ADVERTISEMENT

ಆಳ ಅಗಲ| ಡೊನಾಲ್ಡ್ ಟ್ರಂಪ್ 25% ಸುಂಕ: ಪರಿಣಾಮ ಏನು?

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 0:10 IST
Last Updated 2 ಆಗಸ್ಟ್ 2025, 0:10 IST
   

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ದತ್ತಾಂಶದ ಪ್ರಕಾರ, 2024–25ನೇ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ದರ ಶೇ 6.5 ದಾಖಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ನಂತರ ಮೊದಲ ಬಾರಿಗೆ ಭಾರತ ಇಷ್ಟು ಕಡಿಮೆ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿತ್ತು. ಈಗ  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಆಮದಾಗುವ ಎಲ್ಲ ವಸ್ತುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಿರುವುದರಿಂದ ದೇಶದ ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಸುಂಕ ಹೇರಿಕೆಯಿಂದ ದೇಶದ ವಿವಿಧ ವಲಯಗಳ ಮೇಲೆ ಪರಿಣಾಮ ಬೀರಲಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ 6ಕ್ಕೆ ಕುಸಿಯಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ರೇಟಿಂಗ್ ಸಂಸ್ಥೆಯಾದ ಬರ್ಕ್ಲೀಸ್, ಈ ವರ್ಷ ಜಿಡಿಪಿಯು ಶೇ 0.30ರಷ್ಟು ಕುಸಿಯಬಹುದು ಎಂದು ಅಂದಾಜಿಸಿದ್ದರೆ, ಶೇ 0.20ರಷ್ಟು ಕುಸಿಯಬಹುದು ಎಂದು ನೋಮುರ ಹೇಳಿದೆ. 

ಅಮೆರಿಕ ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶ. ಭಾರತದ ಒಟ್ಟು ರಫ್ತಿನಲ್ಲಿ ಅಮೆರಿಕದ ಪಾಲು ಶೇ 18ರಷ್ಟು. ಅಮೆರಿಕದಿಂದ ಭಾರತವು ಶೇ 6.22ರಷ್ಟು ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರದ ಪ್ರಮಾಣ
ಶೇ 10.73ರಷ್ಟಿದೆ. ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವುದಕ್ಕಿಂತಲೂ ಹೆಚ್ಚು ಸರಕುಗಳನ್ನು ಅಲ್ಲಿಗೆ ರಫ್ತು ಮಾಡುತ್ತಿದೆ. ಹೀಗಾಗಿ ಅಮೆರಿಕದ ಸುಂಕ ಹೆಚ್ಚಳದ ತೀರ್ಮಾನವು ಭಾರತದ ಸರಕುಗಳ ಮೇಲೆ, ಆರ್ಥಿಕ ಬೆಳವಣಿಗೆಯ ಮೇಲೆ ಅಲ್ಪಕಾಲದ ಮಟ್ಟಿಗಾದರೂ ಪರಿಣಾಮ ಬೀರಲಿದೆ.

ADVERTISEMENT

ಅಮೆರಿಕವು ಇತರೆ ಕೆಲವು ದೇಶಗಳ ಮೇಲೆ ಕಡಿಮೆ ಸುಂಕ ವಿಧಿಸುತ್ತಿದೆ. ಬಾಂಗ್ಲಾದೇಶದ ಮೇಲೆ ಶೇ 20, ಬ್ರಿಟನ್ ಶೇ 10, ಅಫ್ಗಾನಿಸ್ತಾನದ ಶೇ 15, ಪಾಕಿಸ್ತಾನದ ಶೇ 19 ಮತ್ತು ಶ್ರೀಲಂಕಾ ಮೇಲೆ ಶೇ 20ರಷ್ಟು ಸುಂಕ ವಿಧಿಸುತ್ತಿದೆ. ಇವುಗಳಿಗೆ ಹೋಲಿಸಿದರೆ, ಭಾರತಕ್ಕೆ ವಿಧಿಸಿರುವ ಸುಂಕದ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ಅಮೆರಿಕದಲ್ಲಿ ಭಾರತದ ಸರಕುಗಳ ಮಾರಾಟದ ಬೆಲೆ ಹೆಚ್ಚಾಗುತ್ತದೆ. ಅವು ತುಟ್ಟಿ ಆಗುವುದರಿಂದ ಜನ ಅವುಗಳನ್ನು ಖರೀದಿಸುವುದು ಕಡಿಮೆ ಆಗಿ, ನಿಧಾನಕ್ಕೆ ಆ ವಸ್ತುಗಳಿಗೆ ಬೇಡಿಕೆ ಕಡಿಮೆ ಆಗುತ್ತದೆ. ಹೆಚ್ಚು ಕಾಲ ‍ಪರಿಸ್ಥಿತಿ ಹೀಗೇ ಇದ್ದರೆ, ಭಾರತದ ಸರಕುಗಳು ಅಲ್ಲಿನ ಗ್ರಾಹಕರ ಕೈಗೆಟುಕದಂತಾಗಿ, ಮಾರುಕಟ್ಟೆಯಿಂದ ಕಣ್ಮರೆಯಾದರೂ ಅಚ್ಚರಿಯೇನಿಲ್ಲ. 

ಯಾವ ಸರಕುಗಳ ಮೇಲೆ ಪರಿಣಾಮ?: ಔಷಧ, ಎಲೆಕ್ಟ್ರಾನಿಕ್ಸ್, ಮುತ್ತು/ಹರಳು, ಆಭರಣ, ಜವಳಿ, ಸಿದ್ದ ಉಡುಪು ಸೇರಿದಂತೆ ಹಲವು ವಸ್ತುಗಳು ಭಾರತದಿಂದ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿವೆ. ಇವುಗಳಿಗೆ ಸಂಬಂಧಿಸಿದ ಉದ್ಯಮಿಗಳು ಅಮೆರಿಕದ ಸುಂಕ ಹೇರಿಕೆಯ ಪರಿಣಾಮಗಳ ಬಗ್ಗೆ ಸಹಜವಾಗಿಯೇ ಆತಂಕಗೊಂಡಿದ್ದಾರೆ. ಔಷಧಿಗಳಿಗೆ ಸುಂಕ ಅನ್ವಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆಯಾದರೂ, ಟ್ರಂಪ್ ಅವರ ನಿಯಮಗಳ ಬಗ್ಗೆ ಉದ್ಯಮ ರಂಗದಲ್ಲಿ ಆತಂಕ ಇದ್ದೇ ಇದೆ. 

ಕಡಿಮೆ ಬೆಲೆಯ, ಉತ್ತಮ ಗುಣಮಟ್ಟದ ಜೆನರಿಕ್ ಔಷಧಗಳ ಉತ್ಪಾದನೆಗೆ ಭಾರತವು ಜಾಗತಿಕ ಮಟ್ಟದಲ್ಲಿ ಹೆಸರಾಗಿದೆ. ಅಮೆರಿಕದ ಅಗತ್ಯವಾಗಿರುವ ಔಷಧಗಳ ಪೈಕಿ
ಶೇ 47ರಷ್ಟು ಭಾರತದಿಂದಲೇ ರಫ್ತಾಗುತ್ತಿವೆ. 2025ನೇ ಆರ್ಥಿಕ ವರ್ಷದಲ್ಲಿ ಭಾರತದಿಂದ ಅಮೆರಿಕಕ್ಕೆ ₹96 ಸಾವಿರ ಕೋಟಿ ಮೊತ್ತದ ಔಷಧಗಳು ರಫ್ತಾಗಿದ್ದು, ಒಟ್ಟು ರಫ್ತಿನಲ್ಲಿ ಇದರ ಪಾಲು ಶೇ 35ರಷ್ಟು ಆಗಿದೆ. ಇಷ್ಟು ಪ್ರಮಾಣದ ಅಗತ್ಯ ಔಷಧಗಳು ತುಟ್ಟಿಯಾದರೆ, ಅದು ಭಾರತದ ಮೇಲಷ್ಟೇ ಅಲ್ಲದೇ ಅಮೆರಿಕದ ಗ್ರಾಹಕರು ಮತ್ತು ಅಲ್ಲಿನ ಆರೋಗ್ಯ ಸೇವೆಗಳ ಮೇಲೂ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. 

ಇದಲ್ಲದೇ, ತಮಿಳುನಾಡಿನ ತಿರುಪ್ಪೂರು, ಕೊಯಮತ್ತೂರು ಪ್ರದೇಶಗಳಿಂದ ಭಾರಿ ಪ್ರಮಾಣದಲ್ಲಿ ಜವಳಿ ಮತ್ತು ನೇಯ್ಗೆ ಉತ್ಪನ್ನಗಳು ಅಮೆರಿಕಕ್ಕೆ ರಫ್ತಾಗುತ್ತಿವೆ. ಈ ವಲಯದ ದೇಶದ ಒಟ್ಟು ರಫ್ತಿನಲ್ಲಿ ತಿರುಪ್ಪೂರ್‌ನ ಪಾಲು ಶೇ 55. 2024–25ರಲ್ಲಿ ನೇಯ್ಗೆ ಉತ್ಪನ್ನಗಳಲ್ಲಿ ತಿರುಪ್ಪೂರ್ ₹ 40 ಸಾವಿರ ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದ್ದು, 2026–27ನೇ ಆರ್ಥಿಕ ವರ್ಷದಲ್ಲಿ ಅದನ್ನು ಶೇ 10– ಶೇ 15ರಷ್ಟು ಹೆಚ್ಚಿಸಬೇಕು ಎನ್ನುವ ಉದ್ದೇಶ ಹೊಂದಿವೆ. ಆದರೆ, ಪ್ರಸ್ತುತ ಟ್ರಂಪ್ ಘೋಷಿಸಿರುವ ಸುಂಕದಿಂದ ಇಲ್ಲಿನ ಉದ್ದಿಮೆಗಳಲ್ಲಿ ಆತಂಕ, ಅನಿಶ್ಚಿತತೆ ತಲೆದೋರಿದೆ.

ಇದೇ ರೀತಿ ಆಂಧ್ರಪ್ರದೇಶದ ಸಿಗಡಿ ಉದ್ಯಮವೂ ಸಂಕಷ್ಟಕ್ಕೆ ಸಿಲುಕಲಿದೆ. 2023-24ನೇ ಆರ್ಥಿಕ ವರ್ಷದಲ್ಲಿ ₹22,307 ಕೋಟಿ ಮೊತ್ತದ ಮತ್ಸ್ಯ ಆಹಾರೋತ್ಪನ್ನಗಳು ಭಾರತದಿಂದ ಅಮೆರಿಕಕ್ಕೆ ರಫ್ತಾಗಿವೆ. ಅದರಲ್ಲಿ ಸಿಗಡಿ ಪಾಲು ಶೇ 92. ದೇಶದ ಶೇ 75ರಷ್ಟು ಸಿಗಡಿ ಆಂಧ್ರಪ್ರದೇಶದಿಂದಲೇ ರಫ್ತಾಗುತ್ತಿದೆ. ಆಂಧ್ರದ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳು, ಕೃಷ್ಣಾ, ಗುಂಟೂರು ಮತ್ತು ನೆಲ್ಲೂರು ಜಿಲ್ಲೆಗಳ ಎರಡು ಲಕ್ಷ ಹೆಕ್ಟೇರ್‌ಗಳಲ್ಲಿ ಮತ್ಸ್ಯಕೃಷಿ ನಡೆಯುತ್ತಿದೆ. ಇದು ಈ ಭಾಗದ ಆರ್ಥಿಕತೆಯ ಮೂಲಾಧಾರವಾಗಿದೆ. ಅಮೆರಿಕದ ಸುಂಕ ಹೇರಿಕೆಯ ನಿರ್ಧಾರವು ಈ ಭಾಗದ 10 ಲಕ್ಷ ಕುಟುಂಬಗಳ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.  

ದ್ವಿಪಕ್ಷೀಯ ಮಾತುಕತೆ: ಭಾರತ ಮತ್ತು ಅಮೆರಿಕದ ನಡುವೆ ದ್ವಿಪಕ್ಷೀಯ ವ್ಯಾಪಾರ ಮಾತುಕತೆ ನಡೆಯುತ್ತಿದ್ದು, ಅದು ಇನ್ನೂ ಅಂತಿಮಗೊಂಡಿಲ್ಲ. ಕೃಷಿ ಮತ್ತು ಹೈನು ಉತ್ಪನ್ನಗಳ ವಲಯವನ್ನು ಅಮೆರಿಕದ ಉತ್ಪನ್ನಗಳಿಗೆ ಮುಕ್ತಗೊಳಿಸಲು ಭಾರತವು ಒಪ್ಪುತ್ತಿಲ್ಲ. ಉಕ್ಕು, ಅಲ್ಯೂಮಿನಿಯಂ ಮತ್ತು ಆಟೊಮೊಬೈಲ್ ಬಿಡಿ ಭಾಗಗಳ ಮೇಲೆ ಹೆಚ್ಚು ಸುಂಕ ವಿಧಿಸಬಾರದು ಎನ್ನುವ ಭಾರತದ ಬೇಡಿಕೆಯನ್ನು ಅಮೆರಿಕ ಒಪ್ಪುತ್ತಿಲ್ಲ. ಹೀಗಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರು ಭಾರತದ ಬಗೆಗೆ ಕೋಪ ಹೊಂದಿದ್ದಾರೆ ಎನ್ನಲಾಗಿದೆ. ಈ ಮಾತುಕತೆ ಅಖೈರುಗೊಳ್ಳುವವರೆಗೆ ಅಮೆರಿಕ ಪ್ರವೇಶಿಸುವ ಭಾರತದ ಸರಕುಗಳ ಮೇಲೆ ಶೇ 25ರಷ್ಟು ಸುಂಕ ಬೀಳಲಿದೆ. ಆಗಸ್ಟ್‌ ತಿಂಗಳ ಮಧ್ಯಭಾಗದಲ್ಲಿ ಮಾತುಕತೆ ಪುನರಾರಂಭಗೊಳ್ಳಲಿದ್ದು, ನಂತರದಲ್ಲಿ ಸುಂಕದ ಪ್ರಮಾಣ ಕಡಿಮೆ ಆಗುವ ವಿಶ್ವಾಸ ಭಾರತದ ಉದ್ಯಮ ರಂಗದಲ್ಲಿದೆ. ಅಲ್ಲಿಯವರೆಗಾದರೂ ಶೇ 25ರಷ್ಟು ಸುಂಕವನ್ನು ಭಾರತ ಭರಿಸಲೇಬೇಕಿದ್ದು, ಇದು ದೇಶದ ಉದ್ಯಮ ರಂಗದ ಮೇಲೆ ಹಲವು ರೀತಿಯ ಪರಿಣಾಮಗಳನ್ನು ಬೀರಲಿದೆ.

ರಷ್ಯಾದಿಂದ ಇಂಧನ ಮತ್ತು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಭಾರತದ ಮೇಲೆ ಸುಂಕ ಹೇರುವುದರ ಜತೆಗೆ ದಂಡವನ್ನೂ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಆದರೆ, ದಂಡದ ಪ್ರಮಾಣ ಎಷ್ಟು ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ. ಇದು ಟ್ರಂಪ್ ಅವರ ಒತ್ತಡ ತಂತ್ರ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ತಮ್ಮ ದೇಶದ ಹಿತಾಸಕ್ತಿ ಸಾಧಿಸಿಕೊಳ್ಳಲು ಟ್ರಂಪ್ ಅವರು ಏಕಾಏಕಿ ಭಾರಿ ಪ್ರಮಾಣದಲ್ಲಿ ಸುಂಕ ಹೇರುವುದು, ನಂತರ ಆ ಪ್ರಮಾಣವನ್ನು ಇಳಿಸುವುದು ಚೀನಾ ಸೇರಿದಂತೆ ಹಲವು ದೇಶಗಳ ವಿಚಾರದಲ್ಲಿ ಈಗಾಗಲೇ ಸಾಬೀತಾಗಿದೆ. ಭಾರತದ ವಿಚಾರದಲ್ಲೂ ಅದು ಪುನರಾವರ್ತನೆ ಆಗಬಹುದು ಎಂದು ಕೆಲವು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಅನಿಶ್ಚಿತವಾಗಿದ್ದು, ಭಾರತದ ಉದ್ಯಮ ರಂಗದಲ್ಲಿ ಆತಂಕ ನೆಲಸಿದೆ.

ರಾಜ್ಯದ ಮೇಲೂ ಪ್ರಭಾವ

ಭಾರತದ ಉತ್ಪನ್ನಗಳಿಗೆ ಟ್ರಂಪ್‌ ವಿಧಿಸಿರುವ ಶೇ 25ರ ಸುಂಕದಿಂದ ರಾಜ್ಯದ ಉದ್ದಿಮೆಗಳ ಮೇಲೂ ಪರಿಣಾಮ ಬೀರುವುದು ಖಚಿತವಾದರೂ, ತೀವ್ರ ಹೊಡೆತವೇನೂ ಬೀಳದು ಎಂದು ಉದ್ಯಮ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ. 

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಪ್ರಕಾರ, 2023–24ನೇ ಸಾಲಿನಲ್ಲಿ ರಾಜ್ಯದಿಂದ ಅಂದಾಜು ₹4 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ಅಮೆರಿಕಕ್ಕೆ ರಫ್ತು ಮಾಡಲಾಗಿದೆ. ರಾಜ್ಯದಿಂದ ಪ್ರಮುಖವಾಗಿ ಕೃಷಿ ಉತ್ಪನ್ನಗಳು, ಐಟಿ ಹಾರ್ಡ್‌ವೇರ್‌/ಎಲೆಕ್ಟ್ರಾನಿಕ್ಸ್‌ ಗಾರ್ಮೆಂಟ್ಸ್‌, ವಾಹನಗಳ ಬಿಡಿ ಭಾಗಗಳನ್ನು ರಫ್ತು ಮಾಡಲಾಗುತ್ತದೆ. ಈ ಪೈಕಿ ಐಟಿ ಕ್ಷೇತ್ರದ ಕೊಡುಗೆ ಶೇ 42ರಷ್ಟಿದೆ. ಸುಂಕದ ಕಾರಣಕ್ಕೆ ರಫ್ತಿನ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದು. ಆದರೆ, ಪೂರ್ಣವಾಗಿ ನಿಲ್ಲದು ಎಂದು ಹೇಳುತ್ತಾರೆ ಉದ್ಯಮಿಗಳು. 

‘ಶೇ 25ರಷ್ಟು ತೆರಿಗೆ ಎಂದರೆ ದೊಡ್ಡ ಸಂಖ್ಯೆ. ಖಂಡಿತವಾಗಿಯೂ ರಾಜ್ಯದ ಕೈಗಾರಿಕೆಗಳ ಮೇಲೆ ಪರಿಣಾಮ ಬೀರಲಿದೆ. ಆದರೆ, ರಫ್ತು ಪೂರ್ಣವಾಗಿ ಸ್ಥಗಿತಗೊಳ್ಳದು. ಈಗ ಇಲ್ಲಿಂದ ರಫ್ತು ಮಾಡುವ ವಸ್ತುಗಳ ಮೇಲೆ ಸುಂಕ ವಿಧಿಸುವುದರಿಂದ ಅಲ್ಲಿ ನಮ್ಮ ದೇಶದ ಉತ್ಪನ್ನಗಳ ಬೆಲೆ ಹೆಚ್ಚಾಗಲಿದೆ. ಹಾಗಾಗಿ, ಗ್ರಾಹಕರು ಖರೀದಿಯನ್ನು ಸ್ವಲ್ಪ ಕಡಿಮೆ ಮಾಡಬಹುದು. ಹೀಗಾದಾಗ, ಬೇಡಿಕೆ ಕುಸಿಯುವುದರಿಂದ ರಫ್ತಿನ ಪ್ರಮಾಣ ಇಳಿಯಬಹುದು. ಆದರೆ, ಆ ಪ್ರಮಾಣ ಹೆಚ್ಚರಲಾರದು’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ತೀವ್ರವಾಗಿರದು’

ಸುಂಕ ಹೆಚ್ಚಳದಿಂದಾಗಿ ರಾಜ್ಯದಿಂದ ಅಮೆರಿಕಕ್ಕೆ ಆಗುವ ರಫ್ತಿನ ಮೇಲೆ ಹೆಚ್ಚು ಪರಿಣಾಮ ಬೀರದು ಎನ್ನುವುದು ನಮ್ಮ ಅಂದಾಜು. ಈಗ ಶೇ 25ರಷ್ಟು ಸುಂಕ ವಿಧಿಸಲಾಗಿದ್ದರೂ, ಎರಡೂ ರಾಷ್ಟ್ರಗಳ ನಡುವೆ ವ್ಯಾಪಾರ ಒಪ್ಪಂದ ಮಾತುಕತೆ ನಡೆಯುತ್ತಿದೆ. ಸುಂಕ ಕಡಿಮೆ ಆದರೂ ಆಗಬಹುದು. ಸದ್ಯದ ಮಟ್ಟಿಗೆ ನಮ್ಮ ರಫ್ತಿನಲ್ಲಿ ಶೇ 10ರಷ್ಟು ಕಡಿಮೆಯಾಗಬಹುದು. ಭಾರತ ಹಲವು ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ ಬ್ರಿಟನ್‌ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸುಂಕ ವಿನಾಯಿತಿಗಳನ್ನು ಘೋಷಿಸಲಾಗಿದೆ. ಒಂದು ವೇಳೆ ಅಮೆರಿಕದ ಸುಂಕದಿಂದಾಗಿ ಅಲ್ಲಿಗೆ ಮಾಡಲಾಗುವ ರಫ್ತಿನ ಮೇಲೆ ಪರಿಣಾಮ ಬಿದ್ದರೂ, ಬ್ರಿಟನ್‌ ಸೇರಿದಂತೆ ನಾವು ಒಪ್ಪಂದ ಮಾಡಿಕೊಂಡ ಇತರ ರಾಷ್ಟ್ರಗಳೊಂದಿಗಿನ ರಫ್ತು ವ್ಯವಹಾರ ಹೆಚ್ಚಲಿದೆ
ಎಂ.ಜಿ.ಬಾಲಕೃಷ್ಣ, ಎಫ್‌ಕೆಸಿಸಿಐ ಅಧ್ಯಕ್ಷ

ಭಾರತ–ರಷ್ಯಾ ಸ್ನೇಹ: ಟ್ರಂಪ್‌ ಕೆಂಗಣ್ಣು

ಡೊನಾಲ್ಡ್‌ ಟ್ರಂಪ್‌ ಅವರು ಭಾರತದ ಮೇಲೆ ಶೇ 25ರಷ್ಟು ಸುಂಕ ವಿಧಿಸುವುದಕ್ಕೆ ಕಾರಣವಾಗಿರುವ ಅಂಶಗಳಲ್ಲಿ ರಷ್ಯಾದೊಂದಿಗೆ ಭಾರತ ಹೊಂದಿರುವ ರಕ್ಷಣಾ ಮತ್ತು ವ್ಯಾಪಾರ ಸಂಬಂಧವೂ ಒಂದು. ಮೊದಲಿನಿಂದಲೂ ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಉತ್ತಮವಾಗಿದೆ. ಭಾರತವು ಯುದ್ಧವಿಮಾನಗಳು ಸೇರಿದಂತೆ ರಕ್ಷಣಾ ಸಲಕರಣೆಗಳು ಮತ್ತು ಸೇನಾ ತಂತ್ರಜ್ಞಾನವನ್ನು ರಷ್ಯಾದಿಂದ ಖರೀದಿಸುತ್ತಿದೆ. ಜಾಗತಿಕ ವೇದಿಕೆಗಳಲ್ಲಿ ಅದು ಯಾವಾಗಲೂ ಭಾರತವನ್ನು ಬೆಂಬಲಿಸುತ್ತಲೇ ಬಂದಿದೆ. ಅಮೆರಿಕದೊಂದಿಗೆ ನಡೆಸಲಾಗುತ್ತಿರುವ ವ್ಯಾಪಾರಕ್ಕೆ ಹೋಲಿಸಿದರೆ, ರಷ್ಯಾದೊಂದಿಗೆ ಭಾರತದ ವ್ಯಾಪಾರ ಕಡಿಮೆ. ಆದರೆ, ನಾಲ್ಕು ವರ್ಷಗಳಿಂದ ದ್ವಿಪಕ್ಷೀಯ ವ್ಯಾಪಾರ ಹೆಚ್ಚಾಗಿದೆ.  

ಆರು ಪಟ್ಟು ಹೆಚ್ಚಳ: ಉಕ್ರೇನ್‌–ರಷ್ಯಾ ಯುದ್ಧಕ್ಕೂ ಮುನ್ನ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ವ್ಯಾಪಾರ ಮೌಲ್ಯ ₹88,354 ಕೋಟಿ (1,010 ಡಾಲರ್‌) ಇತ್ತು. ಅದೀಗ ಆರು ಪಟ್ಟು ಹೆಚ್ಚಾಗಿದೆ. 2024–25ರ ಅಂಕಿ ಅಂಶಗಳ ಪ್ರಕಾರ, ದ್ವಿಪಕ್ಷೀಯ ವ್ಯಾಪಾರ ಮೌಲ್ಯ ₹6 ಲಕ್ಷ ಕೋಟಿಗೆ ಏರಿಕೆಯಾಗಿದೆ.  ಇದರಲ್ಲಿ, ಸಿಂಹಪಾಲು ದುಡ್ಡನ್ನು ಭಾರತವು ತೈಲ ಖರೀದಿಗಾಗಿ ರಷ್ಯಾಗೆ ನೀಡಿದೆ. 2030ರ ವೇಳೆಗೆ 10 ಸಾವಿರ ಕೋಟಿ ಡಾಲರ್‌ಗೆ (₹8.75 ಲಕ್ಷ ಕೋಟಿ) ಹೆಚ್ಚಿಸಲು ಎರಡೂ ರಾಷ್ಟ್ರಗಳು ಯೋಚಿಸಿವೆ.   

 ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಸಾರಿದ ನಂತರ, ಅಮೆರಿಕವು ರಷ್ಯಾದ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿತು. ಆ ಬಳಿಕ ಭಾರತವು ಅಂತರರಾಷ್ಟ್ರೀಯ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿ ಮಾಡಲು ಆರಂಭಿಸಿತು. ಇದನ್ನು ಅಮೆರಿಕ, ಯುರೋಪಿನ ರಾಷ್ಟ್ರಗಳು ವಿರೋಧಿಸಿದವು. ಅದಕ್ಕೆ ಸೊಪ್ಪು ಹಾಕದ ಭಾರತವು ಈಗ ಖರೀದಿಯನ್ನು ಇನ್ನಷ್ಟು ಹೆಚ್ಚಿಸಿದೆ. ಈಗ ಪ್ರತಿ ದಿನ 20.8 ಕೋಟಿ ಬ್ಯಾರೆಲ್‌ಗಳಷ್ಟು ತೈಲವನ್ನು ಖರೀದಿಸುತ್ತಿದೆ. ಚೀನಾದ ನಂತರ ರಷ್ಯಾದಿಂದ ಹೆಚ್ಚು ತೈಲವನ್ನು ಖರೀದಿಸುತ್ತಿರುವ ರಾಷ್ಟ್ರ ಭಾರತ. 

ಉಕ್ರೇನ್‌ –ರಷ್ಯಾ ಯುದ್ಧವನ್ನು ನಿಲ್ಲಿಸಲು ಟ್ರಂಪ್‌ ನಡೆಸುತ್ತಿರುವ ಯತ್ನ ವಿಫಲವಾಗುತ್ತಿದೆ. ಟ್ರಂಪ್‌ ಮಾತನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಕೇಳುತ್ತಿಲ್ಲ. ಚೀನಾ ಮತ್ತು ಭಾರತವು ಭಾರಿ ಪ್ರಮಾಣದಲ್ಲಿ ತೈಲ ಖರೀದಿಸುತ್ತಿರುವುದರಿಂದ ರಷ್ಯಾಕ್ಕೆ ಆರ್ಥಿಕವಾಗಿ ಅನುಕೂಲವಾಗುತ್ತಿದ್ದು, ಶಾಂತಿ ಮಾತುಕತೆಗೆ ಬಾರದೆ ಯುದ್ಧ ಮುಂದುವರಿಸುತ್ತಿದೆ ಎಂಬುದು ಟ್ರಂಪ್‌ ಕೋಪಕ್ಕೆ ಕಾರಣ. ತೈಲ ಖರೀದಿಸದಂತೆ ಟ್ರಂಪ್‌ ಆಡಳಿತ ಭಾರತದ ಮೇಲೆ ಒತ್ತಡ ಹಾಕುತ್ತಲೇ ಇದೆ. ಆದರೆ, ಭಾರತ ಅದಕ್ಕೆ ಬಗ್ಗಿಲ್ಲ.

ಜತೆಗೆ, ಭಾರತದಲ್ಲಿ ರಷ್ಯಾದ ರಕ್ಷಣಾ ಸಲಕರಣೆಗಳ ತಯಾರಿಕೆ ಸೇರಿದಂತೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಒಪ್ಪಂದಗಳನ್ನು ನಡೆಸಲು ಎರಡೂ ರಾಷ್ಟ್ರಗಳು ಸಮ್ಮತಿಸಿವೆ. ಅಮೆರಿಕದ ಎಫ್‌ 35 ಯುದ್ಧವಿಮಾನಗಳು ಸೇರಿದಂತೆ ರಕ್ಷಣಾ ಸಲಕರಣೆಗಳನ್ನು ಭಾರತ ಖರೀದಿಸಬೇಕು ಎಂದು ಟ್ರಂಪ್‌ ಬಯಸಿದ್ದಾರೆ. ಈ ವಿಚಾರದಲ್ಲೂ ಕೇಂದ್ರ ಸರ್ಕಾರ ಸ್ಪಷ್ಟವಾದ ನಿರ್ಧಾರ ತಳೆದಿಲ್ಲ. ಇದು ಕೂಡ ಟ್ರಂಪ್‌ ಅವರಿಗೆ ಕಸಿವಿಸಿ ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.