ADVERTISEMENT

ಆಳ–ಅಗಲ: ಬಂಗಾಳಕೊಲ್ಲಿ– ಇದು ಪ್ರಚಂಡ ಚಂಡಮಾರುತಗಳ ತಾಣ!

ಅರಬ್ಬಿ ಸಮುದ್ರಕ್ಕಿಂತಲೂ ಬಂಗಾಳ ಕೊಲ್ಲಿಯಲ್ಲಿ ಹೆಚ್ಚು ಚಂಡಮಾರುತಗಳು ಸೃಷ್ಟಿಯಾಗುತ್ತಿವೆ. ಇವುಗಳು ಹೆಚ್ಚು ತೀವ್ರವಾಗಿಯೂ ಇವೆ.

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 23:30 IST
Last Updated 12 ಡಿಸೆಂಬರ್ 2024, 23:30 IST
<div class="paragraphs"><p>ಫೆಂಜಲ್ ಚಂಡಮಾರುತದ ಕಾರಣಕ್ಕೆ ಪ್ರಕ್ಷುಬ್ಧಗೊಂಡಿದ್ದ ಬಂಗಾಳ ಕೊಲ್ಲಿ</p></div>

ಫೆಂಜಲ್ ಚಂಡಮಾರುತದ ಕಾರಣಕ್ಕೆ ಪ್ರಕ್ಷುಬ್ಧಗೊಂಡಿದ್ದ ಬಂಗಾಳ ಕೊಲ್ಲಿ

   

ಪಿಟಿಐ ಚಿತ್ರ

ತಮಿಳುನಾಡು ಕರಾವಳಿಗೆ ‘ಫೆಂಜಲ್‌’ ಚಂಡಮಾರುತ ಅಪ್ಪಳಿಸಿ, ರಾಜ್ಯದಲ್ಲಿ ಅಕಾಲಿಕ ಮಳೆ ಸುರಿದು 10 ದಿನಗಳೂ ಕಳೆದಿಲ್ಲ. ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿದೆ. ಅದರ ಪ್ರಭಾವ ರಾಜ್ಯದಲ್ಲೂ ಆಗುತ್ತಿದ್ದು ಮತ್ತೆ ಥಂಡಿ, ಗಾಳಿ, ಮಳೆಯಾಗುತ್ತಿದೆ. ಚಂಡಮಾರುತದ ಪ್ರಭಾವದಿಂದ ಸುರಿಯುತ್ತಿರುವ ಅಕಾಲಿಕ ಮಳೆ ಜನರಿಗೆ ಹಲವು ರೀತಿ ತೊಂದರೆ ಉಂಟುಮಾಡುತ್ತಿದೆ. ವಾಯುಭಾರ ಕುಸಿತ, ಸೈಕ್ಲೋನ್‌ಗಳ ಪರಿಣಾಮದಿಂದ ಪದೇ ಪದೇ ಮಳೆ ಬೀಳುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಅರಬ್ಬಿ ಸಮುದ್ರಕ್ಕಿಂತಲೂ ಬಂಗಾಳ ಕೊಲ್ಲಿಯಲ್ಲಿ ಹೆಚ್ಚು ಚಂಡಮಾರುತಗಳು ಸೃಷ್ಟಿಯಾಗುತ್ತಿವೆ. ಇವುಗಳು ಹೆಚ್ಚು ತೀವ್ರವಾಗಿಯೂ ಇವೆ. ಈ ಬಗ್ಗೆ ಅಧ್ಯಯನಗಳು ನಡೆಸಿರುವ ವಿಜ್ಞಾನಿಗಳು, ಆಸಕ್ತಿಕರ ವಿಚಾರಗಳನ್ನು ಹೊರಗೆಡವಿದ್ದಾರೆ.

ADVERTISEMENT

–––––––––––––         

ಚಂಡಮಾರುತಗಳಿಂದ ತೀವ್ರ ಹಾನಿ ಅನುಭವಿಸುತ್ತಿರುವ ಜಗತ್ತಿನ ದೇಶಗಳಲ್ಲಿ ಭಾರತವೂ ಒಂದು. 8,041 ಕಿ.ಮೀ. ಉದ್ದದ ಕರಾವಳಿಯನ್ನು ಹೊಂದಿರುವ ದೇಶವು ಜಗತ್ತಿನ ಶೇ 10ರಷ್ಟು ಉಷ್ಣವಲಯದ ಚಂಡಮಾರುತಗಳಿಗೆ ಗುರಿಯಾಗುತ್ತಿದೆ. ಇವುಗಳಲ್ಲಿ ಹೆಚ್ಚಿನವು ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡು, ಪೂರ್ವ ಕರಾವಳಿಯ ಮೂಲಕ ಸಾಗುತ್ತವೆ.

ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳು ಉಂಟಾಗುವುದು ಕಡಿಮೆ. ಅರಬ್ಬಿ ಸಮುದ್ರದಲ್ಲಿ ಒಂದು ಚಂಡಮಾರುತ ಎದ್ದರೆ, ಬಂಗಾಳ ಕೊಲ್ಲಿಯಲ್ಲಿ ನಾಲ್ಕು ಚಂಡಮಾರುತಗಳು ಏಳುತ್ತವೆ. ಅರಬ್ಬಿ ಸಮುದ್ರ ವಿಶಾಲವಾಗಿದ್ದು, ಅಲ್ಲಿ ಚಂಡಮಾರುತ ಎದ್ದರೆ, ಮುಂದಕ್ಕೆ ಸಾಗಿದಂತೆ ಒತ್ತಡ ಮತ್ತು ಉಷ್ಣತೆಯಲ್ಲಿ ವ್ಯತ್ಯಯವಾಗಿ, ಇದ್ದಕ್ಕಿದ್ದಂತೆ ಅದು ಕ್ಷೀಣವಾಗುವ ಸಾಧ್ಯತೆ ಇರುತ್ತದೆ ಎಂಬುದು ತಜ್ಞರ ಹೇಳಿಕೆ. 

ಬಂಗಾಳ ಕೊಲ್ಲಿಯಲ್ಲಿ ಹೆಚ್ಚೇಕೆ? 

ಬಂಗಾಳಕೊಲ್ಲಿಯಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್‌–ಮೇ –ಜೂನ್‌ ಹಾಗೂ ನವೆಂಬರ್‌–ಡಿಸೆಂಬರ್‌ ಅವಧಿಯಲ್ಲಿ ಚಂಡಮಾರುತಗಳು ಸೃಷ್ಟಿಯಾಗುತ್ತವೆ. ಇತ್ತೀಚೆಗೆ ಕಡಿಮೆ ದಿನಗಳ ಅವಧಿಯಲ್ಲಿ ಒಂದರ ಹಿಂದೆ ಚಂಡಮಾರುತಗಳು ಕರಾವಳಿಗೆ ಅಪ್ಪಳಿಸುತ್ತಿವೆ. ಭಾರತದಲ್ಲಿ 1891 ಮತ್ತು 1990ರ ನಡುವೆ ಕಾಣಿಸಿಕೊಂಡ ಚಂಡಮಾರುತಗಳ ಅಧ್ಯಯನದಲ್ಲಿ, 262 ಸೈಕ್ಲೋನ್‌ಗಳು ಪೂರ್ವ ಕರಾವಳಿಯಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ 92 ತೀವ್ರ ಸ್ವರೂಪದವು. ಇದೇ ಅವಧಿಯಲ್ಲಿ ಪಶ್ಚಿಮ ಕರಾವಳಿಯಲ್ಲಿ 33 ಸೈಕ್ಲೋನ್‌ಗಳು ಕಾಣಿಸಿಕೊಂಡಿದ್ದರೆ, ಅವುಗಳಲ್ಲಿ 19 ಗಂಭೀರ ಸ್ವರೂಪದ್ದಾಗಿವೆ. 

ಅಮೆರಿಕದ ಹವಾಮಾನ ಪತ್ರಿಕೆ ‘ವೆದರ್ ಅಂಡರ್‌ಗ್ರೌಂಡ್’ ಪ್ರಕಾರ, ಭೂಮಿಗೆ ಅಪ್ಪಳಿದ 35 ವಿನಾಶಕಾರಿ ಚಂಡಮಾರುತಗಳ ಪೈಕಿ 26 ಚಂಡಮಾರುತಗಳು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದವುಗಳು.

ಬಂಗಾಳಕೊಲ್ಲಿಯಲ್ಲಿ ಹೆಚ್ಚು ಚಂಡಮಾರುತಗಳು ಹುಟ್ಟಲು ಹಲವು ಕಾರಣಗಳನ್ನು ಪಟ್ಟಿ ಮಾಡುತ್ತಾರೆ ಭೂವಿಜ್ಞಾನಿಗಳು, ಹವಾಮಾನ ತಜ್ಞರು. 

ಭೌಗೋಳಿಕ ಲಕ್ಷಣ

ಬಂಗಾಳಕೊಲ್ಲಿಯ ಭೌಗೋಳಿಕ ಲಕ್ಷಣವೇ ಚಂಡಮಾರುತ ಸೃಷ್ಟಿಗೆ ಪೂರಕವಾಗಿದೆ. 21.73 ಲಕ್ಷ ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿರುವ ಈ ಸಮುದ್ರವು ಆಲಿಕೆ ಆಕಾರದಲ್ಲಿದೆ. ಇದರ ಸುತ್ತಲೂ ಮೂರು ಕಡೆಗಳಲ್ಲಿ ಭೂಭಾಗ ಇದೆ (ಒಂದು ಕಡೆ ಭಾರತ, ಉಳಿದ ಕಡೆಗಳಲ್ಲಿ ಬಾಂಗ್ಲಾದೇಶ, ಮ್ಯಾನ್ಮಾರ್‌, ಥಾಯ್ಲೆಂಡ್‌, ಮಲೇಷ್ಯಾ, ಶ್ರೀಲಂಕಾ ಇದೆ). ಇದರ ಜೊತೆಗೆ, ಕರಾವಳಿಯಿಂದ ಕೊಲ್ಲಿಯ ದೀರ್ಘ ದೂರದವರೆಗೆ  ಸಮುದ್ರದ ಆಳವೂ ಕಡಿಮೆ. ವಾಯುಭಾರ ಕುಸಿತ ಉಂಟಾಗುತ್ತಿದ್ದಂತೆಯೇ ಗಾಳಿಯ ವೇಗಕ್ಕೆ ಅಲೆಗಳು ಉಕ್ಕೇರುತ್ತವೆ. ವೇಗವಾಗಿ ಬೀಸುವ ಗಾಳಿ ಆ ಭಾಗದಲ್ಲಿ ಹಾದು ಗೋಗುವಾಗ ರಕ್ಕಸ ಅಲೆಗಳು ಕರಾವಳಿಯತ್ತ ಮುನ್ನುಗುತ್ತವೆ. 

ನೀರು ಬಿಸಿಯಾಗಿರುವುದು

ಬಂಗಾಳ ಕೊಲ್ಲಿಯ ಮೇಲ್ಮೈ ಸದಾ ಬಿಸಿಯಾಗಿರುತ್ತದೆ. ಸಮುದ್ರ ನೀರಿನ ಮೇಲ್ಮೈನ ಸರಾಸರಿ ಉಷ್ಣತೆ 28 ಡಿಗ್ರಿ ಸೆಲ್ಸಿಯಸ್‌ (26 ರಿಂದ 30 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ). ಅರಬ್ಬಿ ಸಮುದ್ರದ ಮೇಲ್ಮೈ ಉಷ್ಣತೆ 24ರಿಂದ 25 ಡಿಗ್ರಿ ಸೆಲ್ಸಿಯಷ್ಟು ಇದೆ. ವಾತಾವರಣದ ಸ್ಥಿತಿಗತಿಯಿಂದಾಗಿ ತಾಪಮಾನ ಇನ್ನಷ್ಟು ಹೆಚ್ಚಾದ ಸಂದರ್ಭದಲ್ಲಿ ನೀರು ಇನ್ನಷ್ಟು ವಾಯುಭಾರ ಕುಸಿತ ಉಂಟಾಗುತ್ತದೆ. ಜಾಗತಿಕ ಹವಾಮಾನ ಬದಲಾವಣೆಯೂ ಚಂಡಮಾರುತಗಳ ಹೆಚ್ಚಳ ಕಾರಣ. ಈ ವರ್ಷದ ಮೇನಲ್ಲಿ ಅಪ್ಪಳಿಸಿದ್ದ ರೀಮಲ್‌ ಚಂಡಮಾರುತ ಸಂದರ್ಭದಲ್ಲಿ ಬಂಗಾಳ ಕೊಲ್ಲಿಯ ನೀರಿನ ಮೇಲ್ಮೈ ಉಷ್ಣತೆ 31 ಡಿಗ್ರಿ ಸೆಲ್ಸಿಯಷ್ಟಿತ್ತು. 

ಪೆಸಿಫಿಕ್‌ ಸಾಗರ ಮತ್ತು ಬಂಗಾಳ ಕೊಲ್ಲಿ ನಡುವೆ ವಿಶಾಲ ಭೂಪ್ರದೇಶ ಕಡಿಮೆ ಇರುವುದರಿಂದ ಚಂಡಮಾರುತ ಉಂಟು ಮಾಡುವ ಗಾಳಿಯು ಕರಾವಳಿ ಪ್ರದೇಶಗಳತ್ತ ಸುಲಭವಾಗಿ ಸಾಗುತ್ತವೆ. ಇದು ಮಳೆಯನ್ನು ಉಂಟು ಮಾಡುತ್ತದೆ. ಭಾರತದಲ್ಲಿ ನೈರುತ್ಯ ಮುಂಗಾರು ಅವಧಿಯ ನಂತರ, ಭಾರತದ ವಾಯವ್ಯ ಭಾಗದಿಂದ ಪೂರ್ವದ ಕಡೆಗೆ ಗಾಳಿಯ ಚಲನೆ ಕಡಿಮೆ ಇರುವುದರಿಂದಲೂ ಚಂಡಮಾರುತ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಹೇಳುತ್ತಾರೆ ತಜ್ಞರು.

ವಿನಾಶ ಸೃಷ್ಟಿಸಿದ್ದ ‘ಭೋಲಾ’, ‘ನರ್ಗೀಸ್’ ಚಂಡಮಾರುತಗಳು!

ಬಂಗಾಳ ಕೊಲ್ಲಿಯು ಭೋಲಾ, ನರ್ಗೀಸ್‌ನಂತಹ ಉಷ್ಣವಲಯದ ಚಂಡಮಾರುತಗಳಿಗೆ ಕುಖ್ಯಾತವಾಗಿದೆ. 1970ರ ನವೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ಹುಟ್ಟಿದ್ದ ಭೋಲಾ ಚಂಡಮಾರುತದಿಂದ ಐದು ಲಕ್ಷ ಮಂದಿ ಸಾವಿಗೀಡಾಗಿದ್ದರು. ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರನ್ನು ಬಲಿ ಪಡೆದಿದ್ದ ಸೈಕ್ಲೋನ್ ಅದು.

ಏಪ್ರಿಲ್ 27, 2008, ಮತ್ತೊಂದು ವಿನಾಶಕಾರಿ ಉಷ್ಣವಲಯದ ಚಂಡಮಾರುತ ಹುಟ್ಟಿತ್ತು. ನರ್ಗೀಸ್ ಎಂದು ಹೆಸರಾಗಿರುವ ಆ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿತ್ತು. ಪೂರ್ವದಿಂದ ಈಶಾನ್ಯದತ್ತ ಚಲಿಸುತ್ತಲೇ ಹೆಚ್ಚು ವಿನಾಶಕಾರಿಯಾಗಿದ್ದ ಸೈಕ್ಲೋನ್‌ನಿಂದ 210 ಕಿ.ಮೀ. ವೇಗದಲ್ಲಿ ಗಾಳಿ ಬೀಸತೊಡಗಿತ್ತು. 16.4 ಅಡಿ ಎತ್ತರದ ಅಲೆಗಳು, 600 ಮಿಲಿಮೀಟರ್ ಮಳೆಯಿಂದ 1,40,000 ಮಂದಿ ಸತ್ತಿದ್ದರು. ಸುಮಾರು ₹84 ಸಾವಿರ ಕೋಟಿ ಮೌಲ್ಯದ ಆಸ್ತಿಪಾಸ್ತಿಗೆ ನಷ್ಟವಾಗಿತ್ತು. ಈ ರೀತಿ ಅತ್ಯಂತ ವಿಧ್ವಂಸಕ ಪ್ರಕೃತಿ ವಿಕೋಪಗಳಿಗೆ ಬಂಗಾಳ ಕೊಲ್ಲಿಯು ಕಾರಣವಾಗುತ್ತಿದ್ದು, ಮಾನವೀಯ ಬಿಕ್ಕಟ್ಟು ಸೃಷ್ಟಿಸುತ್ತಿದೆ.

ಹೆಸರು ಬೇರೆ ಬೇರೆ!

ಉಷ್ಣವಲಯ ಪ್ರದೇಶಗಳಾದ ಕೆರಿಬಿಯನ್, ಅಟ್ಲಾಂಟಿಕ್ ಮತ್ತು ಉತ್ತರ ಅಮೆರಿಕದಲ್ಲಿ ಚಂಡಮಾರುತವನ್ನು ಹರಿಕೇನ್ ಎಂದೂ, ಹಿಂದೂ ಮಹಾಸಾಗರದಲ್ಲಿ ಸೈಕ್ಲೋನ್, ಪೆಸಿಫಿಕ್‌ ಸಾಗರದಲ್ಲಿ ಟೈಫೂನ್ ಎಂದೂ, ಫಿಲಿಪ್ಪೀನ್ಸ್‌ನಲ್ಲಿ ಬಗುವೋ ಎಂದೂ ಕರೆಯುತ್ತಾರೆ.

ಮುನ್ನೆಚ್ಚರಿಕೆ ಅಗತ್ಯ

ಚಂಡಮಾರುತಗಳನ್ನು ತಡೆಯಲು ಸಾಧ್ಯವಿಲ್ಲದಿದ್ದರೂ, ಆಧುನಿಕ ವೈಜ್ಞಾನಿಕ ಸಾಧನಗಳಿಂದ ಅವುಗಳ ಸುಳಿವನ್ನು ಪಡೆಯಬಹುದಾಗಿದೆ. ಸೈಕ್ಲೋನ್‌ಗಳನ್ನು ರೇಡಾರ್‌ಗಳು ಹಾಗೂ ಹವಾಮಾನ ಉಪಗ್ರಹಗಳ ಮೂಲಕ ಪತ್ತೆಹಚ್ಚಬಹುದು. ಮುಂಚೆಯೇ ಪತ್ತೆ ಪೂರ್ವಸಿದ್ಧತೆ ಇಲ್ಲದಿದ್ದರೆ ಚಂಡಮಾರುತಗಳು ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಚಂಡಮಾರುತಗಳ ಗುಣಲಕ್ಷಣಗಳನ್ನು ಅಧ್ಯಯನ ಮಾಡುವ ಮೂಲಕ ಪ್ರಕೃತಿ ವಿಕೋಪ ಎದುರಿಸಲು ಉತ್ತಮ ಸಿದ್ಧತೆ ಮಾಡಿಕೊಳ್ಳಲು, ಮುಂಜಾಗ್ರತೆ ವಹಿಸಲು, ಜನರ ಜೀವ ಉಳಿಸಲು ಮತ್ತು ಹಾನಿ ತಡೆಗಟ್ಟಲು ಸಾಧ್ಯ.

––––

ಆಧಾರ: ನಾಸಾ, ಭಾರತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಬಿಬಿಸಿ

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.