ADVERTISEMENT

ಆಳ- ಅಗಲ| ಕೋವಿಡ್‌ ಲಸಿಕೆ ವರ್ಷಾಂತ್ಯಕ್ಕೆ ಸಿದ್ಧ?

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 19:30 IST
Last Updated 17 ನವೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮೆರಿಕದ ಮೊಡೆರ್ನಾ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್‌ ಲಸಿಕೆಯು, ಶೇ 95ರಷ್ಟು ಪರಿಣಾಮಕಾರಿ ಎಂದು ಕಂಪನಿ ಹೇಳಿದೆ. ಈ ಲಸಿಕೆಯು ಕೋವಿಡ್‌ ವಿರುದ್ಧ ಹೆಚ್ಚು ಪರಿಣಾಮಕಾರಿಯಾದ ಲಸಿಕೆಯಾಗಿದೆ. ಮೊಡೆರ್ನಾ ಕಂಪನಿಯ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಗಣನೀಯ ಫಲಿತಾಂಶ ನೀಡಿದೆ. ಕಂಪನಿಯು ಮುಂದಿನ ಕೆಲವೇ ವಾರಗಳಲ್ಲಿ ಲಸಿಕೆ ನೀಡಲು ಅನುಮತಿಗಾಗಿ ಅರ್ಜಿ ಸಲ್ಲಿಸಲಿದೆ. ಡಿಸೆಂಬರ್‌ ವೇಳೆಗೆ 2 ಕೋಟಿ ಡೋಸ್‌ಗಳಷ್ಟು ಲಸಿಕೆ ತಯಾರಾಗಲಿದೆ.

ಮೊಡೆರ್ನಾ ಮತ್ತು ಫೈಜರ್ ಕಂಪನಿಯ ಲಸಿಕೆಗಳು ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಇವುಗಳ ಜತೆಯಲ್ಲಿ ರಷ್ಯಾದ ಸ್ಪುಟ್ನಿಕ್‌-ವಿ ಲಸಿಕೆ ಸಹ ಹೆಚ್ಚು ಪರಿಣಾಮಕಾರಿ ಎಂದು ರಷ್ಯಾ ಹೇಳಿದೆ. ಈ ಲಸಿಕೆಗಳು ಕ್ರಮವಾಗಿ ಶೇ 95, ಶೇ 90 ಮತ್ತು ಶೇ 88ರಷ್ಟು ಪರಿಣಾಮಕಾರಿಯಾಗಿವೆ. ಅಂತಿಮ ಹಂತದ ಟ್ರಯಲ್‌ ಪೂರ್ಣಗೊಂಡ ನಂತರ ಈ ಪ್ರಮಾಣದಲ್ಲಿ ಬದಲಾವಣೆಯೂ ಆಗಬಹುದು. ಈ ಲಸಿಕೆಗಳು ಡಿಸೆಂಬರ್ ಅಂತ್ಯದ ವೇಳೆಗೆ ತುರ್ತುಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಮೊಡೆರ್ನಾ ಮತ್ತು ಫೈಜರ್ ಕಂಪನಿಯ ಲಸಿಕೆಗಳ ವಿನ್ಯಾಸ ಮತ್ತು ಕಾರ್ಯನಿರ್ವಹಣೆ ಮಧ್ಯೆ ಸಾಮ್ಯ ಇದೆ. ಅದರೆ ಎರಡೂ ಲಸಿಕೆಗಳನ್ನು ಸಂಗ್ರಹಿಸಿ ಇಡುವ ವಿಧಾನದಲ್ಲಿ ಭಾರಿ ವ್ಯತ್ಯಾಸವಿದೆ. ಮೊಡೆರ್ನಾ ಕಂಪನಿಯ ಲಸಿಕೆಯನ್ನು -20 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಬಹುದಾಗಿದೆ. ಫೈಜರ್ ಕಂಪನಿಯ ಲಸಿಕೆಯನ್ನು -75 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ.

ADVERTISEMENT

ಪರಿಣಾಮ, ಅಡ್ಡಪರಿಣಾಮ...

ಮೊಡೆರ್ನಾ ಕಂಪನಿಯು ತನ್ನ ಕೋವಿಡ್‌ ಲಸಿಕೆಯು ಶೇ 95ರಷ್ಟು ಪರಿಣಾಮಕಾರಿ ಎಂದು ಹೇಳಿದೆ. ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್‌ಗೆ ವೃದ್ಧರನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ದತ್ತಾಂಶಗಳು ಹೇಳುತ್ತವೆ. ಯುವಕರಲ್ಲಿ ಮತ್ತು ವಯಸ್ಕರಲ್ಲೂ ಲಸಿಕೆ ಅಷ್ಟೇ ಪರಿಣಾಮಕಾರಿ ಆಗಿರಲಿದೆಯೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ತುರ್ತು ಬಳಕೆಗೆ ಲಸಿಕೆ ಲಭ್ಯವಾದರೂ, ಅದನ್ನು ನೀಡುವಲ್ಲಿ ವೃದ್ಧರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.

ಈ ಲಸಿಕೆಯು ಎಷ್ಟು ದಿನಗಳವರೆಗೆ ಕೊರೊನಾ ವೈರಸ್‌ನಿಂದ ರಕ್ಷಣೆ ನೀಡಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇದನ್ನು ತಿಳಿದುಕೊಳ್ಳಲು ದೀರ್ಘಾವಧಿ ಪರಿಶೀಲನೆ ಅನಿವಾರ್ಯ. ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳ್ಳುವ ವೇಳೆಗೆ ಈ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.

ಈ ಲಸಿಕೆ ಪಡೆದವರಲ್ಲಿ ತಲೆನೋವು ಮತ್ತು ತಲೆಸುತ್ತುವಂತಹ ಅಡ್ಡ ಪರಿಣಾಮಗಳು ಕಾಣಿಸಿವೆ ಎಂದಷ್ಟೇ ಮೊಡೆರ್ನಾ ಹೇಳಿದೆ.

ಹೊಸ ಸವಾಲು?

ಈ ಎಲ್ಲಾ ಲಸಿಕೆಗಳ ತಯಾರಿಕೆ ಆರಂಭವಾದರೂ, ಅವು ಜಗತ್ತಿನ ಎಲ್ಲರಿಗೆ ಲಭ್ಯವಾಗಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಲಸಿಕೆ ಅಭಿವೃದ್ಧಿಯ ಕಾರ್ಯಕ್ಕೆ ಶೀಘ್ರವೇ ತಾರ್ಕಿಕ ಅಂತ್ಯ ದೊರೆಯಲಿದೆ. ಆದರೆ ಇನ್ನೊಂದು ಸವಾಲು ಎದುರಾಗಲಿದೆ. ಜಗತ್ತಿನ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು, 1,200 ಕೋಟಿಗಿಂತಲೂ ಹೆಚ್ಚು ಡೋಸ್‌ಗಳಷ್ಟು ಲಸಿಕೆ ಬೇಕಾಗುತ್ತದೆ. ಅಷ್ಟು ಡೋಸ್‌ಗಳನ್ನು ಉತ್ಪಾದಿಸಲು ಅಗತ್ಯವಾದ ಹಣ, ಕಚ್ಚಾವಸ್ತುಗಳನ್ನು ಹೊಂದಿಸಿಕೊಳ್ಳುವುದು ದೊಡ್ಡ ಸವಾಲು ಎಂದು ತಜ್ಞರು ವಿವರಿಸಿದ್ದಾರೆ.

ಸಾವಿರಕೋಟಿ‌ ಡೋಸ್‌ಗಳಷ್ಟು ಲಸಿಕೆ ತಯಾರಿಸಲು ಹಲವು ತಿಂಗಳು ಅಥವಾ ವರ್ಷವೇ ಬೇಕಾಗುತ್ತದೆ. ತಯಾರಿಸಿದ ಲಸಿಕೆಗಳನ್ನು ವಿತರಿಸಲು ಹಲವು ತಿಂಗಳು ಬೇಕು. ವಿತರಣೆಗೆ ಅಗತ್ಯವಾದ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ವಿತರಣೆಗೆ ನೀಲನಕ್ಷೆ ರೂಪಿಸಿಕೊಳ್ಳಬೇಕಿದೆ ಎಂದು ತಜ್ಞರು ವಿವರಿಸಿದ್ದಾರೆ.

ನೀವು ವಿಶ್ವದ ಯಾವ ಭಾಗದಲ್ಲಿದ್ದೀರಿ, ಯಾವ ದೇಶದಲ್ಲಿ ಇದ್ದೀರಿ ಮತ್ತು ನಿಮ್ಮ ವಯಸ್ಸು ಎಷ್ಟು ಎಂಬುದರ ಆಧಾರದ ಮೇಲೆ ನಿಮಗೆ ಲಸಿಕೆ ಯಾವಾಗ ದೊರೆಯುತ್ತದೆ ಎಂಬುದು ನಿರ್ಧಾರವಾಗುತ್ತದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ.

ರೋಗ ನಿಯಂತ್ರಣ ಹೇಗೆ?

1. ಕೊರೊನಾ ಸೋಂಕಿನ ಸ್ಪೈಕ್‌ ಪ್ರೋಟೀನ್‌ ಬಳಸಿಕೊಂಡು ಮೊಡೆರ್ನಾ ಕಂಪನಿಯು ಈ ಲಸಿಕೆ ಅಭಿವೃದ್ಧಿಪಡಿಸಿದೆ. ಈ ಲಸಿಕೆಯನ್ನು ಮನುಷ್ಯನ ದೇಹಕ್ಕೆ ನೀಡಲಾಗುತ್ತದೆ

2. ಮನುಷ್ಯನ ದೇಹದಲ್ಲಿ ಈ ಲಸಿಕೆಯು, ಕೊರೊನಾ ವೈರಸ್‌ ಅನ್ನು ಹೋಲುವ ‘ಡಮ್ಮಿ ವೈರಸ್‌’ ಅನ್ನು ಸೃಷ್ಟಿಸಲಿದೆ. ಈ ವೈರಸ್‌ ಕೊರೊನಾ ವೈರಸ್‌ನಂತೆ ಇರುತ್ತದೆಯೇ ಹೊರತು, ರೋಗವನ್ನು ಹರಡುವುದಿಲ್ಲ.ಲಸಿಕೆಯು ಈ ವೈರಸ್‌ ವಿರುದ್ಧ ಹೋರಾಡುವ ‘ಟಿ-ಸೆಲ್‌’ಗಳನ್ನು, ದೇಹದಲ್ಲಿ ಸಕ್ರಿಯಗೊಳಿಸಲಿದೆ

3. ಈ ವೈರಸ್‌ಗಳನ್ನು ಕೊಲ್ಲುವ ಶಕ್ತಿಯಿರುವ ಪ್ರತಿಕಾಯಗಳನ್ನು ಟಿ-ಸೆಲ್‌ಗಳು ಸೃಷ್ಟಿಸಲಿವೆ.ಡಮ್ಮಿ ಕೊರೊನಾ ವೈರಸ್‌ಗಳನ್ನು ಇವು ಕೊಲ್ಲಲಿವೆ

4. ಲಸಿಕೆ ಪಡೆದಿರುವ ವ್ಯಕ್ತಿಗೆ ನಿಜವಾದ ಕೊರೊನಾ ವೈರಸ್‌ ತಗುಲಿದಾಗ ಈ ಪ್ರತಿಕಾಯಗಳು ಸಕ್ರಿಯವಾಗಲಿವೆ. ವೈರಸ್‌ಗಳನ್ನು ಪ್ರತಿಕಾಯಗಳು ಕೊಲ್ಲಲಿವೆ. ವೈರಸ್‌ನಿಂದ ಕೋವಿಡ್‌ ರೋಗ ಸೃಷ್ಟಿಯಾಗದಂತೆ ತಡೆಯಲಿದೆ

ಮೂರನೇ ಹಂತದ ಪರೀಕ್ಷೆಗೆ ಕೋವ್ಯಾಕ್ಸಿನ್‌‌

ಕೋವಿಡ್‌ ಲಸಿಕೆ ‘ಕೋವ್ಯಾಕ್ಸಿನ್‌‌’ ಅಭಿವೃದ್ಧಿಯಲ್ಲಿ ತೊಡಗಿರುವ ಭಾರತ್‌ ಬಯೊಟೆಕ್‌ ಸಂಸ್ಥೆ, ಮಾನವನ ಮೇಲೆ ಲಸಿಕೆಯ ಮೂರನೇ ಹಂತದ ಪರೀಕ್ಷೆಗಳನ್ನು ಆರಂಭಿಸಿದೆ.

‘ಮೊದಲ ಮತ್ತು ಎರಡನೇ ಹಂತದಲ್ಲಿ 1,000 ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿತ್ತು. ಉತ್ತೇಜನಕಾರಿ ಪರಿಣಾಮಗಳು ಲಭಿಸಿವೆ. ಯಾರ ಮೇಲೂ ವ್ಯತಿರಿಕ್ತ ಪರಿಣಾಮಗಳಾಗಿದ್ದು ಕಾಣಿಸಲಿಲ್ಲ. ಈಗ, ಮೂರನೇ ಹಂತದಲ್ಲಿ 26,000 ಮಂದಿಯ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗುವುದು’ ಎಂದು ಸಂಸ್ಥೆ ಹೇಳಿದೆ.

ಕೋವಿಡ್‌–19 ಲಸಿಕೆಗೆ ಸಂಬಂಧಿಸಿದಂತೆ ಭಾರತದಲ್ಲಿ ನಡೆಯುತ್ತಿರುವ ಅತಿ ದೊಡ್ಡ ಪ್ರಯೋಗ ಇದಾಗಿದೆ.

ದೇಶದ ವಿವಿಧ ಭಾಗಗಳ, 25 ಪರೀಕ್ಷಾ ಕೇಂದ್ರಗಳಿಂದ ಪರೀಕ್ಷೆಗಾಗಿ ಸಂಸ್ಥೆಯು 18 ವರ್ಷಕ್ಕೂ ಮೇಲ್ಪಟ್ಟ ಸ್ವಯಂಸೇವಕರನ್ನು ಆಯ್ಕೆ ಮಾಡಿಕೊಳ್ಳಲಿದೆ. ಇವರಿಗೆ 28 ದಿನಗಳ ಅಂತರದಲ್ಲಿ ಎರಡು ಡೋಸ್‌ ಲಸಿಕೆಗಳನ್ನು ನೀಡಲಾಗುವುದು.

‘ಅತ್ಯಂತ ರಹಸ್ಯ ಮಾದರಿಯಲ್ಲಿ ಈ ಪರೀಕ್ಷೆಗಳು ನಡೆಯಲಿವೆ. ಆಯ್ಕೆಯಾದ ಸ್ವಯಂಸೇವಕರಲ್ಲಿ ಕೆಲವರಿಗೆ ಕೋವ್ಯಾಕ್ಸಿನ್‌ನ 6 ಎಂ.ಜಿಯ ಎರಡು ಡೋಸ್‌ಗಳನ್ನು ನೀಡಲಾಗುವುದು. ಇನ್ನೂ ಕೆಲವರಿಗೆ ಪ್ಲಾಸಿಬೊ ನೀಡಲಾಗುವುದು. ಯಾರು ನಿಜವಾದ ಲಸಿಕೆ ಪಡೆದಿದ್ದಾರೆ ಎಂಬುದು ಅದನ್ನು ಪಡೆದವರಿಗಾಗಲಿ, ಸಂಶೋಧನೆ ನಡೆಸುವವರಿಗಾಗಲಿ ತಿಳಿದಿರುವುದಿಲ್ಲ’ ಎಂದು ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.

‘ಕೋವ್ಯಾಕ್ಸಿನ್‌ ಖರೀದಿಗೆ ಜಗತ್ತಿನ ವಿವಿಧ ರಾಷ್ಟ್ರಗಳು ಆಸಕ್ತಿ ವ್ಯಕ್ತಪಡಿಸಿವೆ’ ಎಂದು ಸಂಸ್ಥೆಯ ಜಂಟಿ ಆಡಳಿತ ನಿರ್ದೇಶಕ ಸುವಿತ್ರಾ ಎಲ್ಲಾ ತಿಳಿಸಿದ್ದಾರೆ.

ಪರೀಕ್ಷೆಗಾಗಿ ಆಯ್ಕೆ ಮಾಡಿಕೊಂಡಿರುವ 25 ಪ್ರದೇಶಗಳ ಪೈಕಿ 8 ಪ್ರದೇಶಗಳಲ್ಲಿ ಸಂಬಂಧಿಸಿದ ಸಮಿತಿಯಿಂದ ಪರೀಕ್ಷೆ ನಡೆಸಲು ಪರವಾನಗಿಯೂ ಲಭಿಸಿದೆ ಎಂದು ಸಂಸ್ಥೆ ಹೇಳಿದೆ. ‘ಮೊದಲ ಸ್ವಯಂಸೇವಕನಾಗಿ ನಾನು ಹೆಸರು ನೋಂದಾಯಿಸಿದ್ದೇನೆ’ ಎಂದು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಕುಲಪತಿ ತಾರೀಖ್‌ ಮನ್ಸೂರ್‌ ಇತ್ತೀಚೆಗೆ ಹೇಳಿದ್ದರು.

‘ಮುಂದಿನ ಜೂನ್‌ ವೇಳೆಗೆ ಲಸಿಕೆಯನ್ನು ಬಿಡುಗಡೆ ಮಾಡುವ ಗುರಿಯನ್ನು ಭಾರತ್‌ ಬಯೊಟೆಕ್‌ ಸಂಸ್ಥೆ ಹಾಕಿಕೊಂಡಿದೆ. ಮೂರನೇ ಹಂತದ ಪರೀಕ್ಷೆಗಳಿಗಾಗಿ ಸಂಸ್ಥೆ ಸುಮಾರು ₹150 ಕೋಟಿ ವೆಚ್ಚ ಮಾಡುತ್ತಿದೆ. ಅಲ್ಲದೆ ಹೊಸ ತಯಾರಿಕಾ ಘಟಕ ಆರಂಭಿಸಲು ₹ 120 ಕೋಟಿಯಿಂದ ₹150 ಕೋಟಿ ವೆಚ್ಚ ಮಾಡಲಿದೆ. ಈ ಘಟಕವು ಡಿಸೆಂಬರ್‌ ತಿಂಗಳಿಂದ ಕಾರ್ಯಾರಂಭ ಮಾಡಲಿದೆ’ ಎಂದು ಸಂಸ್ಥೆ ಹೇಳಿದೆ.

ಪ್ರಯೋಗದ ಫಲಿತಾಂಶಗಳು ನಿರೀಕ್ಷೆಗೂ ಉತ್ತಮವಾಗಿದ್ದರೆ ಮುಂದಿನ ಫೆಬ್ರುವರಿ ವೇಳೆಗೇ ಲಸಿಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

***

ಮೂಗಿನ ಮೂಲಕ ಲಸಿಕೆ

ಚುಚ್ಚು ಮದ್ದಿನ ರೂಪದಲ್ಲಿ ನೀಡುವ ಲಸಿಕೆಗೆ ಪರ್ಯಾಯವಾಗಿ, ಮೂಗಿನ ಮೂಲಕ ನೀಡುವ ಲಸಿಕೆಗಳ ಶೋಧದ ಕಡೆಗೂ ಜಗತ್ತಿನ ವಿವಿಧ ಸಂಸ್ಥೆಗಳು ಗಮನಹರಿಸಿವೆ. ಕೆಲವು ಸಂಸ್ಥೆಗಳು ಈ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ಪಡೆದುಕೊಂಡಿವೆ.

ಭಾರತದಲ್ಲೂ ಭಾರತ್‌ ಬಯೊಟೆಕ್‌ ಸಂಸ್ಥೆ ಇಂಥ ಸಿದ್ಧತೆ ಮಾಡಿಕೊಂಡಿದೆ. ಇಂಜೆಕ್ಷನ್‌ ಮೂಲಕ ನೀಡುವ ಲಸಿಕೆಯು ಶ್ವಾಸಕೋಶದ ಕೆಳಭಾಗವನ್ನು ಮಾತ್ರ ರಕ್ಷಿಸುತ್ತದೆ. ಆದರೆ ಮೂಗಿನ ಮೂಲಕ ಲಸಿಕೆಯನ್ನು ನೀಡಿದರೆ ಇಡೀ ಶ್ವಾಸಕೋಶಕ್ಕೆ ರಕ್ಷಣೆ ಸಿಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅಮೆರಿಕ, ಯುರೋಪ್‌, ಚೀನಾಗಳಲ್ಲೂ ಇಂಥ ಲಸಿಕೆ ತಯಾರಿಕೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.

ಎಲ್ಲರಿಗೂ ಇಂಜೆಕ್ಷನ್‌ ನೀಡಬೇಕಾದರೆ ಕೋಟ್ಯಂತರ ಸಿರಿಂಜ್‌ಗಳನ್ನೂ ತಯಾರಿಸಬೇಕಾಗುತ್ತದೆ. ಅದರ ವೆಚ್ಚವೂ ಸೇರಿದರೆ ಲಸಿಕೆ ಇನ್ನಷ್ಟು ದುಬಾರಿಯಾಗುತ್ತದೆ. ಅದರ ಬದಲು ಮೂಗಿನಲ್ಲಿ ಒಂದೆರಡು ಹನಿ ಲಸಿಕೆ ಹಾಕುವ ವಿಧಾನ ಅನುಸರಿಸಿದರೆ ಲಸಿಕೆ ಪ್ರಕ್ರಿಯೆ ಸರಳಗೊಳ್ಳುತ್ತದೆ ಎಂಬ ಲೆಕ್ಕಾಚಾರವೂ ಇದೆ.

ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ ಸಹ ಇಂಥ ಲಸಿಕೆಯ ಶೋಧದಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ಕೊರೊನಾಗೆ ಒಂದು ವರ್ಷ

ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡು, ಜಗತ್ತಿನ ಜನಜೀವನ ಮತ್ತು ಅರ್ಥವ್ಯವಸ್ಥೆಗಳನ್ನು ಬುಡಮೇಲು ಮಾಡಿದ ‘ಕೊರೊನಾ’ ಸೋಂಕಿಗೆ ಮಂಗಳವಾರ (ನ.17) ಒಂದು ವರ್ಷ ತುಂಬಿದೆ.

ಸೌತ್‌ ಚೈನಾ ಮಾರ್ನಿಂಗ್‌ ಪೋಸ್ಟ್‌ ಪತ್ರಿಕೆಯ ವರದಿಯ ಪ್ರಕಾರ, 2019ರ ನವೆಂಬರ್‌ 17ರಂದು ಕೊರೊನಾದ ಮೊದಲ ಪ್ರಕರಣ ಚೀನಾದಲ್ಲಿ ಪತ್ತೆಯಾಗಿತ್ತು. ಚೀನಾದ ಹುಬಿ ಪ್ರಾಂತದ 55 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿಗೆ ಒಳಗಾದ ಮೊದಲ ವ್ಯಕ್ತಿ.

ಇದಾಗಿ ಸುಮಾರು ಒಂದು ತಿಂಗಳ ನಂತರ (2019ರ ಡಿಸೆಂಬರ್‌) ವೈದ್ಯರು ವುಹಾನ್‌ನಲ್ಲಿ ಕೊರೊನಾ ಸೋಂಕನ್ನು ಗುರುತಿಸಿದ್ದರು. ಸೋಂಕು ವುಹಾನ್‌ನ ಮಾಂಸದ ಮಾರುಕಟ್ಟೆಯಲ್ಲಿ ಉಗಮವಾಗಿತ್ತು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಆದರೆ ಮಾರುಕಟ್ಟೆಯ ಜತೆ ಯಾವುದೇ ಸಂಪರ್ಕ ಇಲ್ಲದಿದ್ದವರೂ ಸೋಂಕಿಗೆ ಒಳಗಾದ ಪ್ರಕರಣಗಳು ಆ ಬಳಿಕ ಪತ್ತೆಯಾಗಿದ್ದವು.

2019ರ ನ.17ರಂದು ಮೊದಲ ಪ್ರಕರಣ ಕಾಣಿಸಿಕೊಂಡ ಬಳಿಕ, ಪ್ರತಿದಿನ ಕನಿಷ್ಠ ಒಂದರಿಂದ ಐದು ಹೊಸ ಪ್ರಕರಣಗಳು ದಾಖಲಾಗುತ್ತಿದ್ದವು. ಡಿ.15ರಂದು ಸೋಂಕಿತರ ಸಂಖ್ಯೆಯು 27ಕ್ಕೆ ತಲುಪಿತ್ತು. ಇದಾದ ನಂತರ ಸೋಂಕು ವೇಗಪಡೆದಿತ್ತು. ಡಿ.20ಕ್ಕೆ ಸೋಂಕಿತರ ಸಂಖ್ಯೆ 60ಕ್ಕೆ ತಲುಪಿತ್ತು ಎಂದು ಪತ್ರಿಕೆ ವರದಿ ಮಾಡಿತ್ತು.

ಡಿ.27ರಂದು ಡಾ. ಝಾಂಗ್‌ ಕ್ಸಿಯಾನ್‌ ಅವರು ಈ ವೈರಸ್‌ ಬಗ್ಗೆ, ಹಾಗೂ ಅದರ ಅಪಾಯಗಳ ಬಗ್ಗೆ ಚೀನಾದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ವರದಿ ನೀಡಿದ್ದರು. ಆ ವೇಳೆಗಾಗಲೇ 180 ಮಂದಿಗೆ ಈ ಸೋಂಕು ತಗಲಿತ್ತು ಎಂದು ಹೇಳಲಾಗಿದೆ.

ಆಧಾರ: ಮೊಡೆರ್ನಾ, ಬಿಬಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.