ADVERTISEMENT

ಆಳ -ಅಗಲ: ಕರುನಾಡು ಗಜನಾಡು

ಹೆಚ್ಚುತ್ತಿರುವ ಮಾನವ ಹಸ್ತಕ್ಷೇಪ, ಅಭಿವೃದ್ಧಿ ಯೋಜನೆಗಳು ಆನೆಗಳಿಗೆ ಕಂಟಕ

ಸೂರ್ಯನಾರಾಯಣ ವಿ.
ಬಿ.ವಿ. ಶ್ರೀನಾಥ್
Published 17 ಅಕ್ಟೋಬರ್ 2025, 0:36 IST
Last Updated 17 ಅಕ್ಟೋಬರ್ 2025, 0:36 IST
<div class="paragraphs"><p>ಭಾರತದಲ್ಲಿ ಆನೆಗಳ ಸ್ಥಿತಿಗತಿ ವರದಿ</p></div>

ಭಾರತದಲ್ಲಿ ಆನೆಗಳ ಸ್ಥಿತಿಗತಿ ವರದಿ

   

ಚಿತ್ರ : ಗುರಿಂದರ್ಜಿತ್‌ ಸಿಂಗ್‌

ದೇಶದಲ್ಲಿ ಕಾಡಾನೆಗಳ ಸಂಖ್ಯೆ ಕುಸಿತವಾಗಿರುವುದನ್ನು ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿರುವ ‘ಭಾರತದಲ್ಲಿ ಆನೆಗಳ ಸ್ಥಿತಿಗತಿ ವರದಿ’ಯ ಅಂಕಿ ಅಂಶಗಳು ತೋರಿಸಿವೆ. 2017ರ ವರದಿಗೆ ಹೋಲಿಸಿದರೆ ಆನೆಗಳ ಸಂಖ್ಯೆ ಶೇ 25ರಷ್ಟು ಕಡಿಮೆಯಾಗಿದೆ. ಆದರೆ ಇದೇ ಮೊದಲ ಬಾರಿಗೆ ದೇಶದಲ್ಲಿ ಡಿಎನ್‌ಎ ಆಧಾರಿತವಾಗಿ ಆನೆಗಳ ಗಣತಿ ನಡೆದಿದೆ ಹಿಂದಿನ ಗಣತಿಗಳಿಗೆ ಹೋಲಿಸಿದರೆ ಇದು ಹೆಚ್ಚು ನಿಖರ ಎಂದು ಹೇಳಲಾಗಿದೆ. ಆನೆಗಳ ಸಂಖ್ಯೆಯಲ್ಲಿ ಈ ಬಾರಿಯೂ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಈ ಸಲದ ಗಣತಿಯು ಸಂಪೂರ್ಣವಾಗಿ ಭಿನ್ನ ರೀತಿಯಲ್ಲಿ ನಡೆದಿರುವುದರಿಂದ ಹಳೆಯ ಸಂಖ್ಯೆಗಳೊಂದಿಗೆ ಹೋಲಿಸುವುದು ಸರಿಯಲ್ಲ ಎಂದು ವರದಿ ಹೇಳಿದೆ. ದೇಶದಲ್ಲಿ ಆನೆಗಳ ಸಂರಕ್ಷಣೆಗೆ ಇರುವ ಸವಾಲುಗಳನ್ನೂ ವಿವರಿಸಿರುವ ವರದಿ, ಅಭಿವೃದ್ಧಿ ಯೋಜನೆಗಳು, ಅರಣ್ಯ ನಾಶ, ಮಾನವನ ಹಸ್ತಕ್ಷೇಪ ಕಾಡಾನೆಗಳಿಗೆ ಕಂಟಕವಾಗಿವೆ ಎಂದು ಎಚ್ಚರಿಸಿದೆ.

ಭಾರತದಲ್ಲಿ 22,446 ಕಾಡಾನೆಗಳಿವೆ ಎಂದು ಸಿಂಕ್ರೋನಸ್ ಆಲ್ ಇಂಡಿಯಾ ಎಲಿಫೆಂಟ್ ಎಸ್ಟಿಮೇಷನ್ ಪ್ರೋಗ್ರಾಂ (ಎಸ್‌ಎಐಇಇ 2021–25) ಹೆಸರಿನಲ್ಲಿ ನಡೆದ ಗಣತಿಯ ಆಧಾರದಲ್ಲಿ ಸಿದ್ಧಪಡಿಸಲಾಗಿರುವ ‘ಭಾರತದಲ್ಲಿ ಆನೆಗಳ ಸ್ಥಿತಿಗತಿ ವರದಿ’ ಹೇಳಿದೆ. ಪರಿಸರ ಸಚಿವಾಲಯ, ಪ್ರಾಜೆಕ್ಟ್ ಎಲಿಫೆಂಟ್ ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಜಂಟಿಯಾಗಿ ಈ ಗಣತಿ ನಡೆಸಿವೆ.

ADVERTISEMENT

ರಾಜ್ಯಗಳ ಪೈಕಿ ಆನೆಗಳ ಸಂಖ್ಯೆಯಲ್ಲಿ ಕರ್ನಾಟಕವು (6,013) ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಅಸ್ಸಾಂ (4,159), ತಮಿಳುನಾಡು (3,136), ಕೇರಳ (2,785) ಮತ್ತು ಉತ್ತರಾಖಂಡ (1,792) ಇವೆ. ದೇಶದ ಆನೆಗಳ ಪೈಕಿ ಶೇ 59.29ರಷ್ಟು ಕರ್ನಾಟಕ, ಅಸ್ಸಾಂ, ತಮಿಳುನಾಡಿನಲ್ಲಿಯೇ ಇವೆ ಎಂದು ವರದಿ ಹೇಳಿದೆ. ಪ್ರದೇಶವಾರು ಆನೆಗಳ ಸಂಖ್ಯೆಯಲ್ಲಿ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಹರಡಿರುವ ಪಶ್ಚಿಮ ಘಟ್ಟಗಳು ಮುಂಚೂಣಿ ಸ್ಥಾನ ಪಡೆದಿವೆ. ಜತೆಗೆ, ಈಶಾನ್ಯ ರಾಜ್ಯಗಳ ವ್ಯಾಪ್ತಿಯ ಅಸ್ಸಾಂ ಮತ್ತು ಬ್ರಹ್ಮಪುತ್ರ ಜಲಾನಯನ ಪ್ರದೇಶ ಎರಡನೇ ಸ್ಥಾನದಲ್ಲಿದೆ.   

ಆನೆಗಳ ಸಮೀಕ್ಷೆ ಆರಂಭವಾಗಿದ್ದು 2021ರಲ್ಲಿ. ನಾಲ್ಕು ವರ್ಷಗಳ ನಂತರ 2025ರ ಅಕ್ಟೋಬರ್ 14ರಂದು ವರದಿ ಬಿಡುಗಡೆಯಾಗಿದೆ. ವಂಶವಾಹಿ ವಿಶ್ಲೇಷಣೆ ಮತ್ತು ದತ್ತಾಂಶ ದೃಢೀಕರಣವು ಸಂಕೀರ್ಣ ಪ್ರಕ್ರಿಯೆಯಾಗಿದ್ದರಿಂದ ಸಮೀಕ್ಷೆಗೆ ಹೆಚ್ಚು ಸಮಯ ವ್ಯಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಭಾರತವು ಆನೆಗಳಿಗೆ ಪ್ರಸಿದ್ಧವಾಗಿದ್ದು, ದೇಶದಲ್ಲಿ ಆನೆಗಳ ಸಂತತಿಗೆ ಹಲವು ರೀತಿಯಲ್ಲಿ ಕಂಟಕ ಎದುರಾಗಿದೆ. ಚಾರಿತ್ರಿಕವಾಗಿ ದೇಶದಲ್ಲಿ ಆನೆಗಳ ಸಂಖ್ಯೆ ವಿಪುಲವಾಗಿತ್ತು. ಹಿಂದೆ ಆನೆಗಳು ಇದ್ದ ಒಟ್ಟು ಪ್ರದೇಶದ ಪೈಕಿ ಶೇ 3.5ರಷ್ಟು ಪ್ರದೇಶದಲ್ಲಿ ಮಾತ್ರವೇ ಪ್ರಸ್ತುತ ಅವು ಉಳಿದಿವೆ. ಪ್ರಪಂಚದ ಆನೆಗಳ ಸಂಖ್ಯೆಯಲ್ಲಿ ಭಾರತವು ಶೇ 60ರಷ್ಟು ಆನೆಗಳಿಗೆ ನೆಲೆಯಾಗಿದೆ. ಆದರೂ ಹಲವು ಕಾರಣಗಳಿಂದ ಅವುಗಳ ವಾಸಸ್ಥಳಗಳ ವಿಸ್ತೀರ್ಣ ಕಡಿಮೆಯಾಗುತ್ತಲೇ ಸಾಗುತ್ತಿದೆ ಎಂದು ವರದಿ ಹೇಳಿದೆ.

ಡಿಎನ್‌ಎ ಆಧಾರಿತ ಸಮೀಕ್ಷೆ

2017ರವರೆಗೆ ನೇರ ಎಣಿಕೆ, ಮಾದರಿ ಬ್ಲಾಕ್‌ ಎಣಿಕೆ, ಲದ್ದಿ ಎಣಿಕೆ (Total Count Dung Count & Sample Block Count) ವಿಧಾನಗಳ ಮೂಲಕ ಆನೆ ಗಣತಿ ನಡೆಸಲಾಗುತ್ತಿತ್ತು. ಈ ಬಾರಿ ಆ ಮಾರ್ಗವನ್ನು ಕೈಬಿಡಲಾಗಿದೆ. ಮನುಷ್ಯರನ್ನು ಅವರ ವಂಶವಾಹಿ ಮೂಲಕ ಪತ್ತೆ ಹಚ್ಚುವ ವಿಧಾನವನ್ನೇ ಇಲ್ಲೂ ಅನುಸರಿಸಲಾಗಿದೆ. ಭೂಸಮೀಕ್ಷೆ, ಉಪಗ್ರಹ ಆಧಾರಿತ ಮ್ಯಾಪಿಂಗ್, ವಂಶವಾಹಿ ವಿಶ್ಲೇಷಣೆ– ಹೀಗೆ ಮೂರು ಹಂತದಲ್ಲಿ ಗಣತಿ ನಡೆಸಲಾಗಿದೆ. ಆನೆ ಲದ್ದಿ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಭಿನ್ನ ಪ್ರಯತ್ನವಾಗಿದ್ದು, ಮುಂದಿನ ದಿನಗಳಲ್ಲಿ ಈ ಮಾದರಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು. ಆನೆಗಳ ಮೇಲೆ ನಿಗಾ ಮತ್ತು ಸಂರಕ್ಷಣೆಯಲ್ಲೂ ಈ ಮಾರ್ಗವು ನೆರವಾಗಲಿದೆ ಎಂದು ವರದಿ ಉಲ್ಲೇಖಿಸಿದೆ.

ಮೈಸೂರು ಭಾಗದಲ್ಲಿ ಹೆಚ್ಚು 

ಕರ್ನಾಟಕದಲ್ಲಿ ಬಂಡೀಪುರ, ನಾಗರಹೊಳೆ, ಭದ್ರಾ, ಕಾಳಿ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಗಣತಿ ನಡೆಸಲಾಗಿದೆ. ಒಟ್ಟು ಸಿಬ್ಬಂದಿ 45,323 ಕಿ.ಮೀ ದೂರ ಸಾಗಿ ವಿವರಗಳನ್ನು ದಾಖಲಿಸಿದ್ದಾರೆ.

ರಾಜ್ಯದಲ್ಲಿ ಕನಿಷ್ಠ 4,792, ಗರಿಷ್ಠ 7,235 ಆನೆಗಳಿವೆ ಎಂದು ವರದಿ ಹೇಳಿದ್ದು, ಸರಾಸರಿ ಲೆಕ್ಕಾಚಾರದಲ್ಲಿ ರಾಜ್ಯದಲ್ಲಿರುವ ಆನೆಗಳು 6,013. 2017ರ ಗಣತಿಯು 6,049 ಆನೆಗಳು ಇರುವುದಾಗಿ ಹೇಳಿತ್ತು. ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿರುವ ರಕ್ಷಿತಾರಣ್ಯಗಳ ಪೈಕಿ ಮೈಸೂರು ಭಾಗದಲ್ಲೇ ಹೆಚ್ಚು ಆನೆಗಳಿವೆ ಎಂದು ವರದಿ ಹೇಳಿದೆ. 

ಕಾಳಿ, ದಾಂಡೇಲಿ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು, ಕೊಪ್ಪ, ಭದ್ರಾವತಿ, ಶಿವಮೊಗ್ಗ ವಿಭಾಗಗಳಲ್ಲಿ ಆನೆಗಳ ಸಾಂದ್ರತೆ ಕಡಿಮೆ ಇದೆ. ಮೈಸೂರು ಭಾಗದ ಬಂಡೀಪುರ, ನಾಗರಹೊಳೆ, ಬಿಆರ್‌ಟಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಹೆಚ್ಚು ಆನೆಗಳಿವೆ. ಹಲವು ವರ್ಷಗಳಿಂದ ಇಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಸಂರಕ್ಷಣಾ ಕ್ರಮಗಳು, ಹಸಿರು ಹೆಚ್ಚಾಗಲು ಕಾರಣವಾಗಿವೆ. ಬೇರೆ ಬೇರೆ ಅರಣ್ಯಗಳ ನಡುವೆ ಸಂಪರ್ಕ ಇರುವುದರಿಂದ ಈ ಭಾಗದಲ್ಲಿ ಆನೆಗಳ ಸಂಖ್ಯೆ ಉತ್ತಮವಾಗಿದೆ ಎಂದು ವರದಿ ವಿವರಿಸಿದೆ. 

ರಾಜ್ಯವು ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು ಮಾನವ–ಆನೆ ಸಂಘರ್ಷವೂ ಇಲ್ಲಿ ಜಾಸ್ತಿ ಇದೆ. ಅರಣ್ಯದ ಅಂಚಿನಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿರುವುದು ಇದಕ್ಕೆ ಕಾರಣ. ಅರಣ್ಯದ ಒಳಗೆ ಮತ್ತು ಹೊರಗೆ ಜನವಸತಿ ಪ್ರದೇಶಗಳು ಇರುವುದು ಮತ್ತೊಂದು ಕಾರಣ. ವನ್ಯಜೀವಿಗಳ ಆವಾಸಗಳ ಒತ್ತುವರಿಯೂ ಜಾಸ್ತಿಯಾಗುತ್ತಿದ್ದು, ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಮಾನವ ಹಸ್ತಕ್ಷೇಪದಿಂದ ಕಾಳಿ, ಭದ್ರಾ ಹಾಗೂ ಮೈಸೂರು ವ್ಯಾಪ್ತಿಯ ಸಂರಕ್ಷಿತ ಪ್ರದೇಶಗಳ ಅರಣ್ಯ ನಾಶವಾಗುತ್ತಿರುವುದು ಆನೆಗಳ ಸಂರಕ್ಷಣೆಗೆ ಸವಾಲಾಗಿದೆ. 

ಆನೆಗಳ ಸಂಖ್ಯೆ ಇಳಿಕೆಗೆ ಕಾರಣಗಳೇನು?

  • ಆವಾಸದ ವ್ಯಾಪ್ತಿ ಕಿರಿದಾಗುತ್ತಿರುವುದು, ಕಾಡುಗಳು ಕಡಿಮೆಯಾಗಿರುವುದು

  • ಪಶ್ಚಿಮ ಘಟ್ಟ, ಈಶಾನ್ಯ ಘಟ್ಟ ಸೇರಿದಂತೆ ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಅರಣ್ಯ ಭಾಗದಲ್ಲಿ ಒತ್ತುವರಿ, ಅಭಿವೃದ್ಧಿ ಕಾಮಗಾರಿಗಳು ಮತ್ತು ಭೂ ಬಳಕೆ ಬದಲಾವಣೆಯಿಂದ ಸಾಂಪ್ರದಾಯಿಕ ಕಾರಿಡಾರ್‌ಗಳು ನಾಶವಾಗಿರುವುದು

  • ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಟೀ, ಕಾಫಿ ತೋಟಗಳ ವ್ಯಾಪ್ತಿ ವಿಸ್ತರಿಸುತ್ತಿರುವುದು, ಅಭಿವೃದ್ಧಿ ಯೋಜನೆಗಳ ಹೆಚ್ಚಳ

  • ದೇಶದ ಮಧ್ಯಭಾಗದಲ್ಲಿ ಗಣಿಗಾರಿಕೆ ಹೆಚ್ಚಾಗಿದೆ. ಇದರಿಂದಾಗಿ ಆನೆಗಳ ಓಡಾಟಕ್ಕೆ ಅಡ್ಡಿ 

  • ಈಶಾನ್ಯ ಭಾಗದಲ್ಲಿ ಆನೆಗಳ ಕಾರಿಡಾರ್‌ಗಳು ನಾಶವಾಗಿವೆ. ಅರಣ್ಯ ಛಿದ್ರವಾಗಿವೆ, ಅಭಿವೃದ್ಧಿ ಕಾಮಗಾರಿಗಳು ಹೆಚ್ಚಾಗಿವೆ

  • ಅರಣ್ಯದಲ್ಲಿ ಕಳೆ ಗಿಡಗಳು ಹೆಚ್ಚುತ್ತಿರುವುದು, ಮಾನವನ ಹಸ್ತಕ್ಷೇಪ, ಕೃಷಿ ಭೂಮಿಗೆ ಬೇಲಿ ಹಾಕುವುದು

  • ಅಕೇಷಿಯಾದಂತಹ ಗಿಡಗಳನ್ನೊಳಗೊಂಡ ನೆಡುತೋಪುಗಳ ನಿರ್ಮಾಣ 

ಸಂರಕ್ಷಣೆ ಹೇಗೆ?

  • ಕಾಡಂಚಿನ ಸಮುದಾಯಗಳ ಸಹಕಾರ ಪಡೆಯುವುದು

  • ನದಿ ತೀರದ ಅರಣ್ಯಗಳು ಮತ್ತು ಕಾರಿಡಾರ್‌ಗಳ ರಕ್ಷಣೆ

  • ಬೆಳೆ, ಜೀವಹಾನಿ ಸಂದರ್ಭದಲ್ಲಿ ಕ್ಷಿಪ್ರವಾಗಿ ಪರಿಹಾರ ವಿತರಣೆ

  • ಆವಾಸಗಳ ಪುನರುಜ್ಜೀವನ

  • ಕಠಿಣ ಸಂರಕ್ಷಣಾ ನಿಯಮಗಳ ಜಾರಿ

  • ಜಾಗೃತಿ ಕಾರ್ಯಕ್ರಮಗಳ ಆಯೋಜನೆ

ಆಧಾರ: ಭಾರತದಲ್ಲಿ ಆನೆಗಳ ಸ್ಥಿತಿಗತಿ ವರದಿ, ಪಿಟಿಐ, ಎಎಫ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.