ADVERTISEMENT

ಆಳ–ಅಗಲ|ಬೆಲೆ ಕುಸಿತದ ಬರೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 23:14 IST
Last Updated 5 ನವೆಂಬರ್ 2025, 23:14 IST
<div class="paragraphs"><p>ಕನಕಗಿರಿ ಸಮೀಪದ ಸುಳೇಕಲ್ ಗ್ರಾಮದ ಡಾಂಬರು ರಸ್ತೆಯಲ್ಲಿ ರೈತರು ಮೆಕ್ಕೆಜೋಳ ಹಸನು ಮಾಡುತ್ತಿರುವುದು</p></div>

ಕನಕಗಿರಿ ಸಮೀಪದ ಸುಳೇಕಲ್ ಗ್ರಾಮದ ಡಾಂಬರು ರಸ್ತೆಯಲ್ಲಿ ರೈತರು ಮೆಕ್ಕೆಜೋಳ ಹಸನು ಮಾಡುತ್ತಿರುವುದು

   

ಕಬ್ಬಿನ ದರಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಒಂದೆಡೆಯಾದರೆ, ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳ ದರವೂ ಕುಸಿತವಾಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರ ನಡುವೆಯೇ, ದೀಪಾವಳಿ ಬಳಿಕ ಅಕ್ಕಿ ದರ ಕಡಿಮೆಯಾಗಿರುವುದು ಭತ್ತ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೆಕ್ಕೆಜೋಳದ ಬೆಲೆ ಕುಸಿದಿದೆ. ಕೇಂದ್ರ ಸರ್ಕಾರ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹2,400 ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದರೂ ರಾಜ್ಯದಲ್ಲಿ ಎಲ್ಲೂ ಖರೀದಿ ಕೇಂದ್ರಗಳು ಇನ್ನೂ ಆರಂಭವಾಗಿಲ್ಲ. ಹೀಗಾಗಿ ರೈತರು ಕಡಿಮೆ ಬೆಲೆಗೆ ಮಾರುವಂತಾಗಿದೆ.

ADVERTISEMENT

ದಾವಣಗೆರೆ ಸೇರಿದಂತೆ ಹಲವೆಡೆ ಭಾರಿ ಮಳೆಗೆ ಮೆಕ್ಕೆಜೋಳಕ್ಕೆ ಹಾನಿಯಾಗಿದ್ದು, ಇಳುವರಿ ಕುಸಿತ ಕಂಡಿದೆ. ಕೈಗೆ ಸಿಕ್ಕ ಅಲ್ಪ ಬೆಳೆಗೂ ಉತ್ತಮ ಬೆಲೆ ಸಿಗದಿರುವುದು ರೈತರನ್ನು ಕಂಗಾಲಾಗಿಸಿದೆ.

ದಾವಣಗೆರೆ ಜಿಲ್ಲೆ ವ್ಯಾಪ್ತಿಯ ಮುಕ್ತ ಮಾರುಕಟ್ಟೆಯಲ್ಲಿ ₹1,650 ರಿಂದ ₹1,700ರಂತೆ ಕ್ವಿಂಟಲ್‌ ಮೆಕ್ಕೆಜೋಳ ಖರೀದಿಸಲಾಗುತ್ತಿದೆ. ಇಲ್ಲಿನ ದಾವಣಗೆರೆಯ ಎಪಿಎಂಸಿಯಲ್ಲಿ ಬುಧವಾರ ಕ್ವಿಂಟಲ್‌ಗೆ ಕನಿಷ್ಠ ₹1,400ರಿಂದ ಗರಿಷ್ಠ ₹1,949ರಂತೆ ವಹಿವಾಟು ನಡೆದಿದೆ.

ಮಳೆಯ ಹೊಡೆತ: ಕೊಪ್ಪಳ ಜಿಲ್ಲೆಯಲ್ಲಿ ಬೆಳೆದ ಮೆಕ್ಕೆಜೋಳಕ್ಕೆ ಒಂದೆಡೆ ಬೆಲೆ ಕುಸಿತವಾಗಿದ್ದರೆ, ಇನ್ನೊಂದೆಡೆ ಫಸಲು ಬಂದ ಸಮಯದಲ್ಲಿಯೇ ಸುರಿದ ಮಳೆ ರೈತರಿಗೆ ಹೊಡೆತ ನೀಡಿದೆ. ಮೆಕ್ಕೆಜೋಳ ಸದ್ಯಕ್ಕೆ ಮಾರುಕಟ್ಟೆಗೆ ವ್ಯಾಪಕವಾಗಿ ಆವಕವಾಗುತ್ತಿದ್ದು, ಬೆಂಬಲ ಬೆಲೆ ನೀಡಿ ಖರೀದಿ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆ ದರ ಪ್ರತಿ ಕ್ವಿಂಟಲ್‌ಗೆ ₹1,800ರಿಂದ 1,850 ಆಗಿದೆ.

ವಿಜಯನಗರ ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹2,100ರಷ್ಟು ದರ ಸಿಗಬೇಕಿತ್ತು, ಸದ್ಯ ₹1,700ರಿಂದ ₹1,800ರಷ್ಟು ದರ ಇದೆ.

ಹಾವೇರಿ ಜಿಲ್ಲೆಯಲ್ಲಿ ಮೆಕ್ಕೆಜೋಳ ಒಣಗಿಸಲು ಸಹ ರೈತರು ಪರದಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬಿಡುವು ನೀಡದೆಯೇ ಸುರಿಯುತ್ತಿರುವ ಮಳೆಯಿಂದ ಕಾಳುಗಳು ಹಸಿಯಾಗಿ ಕೊಳೆಯುತ್ತಿವೆ. ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲ್ಲೂಕು ಕಚೇರಿಗಳ ಎದುರು ಪ್ರತಿಭಟನೆ ನಡೆಸುತ್ತಿವೆ. ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೂ ಮನವಿ ಸಲ್ಲಿಸುತ್ತಿವೆ. ಆದರೆ, ಸೂಕ್ತ ಬೆಲೆ ಸಿಗುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆ ಖರೀದಿ ಕೇಂದ್ರ ತೆರೆಯದ ಕಾರಣದಿಂದ ಹಳಿಯಾಳ, ಮುಂಡಗೋಡ ಭಾಗದ ರೈತರು ಕಡಿಮೆ ದರಕ್ಕೆ ವ್ಯಾಪಾರಿಗಳಿಗೆ ಮೆಕ್ಕೆಜೋಳ ಮಾರಾಟ ಮಾಡುವ ಅನಿವಾರ್ಯ ಎದುರಾಗಿದೆ.

ದಕ್ಷಿಣದ ಜಿಲ್ಲೆಗಳಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.

ಕಣ್ಣೀರು ತರಿಸುತ್ತಿದೆ ಈರುಳ್ಳಿ

ರಾಜ್ಯದಾದ್ಯಂತ ಈರುಳ್ಳಿ ಬೆಲೆಯೂ ಕುಸಿತ ಕಂಡಿದೆ. ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಅದರೊಂದಿಗೆ ಈಗ ಬೆಲೆಯೂ ಇಳಿದು ರೈತರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. 

‘ಚಿತ್ರದುರ್ಗ ಜಿಲ್ಲೆಯಲ್ಲಿ 60 ಕೆ.ಜಿ.ಯ ಚೀಲವನ್ನು ₹200ಕ್ಕೆ ಕೇಳುತ್ತಿದ್ದಾರೆ. ಇದರಿಂದ ಹಾಕಿದ ಬಂಡವಾಳವಿರಲಿ ಕೂಲಿ ಖರ್ಚು ಕೂಡಾ ಸಿಗುತ್ತಿಲ್ಲ. ದರ ಕುಸಿತದಿಂದ ಈರುಳ್ಳಿಯನ್ನು ಬೆಂಗಳೂರು ಮಾರುಕಟ್ಟೆಗೆ ಸಾಗಿಸಲು ಆಗುತ್ತಿಲ್ಲ. ಹೆಚ್ಚು ದಿನ ಇಟ್ಟುಕೊಳ್ಳಲೂ ಸಾಧ್ಯವಾಗುತ್ತಿಲ್ಲ’ ಎಂದು ಚಿತ್ರದುರ್ಗ ತಾಲ್ಲೂಕಿನ ಹಂಪಯ್ಯನಮಾಳಿಗೆ ಗೊಲ್ಲರಹಟ್ಟಿಯ ಈರುಳ್ಳಿ ಬೆಳೆಗಾರ ಟಿ.ಸಂಪತ್‌ ಕುಮಾರ್‌ ಹೇಳಿದರು. 

ಧಾರವಾಡ ಜಿಲ್ಲೆಯಲ್ಲಿ ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮನಸ್ಸಿಲ್ಲದೆ, ಶೇಖರಿಸಿಡಲೂ ಆಗದೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಈರುಳ್ಳಿ ಕೆ.ಜಿ.ಗೆ ಕನಿಷ್ಠ ₹20 ಇರಬೇಕಿತ್ತು, ಸದ್ಯ ₹6ರಿಂದ ₹7ರಷ್ಟಿದೆ. ಹಾಕಿದ ದುಡ್ಡೂ ಬರುವುದಿಲ್ಲ ಎಂದು ಖಚಿತವಾಗಿದ್ದರಿಂದ ಕೆಲವು ರೈತರು ಈರುಳ್ಳಿ ಕಟಾವು ಮಾಡಿಯೇ ಇಲ್ಲ. 

‘ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲು ಮಾಡುವ ವೆಚ್ಚ ಸಿಗದಷ್ಟು ಈರುಳ್ಳಿ ದರ ಕುಸಿದಿದೆ. ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಖರೀದಿಸಲು ಸರ್ಕಾರ ಕ್ರಮ ವಹಿಸಿಲ್ಲ. ಬೆಳೆಗಾರರಿಗೆ ದಿಕ್ಕುತೋಚದಂತಾಗಿದೆ’ ಎಂದು ರೈತ ಮುಖಂಡ ಶಂಕರಪ್ಪ ಅಂಬಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಭತ್ತದ ಬೆಲೆ ಕುಸಿಯುವ ಆತಂಕ

ಈ ಬಾರಿಯ ಮುಂಗಾರಿನಲ್ಲಿ ಉತ್ತಮ ಇಳುವರಿ ಬಂದಿರುವ ಕಾರಣಕ್ಕೆ ದೀಪಾವಳಿ ನಂತರದಲ್ಲಿ ದೇಶದಾದ್ಯಂತ ವಿವಿಧ ತಳಿಯ ಅಕ್ಕಿಯ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇದರಿಂದ ಭತ್ತದ ಬೆಲೆ ಇಳಿಯುವ ಆತಂಕ ವ್ಯಕ್ತವಾಗಿದೆ. 

ಬಳ್ಳಾರಿ ಜಿಲ್ಲೆಯಲ್ಲಿ 90 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದು, ಕಟಾವು, ಒಕ್ಕಣೆ ಕಾರ್ಯ ಭರದಿಂದ ನಡೆಯುತ್ತಿದೆ. ಸದ್ಯ ಕ್ವಿಂಟಲ್‌ ಸೋನಾಮಸೂರಿ ಭತ್ತಕ್ಕೆ ₹2,100ರಿಂದ 2,200 ಇದೆ. ಆರ್‌ಎನ್‌ಆರ್ ತಳಿ ಕ್ವಿಂಟಾಲ್ ₹2,150 ಇದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಆರ್‌ಎನ್‌ಆರ್‌ ಭತ್ತಕ್ಕೆ ₹3,000 ಹಾಗೂ ಸೋನಾ ಮಸೂರಿಗೆ ₹2,800 ಸಿಗುತ್ತಿತ್ತು. ಕೃಷ್ಣಾ ನದಿ ಪಾತ್ರದ ಸುರಪುರ, ಶಹಾಪುರ ಅಲ್ಲದೆ ನೆರೆಯ ಆಂಧ್ರಪ್ರದೇಶ, ತೆಲಂಗಾಣಗಳಲ್ಲಿಯೂ ಭತ್ತ ಬೆಳೆಯಲಾಗಿದ್ದು, ಮಾರುಕಟ್ಟೆಗೆ ಭಾರಿ ಪ್ರಮಾಣದ ದಾಸ್ತಾನು ಬರುತ್ತಿದೆ. ಹೀಗಾಗಿ ಬೆಲೆ ಕುಸಿಯುತ್ತಲೇ ಇದೆ.  

ರಾಜ್ಯದ ಭತ್ತದ ಕಣಜ ಎಂದು ಹೆಸರಾದ ಕೊಪ್ಪಳ ಜಿಲ್ಲೆಯಲ್ಲಿ ಭತ್ತಕ್ಕೆ ಸದ್ಯ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತಲೂ ಹೆಚ್ಚು ಬೆಲೆ ಇದೆ. ಹೊರಗಡೆ ಹೆಚ್ಚು ಬೆಲೆ ಸಿಗುತ್ತಿರುವುದರಿಂದ ರೈತರು ಖರೀದಿ ಕೇಂದ್ರಗಳತ್ತ ಮುಖಮಾಡುತ್ತಿಲ್ಲ. ಬೆಂಬಲ ಬೆಲೆ ಯೋಜನೆಯಡಿ ಭತ್ತ ಸಾಮಾನ್ಯ ₹2,369 ಹಾಗೂ ಭತ್ತ ಗ್ರೇಡ್‌–ಎ ₹2,389 ದರ ನಿಗದಿಪಡಿಸಲಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ ₹2100ರಿಂದ -₹2202 ಬೆಲೆ ಸಿಗುತ್ತಿದೆ. ಆದರೆ, ಇದೆಷ್ಟು ದಿನ ಎಂಬುದು ತಿಳಿದಿಲ್ಲ. 

‘ಈ ಸಲದ ಮುಂಗಾರು ಹಂಗಾಮಿನಲ್ಲಿ ಉತ್ತಮ ಫಸಲು ಬಂದಿರುವ ಕಾರಣ ಅಕ್ಕಿ ಬೆಲೆ ಇಳಿಯುವ ಸಾಧ್ಯತೆಯಿದೆ. ಆದರೆ ಸೋನಾಮಸೂರಿ, ಆರ್‌ಎನ್‌ಆರ್‌ ಹೀಗೆ ನಿರ್ದಿಷ್ಟ ತಳಿಗಳಿಗೆ ಹೆಚ್ಚು ಬೇಡಿಕೆ ಇರುವ ಕಾರಣ ಆ ತಳಿಯ ಅಕ್ಕಿಗಳಿಗೆ ಯಾವಾಗಲೂ ಬೇಡಿಕೆ ಮತ್ತು ಬೆಲೆ ಇದ್ದೇ ಇರುತ್ತದೆ’ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ ಹೇಳಿದರು. 

ಸದ್ಯಕ್ಕೆ ಸ್ಥಿರ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕುಚ್ಚಲಕ್ಕಿ ಬಳಕೆ ಹೆಚ್ಚು ಪ್ರಚಲಿತದಲ್ಲಿದೆ. ಇಲ್ಲಿನ ರೈತರು ಹೆಚ್ಚಾಗಿ ಕುಚ್ಚಲಕ್ಕಿಯನ್ನೇ ಬೆಳೆಯುತ್ತಾರೆ. ಇಲ್ಲಿ ಬೆಳೆದಿರುವ ಅಕ್ಕಿಯನ್ನು ಸ್ಥಳೀಯ ಗಿರಣಿಗಳೇ ಖರೀದಿಸುತ್ತವೆ. ಹೀಗಾಗಿ ಭತ್ತದ ಕೊಯ್ಲಿನ ವೇಳೆ ಅಕ್ಕಿ ದರ ಒಮ್ಮೆ ಕುಸಿತವಾಗುತ್ತದೆ. ಆ ನಂತರ ಮತ್ತೆ ಏರಿಕೆಯಾಗುತ್ತದೆ. ಸದ್ಯಕ್ಕೆ ಬೆಲೆ ಸ್ಥಿರವಾಗಿದೆ.  

‘ಅಕ್ಕಿಗೆ ದರ ಕಡಿಮೆಯಾಗುತ್ತದೆ ಎನ್ನುವುದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಈ ಬಾರಿ ಕೊಯ್ಲು ನಡೆಯುತ್ತಿರುವಾಗಲೇ ಮಳೆ ಬಂದ ಕಾರಣ ಪೈರನ್ನು ಇಟ್ಟುಕೊಳ್ಳಲು ಜಾಗವಿಲ್ಲದೆ ಬಹುತೇಕ ರೈತರು ಗದ್ದೆಗಳಿಂದಲೇ ಕಡಿಮೆ ದರಕ್ಕೆ ಗಿರಣಿಯವರಿಗೆ ಭತ್ತ ಮಾರಾಟ ಮಾಡಿದ್ದಾರೆ’ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.