ಕೊಪ್ಪಳ: ಸ್ವತಂತ್ರವಾಗಿ ನಡೆಯಲು ಆಗದ ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವೃದ್ಧ ಬಿ.ರಾಮಾಂಜನೇಯಲು ಅವರ ಆರೈಕೆಗೆ ಕುಟುಂಬದವರು ಬಾರದ ಕಾರಣ ಏಳು ತಿಂಗಳಿಂದ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಸಿಬ್ಬಂದಿಯೇ ವೃದ್ಧನ ಪೋಷಣೆ ಮಾಡುತ್ತಿದ್ದಾರೆ.
72 ವರ್ಷದ ರಾಮಾಂಜನೇಯಲು ಕಳೆದ ವರ್ಷದ ಜುಲೈನಲ್ಲಿ ಚಿಕಿತ್ಸೆಗೆಂದು ಬಂದಿದ್ದರು. ಆಗಾಗ, ಆಸ್ಪತ್ರೆಯಿಂದ ಒಬ್ಬರೇ ಹೋಗಿ ಬಂದು, ಹೋಗಿ ಬಂದು ಮಾಡುತ್ತಿದ್ದಾರೆ. ಫೆಬ್ರುವರಿ 14ರಂದು ಮರಳಿ ಬಂದವರು ಈಗಲೂ ಆಸ್ಪತ್ರೆಯಲ್ಲಿದ್ದಾರೆ. ಅವರಿಗೆ ಆಗಾಗ ಎದೆ ನೋವಾಗುತ್ತದೆ. ವಿಪರೀತ ಮಂಡಿ ನೋವಿರುವ ಕಾರಣ ಒಬ್ಬರೇ ಓಡಾಡುವ ಸ್ಥಿತಿಯಲ್ಲಿಲ್ಲ. ಅವರೇ ಹೇಳುವ ಪ್ರಕಾರ ಪತ್ನಿ ತೀರಿಕೊಂಡಿದ್ದು, ಇಬ್ಬರು ಮಕ್ಕಳಿದ್ದಾರೆ.
‘ಐದು ಜನ ಸಹೋದರರಲ್ಲಿ ಒಬ್ಬ ತಮ್ಮ ಎರಡು ಮನೆಗಳನ್ನು ಕಸಿದುಕೊಂಡಿದ್ದಾರೆ. ನನ್ನ ಕುಟುಂಬದವರಿಂದಲೇ ವಂಚನೆಯಾಗಿದೆ. ಇರುವ ಆಸ್ತಿ ಕಸಿದುಕೊಂಡಿದ್ದರಿಂದ ಅನಾಥನಂತೆ ಆಸ್ಪತ್ರೆಯಲ್ಲಿ ಬದುಕುವಂತಾಗಿದೆ. ಮಕ್ಕಳು ಕೂಡ ಹತ್ತಿರ ಬರುತ್ತಿಲ್ಲ. ಅವರಿಗೆಲ್ಲ ಶಿಕ್ಷೆ ಕೊಡಿಸಿ’ ಎಂದು ರಾಮಾಂಜನೇಯಲು ಕೈ ಮುಗಿದು ಕೇಳಿಕೊಂಡರು.
‘ವೃದ್ಧನಿಗೆ ಅನೇಕ ಬಾರಿ ಕೇಳಿದರೂ ಹೊಸಪೇಟೆ ನನ್ನೂರು ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಆಸ್ತಿ ವಿಷಯವಾಗಿ ಕೌಟುಂಬಿಕ ಜಗಳ ಇರುವ ಶಂಕೆಯಿದ್ದು ಯಾವಾಗಲೂ ನನ್ನ ಮನೆ, ನನ್ನ ಮನೆ ಎಂದು ಕನವರಿಸುತ್ತಾರೆ. ವೃದ್ಧನ ಬಳಿ ಫೋನ್ ಇಲ್ಲ, ಕುಟುಂಬದವರ ಮಾಹಿತಿಯಿಲ್ಲ. ಫೋನ್ ಸಂಖ್ಯೆ ಕೂಡ ಇಲ್ಲದ ಕಾರಣ ಯಾರೆಂದು ಪತ್ತೆ ಹೆಚ್ಚುವುದು ಕಷ್ಟವಾಗುತ್ತಿದೆ’ ಎಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಾರೆ.
ಅಪರಿಚಿತರು ಯಾರಾದರೂ ಬಂದರೆ ತಮ್ಮ ಮನೆಯವರೇ ಬಂದರೆನ್ನುವಂತೆ ಮುಖ ಅರಳಿಸಿಕೊಂಡು ನೋಡುತ್ತಾರೆ. ಆಸ್ಪತ್ರೆಯ ಸಿಬ್ಬಂದಿ ವೃದ್ಧನಿಗೆ ಚಿಕಿತ್ಸೆ ನೀಡಿದ್ದು, ಇನ್ನಷ್ಟು ಚಿಕಿತ್ಸೆಗಾಗಿ ವೈದ್ಯರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ಆದರೆ ಕರೆದುಕೊಂಡು ಹೋಗುವವರು ಯಾರೂ ಇಲ್ಲದ ಕಾರಣ ಹಲವು ತಿಂಗಳುಗಳಿಂದ ಆಸ್ಪತ್ರೆಯೇ ಮನೆಯಂತಾಗಿದೆ.
ಶೌಚಕ್ಕೆ ಎದ್ದು ಹೋಗುವಷ್ಟು ಶಕ್ತಿಯಿಲ್ಲ. ಬೇಗನೆ ಮಂಚದ ಮೇಲೆ ಎದ್ದು ಕೂಡಲು ಕೂಡ ಆಗುವುದಿಲ್ಲ. ಊಟ ಮಾಡಲೂ ಪರದಾಡುವ ಸ್ಥಿತಿಯಿದೆ. ಆಸ್ಪತ್ರೆಯಿಂದ ನಿತ್ಯ ಊಟದ ವ್ಯವಸ್ಥೆ ಮಾಡಲಾಗಿದೆ. ಮಲಗಿದ ಸ್ಥಳದಲ್ಲಿಯೇ ಮಾಡುವ ಶೌಚವನ್ನು ಆಸ್ಪತ್ರೆ ಸಿಬ್ಬಂದಿ ಸ್ವಚ್ಛ ಮಾಡುತ್ತಿದ್ದಾರೆ.
‘ವೃದ್ಧನ ಸಂಬಂಧಿಕರು ಹೊಸಪೇಟೆಯಲ್ಲಿದ್ದಾರೆ ಎನ್ನುವ ಮಾಹಿತಿಯಿದ್ದು, ಹುಡುಕಾಡುತ್ತಿದ್ದೇವೆ. ಯಾರೂ ಸ್ಪಂದಿಸುತ್ತಿಲ್ಲ. ಆರೈಕೆ ಮಾಡುವವರು ಯಾರೂ ಇಲ್ಲವೆಂದು ಮೇಲಿಂದ ಮೇಲೆ ಆಸ್ಪತ್ರೆಗೆ ಬರುತ್ತಿದ್ದಾರೆ’ ಎಂದು ಜಿಲ್ಲಾ ಸರ್ಜನ್ ಕೃಷ್ಣ ಓಂಕಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.