಎಲ್ಲ ತತ್ವಗಳಿಗೂ ವಿರುದ್ಧವಾದುದಾಗಿದೆ. ಇದನ್ನು ಭ್ರಷ್ಟಾಚಾರ ವಿರುದ್ಧದ ಕ್ರಮ ಎಂದು ಪ್ರತಿಪಾದಿಸುತ್ತಿರುವುದು ಒಂದು ತಂತ್ರವಷ್ಟೇ. ಪಕ್ಷಪಾತದಿಂದ ಕೂಡಿದ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿ, ಅಧಿಕಾರದಲ್ಲಿರುವವರನ್ನು ಮನಬಂದಂತೆ ಬಂಧಿಸಿ, ಹುದ್ದೆಯಿಂದ ಕೆಳಗಿಳಿಸುವ ತಂತ್ರ ಇದರ ಹಿಂದಿದೆ
* ಆರ್‌ಎಸ್‌ಎಸ್ ನಿಯಂತ್ರಿತ ಕೇಂದ್ರ ಸರ್ಕಾರವು ಚುನಾಯಿತ ರಾಜ್ಯ ಸರ್ಕಾರಗಳನ್ನು ದುರ್ಬಲಗೊಳಿಸಿದ ಇತಿಹಾಸ ನೋಡಿದರೆ, ಅತ್ಯುನ್ನತ ಮಟ್ಟದಲ್ಲಿ ಅಪರಾಧ ತಡೆಗಟ್ಟುವ ನೆಪದಲ್ಲಿ ಮಂಡಿಸಲಾಗಿರುವ ಮಸೂದೆಗಳ ನಿಜವಾದ ಉದ್ದೇಶ ಏನು ಎನ್ನುವುದು ತಿಳಿಯುತ್ತದೆ. ಮತದಾರರ ಪಟ್ಟಿಯ ವಿಶೇಷ, ಸಮಗ್ರ ಪರಿಷ್ಕರಣೆಯೊಂದಿಗೆ (ಎಸ್‌ಐಆರ್) ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಪ್ರಯತ್ನವೂ ನಡೆಯುತ್ತಿದೆ
* ಇ.ಡಿ., ಸಿಬಿಐ, ಆದಾಯ ತೆರಿಗೆ ಇಲಾಖೆ, ಎನ್‌ಐಎ ಮುಂತಾದ ಕೇಂದ್ರದ ತನಿಖಾ ಸಂಸ್ಥೆಗಳನ್ನು ಆಯುಧಗಳನ್ನಾಗಿ ಬಳಸಿಕೊಂಡು, ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರವು ನಡೆಸಿದ ಸಂಕುಚಿತ, ಪಕ್ಷಪಾತದಿಂದ ಕೂಡಿದ ಕೃತ್ಯಗಳನ್ನು ಹಲವು ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್ ಕೂಡ ಖಂಡಿಸಿದೆ. ಪ್ರಸ್ತುತ ಮಸೂದೆಗಳ ಮೂಲಕ ಅದಕ್ಕೆ ಕಾನೂನಿನ ಮಾನ್ಯತೆ ನೀಡುವ ಪ್ರಯತ್ನ ನಡೆಯುತ್ತಿದೆ
* ತನ್ನ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಬದಲು ಈ ಸರ್ಕಾರವು ಉತ್ತರದಾಯಿತ್ವ ಇಲ್ಲದ ಅಧಿಕಾರ, ಸಂಪತ್ತು ಮತ್ತು ನಿಯಂತ್ರಣವನ್ನು ಗಳಿಸುವುದರಲ್ಲಿ ಮಗ್ನವಾಗಿದೆ.
ಮಸೂದೆಯಲ್ಲೇನಿದೆ?
l ಸಂವಿಧಾನ (130ನೇ ತಿದ್ದುಪಡಿ) ಮಸೂದೆಯು ಸಂವಿಧಾನದ 75, 164 ಮತ್ತು 239ಎಎ ವಿಧಿಗಳಿಗೆ ತಿದ್ದುಪಡಿ ತರುವ ಉದ್ದೇಶ ಹೊಂದಿದೆ
ಕೇಂದ್ರ ಸಚಿವ ಸಂಪುಟಕ್ಕೆ ಪ್ರಧಾನಿ ಸೇರಿದಂತೆ ಸಚಿವರ ನೇಮಕ ಮತ್ತು ಅವರ ಜವಾಬ್ದಾರಿಗಳನ್ನು 75ನೇ ವಿಧಿಯು ವಿವರಿಸುತ್ತದೆ. 164ನೇ ವಿಧಿಯು ರಾಜ್ಯಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರ ನೇಮಕ ಪ್ರಕ್ರಿಯೆ ಹಾಗೂ ಅವರ ಹೊಣೆಗಾರಿಕೆಗಳೇನು ಎಂಬುದನ್ನು ತಿಳಿಸುತ್ತದೆ. 239ಎಎ ವಿಧಿಯು ರಾಷ್ಟ್ರೀಯ ರಾಜಧಾನಿ ದೆಹಲಿಯ ಆಡಳಿತಕ್ಕೆ ಸಂಬಂಧಿಸಿದಂತೆ ವಿಶೇಷ ಅವಕಾಶಗಳನ್ನು ಕಲ್ಪಿಸುತ್ತದೆ. 1991ರಲ್ಲಿ ಈ ವಿಧಿಯನ್ನು ಸಂವಿಧಾನಕ್ಕೆ ಸೇರ್ಪಡೆಗೊಳಿಸಲಾಗಿದ್ದು, ದೆಹಲಿಯಲ್ಲಿ ವಿಧಾನಸಭೆ ಸ್ಥಾಪನೆ ಮತ್ತು ಸಚಿವ ಸಂಪುಟ ರಚನೆಯ ಅಧಿಕಾರ ನೀಡಿದೆ. ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ಬಿಟ್ಟು, ಉಳಿದ ವಿಚಾರಗಳಲ್ಲಿ ದೆಹಲಿಗೆ ಸೀಮಿತವಾಗಿ ಕಾನೂನುಗಳನ್ನು ರೂಪಿಸುವ ಅಧಿಕಾರವನ್ನು ಇದು ದೆಹಲಿಯ ವಿಧಾನಸಭೆಗೆ ನೀಡಿದೆ.
l 75ನೇ ವಿಧಿಯ 5ನೇ ಪರಿಚ್ಛೇದ (ಕ್ಲಾಸ್) ನಂತರ 5ಎ ಎಂಬ ಹೊಸ ಪರಿಚ್ಛೇದ ಸೇರ್ಪಡೆಗೊಳಿಸಲು ಈ ಮಸೂದೆ ಪ್ರಸ್ತಾಪಿಸುತ್ತದೆ
ಅದರ ಪ್ರಕಾರ, ಐದು ವರ್ಷ ಮತ್ತು ಅದಕ್ಕಿಂತ ಹೆಚ್ಚು ಅವಧಿಗೆ ಜೈಲು ಶಿಕ್ಷೆಗೆ ಅವಕಾಶ ಇರುವ ಅಪರಾಧ ಎಸಗಿರುವ ಆರೋಪದಲ್ಲಿ ಕೇಂದ್ರ ಸಚಿವರೊಬ್ಬರು ಬಂಧನಕ್ಕೆ ಒಳಪಟ್ಟು, ಸತತ 30 ದಿನ ಕಸ್ಟಡಿಯಲ್ಲಿದ್ದರೆ ಪ್ರಧಾನಿ ಅವರ ಶಿಫಾರಸಿನ ಅನ್ವಯ 31ನೇ ದಿನ ಆ ಸಚಿವರನ್ನು ರಾಷ್ಟ್ರಪತಿ ಅವರು ಹುದ್ದೆಯಿಂದ ವಜಾ ಮಾಡಬಹುದು.
ಒಂದು ವೇಳೆ, ಪ್ರಧಾನಿಯವರು 31ನೇ ದಿನ ಆ ಸಚಿವರನ್ನು ವಜಾಗೊಳಿಸುವಂತೆ ರಾಷ್ಟ್ರಪತಿ ಅವರಿಗೆ ಶಿಫಾರಸು ಮಾಡದಿದ್ದರೂ 32ನೇ ದಿನ ಸಚಿವರು ತಮ್ಮ ಹುದ್ದೆಯನ್ನು ತನ್ನಿಂತಾನೆ ಕಳೆದುಕೊಳ್ಳುತ್ತಾರೆ.
ಪ್ರಧಾನಿಯಾಗಿದ್ದವರಿಗೂ ಇದೇ ನಿಯಮ ಅನ್ವಯವಾಗುತ್ತದೆ. 31ನೇ ದಿನ ಅವರಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡದಿದ್ದರೆ ಮರುದಿನದಿಂದ ಅನ್ವಯವಾಗುವಂತೆ ಅವರು ಪ್ರಧಾನಿ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ
l ರಾಜ್ಯಗಳ ಮಟ್ಟದಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವರು ಅಪರಾಧ ಪ್ರಕರಣದಲ್ಲಿ ಸಿಲುಕಿ ಸತತ 30 ದಿನ ಕಸ್ಟಡಿಯಲ್ಲಿದ್ದರೆ, ಅವರನ್ನು ಹುದ್ದೆಯಿಂದ ತೆರವುಗೊಳಿಸುವುದಕ್ಕಾಗಿ ಸಂವಿಧಾನದ 164ನೇ ವಿಧಿಯ 4ನೇ ಪರಿಚ್ಛೇದದ ನಂತರ ಹೊಸದಾಗಿ 4ಎ ಪರಿಚ್ಛೇದ ಸೇರ್ಪಡೆಗೊಳಿಸುವ ಬಗ್ಗೆ ತಿದ್ದುಪಡಿ ಮಸೂದೆ ಪ್ರಸ್ತಾಪಿಸುತ್ತದೆ.
ಕೇಂದ್ರ ಸಚಿವರು ಮತ್ತು ಪ್ರಧಾನಿ ಅವರಿಗೆ ಅನ್ವಯವಾಗುವ ನಿಯಮವೇ ರಾಜ್ಯಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರಿಗೂ ಅನ್ವಯವಾಗುತ್ತದೆ. ಕೇಂದ್ರ ಸಚಿವರ ವಿಚಾರದಲ್ಲಿ ಪ್ರಧಾನಿ ಅವರು ಸಚಿವರ ವಜಾಕ್ಕೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿದರೆ, ರಾಜ್ಯಗಳಲ್ಲಿ ಮುಖ್ಯಮಂತ್ರಿಯವರು ರಾಜ್ಯಪಾಲರಿಗೆ ಶಿಫಾರಸು ಮಾಡುತ್ತಾರೆ. ಒಂದುವೇಳೆ, ಶಿಫಾರಸು ಮಾಡದಿದ್ದರೂ, ಕಸ್ಟಡಿಯಲ್ಲಿರುವ ಸಚಿವರು ಅಧಿಕಾರ ಕಳೆದುಕೊಳ್ಳುತ್ತಾರೆ. ಮುಖ್ಯಮಂತ್ರಿಯವರು ಕೂಡ ರಾಜೀನಾಮೆ ನೀಡದೇ ಇದ್ದರೂ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ
l ದೆಹಲಿಗೆ ಸಂಬಂಧಿಸಿದ 239ಎಎ ವಿಧಿಯ ಪರಿಚ್ಛೇದ 5ರ ನಂತರ ‘5ಎ’ ಎಂಬ ಹೊಸ ಪರಿಚ್ಛೇದ ಸೇರಿಸಲು ಈ ಮಸೂದೆ ಅವಕಾಶ ನೀಡುತ್ತದೆ. ಕೇಂದ್ರ ಹಾಗೂ ರಾಜ್ಯಗಳಿಗೆ ಅನ್ವಯವಾಗುವ ನಿಯಮಗಳೇ ಇಲ್ಲಿಗೂ ಅನ್ವಯವಾಗುತ್ತವೆ.
l ಇನ್ನುಳಿದ ಎರಡು ಮಸೂದೆಗಳು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದವು. ಮುಖ್ಯಮಂತ್ರಿ ಹಾಗೂ ಸಚಿವರನ್ನು ವಜಾ ಗೊಳಿಸಲು ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆ 1963 ಹಾಗೂ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ಕಾಯ್ದೆ–2019ಕ್ಕೆ ತಿದ್ದುಪಡಿ ತರಲು ಈ ಮಸೂದೆಗಳಲ್ಲಿ ಪ್ರಸ್ತಾಪಿಸಲಾಗಿದೆ.
ದುರ್ಬಳಕೆಯ ಆತಂಕ
ಈ ಮಸೂದೆಯು ಕಾಯ್ದೆಯಾಗಿ ಜಾರಿಯಾದರೆ, ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷವು ರಾಜ್ಯಗಳಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರದಲ್ಲಿರುವ ವಿರೋಧ ಪಕ್ಷಗಳ ಸರ್ಕಾರಗಳನ್ನು ಉರುಳಿಸಲು ಅಥವಾ ತನ್ನ ರಾಜಕೀಯ ದ್ವೇಷ ಸಾಧನೆಗಾಗಿ ಇದನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ತಿಂಗಳಿಗಿಂತಲೂ ಹೆಚ್ಚು ಸಮಯ ಜೈಲಿನಲ್ಲಿದ್ದರೂ ಮುಖ್ಯಮಂತ್ರಿ, ಸಚಿವರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ, ಜೈಲಿನಿಂದಲೇ ಅಧಿಕಾರ ನಡೆಸಿದ ಉದಾಹರಣೆಗಳಿವೆ.
ದೆಹಲಿಯ ಹಿಂದಿನ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಜೈಲಿನಲ್ಲಿದ್ದುಕೊಂಡೇ ಆರು ತಿಂಗಳಿಗಿಂತಲೂ ಹೆಚ್ಚು ಸಮಯ ಆಡಳಿತ ನಡೆಸಿದ್ದರು. ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್ ಅವರು 2024ರ ಮಾರ್ಚ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ ಸೆಪ್ಟೆಂಬರ್‌ನಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ದೆಹಲಿಯ ಎಎಪಿ ಸರ್ಕಾರದಲ್ಲಿ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ 2022ರಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಬಂಧನದ ನಂತರವೂ ಒಂಬತ್ತು ತಿಂಗಳು ಅವರು ಕೇಜ್ರಿವಾಲ್ ಸಂಪುಟಕ್ಕೆ ರಾಜೀನಾಮೆ ನೀಡಿರಲಿಲ್ಲ.
ಅಂಗೀಕಾರ ಸಾಧ್ಯತೆ ಕ್ಷೀಣ
ಬುಧವಾರ ಮಂಡಿಸಲಾದ ಮೂರು ಮಸೂದೆಗಳಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಬಿಟ್ಟು ಉಳಿದೆರಡು ಸಾಮಾನ್ಯ ಮಸೂದೆಗಳು. ಆದರೆ, ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾದರಷ್ಟೇ ಉಳಿದವುಗಳಿಗೆ ಮೌಲ್ಯ. ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಮತ ಅಗತ್ಯ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತ್ಯೇಕವಾಗಿ ಮಸೂದೆಯನ್ನು ಅಂಗೀಕರಿಸಬೇಕು. ಅದಕ್ಕೆ ಬಹುಮತ ಬೇಕು. ಅಲ್ಲದೇ, ಮಸೂದೆಯನ್ನು ಮತಕ್ಕೆ ಹಾಕುವಾಗ ಸದನಗಳಲ್ಲಿ ಹಾಜರಿರುವ ಸದಸ್ಯರು ಮೂರನೇ ಎರಡಷ್ಟು ಬಹುಮತದಲ್ಲಿ ಅಂಗೀಕರಿಸಬೇಕು.
ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದ ಉಲ್ಲೇಖಗಳು ಮಸೂದೆಯಲ್ಲಿದ್ದರೆ, ರಾಜ್ಯ ಶಾಸನಸಭೆಗಳು ಇದಕ್ಕೆ ಒಪ್ಪಿಗೆ ನೀಡಬೇಕು. ದೇಶದಲ್ಲಿರುವ ಒಟ್ಟು ವಿಧಾನಸಭೆಗಳು ಬಹುಮತದಿಂದ (ಅರ್ಧಕ್ಕೂ ಹೆಚ್ಚು ವಿಧಾನಸಭೆಗಳು) ತಿದ್ದುಪಡಿಯನ್ನು ಅನುಮೋದಿಸಬೇಕು. ರಾಷ್ಟ್ರಪತಿಯವರ ಅಂಕಿತವೂ ಬೇಕು. ಸದ್ಯ, ಲೋಕಸಭೆಯಲ್ಲಿ ಎನ್‌ಡಿಎಗೆ ಮೂರನೇ ಎರಡರಷ್ಟು ಬಹುಮತ ಇಲ್ಲ. ಹೀಗಾಗಿ, ಈ ಮಸೂದೆ ಅಂಗೀಕಾರಗೊಳ್ಳುವ ಸಾಧ್ಯತೆ ಕ್ಷೀಣ ಎಂದು ಹೇಳಲಾಗುತ್ತಿದೆ.
ಮತ್ತೆ ಅದೇ ಹುದ್ದೆಗೆ ಏರಬಹುದು
ಹುದ್ದೆಯಿಂದ ವಜಾ ಆದವರು ಕಸ್ಟಡಿಯಿಂದ ಬಿಡುಗಡೆಯಾದ ನಂತರ ಮತ್ತೆ ಪ್ರಧಾನಿ, ಕೇಂದ್ರ ಸಚಿವ , ರಾಜ್ಯಗಳಲ್ಲಿ ಮುಖ್ಯಮಂತ್ರಿ, ಸಚಿವರಾಗಿ ನೇಮಕಗೊಳ್ಳುವುದನ್ನು ಈ ತಿದ್ದುಪಡಿಗಳು ತಡೆಯುವುದಿಲ್ಲ. ಅಂದರೆ, ಸತತ 30 ದಿನ ಕಸ್ಟಡಿಯಲ್ಲಿದ್ದ ಕಾರಣಕ್ಕೆ ಅಧಿಕಾರ ಕಳೆದುಕೊಂಡವರು ಜೈಲಿನಿಂದ ಹೊರ ಬಂದವರು ಮೇಲೆ ಮತ್ತೆ ಅದೇ ಹುದ್ದೆಗೆ ಏರಬಹುದು.
**********
ಆಧಾರ–ಪಿಟಿಐ, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.