ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಆರಂಭ ಆಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಯಲ್ಲಿ ಯಾವ ಜಾತಿ/ಧರ್ಮದ ಹೆಸರನ್ನು ಹೇಗೆ ಬರೆಸಬೇಕು ಎನ್ನುವುದರ ಬಗ್ಗೆ ಸಮುದಾಯಗಳಲ್ಲಿ ಚರ್ಚೆ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ, ದಲಿತರೂ ಸೇರಿದಂತೆ ಯಾವುದೇ ಜಾತಿಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಆದವರೆಲ್ಲರೂ ಕ್ರೈಸ್ತರೇ ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ. ದಶಕಗಳಿಂದಲೂ ಚಳವಳಿ, ಚರ್ಚೆ, ಕಾನೂನು ಹೋರಾಟಕ್ಕೆ ಕಾರಣವಾಗಿರುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸಿ.ಎಂ ಹೇಳಿಕೆಯನ್ನು ಹಲವರು ವಿರೋಧಿಸಿದ್ದಾರೆ. ಮತಾಂತರ ಆದರೂ ಸಾಮಾಜಿಕ–ಸ್ಥಿತಿಗತಿ ಬದಲಾಗಿಲ್ಲ. ಹೀಗಾಗಿ ತಮ್ಮನ್ನು ದಲಿತರು ಎಂದೇ ಪರಿಗಣಿಸಬೇಕು ಎನ್ನುವ ದಲಿತ ಕ್ರೈಸ್ತರ ಕೋರಿಕೆ ಬಗ್ಗೆ ಕೇಂದ್ರ ಸರ್ಕಾರವಾಗಲಿ, ನ್ಯಾಯಾಲಯವಾಗಲಿ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ ...
ಜಾತಿ ತಾರತಮ್ಯ, ಶೋಷಣೆಗೆ ಗುರಿಯಾಗಿದ್ದ ದಲಿತರು ಸೇರಿದಂತೆ ದುರ್ಬಲ ಜಾತಿಗಳ ಲಕ್ಷಾಂತರ ಮಂದಿ ಕ್ರೈಸ್ತ, ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ದಲಿತರು ಮತಾಂತರವಾದ ನಂತರವೂ ತಾರತಮ್ಯ, ಸಾಮಾಜಿಕ–ಆರ್ಥಿಕ ಅಸಮಾನತೆ ಎದುರಿಸುತ್ತಿದ್ದಾರೆ. ಹೀಗಾಗಿ ತಮ್ಮನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಎಂದೇ ಪರಿಗಣಿಸಿ, ಸೌಲಭ್ಯಗಳನ್ನು ನೀಡಬೇಕು ಎಂದು ಹಲವು ದಶಕಗಳಿಂದ ದಲಿತ ಕ್ರೈಸ್ತರು ಮತ್ತು ದಲಿತ ಮುಸ್ಲಿಮರು ಹೋರಾಟ ಮಾಡುತ್ತಿದ್ದಾರೆ.
ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಎಸ್‌ಸಿ ಸಮುದಾಯಗಳನ್ನು, 342ನೇ ವಿಧಿ ಅಡಿಯಲ್ಲಿ ಪರಿಶಿಷ್ಟ ಪಂಗಡಗಳನ್ನು ಮತ್ತು 340ನೇ ವಿಧಿಯಲ್ಲಿ ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸಲಾಗುತ್ತಿದೆ. ಎಸ್‌ಸಿ ಪಟ್ಟಿಗೆ ಹೊಸ ಜಾತಿಯನ್ನು ಸೇರಿಸುವ ಇಲ್ಲವೇ ತೆಗೆಯುವ ಅಧಿಕಾರ ಸಂಸತ್‌ಗೆ ಮಾತ್ರ ಇದೆ. ಸಂಸತ್ತಿನ ನಿರ್ಧಾರದ ಬಳಿಕ ರಾಷ್ಟ್ರಪತಿಯವರು ಸಹಿ ಹಾಕಿ ಅದನ್ನು ಅಧಿಕೃತಗೊಳಿಸುತ್ತಾರೆ.
ಒಬ್ಬ ಎಸ್‌ಸಿ ವ್ಯಕ್ತಿಯು ಹಿಂದೂ ಧರ್ಮದಿಂದ ಬೇರೊಂದು ಧರ್ಮಕ್ಕೆ ಮತಾಂತರಗೊಂಡರೆ, ಅವರನ್ನು ಎಸ್‌ಸಿ ಎಂದು ಪರಿಗಣಿಸಲಾಗದು ಎಂದು 341ನೇ ವಿಧಿಯು ಹೇಳುತ್ತದೆ. 1950ರಲ್ಲಿ ಹಿಂದೂಗಳನ್ನು ಮಾತ್ರ ಎಸ್‌ಸಿ ಎಂದು ಸಾಂವಿಧಾನಿಕ ಆದೇಶದ ಮೂಲಕ ಪರಿಗಣಿಸಲಾಗಿತ್ತು. ನಂತರ 1956ರ ತಿದ್ದುಪಡಿ ಮೂಲಕ ದಲಿತ ಸಿಖ್ಖರನ್ನು, 1990ರ ತಿದ್ದುಪಡಿಯ ಮೂಲಕ ದಲಿತ ಬೌದ್ಧರನ್ನು ಎಸ್‌ಸಿಗಳೆಂದು ಪರಿಗಣಿಸಬಹುದು ಎಂದು ಬದಲಿಸಲಾಯಿತು. ಆದರೆ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರನ್ನು ಎಸ್‌ಸಿ ಎಂದು ಪರಿಗಣಿಸುವ ಬಗ್ಗೆ ಯಾವುದೇ ತಿದ್ದುಪಡಿ ಆಗಿಲ್ಲ.
ಒಬಿಸಿ ಮೀಸಲಾತಿ: ಕ್ರೈಸ್ತ ಮತ್ತು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಎಸ್‌ಸಿಗಳನ್ನು ಕೆಲವು ರಾಜ್ಯಗಳಲ್ಲಿ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂದರೆ, ರಾಜ್ಯ ಸರ್ಕಾರಗಳು ಬಯಸಿದರೆ, ದಲಿತ ಕ್ರೈಸ್ತರನ್ನು ಮತ್ತು ದಲಿತ ಮುಸ್ಲಿಮರನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಬಹುದು. ಆದರೆ, ಈ ಎರಡೂ ಧರ್ಮಗಳಿಗೆ ಮತಾಂತರಗೊಂಡ ದಲಿತರನ್ನು ಎಸ್‌ಸಿ ಎಂದು ಪರಿಗಣಿಸಬಹುದೇ ಎನ್ನುವ ವಿಚಾರ ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿದೆ.
ಧರ್ಮದ ಆಧಾರದಲ್ಲಿ ಎಸ್‌ಸಿಗಳನ್ನು ಗುರುತಿಸುವ 1950ರ ಸಾಂವಿಧಾನಿಕ ಆದೇಶವೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎನ್ನುವುದು ದಲಿತ ಕ್ರೈಸ್ತ ಸಂಘಟನೆಗಳ ಆರೋಪವಾಗಿದೆ. 15(1) ವಿಧಿಗೆ (ಧರ್ಮದ ಹೆಸರಿನಲ್ಲಿ ತಾರತಮ್ಯ ಸಲ್ಲದು) ಈ ಆದೇಶವು ವಿರುದ್ಧವಾಗಿದೆ ಎನ್ನುವುದು ಅವರ ವಾದ. ಹೀಗಾಗಿ ದಲಿತರು ಮತಾಂತರಗೊಂಡರೂ ಅವರನ್ನು ಎಸ್‌ಸಿ ಎಂದೇ ಗುರುತಿಸಬೇಕು ಎನ್ನುವುದು ಅವರ ಆಗ್ರಹ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದು ಎಂದು ಸಂವಿಧಾನ ಹೇಳುತ್ತಿದ್ದು, ಮೀಸಲಾತಿ ನಿರಾಕರಿಸಲೂ ಧರ್ಮ ಆಧಾರವಾಗಬಾರದು ಎನ್ನುವುದು ಅವರ ಪ್ರತಿಪಾದನೆ.
1983ರ ಸೂಸೈ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ 1950ರ ಸಾಂವಿಧಾನಿಕ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಮತಾಂತರದ ನಂತರವೂ ಜಾತಿ ಮುಂದುವರಿ ಯುತ್ತದೆ ಎನ್ನುವುದನ್ನು ಆ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು. ಆದರೆ, ಮತಾಂತರಗೊಂಡ ದಲಿತರು ಹಿಂದೂ ದಲಿತರಷ್ಟೇ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ಎಂಬುದಕ್ಕೆ ಸೂಕ್ತ ಆಧಾರ ಇಲ್ಲ ಎಂದಿತು. ಮತಾಂತರಗೊಂಡವರ ಶೋಷಣೆಯ ಸ್ವರೂಪ ಏನು ಅನ್ನುವುದರ ಬಗ್ಗೆ ಸಾಮಾಜಿಕ–ಆರ್ಥಿಕ ದತ್ತಾಂಶ ಒದಗಿಸುವಂತೆ ಸುಪ್ರೀಂ ಕೋರ್ಟ್ ತಾಕೀತು ಮಾಡಿತು.
ಅದರ ನಂತರ ಈ ವಿಚಾರದಲ್ಲಿ ಸಾಕಷ್ಟು ಕಾನೂನು ಹೋರಾಟ, ಶಾಸಕಾಂಗದ ಪ್ರಯತ್ನಗಳು ನಡೆದಿವೆ. ಆದರೆ, ಇದುವರೆಗೂ ಯಾವುದೇ ಫಲಶ್ರುತಿ ಸಿಕ್ಕಿಲ್ಲ. ಸಮಾನತೆ, ಘನತೆಯನ್ನು ಅರಸಿ ಮತಾಂತರಗೊಂಡ ದಲಿತರು ಮತ್ತು ಇತರ ದುರ್ಬಲ ಜಾತಿಗಳ ಜನರು, ಆ ಕಾರಣಕ್ಕಾಗಿ ಮೀಸಲಾತಿ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಒಂದು ಮಾನವೀಯ ವಿಚಾರವನ್ನಾಗಿ ಪರಿಗಣಿಸಿ, ಸಮಸ್ಯೆಗೆ ಪರಿಹಾರ ನೀಡಬೇಕು ಎನ್ನುವ ಒತ್ತಾಯವೂ ಇದೆ.
ಇನ್ನೂ ಸಲ್ಲಿಕೆಯಾಗದ ವರದಿ
ದಲಿತ ಕ್ರೈಸ್ತರು, ಮುಸ್ಲಿಮರಿಗೆ ಎಸ್‌ಸಿ ಮಾನ್ಯತೆ ನೀಡಬೇಕೇ ಎಂಬ ಬಗ್ಗೆ ಅಧ್ಯಯನ ನಡೆಸಲು 2022ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಕಳೆದ ವರ್ಷವೇ ಈ ಸಮಿತಿ ವರದಿ ನೀಡಬೇಕಿತ್ತು. ಆದರೆ, ಅಧ್ಯಯನ ಪೂರ್ಣಗೊಳ್ಳದ ಕಾರಣ ಅದರ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಸಮಿತಿಯು ವರದಿಯನ್ನು ಇನ್ನಷ್ಟೇ ಸಲ್ಲಿಸಬೇಕಾಗಿದೆ
ಹೋರಾಟಕ್ಕೆ ದಶಕಗಳ ಇತಿಹಾಸ
ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಗೆ ಮತಾಂತರಗೊಂಡ ದಲಿತರನ್ನು ಕೂಡ ಪರಿಶಿಷ್ಟ ಜಾತಿಯವರು ಎಂದು ಪರಿಗಣಿಸಬೇಕು ಎಂಬ ಕೂಗಿಗೆ ದಶಕಗಳ ಇತಿಹಾಸವಿದೆ. ಈಗಲೂ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಮತಾಂತರಗೊಂಡವರಿಗೂ ಎಸ್‌ಸಿ ಸ್ಥಾನಮಾನ ನೀಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ವಿರೋಧಿಸುತ್ತಲೇ ಬಂದಿದೆ. ದಲಿತ ಕ್ರೈಸ್ತರು, ದಲಿತ ಮುಸ್ಲಿಮರನ್ನು ಪರಿಶಿಷ್ಟ ಜಾತಿಯವರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಅಭಿಪ್ರಾಯಪಟ್ಟ ಉದಾಹರಣೆಗಳೂ ಇವೆ.
1950ರ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ಸಾಂವಿಧಾನಿಕ ಆದೇಶದಲ್ಲಿ (ರಾಷ್ಟ್ರಪತಿ ಅವರು ಆದೇಶದ ಮೂಲಕ ಮಾಡಿದ ಪಟ್ಟಿ) ಹಿಂದೂಗಳಲ್ಲಿ ಮಾತ್ರ ಪರಿಶಿಷ್ಟ ಜಾತಿಗಳನ್ನು ಗುರುತಿಸಲಾಗಿತ್ತು. 1955ರ ಕಾಕಾ ಕಾಲೇಲ್ಕರ್ ಆಯೋಗ, 1983ರ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಉನ್ನತಾಧಿಕಾರ ಸಮಿತಿಯ ವರದಿಗಳ ಆಧಾರದಲ್ಲಿ 1956 ಮತ್ತು 1996ರಲ್ಲಿ ಈ ಆದೇಶಕ್ಕೆ ತಿದ್ದುಪಡಿ ತಂದು ಸಿಖ್ ಮತ್ತು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಎಸ್‌ಸಿ ಮಾನ್ಯತೆ ನೀಡಲಾಯಿತು
ಭಾರತೀಯ ರಿಜಿಸ್ಟ್ರಾರ್ ಜನರಲ್ (ಆರ್‌ಜಿಐ) ಕಚೇರಿಯು ಆರಂಭದಿಂದಲೂ ಹಿಂದೂ ಅಥವಾ ಸಿಖ್ ಧರ್ಮದವರನ್ನು ಬಿಟ್ಟು ಉಳಿದವರನ್ನು ಎಸ್‌ಸಿ ವ್ಯಾಪ್ತಿಗೆ ತರುವುದನ್ನು ಆಕ್ಷೇಪಿಸುತ್ತಲೇ ಇದೆ. ಅಸ್ಪೃಶ್ಯತೆ ಆಚರಣೆಯಿಂದ ಸಾಮಾಜಿಕವಾಗಿ ತಾರತಮ್ಯ ಅನುಭವಿಸುತ್ತಿರುವ ಸಮುದಾಯಗಳಿಗೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಲಾಗುತ್ತದೆ ಎಂದು 1978ರಲ್ಲಿ ಅದು ಅಭಿಪ್ರಾಯ ಪಟ್ಟಿತ್ತು
2001ರಲ್ಲಿ ಈ ವಿಚಾರ ಮತ್ತೆ ಪ್ರಸ್ತಾಪವಾದಾಗಲೂ ಆರ್‌ಜಿಐ ತನ್ನ ಹಿಂದಿನ ಅಭಿಪ್ರಾಯವನ್ನೇ ವ್ಯಕ್ತಪಡಿಸಿತ್ತು. ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರು ಭಿನ್ನವಾದ ಜಾತಿಯ ಗುಂಪುಗಳಿಗೆ ಸೇರಿದವರು. ಈ ಕಾರಣದಿಂದ ‘ಒಂದು ಜನಾಂಗೀಯ ಗುಂಪಿ’ಗೆ ಸೇರಿದವರು ಎಂದು ವರ್ಗೀಕರಿಸಲು ಸಾಧ್ಯವಿಲ್ಲ ಎಂದು ಆರ್‌ಜಿಐ ಪ್ರತಿಪಾದಿಸಿತ್ತು. ಅಸ್ಪೃಶ್ಯತೆ ಆಚರಣೆ ಹಿಂದೂ ಧರ್ಮ ಮತ್ತು ಅದರ ಕವಲುಗಳಲ್ಲಿ ಮಾತ್ರ ಇದೆ. ಕ್ರೈಸ್ತ ಮತ್ತು ಇಸ್ಲಾಂನಲ್ಲಿ ಅಂತಹ ಆಚರಣೆ ಇಲ್ಲದಿರುವುದರಿಂದ, ಪರಿಶಿಷ್ಟ ಜಾತಿಯವರು ಈ ಧರ್ಮಗಳಿಗೆ ಮತಾಂತರಗೊಂಡಾಗ ಅವರ ಎಸ್‌ಸಿ ಮಾನ್ಯತೆ ಹೋಗುತ್ತದೆ ಎಂಬುದು ಅದರ ಮತ್ತೊಂದು ವಾದ. ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಕೂಡ ಇದೇ ವಾದವನ್ನು ಮಂಡಿಸಿದೆ
ದಲಿತ ಕ್ರೈಸ್ತರನ್ನು ಎಸ್‌ಸಿಗೆ ಸೇರಿದವರು ಎಂದು ಪರಿಗಣಿಸುವ ಪ್ರಸ್ತಾವವನ್ನು 2019ರಲ್ಲಿ ತಿರಸ್ಕರಿಸಿದ್ದ ಕೇಂದ್ರ ಸರ್ಕಾರ, ಅವರನ್ನು ಎಸ್‌ಸಿ ವರ್ಗದಿಂದ ಹೊರಗಿಡುವುದಕ್ಕೆ 1936ರ ಬ್ರಿಟಿಷ್ ಆಡಳಿತದ ಆದೇಶವನ್ನು ಉಲ್ಲೇಖಿಸಿತ್ತು. ಬ್ರಿಟಿಷ್ ಸರ್ಕಾರವು ಜಾತಿಗಳನ್ನು ಪಟ್ಟಿ ಮಾಡುವಾಗ ‘ಶೋಷಿತ ವರ್ಗಗಳು’ ಎಂಬ ವರ್ಗೀಕರಣ ಮಾಡಿತ್ತು. ಆದರೆ, ಈ ವರ್ಗಗಳಲ್ಲಿರುವ ಜಾತಿಯಿಂದ ಭಾರತೀಯ ಕ್ರೈಸ್ತರನ್ನು ಹೊರಗಿಟ್ಟಿತ್ತು
ದಲಿತ ಕ್ರೈಸ್ತರು ಮತ್ತು ದಲಿತ ಮುಸ್ಲಿಮರಿಗೆ ಎಸ್‌ಸಿ ಮಾನ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿರುವವರು, 2007ರಲ್ಲಿ ಯುಪಿಎ ಸರ್ಕಾರ ರಚಿಸಿದ್ದ ರಂಗನಾಥ್ ಮಿಶ್ರಾ ನೇತೃತ್ವದ ಸಮಿತಿ ಮಾಡಿದ ಶಿಫಾರಸುಗಳನ್ನು ಉಲ್ಲೇಖಿಸುತ್ತಿದ್ದಾರೆ. ‘ಜನರು ಸ್ವಯಂಪ್ರೇರಿತರಾಗಿ ಮತಾಂತರಗೊಂಡಿರುವುದು ಅವರು ಹೊಂದಿರುವ ಎಸ್‌ಸಿ ಮಾನ್ಯತೆ ಮೇಲೆ ಪರಿಣಾಮ ಬೀರಬಾರದು’ ಎಂದು ಸಮಿತಿ ಹೇಳಿತ್ತು. ಆದರೆ, ಈ ವರದಿಯನ್ನು ಸರ್ಕಾರ ಒಪ್ಪಿಕೊಂಡಿಲ್ಲ ಎಂದು ಎನ್‌ಡಿಎ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು
ಕಳೆದ ವರ್ಷ ಪ್ರಕರಣವೊಂದರಲ್ಲಿ ತಮಿಳುನಾಡಿನ ಮಹಿಳೆಯೊಬ್ಬರಿಗೆ ಪರಿಶಿಷ್ಟ ಜಾತಿಯ ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಆ ಮಹಿಳೆಯ ಕುಟುಂಬವು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವುದು ವಿಚಾರಣೆ ವೇಳೆ ದೃಢಪಟ್ಟಿತ್ತು
ಕ್ರೈಸ್ತ ಧರ್ಮಕ್ಕೆ ಮತಾಂತರ ಆದ ತಕ್ಷಣ ಜನರು ಪರಿಶಿಷ್ಟ ಜಾತಿಯ ಮಾನ್ಯತೆ ಕಳೆದುಕೊಳ್ಳುತ್ತಾರೆ. ಆ ಬಳಿಕ ಅವರಿಗೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ರಕ್ಷಣೆ ಸಿಗುವುದಿಲ್ಲ ಎಂದು ಆಂಧ್ರ ಪ್ರದೇಶದ ಹೈಕೋರ್ಟ್ ಈ ವರ್ಷದ ಏಪ್ರಿಲ್‌ನಲ್ಲಿ ಪ್ರಕರಣವೊಂದರಲ್ಲಿ ತೀರ್ಪು ನೀಡಿತ್ತು
ಆಧಾರ: ಪಿಟಿಐ, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.