ADVERTISEMENT

ಆಳ–ಅಗಲ | ಆರ್ಥಿಕ ಸಮೀಕ್ಷೆ ಹೇಳುವುದೇನು?

ದೇಶದ ಆರ್ಥಿಕ ಸ್ಥಿತಿಗತಿ, ಭವಿಷ್ಯದ ದಿಕ್ಸೂಚಿ ಮುಂದಿಟ್ಟ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 23:30 IST
Last Updated 31 ಜನವರಿ 2025, 23:30 IST
ಮೂಲಸೌಕರ್ಯ
ಮೂಲಸೌಕರ್ಯ   

ಆಶಾದಾಯಕ ಆರ್ಥಿಕತೆಗೆ ಬೇಕಾದಂಥ ಮೂಲಸೌಕರ್ಯ ಮತ್ತು ಹೂಡಿಕೆಯ ಅಗತ್ಯಗಳನ್ನು ಪೂರೈಸಲು ನಿರ್ದಿಷ್ಟ ಪ್ರಮಾಣ ಮತ್ತು ಗುಣಮಟ್ಟದೊಂದಿಗೆ ಪ್ರಮುಖ ಉತ್ಪನ್ನಗಳನ್ನೂ ತಯಾರಿಸಬೇಕಿದೆ. ಆದರೆ, ಈ ವಿಚಾರದಲ್ಲಿ ದೇಶವು ಹಲವು ಮಿತಿಗಳನ್ನು ಎದುರಿಸುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

ದೇಶವು ಸ್ಪರ್ಧಾತ್ಮಕ ಮತ್ತು ನಾವೀನ್ಯದಿಂದ ಕೂಡಿದ ಆರ್ಥಿಕತೆ ಆಗಲು ದೇಶೀಯ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸಬೇಕು ಮತ್ತು ಉತ್ತೇಜಿಸಬೇಕಿದೆ. ಹೂಡಿಕೆಯ ವಿಚಾರದಲ್ಲಿ ದೇಶವು ಅಭಿವೃದ್ಧಿಶೀಲ ಆರ್ಥಿಕತೆಗಳಿಂದಷ್ಟೇ ಅಲ್ಲದೇ (ದೇಶದ ಹೊರಗೆ ಬಂಡವಾಳ ಹೂಡಲು ಇಚ್ಛಿಸದ) ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಿಂದಲೂ ಸ್ಪರ್ಧೆ– ಸವಾಲು ಎದುರಿಸುತ್ತಿದೆ ಎಂದು ಅದು ಅಭಿಪ್ರಾಯ ಪಟ್ಟಿದೆ.

ಖಾಸಗಿ ಹೂಡಿಕೆ ಹೆಚ್ಚಿಸಿ 

ದೇಶವು ಸುಸ್ಥಿರವಾಗಿ ಅಭಿವೃದ್ಧಿ ಹೊಂದಬೇಕಾದರೆ ಮುಂದಿನ ಎರಡು ದಶಕಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಲಾಗುತ್ತಿರುವ ಬಂಡವಾಳವನ್ನು ಹೆಚ್ಚಿಸುವ ಅಗತ್ಯವಿದೆ. ಬಂಡವಾಳ ಹೂಡಿಕೆಯಲ್ಲಿ ಖಾಸಗಿಯವರೂ ತೊಡಗಿಕೊಳ್ಳಬೇಕು. ಅವರ ಹೂಡಿಕೆಯನ್ನು ಹೆಚ್ಚಿಸುವುದಕ್ಕಾಗಿ ಸರ್ಕಾರವು ದಾರಿಗಳನ್ನು ಹುಡುಕಬೇಕು ಎಂದು ಸಮೀಕ್ಷೆ ಪ್ರತಿಪಾದಿಸಿದೆ. 

ADVERTISEMENT

2024–25ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ‌ಲ್ಲಿ ಲೋಕಸಭಾ ಚುನಾವಣೆ ಇದ್ದುದರಿಂದ ಹೊಸ ಅನುಮತಿ ಮತ್ತು ಮಾಡಲಾದ ವೆಚ್ಚದ ಮೇಲಿನ ನಿರ್ಬಂಧಗಳಿದ್ದವು. ಅಲ್ಲದೇ, ಹಲವು ಭಾಗಗಳಲ್ಲಿ ಮುಂಗಾರು ತೀವ್ರವಾಗಿತ್ತು. ಈ ಕಾರಣಗಳಿಂದ ಮೂಲಸೌಕರ್ಯದಲ್ಲಿ ಮಾಡಲಾದ ಹೂಡಿಕೆಯ ಮೇಲೆ ಪರಿಣಾಮ ಬಿದ್ದಿತ್ತು. ಜುಲೈ ಮತ್ತು ನವೆಂಬರ್‌ ಅವಧಿಯಲ್ಲಿ ಹೂಡಿಕೆ ಏರಿಕೆ ಕಂಡಿದೆ. ಈ ಆರ್ಥಿಕ ವರ್ಷದ ಮುಂದಿನ ತಿಂಗಳಲ್ಲೂ ಈ ಕ್ಷೇತ್ರದಲ್ಲಿನ ಹೂಡಿಕೆ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ. ಮೂಲಸೌಕರ್ಯಗಳಿಗೆ ಸಂಬಂಧಿಸಿದ ಸಚಿವಾಲಯಗಳು, ಕಳೆದ ವರ್ಷದ ಏಪ್ರಿಲ್‌ನಿಂದ ನವೆಂಬರ್‌ ಅವಧಿಯಲ್ಲಿ ಮೀಸಲಿಟ್ಟಿದ್ದ ಬಜೆಟ್‌ ಹಣದಲ್ಲಿ ಶೇ 60ರಷ್ಟನ್ನು ವೆಚ್ಚ ಮಾಡಿವೆ ಎಂದು ಅದು ವಿವರಿಸಿವೆ. 

ಜಂಟಿ ಪ್ರಯತ್ನ ಬೇಕು: ಅಸ್ಥಿರವಾದ ಜಾಗತಿಕ ವಾತಾವರಣದಲ್ಲಿ ಭಾರತವನ್ನು ಉತ್ಪಾದನೆಯ ಶಕ್ತಿಕೇಂದ್ರವನ್ನಾಗಿ ರೂಪಿಸುವಲ್ಲಿ ಸರ್ಕಾರ, ಖಾಸಗಿ ವಲಯ, ಶೈಕ್ಷಣಿಕ ವಲಯ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಹಾಗೂ ಹಣಕಾಸು ಪಾಲುದಾರರ ಪಾತ್ರವು ಮುಖ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಉತ್ಪಾದನೆಯ ಶಕ್ತಿಕೇಂದ್ರವಾಗಿ ಚೀನಾ ಬೆಳವಣಿಗೆ ಹೊಂದಿದ್ದು, ಇದು ಇತರೆ ದೇಶಗಳ ಉತ್ಪಾದನೆಯ ಬಯಕೆ ಮತ್ತು ಖನಿಜ, ಸರಕು, ಯಂತ್ರೋಪಕರಣ ಮತ್ತು ಇಂಧನ ಪರಿವರ್ತನೆಗೆ ಅಗತ್ಯವಾದ ಸಾಧನಗಳ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ. ಜತೆಗೆ ಇದರಿಂದ ಹಲವು ಸವಾಲುಗಳು ಎದುರಾಗಿವೆ. ಭಾರತವು ಬದಲಾವಣೆ ಪರ್ವದ ನಡುವೆ ಇದ್ದು, ಅದು ಹಿಂದೆಂದೂ ಕಾಣದಂಥ ಆರ್ಥಿಕ ಸವಾಲುಗಳು ಮತ್ತು ಅವಕಾಶಗಳನ್ನು ಪ್ರತಿನಿಧಿಸುತ್ತಿದೆ ಎಂದು ವಿಶ್ಲೇಷಿಸಿದೆ.    

ನಿಯಮ ಸರಳೀಕರಣಕ್ಕೆ ಒಲವು

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ನಿಯಮಗಳ ಬದಲಾಗಿ, ಪಾರದರ್ಶಕವಾದ ಮತ್ತು ವಿಶ್ವಾಸ ಆಧಾರಿತ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಸಮೀಕ್ಷೆ ಹೇಳಿದೆ.

ಈ ಎರಡು ಕ್ಷೇತ್ರಗಳ ನಿಯಂತ್ರಣ ಸಂಸ್ಥೆಗಳು ಸಮಾಜಕ್ಕಿರುವ ಅಗತ್ಯ ಮತ್ತು ಈ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂಸ್ಥೆಗಳು ಪಾಲಿಸಬೇಕಾದ ನಿಯಮಗಳಲ್ಲಿ ಸಮತೋಲನ ಇರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಮಾರುಕಟ್ಟೆಯೇ ಪರಿಣಾಮಕಾರಿ ಪಾತ್ರ ನಿರ್ವಹಿಸುವುದಾದರೆ, ಈಗಿನ ನಿಯಂತ್ರಣ ಕ್ರಮಗಳನ್ನು ವಾಪಸ್‌ ಪಡೆಯಬಹುದು ಅಥವಾ ಆಯಾ ಸಂಸ್ಥೆಗಳೇ ಸ್ವಯಂ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಲು ಅವಕಾಶ ನೀಡಬಹುದು. ಬಿಗಿ ನಿಯಮಗಳು, ರಾಜ್ಯಗಳ ಮೇಲೆ ಅನುಸರಣೆ ಮತ್ತು ಮೇಲ್ವಿಚಾರಣೆಯ ಹೊರೆಯನ್ನು ಇನ್ನಷ್ಟು ಹೇರುತ್ತವೆ ಎಂದು ಸಮೀಕ್ಷೆ ವಿವರಿಸಿದೆ. 

ಇವಿ ತೆರಿಗೆ ಕಡಿತ ಮಾಡಿ: ಜನರು ಕಡಿಮೆ ಇಂಗಾಲ ಹೊರಸೂಸುವಿಕೆಯ ಜೀವನ ಕ್ರಮ ಅಳವಡಿಸಿಕೊಳ್ಳುವ ದಿಸೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ತೆರಿಗೆ ಕಡಿತ ಮತ್ತು ನವೀಕೃತ ಇಂಧನದ ಮೇಲೆ ಸಬ್ಸಿಡಿ ನೀಡಬೇಕು. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು (ಯುಎನ್‌ಇಪಿ) ಹೇಳಿರುವಂತೆ, ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ಸಮೀಕ್ಷೆ ತಿಳಿಸಿದೆ. ಇದು ಜನ ಮತ್ತು ಸಂಸ್ಥೆಗಳು ಹಸಿರಿಗೆ ಪೂರಕವಾದ ಕ್ರಮಗಳ ಅಳವಡಿಕೆಗೆ ಸಹಕಾರಿ ಎಂದು ಸಮೀಕ್ಷೆ ಹೇಳಿದೆ

60 ಗಂಟೆ ಕೆಲಸ: ಆರೋಗ್ಯದ ಮೇಲೆ ಪರಿಣಾಮ

ಕೆಲಸದ ಅವಧಿ 70–90 ಗಂಟೆ ಇರಬೇಕು ಎನ್ನುವ ಚರ್ಚೆಗಳು ನಡೆಯುತ್ತಿರುವಾಗಲೇ ಈ ಬಗ್ಗೆ ಆರ್ಥಿಕ ಸಮೀಕ್ಷೆಯಲ್ಲಿಯೂ ಪ್ರಸ್ತಾಪ ಮಾಡಲಾಗಿದೆ. ವಾರಕ್ಕೆ 60 ಗಂಟೆಗೂ ಹೆಚ್ಚು ಕೆಲಸ ಮಾಡುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹಲವು ಸಮೀಕ್ಷೆಗಳನ್ನು ಉಲ್ಲೇಖಿಸಿ ಆರ್ಥಿಕ ಸಮೀಕ್ಷೆ ಹೇಳಿದೆ. 

ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಕೆಲಸ ಮಾಡುವುದು ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಮತ್ತು ಒಂದು ದಿನಕ್ಕೆ 12 ಗಂಟೆ ಮತ್ತು ಅದಕ್ಕಿಂತ ಹೆಚ್ಚು ಅವಧಿ ಕೆಲಸ ಮಾಡುವವರು ಬಳಲುವುದಲ್ಲದೇ,  ಮಾನಸಿಕವಾಗಿ ಹಲವು ತೊಂದರೆಗಳನ್ನು ಎದುರಿಸುತ್ತಾರೆ ಎಂದು ಆರ್ಥಿಕ ಸಮೀಕ್ಷೆಯು ಹೇಳಿದೆ. ಅದಕ್ಕೆ ಪೂರಕವಾಗಿ ವಿಶ್ವ ಆರೋಗ್ಯ ಸಂಸ್ಥೆ/ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಮತ್ತು ಇತರ ಹಲವು ಅಧ್ಯಯನ ವರದಿಗಳನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಕೆಲಸಗಾರರ ಖಿನ್ನತೆ, ಮನೋವೇದನೆಯಿಂದ ಜಾಗತಿಕವಾಗಿ ವರ್ಷಕ್ಕೆ 12 ಶತಕೋಟಿ ದಿನಗಳ ಕೆಲಸ ನಷ್ಟವಾಗುತ್ತಿದ್ದು, ಅದರಿಂದ ಉತ್ಪಾದಕತೆ ಕುಸಿದು, ₹86.62 ಲಕ್ಷ ಕೋಟಿ ನಷ್ಟ ಉಂಟಾಗುತ್ತಿದೆ. ಭಾರತದ ಮಟ್ಟಿಗೆ ಹೇಳಬೇಕೆಂದರೆ, ದಿನಕ್ಕೆ ₹7,000 ನಷ್ಟ ಎಂದು ಸಮೀಕ್ಷೆ ತಿಳಿಸಿದೆ.

ಕಾರ್ಮಿಕರ ಬದಲು ಎಐ: ಕ್ರಮ ಅನಿವಾರ್ಯ

ಕಾರ್ಮಿಕ ಮಾರುಕಟ್ಟೆಗಳ ಮೇಲೆ ಕೃತಕ ಬುದ್ಧಿಮತ್ತೆಯ (ಎಐ) ಪರಿಣಾಮಗಳ ಕುರಿತಂತೆ ಹೆಚ್ಚುತ್ತಿರುವ ಆತಂಕದ ಬಗ್ಗೆಯೂ ಪ್ರಸ್ತಾಪಿಸಿರುವ ಸಮೀಕ್ಷೆಯು, ಒಂದು ವೇಳೆ ಕಂಪನಿಗಳು ಎಐ ತಂತ್ರಜ್ಞಾನ ಅಳವಡಿಸಿಕೊಳ್ಳುವುದನ್ನು ದೀರ್ಘಾವಧಿಯ ನೀತಿಯನ್ನಾಗಿ ಮಾಡದಿದ್ದರೆ ಅಥವಾ ಎಐ ವಿಚಾರವನ್ನು ಅನ್ನು ಸೂಕ್ಷ್ಮವಾಗಿ ನಿರ್ವಹಿಸದಿದ್ದರೆ, ಈ ವಿಚಾರದಲ್ಲಿ ಸರ್ಕಾರ ನೀತಿ ರೂಪಿಸಬೇಕು ಮತ್ತು ಆಗುವ ನಷ್ಟವನ್ನು ಆರ್ಥಿಕ ಸಂಪನ್ಮೂಲಗಳಿಂದ ತುಂಬಬೇಕು ಎಂಬ ಬೇಡಿಕೆಗಳನ್ನು ಜಾರಿಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದೆ. 

ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಅಧ್ಯಯನವನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿರುವ ಸಮೀಕ್ಷೆಯು, ಕಾರ್ಮಿಕ ಬಲದ ಬದಲಿಗೆ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಕಾರ್ಪೊರೇಟ್‌ ಕಂಪನಿಗಳಿಗೆ, ಹೆಚ್ಚುವರಿ ಲಾಭದ ಮೇಲೆ ತೆರಿಗೆ ವಿಧಿಸುವಂತಹ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಾಗಿ ಬರಬಹುದು ಎಂದು ಹೇಳಿದೆ. 

ಕೇರಳ ಮಾದರಿಗೆ ಮೆಚ್ಚುಗೆ

ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ) ಸ್ಥಳೀಕರಣವು ಗ್ರಾಮೀಣಾಭಿವೃದ್ಧಿಯು ಅಂತರರಾಷ್ಟ್ರೀಯ ಗುರಿಗಳಿಗೆ ತಕ್ಕಂತೆ ಇದೆಯೇ ಎನ್ನುವುದನ್ನು ಖಾತರಿಪಡಿಸುತ್ತದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದ್ದು, ಈ ವಿಚಾರದಲ್ಲಿ ಕೇರಳ ರಾಜ್ಯದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ವಸತಿ, ನೈರ್ಮಲ್ಯ, ನೀರು ಪೂರೈಕೆ ಮತ್ತು ವಿದ್ಯುತ್ ಪೂರೈಕೆಯಂಥ ವಿಚಾರಗಳಿಗೆ ಆದ್ಯತೆ ನೀಡುವ ಮೂಲಕ ಕೇರಳದ ಸದೃಢ, ಸಮುದಾಯ ಆಧಾರಿತವಾದ ಮಾದರಿಯು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಿದೆ. ಇದು ಸಹಭಾಗಿತ್ವದ ಬೆಳವಣಿಗೆಯನ್ನು ಉತ್ತೇಜಿಸುವುದರೊಂದಿಗೆ, ತಳಮಟ್ಟದಲ್ಲಿ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಎಸ್‌ಡಿಜಿಗಳ ಸ್ಥಳೀಕರಣದ ದೃಷ್ಟಿಯಿಂದ ಇದು ಅನುಕರಣೀಯ ಮಾದರಿಯಾಗಿದೆ ಎಂದು ಶ್ಲಾಘಿಸಿದೆ.

ಆಯುಷ್ಮಾನ್: ಜನರ ಆರ್ಥಿಕ ಹೊರೆ ಇಳಿಕೆ

‘ಆಯುಷ್ಮಾನ್ ಭಾರತ್’ ಯೋಜನೆಯು ಆರೋಗ್ಯ ಸೇವೆಗಳ ವಿಚಾರದಲ್ಲಿ ಜನರ ಜೇಬಿನ ಹೊರೆ ಕಡಿಮೆ ಮಾಡಿದೆ. ಆರ್ಥಿಕ ದುರ್ಬಲ ವರ್ಗಗಳ ಶೇ 40ರಷ್ಟು ಮಂದಿಗೆ ₹1.25 ಲಕ್ಷ ಕೋಟಿ ಮೊತ್ತದ ಸೇವೆಗಳನ್ನು ಒದಗಿಸುವುದರೊಂದಿಗೆ ಜನರ ಸಾಮಾಜಿಕ ಭದ್ರತೆ ಹೆಚ್ಚಿಸಿದೆ. ದೇಶದ 12 ಕೋಟಿ ಕುಟುಂಬಗಳ 55 ಕೋಟಿ ಮಂದಿಯನ್ನು ಒಳಗೊಳ್ಳುವ ಮೂಲಕ ಈ ಯೋಜನೆಯು ಜಗತ್ತಿನ ಅತಿ ದೊಡ್ಡ ಆರೋಗ್ಯ ಸೇವೆಗಳ ಯೋಜನೆಯಾಗಿದೆ. 36.36 ಕೋಟಿ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಕಾರ್ಡ್‌ ಹೊಂದಿರುವವರ ಪೈಕಿ ಶೇ 49ರಷ್ಟು ಮಂದಿ ಮಹಿಳೆಯರಾಗಿದ್ದು, ಆಸ್ಪತ್ರೆಗೆ ದಾಖಲಾದವರ ಪೈಕಿ ಶೇ 48ರಷ್ಟು ಮಂದಿ ಮಹಿಳೆಯರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಆಧಾರ: ಆರ್ಥಿಕ ಸಮೀಕ್ಷೆ 2024–25, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.