ADVERTISEMENT

ಒಳ ಮೀಸಲಿನ ಒಡಲಾಳ: ನೈತಿಕ ಬೇಡಿಕೆ, ಅಂತಃಕರಣದ ಪ್ರಶ್ನೆ

ಆನಂದ ಕುಮಾರ್
Published 4 ಅಕ್ಟೋಬರ್ 2024, 23:30 IST
Last Updated 4 ಅಕ್ಟೋಬರ್ 2024, 23:30 IST
   

ಮೀಸಲಾತಿ ವಂಚಿತ ಜನಸಮುದಾಯಗಳ ನ್ಯಾಯಸಮ್ಮತ ಬೇಡಿಕೆಯೇ ಒಳ ಮೀಸಲಾತಿ. ಮೂರ್ನಾಲ್ಕು ದಶಕಗಳಿಂದ ಮೀಸಲಾತಿಯನ್ನು ಕೆಲವೇ ಕೆಲವು ಜಾತಿಗಳು ಬಾಚಿಕೊಳ್ಳುತ್ತಿವೆ ಎಂಬ ಕೂಗು ಈಗ ಮತ್ತಷ್ಟು ಹೆಚ್ಚಿದೆ. ಅಸಮಂಜಸವಾಗಿ ಮೀಸಲಾತಿ ಹಂಚಿಕೆಯಾಗಿರುವುದನ್ನು ನ್ಯಾಯಾಂಗದ ತನಿಖಾ ಆಯೋಗಗಳಿಂದ ಸರ್ಕಾರಗಳು ದೃಢಪಡಿಸಿಕೊಂಡರೂ ತಮ್ಮ ವಿವೇಚನಾಧಿಕಾರ ಬಳಸಿ ಮೀಸಲಾತಿಯನ್ನು ಸಮರ್ಪಕವಾಗಿ ಹಂಚಿಕೆ ಮಾಡುವುದನ್ನು ಬಿಟ್ಟು ವೃಥಾ ಕಾಲಹರಣ ಮಾಡುತ್ತಿವೆ. ಉತ್ತಮ ಸ್ಥಾನಮಾನ ಪಡೆದಿರುವ ಪರಿಶಿಷ್ಟರೊಳಗಿನ ಕೆಲವು ಜಾತಿಗಳನ್ನು ಬಿಟ್ಟರೆ ಉಳಿದ ಯಾವ ವರ್ಗಗಳೂ, ಪರಿಶಿಷ್ಟ ಜಾತಿಗಳೊಳಗೆ ತಾರತಮ್ಯಗಳಿವೆ ಎಂಬ ವಾಸ್ತವಾಂಶವನ್ನು ಅಲ್ಲಗಳೆಯುತ್ತಿಲ್ಲ. ಅನುಸೂಚಿತ ಜಾತಿಯ ಮೀಸಲಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಿ ಎನ್ನುವುದು ನೈತಿಕ ಬೇಡಿಕೆ. ಆದರೆ, ಇದು ಆಳುವವರ ಮುರಟಿಹೋದ ಅಂತಃಕರಣಕ್ಕೆ ನಾಟುತ್ತಿಲ್ಲ.

ಈ ವರ್ಷದ ಆಗಸ್ಟ್‌ 1ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಏಳು ಸದಸ್ಯರ ಸಂವಿಧಾನ ಪೀಠ ಪರಿಶಿಷ್ಟ ಜಾತಿಗಳೊಳಗೆ ಮೀಸಲಾತಿಯನ್ನು ವಿಭಜಿಸಿ ಹಂಚುವ ರಾಜ್ಯಗಳ ಅಧಿಕಾರವನ್ನು ಎತ್ತಿಹಿಡಿದಿದೆ.

ತೀರ್ಪು ಪ್ರಕಟವಾಗಿ ಎರಡು ತಿಂಗಳು ಕಳೆದಿದೆ. ಜಾತಿ ಪ್ರಶ್ನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹಾಗೂ ಚುನಾವಣಾ ಪೂರ್ವದಲ್ಲಿ ಒಳ ಮೀಸಲಾತಿಯ ಬಗ್ಗೆ ತಾ ಮುಂದು, ನಾ ಮುಂದು ಅನ್ನೋ ಭರವಸೆ ನೀಡುವ ಕಾಂಗ್ರೆಸ್‌ ಹಾಗೂ ಬಿಜೆಪಿ ಈಗ ಒಳ ಮೀಸಲಾತಿ ಜಾರಿ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸುತ್ತಿಲ್ಲ.

ADVERTISEMENT

ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ವಿಷಯವನ್ನು 'ಪವರ್‌ ಪಾಲಿಟಿಕ್ಸ್' ಭಾಗವಾಗದಂತೆ ತಡೆಯುತ್ತಿಲ್ಲವೇಕೆ? ಅತಿಶೋಷಿತರ ಬೇಡಿಕೆಯನ್ನು ಮುಖ್ಯಮಂತ್ರಿಯವರು ಅಂತಃಕರಣದಿಂದ ನೋಡುತ್ತಿಲ್ಲ; ಒಳಮೀಸಲಾತಿ ಕುರಿತು ಬದ್ಧತೆ ಮತ್ತು ಭರವಸೆಯನ್ನು ಮಾತ್ರ ವ್ಯಕ್ತಪಡಿಸುತ್ತಿದ್ದಾರೆ.

‘ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಲು ನಾನು ಬದ್ಧನಾಗಿದ್ದು, ಇದರ ಬಗ್ಗೆ ಯಾವ ರೀತಿಯ ಅನುಮಾನ ಹಾಗೂ ಅಪನಂಬಿಕೆಗಳೂ ಬೇಡ. ಅಲ್ಲದೇ ಈಗಾಗಲೇ ನಾನು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದೇನೆ’ ಎಂದು ಹೇಳಿಕೆ ನೀಡುತ್ತಾ, ‘ನಮ್ಮ ಪಕ್ಷ ಮತ್ತು ಸರ್ಕಾರ ಸಾಮಾಜಿಕ ನ್ಯಾಯದ ಪರ ಖಚಿತ ಮತ್ತು ದೃಢ ನಿಲುವು ಹೊಂದಿದೆ. ಮೀಸಲಾತಿ ಸೌಲಭ್ಯದ ನ್ಯಾಯಯುತ ಹಂಚಿಕೆಗೆ ಒಳಮೀಸಲಾತಿ ಅಗತ್ಯ ಎನ್ನುವುದರ ಅರಿವಿದೆ. ಸುಪ್ರೀಂ ಕೋರ್ಟ್ ತೀರ್ಪು ಕೂಡ ಇದೇ ಅಭಿಪ್ರಾಯವನ್ನು ಆಧರಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಕೆನೆಪದರದ ವಿಚಾರ ಪ್ರಸ್ತಾಪವಾಗಿರುವುದು ಕೆಲವರಲ್ಲಿ ಗೊಂದಲವುಂಟು ಮಾಡಿದೆ. ಆ ಬಗ್ಗೆ ನಾನು ವಿಶ್ಲೇಷಿಸುವುದಿಲ್ಲ’ ಎಂಬಂತಹ ಸಿದ್ದರಾಮಯ್ಯ ಅವರ ಹೇಳಿಕೆಯು ಅಪಾಯಕಾರಿ ನಿಲುವಾಗಿದೆ.

ರಾಜ್ಯದ ಮೀಸಲಾತಿ ವಿತರಣೆಯಲ್ಲಿ ಅನ್ಯಾಯ ತಾಂಡವವಾಡುತ್ತಿದೆ. ಶೋಷಿತರ ಬಡತನ ನಿರ್ಮೂಲನೆ, ತೀರಾ ಕಡಿಮೆ ಪ್ರಾತಿನಿಧ್ಯ ಹೊಂದಿರುವವರಿಗೆ ಶೈಕ್ಷಣಿಕ ಮತ್ತು ಉದ್ಯೋಗದ ಆಸರೆಯಾಗಿ ಹೊಸ ಸ್ವರೂಪದ ಮೀಸಲಾತಿಯನ್ನು ಸರ್ಕಾರಗಳು ತ್ವರಿತವಾಗಿ ಜಾರಿಗೊಳಿಸಬೇಕು. ದುರದೃಷ್ಟವಶಾತ್ ಮೀಸಲಾತಿಯು ಈಗ ಪ್ರದರ್ಶನ ಮಾಡುವ ವಸ್ತುವಾಗುತ್ತಿದೆ. ನಮ್ಮ ವಿಶ್ವವಿದ್ಯಾಲಯಗಳು ಮೀಸಲಾತಿಯ ವೈಜ್ಞಾನಿಕ ವಿತರಣೆಯ ಬಗ್ಗೆ ಪೂರ್ವಗ್ರಹಗಳಿಲ್ಲದೇ ಸಕಾರಾತ್ಮಕವಾಗಿ ಚಿಂತಿಸುವಂತಾಗಬೇಕು. ಅವಮಾನಿತರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಬಗ್ಗೆ ಚುನಾವಣಾ ಪೂರ್ವದ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಮತ ಪಡೆದು ಕ್ರಮವಹಿಸದೇ ಕಾಲಹರಣ ಮಾಡುವುದು ದ್ರೋಹ.⇒ಆನಂದಕುಮಾರ್, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.