ADVERTISEMENT

ಆಳ–ಅಗಲ | ಚಿನ್ನ ಕಳ್ಳಸಾಗಣೆ: ಅನಿಯಂತ್ರಿತ ದಂಧೆ

ಮಾಫಿಯಾ ಸಕ್ರಿಯ; ರಾಜಕಾರಣಿಗಳು, ಪ್ರಭಾವಿಗಳು, ಅಧಿಕಾರಿಗಳಿಗೂ ನಂಟು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 23:30 IST
Last Updated 11 ಮಾರ್ಚ್ 2025, 23:30 IST
   
ಚಿತ್ರನಟಿ ರನ್ಯಾ ಚಿನ್ನ ಕಳ್ಳ ಸಾಗಣೆ ಆರೋಪದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿದ್ದಾರೆ. ಚಿನ್ನ ಕಳ್ಳಸಾಗಣೆಯು ಭಾರತದಲ್ಲಿ ದೊಡ್ಡ ದಂಧೆಯೇ ಆಗಿದ್ದು, ಪ್ರತಿ ವರ್ಷ ಸಾವಿರಾರು ಕೆ.ಜಿ. ಚಿನ್ನ ಅಕ್ರಮ ಮಾರ್ಗಗಳಲ್ಲಿ ದೇಶದೊಳಗೆ ಬರುತ್ತಿದೆ. ಹಳದಿ ಲೋಹವು ಯುಎಇ, ಚೀನಾ, ಮ್ಯಾನ್ಮಾರ್‌, ಬಾಂಗ್ಲಾದೇಶ, ಶ್ರೀಲಂಕಾ ಮುಂತಾದ ರಾಷ್ಟ್ರಗಳಿಂದ ಅಕ್ರಮವಾಗಿ ಒಳಬರುತ್ತಿದೆ. ಜಾಗತಿಕವಾಗಿ ಚಿನ್ನ ಕಳ್ಳಸಾಗಣೆ ನಡೆಯುವ ರಾಷ್ಟ್ರಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ.

ಅಮೂಲ್ಯವಾದ ಲೋಹ ಎಂದೇ ಹೆಸರಾಗಿರುವ ಚಿನ್ನದ ಬಗ್ಗೆ ಭಾರತೀಯರಿಗೆ ಭಾರಿ ಮೋಹ. ಆದರೆ, ಬೇಡಿಕೆಗೆ ತಕ್ಕಷ್ಟು ಚಿನ್ನ ದೇಶದಲ್ಲಿ ದೊರೆಯುತ್ತಿಲ್ಲ. ಹೀಗಾಗಿ ಹೊರದೇಶಗಳಿಂದ ಚಿನ್ನ ಆಮದು ಮಾಡಿಕೊಳ್ಳಲಾಗುತ್ತಿದೆ. ಆಮದು ಮಾಡಲಾಗುವ ಚಿನ್ನದ ಮೇಲೆ ಸರ್ಕಾರ ವಿಧಿಸುವ ಸುಂಕ ತಪ್ಪಿಸಲು ದಂಧೆಕೋರರು ಕಳ್ಳಸಾಗಣೆಯ ಮಾರ್ಗ ಹಿಡಿಯುತ್ತಿದ್ದು, ದೊಡ್ಡ ಪ್ರಮಾಣದ ಚಿನ್ನ ಅಕ್ರಮವಾಗಿ ದೇಶದೊಳಗೆ ಬರುತ್ತಿದೆ.  

ಭಾರತಕ್ಕೆ ಯುಎಇ ಸೇರಿದಂತೆ ಅರಬ್‌ ರಾಷ್ಟ್ರಗಳು, ಮ್ಯಾನ್ಮಾರ್, ಶ್ರೀಲಂಕಾ, ಚೀನಾ, ಸಿಂಗಾಪುರ, ಬಾಂಗ್ಲಾದೇಶ, ನೇಪಾಳ ಸೇರಿದಂತೆ ಹಲವು ರಾಷ್ಟ್ರಗಳಿಂದ ಚಿನ್ನ ಕಳ್ಳಸಾಗಣೆ ಆಗುತ್ತಿದೆ. ಕೊಲ್ಲಿ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಿಂದ ಭಾರತದ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳ ಮೂಲಕ ದೊಡ್ಡ ಮಟ್ಟದಲ್ಲಿ ಚಿನ್ನ ಕಳ್ಳಸಾಗಣೆ ನಡೆಯುತ್ತಿದೆ. ಅರಬ್‌ ರಾಷ್ಟ್ರಗಳಿಗೆ ಕೇರಳದಿಂದ ಮತ್ತು ಕರ್ನಾಟಕದ ಕರಾವಳಿಯಿಂದ ಹೆಚ್ಚು ಮಂದಿ ವಲಸೆ ಹೋಗಿದ್ದಾರೆ. ಈ ಕಾರಣಕ್ಕೆ ಕೇರಳ ಮತ್ತು ಮಂಗಳೂರು, ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಮತ್ತು ಜಲಮಾರ್ಗಗಳಲ್ಲಿ ಕಳ್ಳಸಾಗಣೆಯ ಚಿನ್ನ ದೊಡ್ಡ ಪ್ರಮಾಣದಲ್ಲಿ ಆಗಿಂದಾಗ್ಗೆ ಪತ್ತೆಯಾಗುತ್ತಲೇ ಇರುತ್ತದೆ. ದೆಹಲಿ, ಮುಂಬೈ ಮತ್ತು ಚೆನ್ನೈ ವಿಮಾನ ನಿಲ್ದಾಣಗಳ ಮೂಲಕ ಹೆಚ್ಚು ಕಳ್ಳಸಾಗಣೆ ನಡೆಯುತ್ತಿದೆ ಎನ್ನುವ ವರದಿಗಳಿವೆ.  

ತೀವ್ರವಾದ ತಪಾಸಣೆ ವ್ಯವಸ್ಥೆ ಇದ್ದರೂ ಕಳ್ಳಸಾಗಣೆಯನ್ನು ತಡೆಯಲು ಸಾಧ್ಯವಾಗಿಲ್ಲ. ವಿವಿಧ ರೀತಿಗಳಲ್ಲಿ ಸುಂಕ ತಪ್ಪಿಸಿ ಚಿನ್ನವನ್ನು ಅಕ್ರಮವಾಗಿ ದೇಶದೊಳಗೆ ತರಲಾಗುತ್ತಿದೆ. ಕೆಲವು ಬಾರಿ ಚಿನ್ನವನ್ನು ಇತರೆ ಲೋಹ/ವಸ್ತುಗಳೊಂದಿಗೆ ಸೇರಿಸಿ ಸಾಗಿಸಲಾಗುತ್ತದೆ. ಕೆಲವೊಮ್ಮೆ ಪುಡಿ ಮಾಡಿ, ದೂಳಿನ ರೂಪದಲ್ಲಿ, ಪೇಸ್ಟ್‌, ಕ್ಯಾಪ್ಸ್ಯೂಲ್‌ ರೂಪದಲ್ಲಿ ಗುದದ್ವಾರ, ಗುಪ್ತಾಂಗ ಸೇರಿದಂತೆ ತಮ್ಮ ದೇಹದ ವಿವಿಧ ಭಾಗಗಳಲ್ಲಿ ಬಚ್ಚಿಟ್ಟುಕೊಂಡು ಸಾಗಣೆ ಮಾಡುತ್ತಾರೆ. ನಂತರ ವ್ಯಕ್ತಿಗಳ ಮೂಲಕ ಬಸ್ ಅಥವಾ ರೈಲುಗಳಲ್ಲಿ ದೇಶದ ಇತರ ನಗರಗಳಿಗೆ ಸಾಗಿಸಲಾಗುತ್ತದೆ. 

ADVERTISEMENT

ಚಿನ್ನದ ತಾಣ ದುಬೈ: ದುಬೈನಲ್ಲಿ ಚಿನ್ನದ ಖರೀದಿಗೆ ತೆರಿಗೆ ವಿಧಿಸಲಾಗುವುದಿಲ್ಲ ಮತ್ತು ಅಲ್ಲಿ ಮೇಕಿಂಗ್ ಚಾರ್ಜ್‌ ಕೂಡ ಕಡಿಮೆ. ಚಿನ್ನವನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಅಲ್ಲಿ ಮಾರಲಾಗುತ್ತದೆ. ಅಲ್ಲಿ ಚಿನ್ನ ಕೊಂಡರೆ, ಭಾರತಕ್ಕಿಂತಲೂ ಸುಮಾರು ಶೇ 20ರಷ್ಟು ಹಣ ಉಳಿತಾಯವಾಗುತ್ತದೆ ಎನ್ನುವ ಒಂದು ಅಂದಾಜಿದೆ.  ಹೀಗಾಗಿ ಭಾರತೀಯರಿಗೆ ಚಿನ್ನ ಕೊಳ್ಳಲು ದುಬೈ ಅತ್ಯಂತ ನೆಚ್ಚಿನ ತಾಣ. ಆದರೆ, ಕೊಂಡ ಚಿನ್ನವನ್ನು ಭಾರತಕ್ಕೆ ತರುವುದು ಸುಲಭದ ಕೆಲಸವಲ್ಲ.  ನಿಗದಿತ ಮಿತಿ ದಾಟಿದರೆ, ಚಿನ್ನದ ತೂಕ ಮತ್ತು ಅದರ ಮೌಲ್ಯವನ್ನು ಅನುಸರಿಸಿ ಸುಂಕ ಪಾವತಿಸಬೇಕಾಗುತ್ತದೆ. ಈ ಸುಂಕ ತಪ್ಪಿಸಲು ಚಿನ್ನವನ್ನು ಅಕ್ರಮ ಮಾರ್ಗಗಳಲ್ಲಿ ದೇಶದೊಳಗೆ ತರಲಾಗುತ್ತಿದೆ.

ಭಾರತವು ಚಿನ್ನದ ಆಮದಿನ ಮೇಲೆ ಕೆಲವು ನಿರ್ಬಂಧ ವಿಧಿಸಿದ್ದು, ತೆರಿಗೆಗಳನ್ನು ವಿಧಿಸುತ್ತಿದೆ. ಮೊದಲು ಚಿನ್ನದ ಆಮದಿನ ಮೇಲೆ ಶೇ 15ರಷ್ಟು ಸುಂಕ ವಿಧಿಸಲಾಗುತ್ತಿತ್ತು. ಚಿನ್ನ ಕಳ್ಳಸಾಗಣೆ ತಡೆಯುವ ಸಲುವಾಗಿ 2024ರ ಜುಲೈಯಲ್ಲಿ ಇದನ್ನು ಶೇ 6ಕ್ಕೆ ಇಳಿಸಲಾಯಿತು. ಇಷ್ಟು ಸುಂಕ ಪಾವತಿಸಿದರೂ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರವೇ ಚಿನ್ನವನ್ನು ತರಲು ಅವಕಾಶವಿದೆ. ಅದನ್ನು ಮೀರಿದರೆ, ತನಿಖೆಗೆ ಒಳಪಡಬೇಕಾಗುತ್ತದೆ (ಸುಂಕ ಕಡಿತದ ನಂತರ ಕಳ್ಳಸಾಗಣಿಕೆ ಇಳಿದಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗೆಳು ಮತ್ತು ಕಸ್ಟಮ್ಸ್‌ ಮಂಡಳಿ–ಸಿಬಿಐಸಿ ಹೇಳಿದೆ). 

ಮಾಫಿಯಾ ನಂಟು: ಚಿನ್ನ ಕಳ್ಳಸಾಗಣೆ ಕೇವಲ ಹಣಕಾಸಿನ ವ್ಯವಹಾರವಾಗಿ ಉಳಿಯದೇ ಮಾಫಿಯಾ ನಂಟಿನೊಂದಿಗೆ ಸಮಾಜವಿರೋಧಿ ಶಕ್ತಿಗಳ ಒಂದು ತಂತ್ರವಾಗಿಯೂ ಪರಿಣಮಿಸಿದೆ. ಚಿನ್ನ ಕಳ್ಳಸಾಗಣೆಯನ್ನು ದೇಶದ ಒಳಗಿನ ಮತ್ತು ಹೊರಗಿನ ಪಾತಕಿಗಳು, ಭಯೋತ್ಪಾದಕರು ತಮ್ಮ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಸುಡಾನ್ ಸೇರಿದಂತೆ ಆಫ್ರಿಕಾದ ಹಲವು ರಾಷ್ಟ್ರಗಳು, ಶ್ರೀಲಂಕಾದ ಪ್ರಜೆಗಳು ಅಕ್ರಮ ಮಾರ್ಗಗಳಲ್ಲಿ ಚಿನ್ನವನ್ನು ಭಾರತಕ್ಕೆ ತರುವ ವೇಳೆ ಬಂಧಿತರಾಗಿದ್ದಾರೆ. ಮಾಫಿಯಾದೊಂದಿಗೆ ದೇಶದ ಪ್ರಭಾವಿಗಳು, ಅಧಿಕಾರಿಗಳು, ಉದ್ಯಮಿಗಳು ಶಾಮೀಲಾಗಿದ್ದ ಘಟನೆಗಳೂ ವರದಿಯಾಗಿವೆ.

ವಿದೇಶಿಯರ ಮೂಲಕ ದಂಧೆ

ಹಾಜಿ ಮಸ್ತಾನ್, ಕರೀಂಲಾಲಾ ಮತ್ತು ದಾವೂದ್ ಇಬ್ರಾಹಿರಂತಹ ಗ್ಯಾಂಗ್‌ಸ್ಟರ್‌ಗಳು ಮತ್ತು ಕಳ್ಳಸಾಗಣೆದಾರರಿಗೆ ಮಹಾರಾಷ್ಟ್ರದ ಬಂದರು ನಗರಿ ಡೊಂಗರಿ ನೆಲೆಯಾಗಿತ್ತು. ಬಹಳ ಕಾಲದವರೆಗೆ ಚಿನ್ನ ಕಳ್ಳಸಾಗಣೆ ತಂಡಗಳು ಅಲ್ಲಿಂದ ಕಾರ್ಯಾಚರಣೆ ಮಾಡುತ್ತಿದ್ದವು. 

2019ರ ಏಪ್ರಿಲ್‌ನಲ್ಲಿ ಕಳ್ಳಮಾರ್ಗದಲ್ಲಿ ದೇಶದೊಳಗೆ ತಂದಿದ್ದ ₹1,473 ಕೋಟಿ ಮೊತ್ತದ 4,522 ಕೆ.ಜಿ ಚಿನ್ನವನ್ನು ಡೊಂಗರಿ ತಂಡದಿಂದ ವಶಪಡಿಸಿಕೊಳ್ಳಲಾಗಿತ್ತು. ಸುಡಾನ್‌ನ 18 ಮಹಿಳೆಯರನ್ನು ಕಳ್ಳಸಾಗಣೆಯ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಅವರು ಚಿನ್ನದ ದೂಳು, ಪೇಸ್ಟ್ ಅನ್ನು ದೇಹದ ವಿವಿಧ ಭಾಗಗಳಿಗೆ ಮೆತ್ತಿಕೊಂಡು, ಚಿನ್ನದ ಕ್ಯಾಪ್ಸೂಲ್‌ಗಳನ್ನು ದೇಹದ ವಿವಿಧ ಭಾಗಗಳಲ್ಲಿ ಬಚ್ಚಿಟ್ಟುಕೊಂಡು ಕಳ್ಳಸಾಗಣೆ ಮಾಡುತ್ತಿದ್ದರು. ಗುಜರಾತ್‌ನ ಕಛ್ ಮತ್ತು ಮುಂದ್ರಾ ಬಂದರುಗಳ ಮೂಲಕ, ಕೆಲವು ವಿಶೇಷ ಆರ್ಥಿಕ ವಲಯಗಳ (ಎಸ್‌ಇಝೆಡ್‌) ಮೂಲಕವೂ ಕಳ್ಳಸಾಗಣೆ ಮಾಡುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದರು.

ಭೂಮಿ, ವಾಯು ಮಾರ್ಗಗಳಲ್ಲಿ ಹೆಚ್ಚು

ಕಳ್ಳ ಸಾಗಣೆದಾರರು ಚಿನ್ನವನ್ನು ಭೂಮಾರ್ಗ, ವಾಯು ಮಾರ್ಗ ಮತ್ತು ಜಲ ಮಾರ್ಗಗಳ ಮೂಲಕ ಭಾರತಕ್ಕೆ ತರುತ್ತಾರೆ. ಜಲ ಮಾರ್ಗಗಕ್ಕಿಂತ ಭೂಮಾರ್ಗ ಮತ್ತು ವಾಯುಮಾರ್ಗಗಳು ಹೆಚ್ಚು ಬಳಕೆಯಲ್ಲಿವೆ.

ಭಾರತದ ಈಶಾನ್ಯ ಗಡಿ ಭಾಗದಲ್ಲಿ ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್‌ಗಳಿಂದ ಕಳ್ಳ ಸಾಗಣೆದಾರರು ರಸ್ತೆ ಮಾರ್ಗದ ಮೂಲಕವೇ ದೇಶವನ್ನು ಪ್ರವೇಶಿಸುತ್ತಾರೆ.

ಪಶ್ಚಿಮ ಏಷ್ಯಾ, ಆಗ್ನೇಯ ಏಷ್ಯಾ ರಾಷ್ಟ್ರಗಳಿಂದ ವಾಯು ಮಾರ್ಗದ ಮೂಲಕ ಚಿನ್ನವನ್ನು ಕದ್ದು ತರಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆಫ್ರಿಕಾದ ನೈರೋಬಿ, ಆಡಿಸ್ ಅಬಬ ವಿಮಾನ ನಿಲ್ದಾಣಗಳು, ಮಧ್ಯ ಏಷ್ಯಾದ ತಾಷ್ಕೆಂಟ್‌ ವಿಮಾನ ನಿಲ್ದಾಣದ ಮೂಲಕವೂ ಕಳ್ಳ ಸಾಗಣೆದಾರರು ದೇಶದ ವಿವಿಧ ರಾಜ್ಯಗಳ ವಿಮಾನ ನಿಲ್ದಾಣಗಳಲ್ಲಿ ಹಳದಿ ಲೋಹದೊಂದಿಗೆ ಬಂದಿಳಿಯುತ್ತಿದ್ದಾರೆ.

ಕೇರಳ ಪ್ರಕರಣದ ನೆನಪು 

ರಾಜ್ಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿರುವ ಚಿನ್ನ ಕಳ್ಳಸಾಗಣೆ ಪ್ರಕರಣವು 2020ರಲ್ಲಿ ಕೇರಳದಲ್ಲಿ ನಡೆದಿದ್ದ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ನೆನಪಿಸುವಂತೆ ಮಾಡಿದೆ. 2020ರ ಜುಲೈ 5ರಂದು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ಚೀಲದಲ್ಲಿದ್ದ 30 ಕೆ.ಜಿ. 24 ಕ್ಯಾರಟ್‌ ಚಿನ್ನವನ್ನು (₹14.82 ಕೋಟಿ ಮೌಲ್ಯ) ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿಯ ಅಧಿಕಾರಿಗಳು ಜಪ್ತಿ ಮಾಡಿದ್ದರು. ತಿರುವನಂತಪುರದ ಯುಎಇ ಕಾನ್ಸುಲೇಟ್‌ ಕಚೇರಿಗೆ ತಲುಪಿಸಬೇಕಾಗಿದ್ದ ಚೀಲದಲ್ಲಿ ಚಿನ್ನವನ್ನು ಇಡಲಾಗಿತ್ತು. ಯುಎಇ ಕಾನ್ಸುಲೇಟ್‌ನ ಮಾಜಿ ಉದ್ಯೋಗಿ, ಕೇರಳ ಸರ್ಕಾರದ ಸಂಸ್ಥೆಯೊಂದರಲ್ಲಿ ಗುತ್ತಿಗೆ ಆಧಾರದ ಹುದ್ದೆಯಲ್ಲಿದ್ದ ಸ್ವಪ್ನಾ ಸುರೇಶ್‌ ಎಂಬುವವರು ಪ್ರಕರಣದ ಆರೋಪಿಯಾಗಿದ್ದರು. ಈ ಪ್ರಕರಣ ಕೇರಳದಲ್ಲಿ ರಾಜಕೀಯ ಸುಂಟರಗಾಳಿಯನ್ನೇ ಎಬ್ಬಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಪ್ರಕರಣದ ತನಿಖೆ ನಡೆಸಿತ್ತು. 

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ. ಶಿವಶಂಕರ್‌ ಅವರಿಗೆ ಆರೋಪಿ ಸ್ವಪ್ನಾ ಸುರೇಶ್‌ ಅವರೊಂದಿಗೆ ನಂಟು ಇರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಹಾಗಾಗಿ, ಅವರನ್ನು ಆ ಹುದ್ದೆಯಿಂದ ತೆರವು ಮಾಡಲಾಗಿತ್ತಲ್ಲದೇ, ಸೇವೆಯಿಂದ ಅಮಾನತು ಮಾಡಲಾಗಿತ್ತು. ಮುಖ್ಯಮಂತ್ರಿ ವಿಜಯನ್‌ ಅವರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

ವಿದೇಶದಿಂದ ಭಾರತಕ್ಕೆ ಬರುವ ಪುರುಷ ಪ್ರಯಾಣಿಕರು 20 ಗ್ರಾಂ ಚಿನ್ನ/ ₹50 ಸಾವಿರ ಮೌಲ್ಯದ ಚಿನ್ನ ಮತ್ತು ಮಹಿಳಾ ಪ್ರಯಾಣಿಕರು 40 ಗ್ರಾಂವರೆಗೆ ₹1 ಲಕ್ಷದ ಮೌಲ್ಯದ ಚಿನ್ನವನ್ನು ಯಾವುದೇ ತೆರಿಗೆ ಪಾವತಿಸದೇ ತರಲು ಕಾನೂನು ಅವಕಾಶ ನೀಡಿದೆ.

ಆಧಾರ: ಪಿಟಿಐ, ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ, ಡಿಆರ್‌ಐ ವಾರ್ಷಿಕ ವರದಿಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.