ADVERTISEMENT

ಅನುಭವ ಮಂಟಪ | ಒಳಮೀಸಲಾತಿ ಒಳ–ಹೊರಗು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 23:30 IST
Last Updated 4 ಅಕ್ಟೋಬರ್ 2024, 23:30 IST
   
ಪ್ರಾತಿನಿಧ್ಯ ವಂಚಿತ ವರ್ಗಗಳನ್ನು ಏಕರೀತಿಯಾಗಿ ಕ್ರೋಡೀಕರಿಸಿ ಮೀಸಲಾತಿ ನೀಡಲಾಗಿದೆ. ಆದರೆ, ಪರಿಶಿಷ್ಟರಲ್ಲೇ ಅಸಮಾನತೆಯ ಅನೇಕ ಸ್ತರಗಳಿವೆ. ಆ ಸಮುದಾಯಗಳಲ್ಲೇ ಅತ್ಯಂತ ತಳದಲ್ಲಿರುವ ಅಸ್ಪೃಶ್ಯ ಸಮುದಾಯಗಳು ಅವಕಾಶ ನಿರಾಕರಣೆಯ ತೀವ್ರತೆಯನ್ನು ಅನುಭವಿಸುತ್ತಿವೆ. ಈ ಸಮುದಾಯಗಳಲ್ಲೇ ಇರುವ ಈ ತಾರತಮ್ಯವನ್ನು ಹೋಗಲಾಡಿಸಲು, ಒಳಮೀಸಲಾತಿ ಸೃಷ್ಟಿಸಬೇಕಿದೆ

ಭಾರತವು ಏಕಸ್ವರೂಪಿ ಧರ್ಮಗಳ ಸಮಾಜವಲ್ಲ. ಹಿಂದೂ, ಕ್ರೈಸ್ತ, ಮುಸ್ಲಿಂ, ಬೌದ್ಧ, ಜೈನ, ಸಿಖ್ ಧರ್ಮದವರೆಗೂ ಹರಡಿದೆ. ಇದರೊಳಗೇ ಜಾತಿ–ಉಪಜಾತಿಗಳು ಎಂಬಂತಹ ಸ್ತರಗಳು ರೂಪುಗೊಂಡಿವೆ. ಜಾತಿ ಆಧಾರಿತ ಮೇಲು ಕೀಳಿನ ವಿರುದ್ಧ ಧ್ವನಿಯೆತ್ತಿದ ಬಸವಣ್ಣ, ಕನಕದಾಸರಂತಹ ಸುಧಾರಕರು ಸಮ ಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ. ಜಸ್ಟೀಸ್ ಮಿಲ್ಲರ್ ಸಮಿತಿಯ ವರದಿಯ ಅನ್ವಯ 1920ರಲ್ಲೇ ಎಲ್ಲರಿಗೂ ಅವಕಾಶ ಒದಗಿಸುವ ಮೂಲಕ ದೇಶಕ್ಕೆ, ‘ಕರ್ನಾಟಕದ ಮೀಸಲಾತಿ ಮಾದರಿ’ಯ ಮೇಲ್ಪಂಕ್ತಿ ಹಾಕಿದ ಹೆಗ್ಗಳಿಕೆ ಮೈಸೂರು ಒಡೆಯರದ್ದು.

ಅಸ್ಪೃಶ್ಯರು ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯದ ಅವಕಾಶಗಳಿಂದ ದೂರವೇ ಉಳಿದಿದ್ದರು. ಬಿ.ಆರ್‌.ಅಂಬೇಡ್ಕರ್, ಭಾರತದ ಎಲ್ಲರನ್ನೂ ಒಳಗೊಳ್ಳುವಂತೆ ಸಂವಿಧಾನವನ್ನು ರೂಪಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಮೂಲಕ ಸಮಾನ ಅವಕಾಶದ ಬಾಗಿಲನ್ನು ತೆರೆದಿಟ್ಟರು. ಮೀಸಲಾತಿಯ ಯಶಸ್ಸು ಇರುವುದೇ ಅದರ ಪರಿಣಾಮಕಾರಿ ಆಗಿ ಜಾರಿ ಮಾಡುವಲ್ಲಿ. ಮೀಸಲಾತಿಯ ಪರಿಣಾಮಕಾರಿ ಅನುಷ್ಠಾನದಲ್ಲಿ ಒಳಮೀಸಲಾತಿಯೂ ಅಷ್ಟೇ ಪ್ರಮುಖವಾದುದು. ಮೀಸಲಾತಿ ಜಾರಿಗೆ ಬಂದಿದ್ದರೂ, ಒಳಮೀಸಲಾತಿಗಾಗಿ ಆಗ್ರಹಿಸಿ ಕರ್ನಾಟಕವೂ ಸೇರಿ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ದಶಕಗಳ ಇತಿಹಾಸವಿದೆ.

ಒಳ ಮೀಸಲಾತಿ ಎಂದರೇನು?

ಇತಿಹಾಸದಲ್ಲಿ ನಡೆದಿರುವ ಅನ್ಯಾಯ ಮತ್ತು ಅದರಿಂದ ಅವಕಾಶ ವಂಚಿತರಾದವರಿಗೆ ನ್ಯಾಯ ಒದಗಿಸಿಕೊಡಲು ನಮ್ಮ ಸಂವಿಧಾನ ಕರ್ತೃಗಳು ಕಂಡುಕೊಂಡ ದಾರಿಯೇ ಮೀಸಲಾತಿ. ವಂಚಿತ ವರ್ಗಗಳನ್ನು ಏಕರೀತಿಯಾಗಿ ಕ್ರೋಡೀಕರಿಸಿ ಮೀಸಲಾತಿ ನೀಡಲಾಗಿದೆ. ಆದರೆ, ಪರಿಶಿಷ್ಟರಲ್ಲೇ ಅಸಮಾನತೆಯ ಅನೇಕ ಸ್ತರಗಳಿವೆ. ಆ ಸಮುದಾಯಗಳಲ್ಲೇ ಅತ್ಯಂತ ತಳದಲ್ಲಿರುವ ಅಸ್ಪೃಶ್ಯ ಸಮುದಾಯಗಳು ಅವಕಾಶ ನಿರಾಕರಣೆಯ ತೀವ್ರತೆಯನ್ನು ಅನುಭವಿಸುತ್ತಿವೆ. ಈ ಸಮುದಾಯಗಳಲ್ಲೇ ಇರುವ ಈ ತಾರತಮ್ಯವನ್ನು ಹೋಗಲಾಡಿಸಲು, ಜನಸಂಖ್ಯೆಗನುಗುಣವಾಗಿ ಒಳಮೀಸಲಾತಿ ಸೃಷ್ಟಿಸಬೇಕಿದೆ.

ADVERTISEMENT

ಇತರೆ ರಾಜ್ಯಗಳಲ್ಲಿ ಒಳಮೀಸಲಾತಿ

ತಮಿಳುನಾಡಿನಲ್ಲಿ ‘ಅರುಂಧತಿಯಾರ್’ ಸಮುದಾಯವು ದಲಿತರಲ್ಲಿ ಅತ್ಯಂತ ಹಿಂದುಳಿದ ಉಪಜಾತಿಗಳ ಪೈಕಿ ಒಂದಾಗಿದೆ. ಶೋಷಣೆಗೆ ಗುರಿಯಾಗಿದ್ದ ಈ ಸಮುದಾಯವು, ಸಾಕ್ಷರತೆಯನ್ನೂ ಕಾಣದೆ ಅತ್ಯಂತ ಹಿಂದುಳಿದಿತ್ತು. ಎಂ.ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರವು ಈ ಸಮುದಾಯಕ್ಕೆ ಒಳಮೀಸಲಾತಿ ನೀಡುವ ಅಗತ್ಯ ಮತ್ತು ಸಾಧ್ಯತೆಗಳ ಪರಿಶೀಲನೆಗೆ ನ್ಯಾಯಮೂರ್ತಿ ಜನಾರ್ದನನ್ ಆಯೋಗವನ್ನು ನೇಮಿಸಿತು. 2008ರಲ್ಲಿ ಆಯೋಗವು ಸಲ್ಲಿಸಿದ ವರದಿಯ ಶಿಫಾರಸುಗಳ ಆಧಾರದಲ್ಲಿ, 2009ರಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯನ್ನು ತಮಿಳುನಾಡು ಸರ್ಕಾರ ಕಲ್ಪಿಸಿತು. ಪರಿಶಿಷ್ಟ ಜಾತಿಗಳಿಗೆ ಇದ್ದ ಶೇ 18ರಷ್ಟು ಮೀಸಲಾತಿಯಲ್ಲಿ ಶೇ 3ರಷ್ಟನ್ನು ಬೇರ್ಪಡಿಸಿ, ಅರುಂಧತಿಯಾರ್‌ರಿಗೆ ಒಳಮೀಸಲಾತಿ ಕಲ್ಪಿಸಿತು. ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಇತರ ಪರಿಶಿಷ್ಟ ಜಾತಿಗಳು ನ್ಯಾಯಾಲಯದ ಮೊರೆ ಹೋಗಿದ್ದವು.

ಅವಿಭಜಿತ ಆಂಧ್ರಪ್ರದೇಶದಲ್ಲೂ 2001–2004ರ ಅವಧಿಯಲ್ಲಿ ಒಳಮೀಸಲಾತಿಗಾಗಿ ಹೋರಾಟಗಳು ತೀವ್ರಗೊಂಡಿದ್ದವು. ಪರಿಣಾಮವಾಗಿ ಆಂಧ್ರ ಸರ್ಕಾರವು 2004ರಲ್ಲಿ ಒಳಮೀಸಲಾತಿ ಜಾರಿಗೆ ತಂದಿತ್ತು. ಆದರೆ ಅದರ ವಿರುದ್ಧ ಹಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಒಳಮೀಸಲಾತಿ ಅಲ್ಪಾವಧಿಗೆ ಸೀಮಿತವಾಯಿತು. 2004ರಲ್ಲಿ ಅರ್ಜಿ ಸಲ್ಲಿಕೆಯಾಗಿ, ದೀರ್ಘ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು, ‘ಪರಿಶಿಷ್ಟ ಜಾತಿಗಳು ಏಕರೂಪದ್ದಾಗಿವೆ. ಹೀಗಾಗಿ ಅವುಗಳಲ್ಲಿ ಮರು ವರ್ಗೀಕರಣ (ಒಳಮೀಸಲಾತಿ) ಸಾಧ್ಯವಿಲ್ಲ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ನೀಡಿರುವ ಒಳಮೀಸಲಾತಿ ಮತ್ತು ಒಳಮೀಸಲಾತಿ ನೀಡಲು ಕೈಗೊಂಡಿರುವ ಕ್ರಮಗಳು ಸಂವಿಧಾನದ ಉಲ್ಲಂಘನೆಯಾಗುತ್ತದೆ’ ಎಂದು ತೀರ್ಪು ನೀಡಿತು. ಜತೆಗೆ, ಒಳಮೀಸಲಾತಿ ನೀಡುವುದು ರಾಜ್ಯಗಳ ಅಧಿಕಾರ ವ್ಯಾಪ್ತಿಗಿಲ್ಲ ಎಂದೂ ಹೇಳಿತು. ಒಳಮೀಸಲಾತಿ ಚರ್ಚೆಯಲ್ಲಿ ಮಹತ್ವದ ತೀರ್ಪಾಗಿದ್ದ ಇದನ್ನು, ‘ಇ.ವಿ.ಚಿನ್ನಯ್ಯ ವರ್ಸಸ್‌ ಆಂಧ್ರಪ್ರದೇಶ ಸರ್ಕಾರ’ ಪ್ರಕರಣ ಎಂದೇ ಗುರುತಿಸಲಾಗುತ್ತದೆ.

ಈ ತೀರ್ಪಿನ ಕಾರಣದಿಂದಾಗಿ 2020ರವರೆಗೆ ಒಳಮೀಸಲಾತಿ ಎಂಬುದು ಒಂದು ಕನಸಾಗಷ್ಟೇ ಉಳಿದಿತ್ತು. 2020ರ ಆಗಸ್ಟ್‌ನಲ್ಲಿ ಕೋರ್ಟ್‌ ತೀರ್ಪು ಪಂಜಾಬ್‌ ಸರ್ಕಾರ ವರ್ಸಸ್‌ ದೇವೇಂದ್ರ ಸಿಂಗ್‌ ಪ್ರಕರಣದಲ್ಲಿ ಒಳಮೀಸಲಾತಿ ಯನ್ನು ಎತ್ತಿಹಿಡಿಯಿತಾದರೂ, ಒಳಮೀಸಲಾತಿಯು ನ್ಯಾಯಸಮ್ಮತವಾದುದೇ ಎಂಬುದನ್ನು ನಿರ್ಧರಿಸಲು ಅರ್ಜಿಯನ್ನು ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿತು. ಸುಪ್ರೀಂ ಕೋರ್ಟ್‌ನ ಆ ಕ್ರಮವು ಶೋಷಿತ ಸಮುದಾಯಗಳಲ್ಲೇ ತಳಸಮುದಾಯಗಳಲ್ಲಿ ಒಳಮೀಸಲಾತಿಯ ಕನಸನ್ನು ಮತ್ತೆ ಹುಟ್ಟಿಸಿತು.

ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಪರಿಶಿಷ್ಟರ ಪಟ್ಟಿಯಲ್ಲ 59 ಜಾತಿಗಳು ಮತ್ತು ಹಲವು ಉಪಜಾತಿಗಳಿವೆ. ನ್ಯಾಯಮೂರ್ತಿ ಉಷಾ ಮೆಹ್ತಾ ಆಯೋಗವು ನೀಡಿದ ವರದಿಯು ಪರಿಶಿಷ್ಟ ಜಾತಿಗಳಲ್ಲೇ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಇರುವ ದೊಡ್ಡ ಅಂತರವನ್ನು ತೆರೆದಿಟ್ಟಿತ್ತು. ಆಂಧ್ರಪ್ರದೇಶದ ಪರಿಶಿಷ್ಟ ಜಾತಿಗಳಲ್ಲೇ ಅತಿಹೆಚ್ಚು ಸಂಖ್ಯೆಯಲ್ಲಿ ಇರುವ ಮಾದಿಗ ಸಮುದಾಯಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಸೂಕ್ತ ಪ್ರಾತಿನಿಧ್ಯ ಇರಲಿಲ್ಲ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಮಾದಿಗರು ಒಳಮೀಸಲಾತಿ ಹೋರಾಟವನ್ನು ಆರಂಭಿಸಿದರು.

ರಾಜ್ಯದಲ್ಲಿ ಒಳಮೀಸಲಾತಿಯ ನೋಟ

ಆಂಧ್ರಪ್ರದೇಶದಲ್ಲಿ ಮಾದಿಗ ಒಳಮೀಸಲಾತಿಗಾಗಿ ನಡೆದ ಹೋರಾಟದ ಕಾವು ನೆರೆಯ ಕರ್ನಾಟಕಕ್ಕೂ ತಟ್ಟಿತು. 1997ರಲ್ಲಿ ಶಂಕರಪ್ಪ ಅವರು ಬೆಂಗಳೂರಿನ ಶಿವಾಜಿನಗರದ ಕ್ರೀಡಾಂಗಣದಲ್ಲಿ ಸಾವಿರಾರು ಮಾದಿಗರನ್ನು ಸೇರಿಸಿ, ಮಾದಿಗ ದಂಡೋರ ಒಳಮೀಸಲಾತಿ ಹೋರಾಟ ರೂಪಿಸಿದರು. ಈ ಹೋರಾಟ ಆರಂಭವಾಗಿ ವರ್ಷಗಳು ಕಳೆದಂತೆ ಈ ಸಮುದಾಯಗಳ ಸ್ವಾಮೀಜಿಗಳು, ರಾಜಕೀಯ ಮುಖಂಡರು, ಪ್ರಗತಿಪರ ಹೋರಾಟಗಾರರು, ದಲಿತರು, ದಲಿತ ಸಂಘಟನೆಗಳು, ದಲಿತ ವಿದ್ಯಾರ್ಥಿ ಸಂಘಟನೆಗಳು ಮಾದಿಗ ನೌಕರ ಸಂಘಟನೆಗಳು ಒಳಮೀಸಲಾತಿಗಾಗಿ ಸರ್ಕಾರದ ಮೇಲೆ ನೇರವಾಗಿ ಒತ್ತಡ
ಹೇರಲಾರಂಭಿಸಿದವು.

2004ರ ವೇಳೆಗೆ ಈ ಒತ್ತಡಕ್ಕೆ ಮಣಿದ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್‌ ನೇತೃತ್ವದ ಸರ್ಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ರಚಿಸಿತು. 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಆಯೋಗಕ್ಕೆ ₹11 ಕೋಟಿ ಅನುದಾನ ನೀಡಿ, ಸಿಬ್ಬಂದಿ ಮತ್ತು ಕಚೇರಿಯನ್ನು ನಿಯೋಜನೆ ಮಾಡುವಂತೆ ಆದೇಶಿಸಿದರು. ರಾಜ್ಯದಾದ್ಯಂತ ಸಮೀಕ್ಷೆ ಮತ್ತು ಅಧ್ಯಯನ ಗಳನ್ನು ನಡೆಸಿ, ವೈಜ್ಞಾನಿಕವಾಗಿ ಸಂಗ್ರಹಿಸಲಾದ ಅಂಕಿ–ಅಂಶಗಳನ್ನು ಒಳಗೊಂಡ ವರದಿಯನ್ನು ಆಯೋಗವು 2012ರಲ್ಲಿ ಸದಾನಂದಗೌಡ ನೇತೃತ್ವದ ಸರ್ಕಾರಕ್ಕೆ ಸಲ್ಲಿಸಿತು. ಆದರೆ ಆಂದಿನಿಂದ ತೀರಾ ಈಚಿನ ವರ್ಷಗಳವರೆಗೆ ಕಾಂಗ್ರೆಸ್‌, ಜೆಡಿಎಸ್‌–ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ಗಣನೀಯ ಪ್ರಗತಿ ಆಗಲಿಲ್ಲ.

ಈ ಮಧ್ಯೆ ಒಳಮೀಸಲಾತಿಗಾಗಿ ಆಗ್ರಹಿಸಿ ಒಂದೆಡೆ ಹೋರಾಟಗಳು ನಡೆಯುತ್ತಿದ್ದರೆ, ಕೆಲ ಪರಿಶಿಷ್ಟ ಜಾತಿ ಸಮುದಾಯಗಳು ಒಳ ಮೀಸಲಾತಿಯನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದವು. ಈ ಹೋರಾಟಗಳ ನಡುವೆಯೇ 2023ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಳಮೀಸಲಾತಿ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದರು.

ನಂತರ ನಡೆದ ವಿಧಾನಸಭಾ ಚುನಾವಣೆ ವೇಳೆ, ‘ಒಳಮೀಸಲಾತಿ ಜಾರಿಗೆ ತರುತ್ತೇವೆ’ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದರು. ಹಿರಿಯ ನಾಯಕ ಜಿ.ಪರಮೇಶ್ವರ ಮತ್ತು ಮಾದಿಗ ಸಮುದಾಯದವರೇ ಆದ ಕೆ.ಎಚ್‌.ಮುನಿಯಪ್ಪ ಅವರು ‘ಒಳಮೀಸಲಾತಿ ಜಾರಿ ನಮ್ಮ ಸರ್ಕಾರದ ಮೊದಲ ಕೆಲಸ’ ಎಂದು ಚುನಾವಣಾ ಪ್ರಚಾರದುದ್ದಕ್ಕೂ ಹೇಳಿದ್ದರು. ಆದರೆ, ಬಹುಮತದೊಂದಿಗೆ ಸರ್ಕಾರ ರಚನೆಯಾದರೂ ಒಳಮೀಸಲಾತಿ ಜಾರಿಗೆ ಕ್ರಮ ತೆಗೆದುಕೊಂಡಿಲ್ಲ. ಒಳ ಮೀಸಲಾತಿಯನ್ನು ಜಾರಿಗೆ ತರುವಲ್ಲಿ ಸಿದ್ದರಾಮಯ್ಯ ಅವರಿಗೆ ಇರುವಷ್ಟೇ ಗುರುತರ ಹೊಣೆಗಾರಿಕೆ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೂ ಇದೆ.

ಒಳಮೀಸಲಾತಿ ಅನುಷ್ಠಾನಕ್ಕೆ ಹಿಂದೆಂದಿಗಿಂತಲೂ ಕಾಲ ಈಗ ಪರಿಪಕ್ವವಾಗಿದೆ. ಸರ್ಕಾರದಲ್ಲಿ ಈ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಪರಮೇಶ್ವರ ಹಾಗೂ ಮುನಿಯಪ್ಪ ಅವರು ಒಳ ಮೀಸಲಾತಿಯ ಅಗತ್ಯತೆಯನ್ನು ಮತ್ತು ಅದಕ್ಕೆ ಅಡ್ಡಿಪಡಿಸು ತ್ತಿರುವ ವ್ಯಕ್ತಿಗಳು ಯಾರು ಎಂಬುದನ್ನು ಸಿ.ಎಂಗೆ ಮನವರಿಕೆ ಮಾಡಬೇಕಿದೆ. ಇಲ್ಲವಾದರೆ ಅನುಷ್ಠಾನಕ್ಕೆ ಇರುವ ಅಡೆ-ತಡೆಗಳು ಸಮುದಾಯದ ಮುಂದಿಟ್ಟು, ತಾವು ಹೊಂದಿರುವ ಅಧಿಕಾರಕ್ಕೆ ಹಾಗೂ ಪಕ್ಷದ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿ ಸಮುದಾಯದೊಂದಿಗೆ ಮತ್ತೊಮ್ಮೆ ಒಳ ಮೀಸಲಾತಿಯ ಅನುಷ್ಠಾನಕ್ಕೆ ಹೋರಾಟ ಮಾಡಲಿ.

ಲೇಖಕ: ಹವ್ಯಾಸಿ ಬರಹಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.