ADVERTISEMENT

ಆಳ–ಅಗಲ | ಕಿರಾಣಿ ಅಂಗಡಿಗಳಿಗೆ ‘ಕ್ವಿಕ್‌ ಕಾಮರ್ಸ್‌’ ಸವಾಲು

ಆನ್‌ಲೈನ್‌ ಖರೀದಿ ಭರಾಟೆಯ ಮುಂದೆ ಮಂಕಾದ ಸಾಂಪ್ರದಾಯಿಕ ಮಾರಾಟ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 23:30 IST
Last Updated 4 ಡಿಸೆಂಬರ್ 2024, 23:30 IST
ಲಿಂಗಸುಗೂರು ಕಿರಾಣಿ ಅಂಗಡಿಯೊಂದರ ಚಿತ್ರ
ಲಿಂಗಸುಗೂರು ಕಿರಾಣಿ ಅಂಗಡಿಯೊಂದರ ಚಿತ್ರ   

ಭಾರತೀಯರು ವ್ಯಾಪಾರ ಮಾಡುವ ರೀತಿ ಬದಲಾಗಿದೆ. ಜನರು ‌ಮೊದಲು ಮನೆ ಹತ್ತಿರದ ಅಥವಾ ಊರು/ಪಟ್ಟಣದಲ್ಲಿರುವ ಅಂಗಡಿಗೆ ಬಂದು ಅಗತ್ಯವಿದ್ದಷ್ಟು ದಿನ ಬಳಕೆಯ ವಸ್ತುಗಳು ಅಥವಾ ಸರಕುಗಳನ್ನು
ಕೊಳ್ಳುತ್ತಿದ್ದರು. ಇಂಟರ್‌ನೆಟ್‌ ಪ್ರವೇಶದೊಂದಿಗೆ ಇ–ಕಾಮರ್ಸ್ ಕಂಪನಿಗಳು ಅಡಿ ಇಟ್ಟವು. ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸಿದರೆ, ವಸ್ತುಗಳು ಮನೆಗೆ ಬಂದು ಬೀಳತೊಡಗಿದವು. ಮೊದಲೆಲ್ಲ ನಗರ, ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿದ್ದ ಇ–ಕಾಮರ್ಸ್‌ ಕಂಪನಿಗಳ ಕಾರ್ಯಾಚರಣೆ ಈಗ ಹೋಬಳಿ ಮಟ್ಟ, ಹಳ್ಳಿಗಳನ್ನೂ ತಲುಪಿದೆ. 

ಆನ್‌ಲೈನ್‌ ಮಾರಾಟ–ಖರೀದಿ ವ್ಯವಸ್ಥೆ ಈಗ ಮತ್ತಷ್ಟು ಬದಲಾಗಿದ್ದು, ಪೈಪೋಟಿಯ ಮೇಲೆ ಕೆಲವೇ ನಿಮಿಷಗಳಲ್ಲಿ ಗ್ರಾಹಕರ ಅಗತ್ಯದ ವಸ್ತುಗಳನ್ನು ಅವರ ಮನೆಬಾಗಿಲಿಗೆ ಮುಟ್ಟಿಸುವ ಕಂಪನಿಗಳು/ಆ್ಯಪ್‌ಗಳು ಹೆಚ್ಚಾಗತೊಡಗಿವೆ. ‘ಕ್ವಿಕ್‌ (ತ್ವರಿತ) ಕಾಮರ್ಸ್‌’ ಕಲ್ಪನೆ ಅಡಿಯಲ್ಲಿ ಕಾರ್ಯಾಚರಿಸುವ ಈ ಕಂಪನಿ/ಆ್ಯಪ್‌ಗಳು ವೇಗವಾಗಿ ಬೆಳೆಯುತ್ತಿದ್ದು, ‘ಕೆಲವೇ ನಿಮಿಷಗಳಲ್ಲಿ ಸರಕುಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ’ ಎಂದು ಪ್ರತಿ‍ಪಾದಿಸುತ್ತ ತಮ್ಮ ವ್ಯಾಪ್ತಿಯನ್ನೂ ವಿಸ್ತರಿಸಿಕೊಳ್ಳುತ್ತಿವೆ. ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ದೊಡ್ಡ
ಇ–ಕಾಮರ್ಸ್‌ ಕಂಪನಿಗಳು ಕೂಡ ತ್ವರಿತ ಡೆಲಿವರಿ ಸೇವೆ ನೀಡುತ್ತಿವೆ. ಎಂಆರ್‌ಪಿಗಿಂತಲೂ ಕಡಿಮೆ ಬೆಲೆಯಲ್ಲಿ, ಡೆಲಿವರಿ ಶುಲ್ಕ ಇಲ್ಲದೇ ಸರಕುಗಳನ್ನು ಕಂಪನಿಗಳು ವಿತರಿಸುತ್ತಿರುವುದರಿಂದ ಹೆಚ್ಚಿನ ಗ್ರಾಹಕರು ಆನ್‌ಲೈನ್‌ ‌ವ್ಯವಸ್ಥೆಯ ಮೂಲಕವೇ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಸದೃಢವಾಗಿ ಬೆಳೆಯುತ್ತಿರುವ ಆನ್‌ಲೈನ್‌ ಮಾರಾಟ–ಖರೀದಿ ವ್ಯವಸ್ಥೆಯು ಸಾಂಪ್ರದಾಯಿಕ ಕಿರಾಣಿ ಅಂಗಡಿಗಳ ವ್ಯಾಪಾರಕ್ಕೆ ಪೆಟ್ಟು ನೀಡಲು ಆರಂಭಿಸಿದೆ. 

ಜನಸಂಖ್ಯೆಗೆ ಹೋಲಿಸಿದರೆ, ಜಗತ್ತಿನಲ್ಲಿಯೇ ಅತಿ ಹೆಚ್ಚು ಚಿಲ್ಲರೆ ಅಂಗಡಿಗಳಿರುವ ದೇಶ ಭಾರತ. ದೇಶದಲ್ಲಿ ಸುಮಾರು 1.3 ಕೋಟಿ ಕಿರಾಣಿ ಅಂಗಡಿಗಳು ಇವೆ ಎಂದು ಅಂದಾಜಿಸಲಾಗಿದ್ದು, ಅವುಗಳ ಪೈಕಿ ಒಂದು ಕೋಟಿ ಅಂಗಡಿಗಳು ಎರಡನೇ ಹಂತದ ನಗರ ಮತ್ತು ಸಣ್ಣ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿವೆ. 

ADVERTISEMENT

2 ಲಕ್ಷ ಅಂಗಡಿ ಬಂದ್: ಗ್ರಾಹಕರು ವಸ್ತುಗಳ ಬೆಲೆಯನ್ನು ಆನ್‌ಲೈನ್‌ಲ್ಲಿರುವ ಬೆಲೆಗಳೊಂದಿಗೆ ಹೋಲಿಸಿ ನೋಡುವ ಪ್ರವೃತ್ತಿ ಹೆಚ್ಚುತ್ತಿದೆ. ದೇಶದಲ್ಲಿ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಿಂದ ಹಿಡಿದು 10 ನಿಮಿಷದಲ್ಲಿ ಜನರಿಗೆ ಬೇಕಾದ ದಿನಸಿ ಮತ್ತಿತರ ವಸ್ತುಗಳನ್ನು ಮನೆಗೆ ತಲುಪಿಸುವ ಆ್ಯ‍ಪ್ ಆಧಾರಿತ ಬ್ಲಿಂಕಿಟ್, ಇನ್‌ಸ್ಟಾಮಾರ್ಟ್, ಜೆಪ್ಟೊ, ಬಿಗ್‌ ಬಾಸ್ಕೆಟ್‌ ನೌನಂತಹ ಇ– ಕಾಮರ್ಸ್ ಕಂಪನಿಗಳ ವಹಿವಾಟು ಮತ್ತು ವರಮಾನ ಕ್ಷಿಪ್ರಗತಿಯಲ್ಲಿ ವೃದ್ಧಿಯಾಗುತ್ತಿದೆ. ಇದಕ್ಕೆ ಹೋಲಿಸಿದರೆ ಕಿರಾಣಿ ಅಂಗಡಿಗಳ ಬೆಳವಣಿಗೆ ದರ ಕಡಿಮೆ ಇದೆ.  

ಅನೇಕ ಗ್ರಾಹಕರು ಮನೆ ಪಕ್ಕದ ಅಂಗಡಿಗಳಿಗೆ ಹೋಗುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಹೀಗಾಗಿ ಕಿರಾಣಿ ಅಂಗಡಿಗಳಲ್ಲಿನ ಮಾರಾಟವು ಶೇ 10ರಿಂದ ಶೇ 30ರವರೆಗೆ ಕುಸಿದಿದೆ. ಲಾಭದ ಪಾಲು ಕಡಿಮೆ ಆಗಿರುವುದರಿಂದ ಕಿರಾಣಿ ಅಂಗಡಿಗಳು ಮುಚ್ಚುವ ಹಂತಕ್ಕೆ ಬಂದಿವೆ. ಕೋವಿಡ್ ನಂತರವಂತೂ ಕಿರಾಣಿ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಗ್ರಾಹಕರ ಸಂಖ್ಯೆಯಲ್ಲಿ ವಿಪರೀತ ಕುಸಿತವಾಗಿದೆ. ಆನ್‌ಲೈನ್ ಶಾಪಿಂಗ್ ಭರಾಟೆಯಿಂದ ದೇಶದಾದ್ಯಂತ ಒಂದೇ ವರ್ಷದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಂದ್ ಆಗಿವೆ ಎಂದು ಅಖಿಲ ಭಾರತ ಗ್ರಾಹಕ ವಸ್ತುಗಳ ಪೂರೈಕೆ ಸಂಘಟನೆ (ಎಐಸಿಪಿಡಿಎಫ್) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. 

ಇ–ಕಾಮರ್ಸ್ ಕಂಪನಿಗಳು ಅತ್ಯಂತ ವೇಗದಿಂದ ಬೆಳೆಯುತ್ತಿರುವುದನ್ನು ಪ್ರಮುಖ ತ್ವರಿತ ಬಿಕರಿ ಗ್ರಾಹಕ ಉತ್ಪನ್ನಗಳ ಕಂಪನಿಗಳು (ಎಫ್‌ಎಂಸಿಜಿ) 2023–24ರ ತಮ್ಮ ವಾರ್ಷಿಕ ವರದಿಗಳಲ್ಲಿ ಉಲ್ಲೇಖಿಸಿವೆ. ಎಫ್‌ಎಂಸಿಜಿಗಳ ಆದಾಯದಲ್ಲಿ ಮುಖ್ಯ ಪಾಲು ಇ–ಕಾಮರ್ಸ್‌ನಿಂದ ಬರುತ್ತಿದೆ.   

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬ್ರ್ಯಾಂಡೆಡ್ ವಸ್ತುಗಳು ಹೆಚ್ಚಾಗಿ ಮಾರಾಟವಾಗುತ್ತವೆ. ಇದರಿಂದ ವಸ್ತುಗಳ ಉತ್ಪಾದನೆ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಏಕಸ್ವಾಮ್ಯಕ್ಕೆ ಕಾರಣವಾಗುವ ಸಂಭವವಿದೆ ಎಂದೂ ವರದಿಗಳು ಹೇಳಿವೆ. 

ರಿಯಾಯಿತಿ ದರ ಮಾರಾಟ ಕಂಟಕ

ಕಿರಾಣಿ ಅಂಗಡಿಗಳಿಗೆ ಕಂಟಕವಾಗಿರುವುದು ಇ–ಕಾಮರ್ಸ್ /ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ರಿಯಾಯಿತಿ ಮಾರಾಟ. ಹಬ್ಬ ಅಥವಾ ವಿಶೇಷ ದಿನಗಳಲ್ಲಿ ಭಾರಿ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತವೆ. ಹೀಗೆ ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟ ಮಾಡುವ ಪ್ರವೃತ್ತಿಯು ಅನಾರೋಗ್ಯಕಾರಿ ಪೈಪೋಟಿಗೆ ಕಾರಣವಾಗಿದೆ ಎನ್ನುವ ಆತಂಕ ವ್ಯಕ್ತವಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಜನ ಗಮನ ಹರಿಸಬೇಕು ಎಂದು ಎಐಸಿಪಿಡಿಎಫ್ ರಾಷ್ಟ್ರೀಯ ಅಧ್ಯಕ್ಷ ಧೈರ್ಯಶೀಲ್ ಪಾಟೀಲ್ ಒತ್ತಾಯಿಸಿದ್ದಾರೆ. ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ಜಾಲಗಳ ನಡುವೆ ನ್ಯಾಯಸಮ್ಮತವಾದ ವ್ಯವಸ್ಥೆಯನ್ನು ರೂಪಿಸುವ ಸಲುವಾಗಿ ಮಸೂದೆಯೊಂದನ್ನು ತರಲು ಕೇಂದ್ರ ಸರ್ಕಾರವೂ ಪ್ರಯತ್ನ ನಡೆಸುತ್ತಿದೆ.

ಈಗಲೂ ಕಿರಾಣಿ ಅಂಗಡಿಗಳ ಪಾಲೇ ಹೆಚ್ಚು

ಇಷ್ಟೆಲ್ಲ ಆದರೂ ಕಿರಾಣಿ ಅಂಗಡಿಗಳು ಸಂಪೂರ್ಣವಾಗಿ ಇಲ್ಲವಾಗುತ್ತವೆ ಎಂದೇನೂ ಹೇಳಲಾಗದು. ಏಕೆಂದರೆ, ಸಾಂಪ್ರದಾಯಿಕವಾದ ಕಿರಾಣಿ ಅಂಗಡಿ ವ್ಯವಸ್ಥೆಯ ಮೂಲಕವೇ ಈಗಲೂ ಸುಮಾರು ಶೇ 85ರಷ್ಟು ವ್ಯಾಪಾರ ವಹಿವಾಟು ನಡೆಯುತ್ತಿದೆ. 

ಜನರ ಕೊಳ್ಳುವ ಶಕ್ತಿ ಕಡಿಮೆ ಇರುವ ಭಾರತದಂಥ ದೇಶದಲ್ಲಿ ಇ–ಕಾಮರ್ಸ್ /ಕ್ವಿಕ್‌ ಕಾಮರ್ಸ್‌ ಕಂಪನಿಗಳ ಬೆಳವಣಿಗೆ ಯಾವ ಮಟ್ಟಕ್ಕೆ ಏರಬಲ್ಲದು, ಕಿರಾಣಿ ಅಂಗಡಿಗಳಿಗೆ ಎಷ್ಟರ ಮಟ್ಟಿಗೆ ಪ್ರತಿಕೂಲವಾಗಬಹುದು ಎಂದು ಈಗಲೇ ಹೇಳಲಾಗದು. ಕಿರಾಣಿ ಅಂಗಡಿಗಳ ವ್ಯವಸ್ಥೆಯಲ್ಲಿ ಮಾರುವವರು ಮತ್ತು ಕೊಳ್ಳುವವರ ನಡುವೆ ಪರಿಚಯ, ಸ್ನೇಹ ಇರುತ್ತದೆ. ಬಹುತೇಕ ಅಂಗಡಿಗಳಲ್ಲಿ ಸಾಲ ಕೊಡುವ ಪದ್ಧತಿಯೂ ಜಾರಿಯಲ್ಲಿದೆ. ಕ್ವಿಕ್‌ ಕಾಮರ್ಸ್‌ ವ್ಯವಸ್ಥೆ ಸದ್ಯ ನಗರಗಳಿಗೆ ಮಾತ್ರ ಸೀಮಿತವಾಗಿದೆ. ಇನ್ನೂ ಗ್ರಾಮೀಣ ಪ್ರದೇಶಗಳಿಗೆ ತಲುಪಿಲ್ಲ. ಇವೆಲ್ಲವೂ ಇ–ಕಾಮರ್ಸ್ ‌ನ ಒಟ್ಟಾರೆ ಬೆಳವಣಿಗೆಯ ವೇಗಕ್ಕೆ ತಡೆ ಒಡ್ಡಿವೆ. ಸಾಂಪ್ರದಾಯಿಕ ಮಾರಾಟ ವ್ಯವಸ್ಥೆ‌ ಉಳಿಸುವುದಕ್ಕಾಗಿ ಸರ್ಕಾರ ಕಾನೂನು ತರಬೇಕು ಎನ್ನುವ ಒತ್ತಾಯವೂ ಕೇಳಿಬಂದಿದೆ.

ಚಿಲ್ಲರೆ ಮಾರಾಟಗಾರರು ಕೂಡ ಕಾಲಕ್ಕೆ ತಕ್ಕಂತೆ ಬದಲಾಗಬೇಕಾದ ಅಗತ್ಯವಿದೆ. ಕಿರಾಣಿ ಅಂಗಡಿಗಳು ಡಿಜಿಟಲೀಕರಣಗೊಳ್ಳಬೇಕು; ಈ ವಿಚಾರದಲ್ಲಿ ತಾನು ಕೇಂದ್ರ ಸರ್ಕಾರದ ‘ಡಿಜಿಟಲ್ ವ್ಯಾಪಾರಕ್ಕಾಗಿ ಮುಕ್ತ ವ್ಯವಸ್ಥೆ’ ಮೂಲಕ 13 ಲಕ್ಷ ಅಂಗಡಿಗಳಿಗೆ ಡಿಜಿಟಲೀಕರಣಗೊಳ್ಳಲು ನೆರವು ನೀಡುವುದಾಗಿ ಹಿಂದೂಸ್ಥಾನ್ ಯುನಿಲಿವರ್ ಹೇಳಿದೆ. ಇವುಗಳ ಫಲವಾಗಿ, ಕುಟುಂಬ ಒಡೆತನದ ಚಿಲ್ಲರೆ ಮಾರಾಟಗಾರರೂ ಕೂಡ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ರೆಡ್‌ಸೀರ್ ಸ್ಟ್ರ್ಯಾಟಜಿ ಕನ್ಸಲ್ಟೆಂಟ್ಸ್ ಸಂಸ್ಥೆ ಹೇಳಿದೆ. ಇನ್ನೊಂದು ದಿಕ್ಕಿನಲ್ಲಿ, ಕಿರಾಣಿ ಅಂಗಡಿಗಳು ಮತ್ತು ಇ–ಕಾಮರ್ಸ್ ಕಂಪನಿಗಳು ಒಂದಾಗಿ ವ್ಯಾಪಾರ ಮಾಡುವ ಪ್ರಯತ್ನಗಳೂ ಆರಂಭವಾಗಿವೆ.

ಇ–ಕಾಮರ್ಸ್‌/ಕ್ವಿಕ್‌ ಕಾಮರ್ಸ್‌ ಕ್ಷಿಪ್ರ ಬೆಳವಣಿಗೆಗೆ ಕಾರಣಗಳೇನು?

* ಡಿಜಿಟಲ್‌ ಬಳಕೆ ಹೆಚ್ಚಿರುವುದು ಮತ್ತು ಗ್ರಾಹಕರ ಖರೀದಿ ಪ್ರವೃತ್ತಿಯಲ್ಲಿ ಆಗಿರುವ ಬದಲಾವಣೆ 

* ಸ್ಮಾರ್ಟ್‌ಫೋನ್‌ ಮತ್ತು ಇಂಟರ್‌ನೆಟ್‌ ಬಳಕೆಯಲ್ಲಾದ ಹೆಚ್ಚಳ. ಇದರಿಂದ ಎರಡನೇ ಹಂತ ಮತ್ತು ಮೂರನೇ ಹಂತದ ನಗರಗಳಲ್ಲೂ ಹೆಚ್ಚಿದ ಆನ್‌ಲೈನ್‌ ಖರೀದಿ

* ಡಿಜಿಟಲ್‌ ಪಾವತಿ ವ್ಯವಸ್ಥೆಗಳ ಲಭ್ಯತೆ‌

* ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಇದ್ದ ನಿರ್ಬಂಧಗಳಿಂದ ಆನ್‌ಲೈನ್‌ ಖರೀದಿಗೆ ಮುಂದಾದ ಜನ. ಸಾಂಕ್ರಾಮಿಕದ ನಂತರವೂ ಅದೇ ಪ್ರವೃತ್ತಿ ಮುಂದುವರಿಕೆ

* ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು ಬಂಡವಾಳ ಹೂಡಿದ್ದ
ರಿಂದ ವಿಸ್ತಾರಗೊಂಡ ವಲಯ

* ಡಿಜಿಟಲ್‌ ಪಾವತಿಗೆ ಉತ್ತೇಜನ ನೀಡಲು ಸರ್ಕಾರ ಕೈಗೊಂಡ ಕ್ರಮಗಳು

* ಇ–ಕಾಮರ್ಸ್‌ ಸಂಸ್ಥೆಗಳು ನೀಡುತ್ತಿರುವ ರಿಯಾಯಿತಿ ಕೊಡುಗೆಗಳು

* ಮೊದಲು ಖರೀದಿ, ನಂತರ ಹಣ ಪಾವತಿಸಲು ಇರುವ ಆಯ್ಕೆ

*  ಕಂಪನಿಗಳ ಗ್ರಾಹಕಸ್ನೇಹಿ ಸೇವೆಗಳು‌‌

* ಕಂಪನಿಯಿಂದ ನೇರ ಗ್ರಾಹಕರಿಗೆ ತಲುಪಿಸುವ ಬ್ರ್ಯಾಂಡ್‌ಗಳು ಮತ್ತು ಆ ಮಾದರಿಯ ಹೊಸ ವ್ಯಾಪಾರದಲ್ಲಾದ ಹೆಚ್ಚಳ

ಹೆಚ್ಚಿದ ಇಂಟರ್‌ನೆಟ್‌ ಬಳಕೆ

ದೇಶದಲ್ಲಿ ಡಿಜಿಟಲ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿದೆ. ಸ್ಮಾರ್ಟ್‌ಫೋನ್‌ಗಳ ಬಳಕೆ ಮತ್ತು ಕೈಗೆಟುಕುವ ದರದಲ್ಲಿ ಇಂಟರ್‌ನೆಟ್‌ ಸೌಲಭ್ಯ ಸಿಗುತ್ತಿರುವುದು ಇದಕ್ಕೆ ಕಾರಣ ಎಂದು ಹೇಳುತ್ತವೆ ಅಧ್ಯಯನಗಳು. 

ವರ್ಷದಿಂದ ವರ್ಷಕ್ಕೆ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆಯಲ್ಲಿ ಶೇ 10ರಷ್ಟು ಏರಿಕೆ ಕಂಡು ಬರುತ್ತಿದೆ. 2022ರಲ್ಲಿ ಇಂಟರ್‌ನೆಟ್‌ ಬಳಸುತ್ತಿರುವವರ ಸಂಖ್ಯೆ 75.9 ಕೋಟಿಗೆ ಏರಿತು. ಜಾಗತಿಕ ಮಟ್ಟದಲ್ಲಿ ಇಂಟರ್‌ನೆಟ್‌ ಡೇಟಾ ಬಳಕೆಯಲ್ಲಿ ಭಾರತವೇ ಮುಂದಿದ್ದು, ಪ್ರತಿ ತಿಂಗಳು ವ್ಯಕ್ತಿಯೊಬ್ಬರು ಸರಾಸರಿ 14.1 ಜಿಬಿಯಷ್ಟು ಡೇಟಾವನ್ನು ಬಳಸುತ್ತಾರೆ ಎಂದು ಹೇಳುತ್ತದೆ ಡೆಲಾಯ್ಟ್‌ ಮತ್ತು ಎಫ್ಐಸಿಸಿಐನ ವರದಿ. 

ಆಧಾರ: ಡೆಲಾಯ್ಟ್‌ ಮತ್ತು ಎಫ್ಐಸಿಸಿಐ –ಸ್ಪರಿಂಗ್‌ ಗ್ರೋತ್‌ ಇನ್‌ ಎಫ್‌ಎಂಸಿಜಿ, ರಿಟೇಲ್‌ ಆ್ಯಂಡ್‌ ಇ–ಕಾಮರ್ಸ್‌ ಸೆಕ್ಟರ್ಸ್‌ ಇನ್‌ ಇಂಡಿಯಾ ವರದಿ, ಇನ್‌ವೆಸ್ಟ್‌ ಇಂಡಿಯಾ ವೆಬ್‌ಸೈಟ್‌, ಜೆಎಂ ಫೈನಾನ್ಶಿಯಲ್‌ನ ‘ಡೀಪ್ ಡೈವ್: ಕ್ವಿಕ್ ಕಾಮರ್ಸ್’ ವರದಿ, ರೆಡ್‌ಸೀರ್ ಸ್ಟ್ರ್ಯಾಟಜಿ ಕನ್ಸಲ್ಟೆಂಟ್ಸ್ ಅಧ್ಯಯನ ವರದಿ

ಹೆಚ್ಚಿದ ಇಂಟರ್‌ನೆಟ್‌ ಬಳಕೆ

ದೇಶದಲ್ಲಿ ಡಿಜಿಟಲ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿದೆ. ಸ್ಮಾರ್ಟ್‌ಫೋನ್‌ಗಳ ಬಳಕೆ ಮತ್ತು ಕೈಗೆಟುಕುವ ದರದಲ್ಲಿ ಇಂಟರ್‌ನೆಟ್‌ ಸೌಲಭ್ಯ ಸಿಗುತ್ತಿರುವುದು ಇದಕ್ಕೆ ಕಾರಣ ಎಂದು ಹೇಳುತ್ತವೆ ಅಧ್ಯಯನಗಳು.  ವರ್ಷದಿಂದ ವರ್ಷಕ್ಕೆ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆಯಲ್ಲಿ ಶೇ 10ರಷ್ಟು ಏರಿಕೆ ಕಂಡು ಬರುತ್ತಿದೆ. 2022ರಲ್ಲಿ ಇಂಟರ್‌ನೆಟ್‌ ಬಳಸುತ್ತಿರುವವರ ಸಂಖ್ಯೆ 75.9 ಕೋಟಿಗೆ ಏರಿತು. ಜಾಗತಿಕ ಮಟ್ಟದಲ್ಲಿ ಇಂಟರ್‌ನೆಟ್‌ ಡೇಟಾ ಬಳಕೆಯಲ್ಲಿ ಭಾರತವೇ ಮುಂದಿದ್ದು ಪ್ರತಿ ತಿಂಗಳು ವ್ಯಕ್ತಿಯೊಬ್ಬರು ಸರಾಸರಿ 14.1 ಜಿಬಿಯಷ್ಟು ಡೇಟಾವನ್ನು ಬಳಸುತ್ತಾರೆ ಎಂದು ಹೇಳುತ್ತದೆ ಡೆಲಾಯ್ಟ್‌ ಮತ್ತು ಎಫ್ಐಸಿಸಿಐನ ವರದಿ. 

ಈಗಲೂ ಕಿರಾಣಿ ಅಂಗಡಿಗಳ ಪಾಲೇ ಹೆಚ್ಚು ಇಷ್ಟೆಲ್ಲ ಆದರೂ ಕಿರಾಣಿ ಅಂಗಡಿಗಳು ಸಂಪೂರ್ಣವಾಗಿ ಇಲ್ಲವಾಗುತ್ತವೆ ಎಂದೇನೂ ಹೇಳಲಾಗದು. ಏಕೆಂದರೆ ಸಾಂಪ್ರದಾಯಿಕವಾದ ಕಿರಾಣಿ ಅಂಗಡಿ ವ್ಯವಸ್ಥೆಯ ಮೂಲಕವೇ ಈಗಲೂ ಸುಮಾರು ಶೇ 85ರಷ್ಟು ವ್ಯಾಪಾರ ವಹಿವಾಟು ನಡೆಯುತ್ತಿದೆ.  ಜನರ ಕೊಳ್ಳುವ ಶಕ್ತಿ ಕಡಿಮೆ ಇರುವ ಭಾರತದಂಥ ದೇಶದಲ್ಲಿ ಇ–ಕಾಮರ್ಸ್ /ಕ್ವಿಕ್‌ ಕಾಮರ್ಸ್‌ ಕಂಪನಿಗಳ ಬೆಳವಣಿಗೆ ಯಾವ ಮಟ್ಟಕ್ಕೆ ಏರಬಲ್ಲದು ಕಿರಾಣಿ ಅಂಗಡಿಗಳಿಗೆ ಎಷ್ಟರ ಮಟ್ಟಿಗೆ ಪ್ರತಿಕೂಲವಾಗಬಹುದು ಎಂದು ಈಗಲೇ ಹೇಳಲಾಗದು. ಕಿರಾಣಿ ಅಂಗಡಿಗಳ ವ್ಯವಸ್ಥೆಯಲ್ಲಿ ಮಾರುವವರು ಮತ್ತು ಕೊಳ್ಳುವವರ ನಡುವೆ ಪರಿಚಯ ಸ್ನೇಹ ಇರುತ್ತದೆ. ಬಹುತೇಕ ಅಂಗಡಿಗಳಲ್ಲಿ ಸಾಲ ಕೊಡುವ ಪದ್ಧತಿಯೂ ಜಾರಿಯಲ್ಲಿದೆ. ಕ್ವಿಕ್‌ ಕಾಮರ್ಸ್‌ ವ್ಯವಸ್ಥೆ ಸದ್ಯ ನಗರಗಳಿಗೆ ಮಾತ್ರ ಸೀಮಿತವಾಗಿದೆ. ಇನ್ನೂ ಗ್ರಾಮೀಣ ಪ್ರದೇಶಗಳಿಗೆ ತಲುಪಿಲ್ಲ. ಇವೆಲ್ಲವೂ ಇ–ಕಾಮರ್ಸ್ ‌ನ ಒಟ್ಟಾರೆ ಬೆಳವಣಿಗೆಯ ವೇಗಕ್ಕೆ ತಡೆ ಒಡ್ಡಿವೆ. ಸಾಂಪ್ರದಾಯಿಕ ಮಾರಾಟ ವ್ಯವಸ್ಥೆ‌ ಉಳಿಸುವುದಕ್ಕಾಗಿ ಸರ್ಕಾರ ಕಾನೂನು ತರಬೇಕು ಎನ್ನುವ ಒತ್ತಾಯವೂ ಕೇಳಿಬಂದಿದೆ. ಚಿಲ್ಲರೆ ಮಾರಾಟಗಾರರು ಕೂಡ ಕಾಲಕ್ಕೆ ತಕ್ಕಂತೆ ಬದಲಾಗಬೇಕಾದ ಅಗತ್ಯವಿದೆ. ಕಿರಾಣಿ ಅಂಗಡಿಗಳು ಡಿಜಿಟಲೀಕರಣಗೊಳ್ಳಬೇಕು; ಈ ವಿಚಾರದಲ್ಲಿ ತಾನು ಕೇಂದ್ರ ಸರ್ಕಾರದ ‘ಡಿಜಿಟಲ್ ವ್ಯಾಪಾರಕ್ಕಾಗಿ ಮುಕ್ತ ವ್ಯವಸ್ಥೆ’ ಮೂಲಕ 13 ಲಕ್ಷ ಅಂಗಡಿಗಳಿಗೆ ಡಿಜಿಟಲೀಕರಣಗೊಳ್ಳಲು ನೆರವು ನೀಡುವುದಾಗಿ ಹಿಂದೂಸ್ಥಾನ್ ಯುನಿಲಿವರ್ ಹೇಳಿದೆ. ಇವುಗಳ ಫಲವಾಗಿ ಕುಟುಂಬ ಒಡೆತನದ ಚಿಲ್ಲರೆ ಮಾರಾಟಗಾರರೂ ಕೂಡ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ರೆಡ್‌ಸೀರ್ ಸ್ಟ್ರ್ಯಾಟಜಿ ಕನ್ಸಲ್ಟೆಂಟ್ಸ್ ಸಂಸ್ಥೆ ಹೇಳಿದೆ. ಇನ್ನೊಂದು ದಿಕ್ಕಿನಲ್ಲಿ ಕಿರಾಣಿ ಅಂಗಡಿಗಳು ಮತ್ತು ಇ–ಕಾಮರ್ಸ್ ಕಂಪನಿಗಳು ಒಂದಾಗಿ ವ್ಯಾಪಾರ ಮಾಡುವ ಪ್ರಯತ್ನಗಳೂ ಆರಂಭವಾಗಿವೆ.

ಕ್ಷಿಪ್ರ ಬೆಳವಣಿಗೆಗೆ ಕಾರಣಗಳೇನು?

l ಡಿಜಿಟಲ್‌ ಬಳಕೆ ಹೆಚ್ಚಿರುವುದು ಮತ್ತು ಗ್ರಾಹಕರ ಖರೀದಿ ಪ್ರವೃತ್ತಿಯಲ್ಲಿ ಆಗಿರುವ ಬದಲಾವಣೆ 

l ಸ್ಮಾರ್ಟ್‌ಫೋನ್‌ ಮತ್ತು ಇಂಟರ್‌ನೆಟ್‌ ಬಳಕೆಯಲ್ಲಾದ ಹೆಚ್ಚಳ. ಇದರಿಂದ ಎರಡನೇ ಹಂತ ಮತ್ತು ಮೂರನೇ ಹಂತದ ನಗರಗಳಲ್ಲೂ ಹೆಚ್ಚಿದ ಆನ್‌ಲೈನ್‌ ಖರೀದಿ

l ಡಿಜಿಟಲ್‌ ಪಾವತಿ ವ್ಯವಸ್ಥೆಗಳ ಲಭ್ಯತೆ‌

l ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಇದ್ದ ನಿರ್ಬಂಧಗಳಿಂದ ಆನ್‌ಲೈನ್‌ ಖರೀದಿಗೆ ಮುಂದಾದ ಜನ. ಸಾಂಕ್ರಾಮಿಕದ ನಂತರವೂ ಅದೇ ಪ್ರವೃತ್ತಿ ಮುಂದುವರಿಕೆ

l ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು ಬಂಡವಾಳ ಹೂಡಿದ್ದರಿಂದ ವಿಸ್ತಾರಗೊಂಡ ವಲಯ l ಡಿಜಿಟಲ್‌ ಪಾವತಿಗೆ ಉತ್ತೇಜನ ನೀಡಲು ಸರ್ಕಾರ ಕೈಗೊಂಡ ಕ್ರಮಗಳು

l ಇ–ಕಾಮರ್ಸ್‌ ಸಂಸ್ಥೆಗಳು ನೀಡುತ್ತಿರುವ ರಿಯಾಯಿತಿ ಕೊಡುಗೆಗಳು

l ಮೊದಲು ಖರೀದಿ ನಂತರ ಹಣ ಪಾವತಿಸಲು ಇರುವ ಆಯ್ಕೆ

l  ಕಂಪನಿಗಳ ಗ್ರಾಹಕಸ್ನೇಹಿ ಸೇವೆಗಳು‌‌

l ಕಂಪನಿಯಿಂದ ನೇರ ಗ್ರಾಹಕರಿಗೆ ತಲುಪಿಸುವ ಬ್ರ್ಯಾಂಡ್‌ಗಳು ಮತ್ತು ಆ ಮಾದರಿಯ ಹೊಸ ವ್ಯಾಪಾರದಲ್ಲಾದ ಹೆಚ್ಚಳ

ರಿಯಾಯಿತಿ ದರ ಮಾರಾಟ ಕಂಟಕ

ಕಿರಾಣಿ ಅಂಗಡಿಗಳಿಗೆ ಕಂಟಕವಾಗಿರುವುದು ಇ–ಕಾಮರ್ಸ್ /ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ರಿಯಾಯಿತಿ ಮಾರಾಟ. ಹಬ್ಬ ಅಥವಾ ವಿಶೇಷ ದಿನಗಳಲ್ಲಿ ಭಾರಿ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತವೆ. ಹೀಗೆ ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟ ಮಾಡುವ ಪ್ರವೃತ್ತಿಯು ಅನಾರೋಗ್ಯಕಾರಿ ಪೈಪೋಟಿಗೆ ಕಾರಣವಾಗಿದೆ ಎನ್ನುವ ಆತಂಕ ವ್ಯಕ್ತವಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಜನ ಗಮನ ಹರಿಸಬೇಕು ಎಂದು ಎಐಸಿಪಿಡಿಎಫ್ ರಾಷ್ಟ್ರೀಯ ಅಧ್ಯಕ್ಷ ಧೈರ್ಯಶೀಲ್ ಪಾಟೀಲ್ ಒತ್ತಾಯಿಸಿದ್ದಾರೆ. ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ಜಾಲಗಳ ನಡುವೆ ನ್ಯಾಯಸಮ್ಮತವಾದ ವ್ಯವಸ್ಥೆಯನ್ನು ರೂಪಿಸುವ ಸಲುವಾಗಿ ಮಸೂದೆಯೊಂದನ್ನು ತರಲು ಕೇಂದ್ರ ಸರ್ಕಾರವೂ ಪ್ರಯತ್ನ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.