ಅಮೆರಿಕದ ಐಟಿ ಉದ್ಯೋಗಿಗಳಾಗಿರುವ ಕೆಲವು ಭಾರತೀಯರು ಶನಿವಾರ ತವರಿಗೆ ಬರುವುದಕ್ಕಾಗಿ ಸ್ಯಾನ್ ಫ್ರಾನ್ಸಿಸ್ಕೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಏರಿದ್ದರು. ಸ್ವಲ್ಪ ಹೊತ್ತಿನಲ್ಲಿ ವಿಮಾನ ಹೊರಡುವುದಿತ್ತು. ಅಷ್ಟು ಹೊತ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್–1ಬಿ ವೀಸಾದ ಅರ್ಜಿ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಸುಮಾರು ₹88 ಲಕ್ಷ) ಏರಿಸುವ ಕಾರ್ಯಾದೇಶಕ್ಕೆ ಸಹಿ ಹಾಕಿದರು. ವಿಮಾನದಲ್ಲಿದ್ದ ಭಾರತೀಯರಿಗೆ ಈ ಸುದ್ದಿ ಸಿಕ್ಕಿದ್ದೇ ತಡ, ಆತಂಕಗೊಂಡರು. ತಮ್ಮನ್ನು ವಿಮಾನದಿಂದ ಕೆಳಗಿಳಿಸುವಂತೆ ವಿಮಾನದ ಸಿಬ್ಬಂದಿಗೆ ಕೇಳಿಕೊಂಡರು. ಟೆಕಿಗಳಿಗೆ ಮಾತ್ರವಲ್ಲ, ಅವರನ್ನು ನೇಮಿಸಿಕೊಂಡಿರುವ ಮೆಟಾ, ಮೈಕ್ರೊಸಾಫ್ಟ್, ಗೂಗಲ್‌ನಂತಹ ತಂತ್ರಜ್ಞಾನ ಕ್ಷೇತ್ರದ ಬೃಹತ್ ಕಂಪನಿಗಳೂ ಈ ಆದೇಶದಿಂದ ಗಾಬರಿಗೊಂಡು ಈ ವೀಸಾದ ಅಡಿಯಲ್ಲಿ ಕೆಲಸ ಮಾಡುತ್ತಿರುವ ತಮ್ಮೆಲ್ಲಾ ಸಿಬ್ಬಂದಿಗೆ ದೇಶ ತೊರೆಯದಂತೆ ಸೂಚಿಸಿದವು.
‘ಅಮೆರಿಕವೇ ಮೊದಲು’ ಎಂದು ಹೇಳುತ್ತಿರುವ ಟ್ರಂಪ್ ಆಡಳಿತದ ನಿರ್ಧಾರ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಅಮೆರಿಕದ ನಿರ್ಧಾರವು ಭಾರತೀಯರ ‘ಕುಟುಂಬಗಳನ್ನು ಗಲಿಬಿಲಿಗೊಳಿಸಲಿದೆ’ ಎಂಬ ಭಾರತದ ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ ಕೂಡ ಟ್ರಂಪ್ ಆದೇಶದಿಂದ ಭಾರತೀಯರ ಮೇಲಾಗಲಿರುವ ಪರಿಣಾಮವನ್ನು ಒತ್ತಿ ಹೇಳುತ್ತದೆ. ಅದಕ್ಕೆ ಕಾರಣವೂ ಇದೆ. ಈ ವೀಸಾ ಯೋಜನೆಯ ಅತಿ ಹೆಚ್ಚು ಫಲಾನುಭವಿಗಳು ಭಾರತೀಯ ಯುವ ಜನರು. ಅಮೆರಿಕದಲ್ಲಿ ದುಡಿದು ಹಣ ಸಂಪಾದಿಸಬೇಕು ಎಂಬ ಅವರ ಕನಸನ್ನು ನನಸು ಮಾಡಿದ್ದು ಇದೇ ಎಚ್–1ಬಿ ವೀಸಾ. ಈ ವೀಸಾದ ಮೂಲಕ ಅಲ್ಲಿಗೆ ತೆರಳಿ ಒಂದಷ್ಟು ವರ್ಷ ಕೆಲಸ ಮಾಡಿ, ನಂತರ ಪೌರತ್ವ ಪಡೆದು ಅಲ್ಲಿಯೇ ನೆಲಸಿದ ಭಾರತೀಯರ ಸಂಖ್ಯೆ ದೊಡ್ಡದಿದೆ. ಹೀಗಿರುವಾಗ 2,000 ಡಾಲರ್‌ನಿಂದ 5,000 ಡಾಲರ್‌ವರೆಗೆ ಇದ್ದ ವೀಸಾ ಶುಲ್ಕವನ್ನು ದಿಢೀರ್ ಒಂದು ಲಕ್ಷ ಡಾಲರ್‌ಗೆ ಏರಿಸಿರುವುದು ಅಮೆರಿಕದಲ್ಲಿ ಕೆಲಸ ಮಾಡಬೇಕು, ನಂತರ ಅಲ್ಲಿಯೇ ನೆಲಸಬೇಕು ಎನ್ನುವ ದೇಶದ ಲಕ್ಷಾಂತರ ಯುವಕ–ಯುವತಿಯರ ಕನಸಿಗೆ ತಣ್ಣೀರು ಎರಚಿದೆ.
ಈ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿ ಈಗ ಕೆಲಸ ಮಾಡುತ್ತಿರುವವರೂ ಶನಿವಾರ ಆದೇಶ ಹೊರಬಿದ್ದ ತಕ್ಷಣ ಆತಂಕಗೊಂಡಿದ್ದರು. ತಮ್ಮನ್ನು ನೇಮಕ ಮಾಡಿಕೊಂಡ ಕಂಪನಿಗಳು ಲಕ್ಷ ಡಾಲರ್ ಶುಲ್ಕ ಭರಿಸದೇ ಇದ್ದರೆ, ಕೆಲಸ ಕಳೆದುಕೊಂಡು ಭಾರತಕ್ಕೆ ಮರಳಬೇಕಾದೀತು ಎಂಬ ಕಳವಳ ಅವರನ್ನು ಕಾಡಿತ್ತು. ಆದರೆ, ಶ್ವೇತಭವನದಿಂದ ಸ್ಪಷ್ಟನೆ ಹೊರಬಿದ್ದ ಬಳಿಕ ಅವರು ಕೊಂಚ ನಿರಾಳರಾಗಿದ್ದಾರೆ.
ಶ್ವೇತ ಭವನದ ಆಡಳಿತ ನೀಡಿರುವ ಸ್ಪಷ್ಟನೆಯ ಪ್ರಕಾರ, ಹೊಸ ಶುಲ್ಕ ಹೊಸ ಅರ್ಜಿಗಳಿಗಷ್ಟೇ ಅನ್ವಯವಾಗುತ್ತದೆ (ಮುಂದಿನ ಲಾಟರಿ ಸೈಕಲ್‌ಗೆ). ಈ ವೀಸಾದಡಿ ಈಗ ಕೆಲಸ ಮಾಡುತ್ತಿರುವವರು ಹೊಸ ಶುಲ್ಕ ಪಾವತಿಸಬೇಕಾಗಿಲ್ಲ. ಅಲ್ಲದೇ ವೀಸಾ ಅವಧಿ ಮುಕ್ತಾಯಗೊಂಡ ನಂತರ ಸಲ್ಲಿಸಲಾಗುವ ನವೀಕರಣ ಅರ್ಜಿಗೂ ಇದು ಅನ್ವಯವಾಗುವುದಿಲ್ಲ. ಹಾಲಿ ವೀಸಾ ಹೊಂದಿರುವವರು ಈಗಿನಂತೆ ಹೊರ ದೇಶಗಳಿಗೆ ಹೋಗಬಹುದು, ಅಮೆರಿಕಕ್ಕೆ ಬರಬಹುದು. ಅದೇ ರೀತಿ, ಎಚ್–1ಬಿ ವೀಸಾಕ್ಕಾಗಿ ಪ್ರತಿ ವರ್ಷ ಲಕ್ಷ ಡಾಲರ್ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ, ಇದಕ್ಕೂ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ಈ ಶುಲ್ಕವು ವೀಸಾದ ಪೂರ್ಣ ಅವಧಿಗೆ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
ಕಡಿಮೆಯಾಗಲಿದೆ ಅವಕಾಶ: ಹೊರದೇಶಗಳ ಕೌಶಲಯುಕ್ತ ವೃತ್ತಿಪರರನ್ನು ನೇಮಿಸಿಕೊಳ್ಳುವ ಕಂಪನಿಗಳು ಈ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತವೆ. ಶುಲ್ಕವನ್ನು ಭರಿಸುವುದೂ ಅವುಗಳೇ. ಶುಲ್ಕ ಹೆಚ್ಚಾಗಿರುವುದು ಕಂಪನಿಗಳಿಗೆ ಹೊರೆಯಾಗುವುದು ಖಂಡಿತ. ಹಾಗಾಗಿ, ವಿದೇಶ ವೃತ್ತಿಪರರನ್ನು ನೇಮಿಸುವುದಕ್ಕಾಗಿ ಅಷ್ಟು ಮೊತ್ತದ ಶುಲ್ಕ ನೀಡಲು ಅವುಗಳು ಹಿಂದೇಟು ಹಾಕಬಹುದು. ಇಲ್ಲವೇ ಹೆಚ್ಚು ಪರಿಣತಿ ಇರುವ ನಿರ್ದಿಷ್ಟ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಲೇ ಬೇಕು ಎಂಬಂತಹ ಅನಿವಾರ್ಯ ಸನ್ನಿವೇಶದಲ್ಲಿ ಮಾತ್ರ ಈ ವೀಸಾದಡಿ ಕಂಪನಿಗಳು ನೇಮಕಾತಿಗೆ ಮುಂದಾಗಬಹುದು. ನೇಮಕ ಮಾಡಿದರೂ, ಉದ್ಯೋಗಿಗಳ ಸಂಖ್ಯೆ ತುಂಬಾ ಕಡಿಮೆ ಇರಬಹುದು. ವೀಸಾ ನವೀಕರಣಕ್ಕೆ ಹೊಸ ಶುಲ್ಕ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿರುವುದು ಸಮಾಧಾನಕರ ಸಂಗತಿ. ನವೀಕರಣಕ್ಕೆ ಈ ಶುಲ್ಕ ಅನ್ವಯವಾಗಿದ್ದರೆ ಸಾವಿರಾರು ಭಾರತೀಯರು ಕೆಲಸ ಕಳೆದುಕೊಳ್ಳುತ್ತಿದ್ದರು ಎಂಬುದು ತಜ್ಞರ ಅಭಿಪ್ರಾಯ.
ಭಾರತೀಯರೇ ಫಲಾನುಭವಿಗಳು
‘ಎಚ್1–ಬಿ’ ಯು ವಲಸೆಯೇತರ ವೀಸಾ. ಹೊರದೇಶಗಳ ಪರಿಣತ ವೃತ್ತಿಪರರಿಗೆ ಅಮೆರಿಕದಲ್ಲಿ ಕೆಲಸ ನೀಡಲು ಅಲ್ಲಿನ ಕಂಪನಿಗಳಿಗೆ ಇದು ಅವಕಾಶ ನೀಡುತ್ತದೆ. ಇದು ತಾತ್ಕಾಲಿಕ ವೀಸಾ ಆಗಿದ್ದು, ಇದಕ್ಕೆ ಮೂರರಿಂದ ಆರು ವರ್ಷಗಳ ಅವಧಿ ಇರುತ್ತದೆ.
ಈ ವೀಸಾದ ಅಡಿಯಲ್ಲಿ ಅಮೆರಿಕಕ್ಕೆ ತೆರಳುವವರಲ್ಲಿ ಭಾರತೀಯರೇ ಮುಂದೆ ಇದ್ದಾರೆ. ಭಾರತದ ಎಂಜಿನಿಯರ್‌ಗಳು ಹಾಗೂ ಇತರ ಕ್ಷೇತ್ರಗಳ ತಜ್ಞರನ್ನು ತಂತ್ರಜ್ಞಾನ ಹಾಗೂ ಇತರ ಕಂಪನಿಗಳು ಕರೆಸಿಕೊಳ್ಳುತ್ತವೆ. ಅಮೆರಿಕ ಸರ್ಕಾರ ವಿತರಿಸುವ ಬಹುಪಾಲು ವೀಸಾಗಳ ಫಲಾನುಭವಿಗಳು ತಂತ್ರಜ್ಞಾನ ಕಂಪನಿಗಳು. ಕಂಪ್ಯೂಟರ್‌ಗೆ ಸಂಬಂಧಿಸಿದ ಉದ್ಯೋಗದಲ್ಲಿರುವ ಶೇ 65ರಷ್ಟು ಮಂದಿ ಈ ವೀಸಾದ ಫಲಾನುಭವಿಗಳು.
ಪ್ಯೂ ರಿಸರ್ಚ್ ವರದಿ ಪ್ರಕಾರ 2023ರಲ್ಲಿ ಎಚ್1– ಬಿ ವೀಸಾಗಳಲ್ಲಿ ಶೇ 73ರಷ್ಟು ಭಾರತೀಯರು ಪಡೆದಿದ್ದರು. ಚೀನಾದ ನಾಗರಿಕರ ಪಾಲು ಶೇ 12. ಉಳಿದ ಎಲ್ಲ ದೇಶಗಳ ನಾಗರಿಕರಿಗೆ ಸಿಕ್ಕಿದ್ದು ಶೇ 15ರಷ್ಟು ವೀಸಾಗಳು.
ಸದ್ಬಳಕೆಗೆ ಅವಕಾಶ
ಟ್ರಂಪ್ ಅವರ ಈ ಕ್ರಮವನ್ನು ಸದ್ಬಳಕೆ ಮಾಡುವುದಕ್ಕೆ ಭಾರತಕ್ಕೆ ಅವಕಾಶ ಇದೆ. ಅಮೆರಿಕದಲ್ಲಿನ ಕಂಪನಿಗಳು ಪರಿಣತ ವೃತ್ತಿಪರರನ್ನು ನೇಮಕ ಮಾಡಿಕೊಳ್ಳದೇ ಇದ್ದರೆ, ಅವರು ಭಾರತದಲ್ಲೇ ಉಳಿಯಲಿದ್ದಾರೆ. ಅವರಿಗೆ ಇಲ್ಲೇ ಉತ್ತಮ ಅವಕಾಶ ಸಿಕ್ಕಿದರೆ ದೇಶದಲ್ಲಿ ಉದ್ಯಮಗಳು ಬೆಳೆಯುತ್ತವೆ. ಇದು ದೇಶದ ಅಭಿವೃದ್ಧಿಗೂ ಅನುಕೂಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
‘ಅಮೆರಿಕದಿಂದ ವಾಪಸ್ ಆಗುವ ಮತ್ತು ದೇಶದಲ್ಲಿರುವ ತಜ್ಞ ಪ್ರತಿಭೆಗಳನ್ನು ದೇಶದ ಸಾಫ್ಟ್‌ವೇರ್, ಕ್ಲೌಡ್ ಮತ್ತು ಸೈಬರ್‌ಭದ್ರತೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಬಳಸಿಕೊಂಡು ಲಾಭ ಪಡೆಯುವ ಯೋಜನೆಯನ್ನು ಭಾರತ ರೂಪಿಸಬೇಕು. ಆ ಮೂಲಕ ‘ಡಿಜಿಟಲ್ ಸ್ವರಾಜ್ ಮಿಷನ್’ಗೆ ಉತ್ತೇಜನ ನೀಡಬೇಕು’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.
‘ಅಮೆರಿಕಕ್ಕೇ ನಷ್ಟ’
ಟ್ರಂಪ್ ಅವರ ಈ ನಿರ್ಧಾರದಿಂದ ಭಾರತಕ್ಕಿಂತಲೂ ಅಮೆರಿಕಕ್ಕೆ ಹೆಚ್ಚು ನಷ್ಟ ಆಗಬಹುದು ಎಂದು ಚಿಂತಕರ ಚಾವಡಿ ಜಿಟಿಆರ್‌ಐ ಹೇಳಿದೆ.
‘ಅಮೆರಿಕದಲ್ಲಿ ಭಾರತದ ಐಟಿ ಕಂಪನಿಗಳು ಈಗಾಗಲೇ ಶೇ 50ರಿಂದ ಶೇ 80ರಷ್ಟು ಸ್ಥಳೀಯರನ್ನೇ ನೇಮಕ ಮಾಡಿಕೊಂಡಿವೆ. ಟ್ರಂಪ್ ಕ್ರಮವು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸದು. ಭಾರತೀಯರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಕಂಪನಿಗಳು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ಕಂಪನಿಗಳು, ಹೊರದೇಶಗಳಿಂದಲೇ ತಮ್ಮ ಕಂಪನಿಗಳ ಕಾರ್ಯಾಚರಣೆಯನ್ನು ತೀವ್ರಗೊಳಿಸಬಹುದು. ಉದಾಹರಣೆಗೆ, ತಮ್ಮ ಉದ್ಯೋಗಿಗಳ ಮೂಲಕ ಭಾರತದಿಂದಲೇ ಕಾರ್ಯಾಚರಣೆಯನ್ನು ಹೆಚ್ಚಿಸಬಹುದು’ ಎಂದು ಅದು ಅಭಿಪ್ರಾಯಪಟ್ಟಿದೆ.
ಟ್ರಂಪ್ ನೀತಿಯಿಂದಾಗಿ ಭಾರತದ ಐಟಿ ವಲಯವು ಅಮೆರಿಕದ ಪ್ರಾಜೆಕ್ಟ್‌ಗಳಿಗಾಗಿ ತನ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಭಾರತದ ಐಟಿ ವಲಯವು ತನ್ನ ಒಟ್ಟಾರೆ ಆದಾಯದಲ್ಲಿ ಅಮೆರಿಕದಿಂದಲೇ ಶೇ 57ರಷ್ಟು ಆದಾಯ ಪಡೆಯುತ್ತದೆ.
ಶುಲ್ಕ ಹೆಚ್ಚಳ: ಟ್ರಂಪ್ ವಾದವೇನು?
ಟ್ರಂಪ್ ಅವರು ತಮ್ಮ ಕಾರ್ಯಾದೇಶದಲ್ಲಿ, ಎಚ್–1ಬಿ ವೀಸಾ ಅರ್ಜಿ ಶುಲ್ಕ ಹೆಚ್ಚಿಸುವುದಕ್ಕೆ ಏನು ಕಾರಣ ಎಂಬುದನ್ನೂ ವಿವರಿಸಿದ್ದಾರೆ. ಕಂಪನಿಗಳು ಈ ವೀಸಾ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಸ್ಥಳೀಯರಿಗೆ ಹೆಚ್ಚು ಸಂಬಳ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡದೆ, ಹೊರದೇಶಗಳಿಂದ ಕಡಿಮೆ ಸಂಬಳಕ್ಕೆ ವೃತ್ತಿಪರರನ್ನು ಕರೆಸಿಕೊಂಡು ಉದ್ಯೋಗ ನೀಡಲಾಗುತ್ತದೆ
ಎಂದು ಅವರು ಹೇಳಿದ್ದಾರೆ.
ವಿಜ್ಞಾನ, ತಂತ್ರಜ್ಞಾನ ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರದಲ್ಲಿ (ಸ್ಟೆಮ್) ದುಡಿಯುತ್ತಿರುವ ವಿದೇಶಿ ಉದ್ಯೋಗಿಗಳ ಸಂಖ್ಯೆ 2000 ಮತ್ತು 2019ರ ನಡುವೆ ದುಪ್ಪಟ್ಟಾಗಿದೆ. ಐಟಿ ಕಂಪನಿಗಳು ಈ ವೀಸಾ ಯೋಜನೆಯನ್ನು ಅತಿ ಹೆಚ್ಚು ದುರ್ಬಳಕೆ ಮಾಡಿಕೊಂಡಿವೆ. ಕಳೆದ ಐದು ವರ್ಷಗಳಲ್ಲಿ ಕಂಪನಿಗಳು ಎಚ್–1ಬಿ ವೀಸಾ ಪಡೆಯುವ ಪ್ರಮಾಣ ಶೇ 65ರಷ್ಟು ಹೆಚ್ಚಾಗಿದೆ ಎಂದು ಟ್ರಂಪ್ ಅವರು ಆದೇಶದಲ್ಲಿ ವಿವರಿಸಿದ್ದಾರೆ.
ಕಂಪನಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಎಚ್–1ಬಿ ವೀಸಾಕ್ಕೆ ಅರ್ಜಿ ಸಲ್ಲಿಸಿ ವಿದೇಶದವರಿಗೆ ಉದ್ಯೋಗ ನೀಡುತ್ತಿವೆ. ಅದೇ ಸಮಯದಲ್ಲಿ ಹೆಚ್ಚು ಸಂಬಳದ ಕಾರಣಕ್ಕೆ ಅಮೆರಿಕದವರನ್ನು ಕೆಲಸದಿಂದ ತೆಗೆಯುತ್ತಿವೆ. ಎಂದು ಆರೋಪಿಸಿರುವ ಅವರು, ಇದಕ್ಕೆ ಹಲವು ಉದಾಹರಣೆಗಳನ್ನೂ ನೀಡಿದ್ದಾರೆ. ವೀಸಾ ಯೋಜನೆಯ ದುರ್ಬಳಕೆ ತಡೆಯಲು ಮತ್ತು ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಲು ವೀಸಾ ಅರ್ಜಿ ಶುಲ್ಕ ಹೆಚ್ಚಿಸುವುದು ಅನಿವಾರ್ಯ ಎಂದು ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಆದೇಶ ಒಂದು ವರ್ಷ (ಸೆ.21 2026) ಜಾರಿಯಲ್ಲಿರಲಿದೆ ಎಂದು ಕಾರ್ಯಾದೇಶದಲ್ಲಿ ಹೇಳಲಾಗಿದೆ. ಒಂದು ವೇಳೆ, ಅದರ ಒಳಗಾಗಿ ಅವಧಿಯನ್ನು ವಿಸ್ತರಿಸದೇ ಇದ್ದರೆ ಆದೇಶ ಅನೂರ್ಜಿತಗೊಳ್ಳಲಿದೆ.
ಆಧಾರ:ಪಿಟಿಐ, ಬಿಬಿಸಿ, ರಾಯಿಟರ್ಸ್, ಶ್ವೇತಭವನ ವೆಬ್‌ಸೈಟ್, ಯುಎಸ್‌ಸಿಐಎಸ್.ಜಿಒವಿ, ಪ್ಯೂರಿಸರ್ಚ್.ಒಆರ್‌ಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.