ಹಾಸನ: ರಾಜಧಾನಿ ಬೆಂಗಳೂರು ಮತ್ತು ಬಂದರು ನಗರಿ ಮಂಗಳೂರು ಸೇರಿದಂತೆ ಕರಾವಳಿ ಭಾಗವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–75ರಲ್ಲಿನ ಶಿರಾಡಿ ಘಾಟಿ ಈ ಬಾರಿಯೂ ಕುಸಿತದ ಭೀತಿ ಎದುರಿಸುತ್ತಿದೆ.
ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಘಾಟಿಯ ಅಲ್ಲಲ್ಲಿ ಸಣ್ಣ ಪ್ರಮಾಣದ ಭೂಕುಸಿತ ಸಂಭವಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಸಮೀಪದ ಅಡ್ಡಹೊಳೆಯಿಂದ ಮಾರನಹಳ್ಳಿಯವರೆಗೂ ಘಾಟಿಯ ರಸ್ತೆ ಬಹುತೇಕ ಉತ್ತಮವಾಗಿದೆ. ಆದರೆ ಅಲ್ಲಿಂದ ಸಕಲೇಶಪುರದವರೆಗೂ ಹೆದ್ದಾರಿಯ ಸ್ಥಿತಿ ಕಚ್ಚಾರಸ್ತೆಗಿಂತಲೂ ಕಡೆಯಾಗಿದೆ. ಸಕಲೇಶಪುರ ಮತ್ತು ಮಾರನಹಳ್ಳಿ ನಡುವಿನ 10 ಕಿ.ಮೀ. ಉದ್ದದ ಚತುಷ್ಪಥ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗಿರುವುದರಿಂದ ರಸ್ತೆ ರಾಡಿಮಯವಾಗಿದ್ದು, ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.
2018ರಲ್ಲಿ ಆರಂಭವಾಗಿರುವ ಹಾಸನ–ಮಾರನಹಳ್ಳಿ ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಸಕಲೇಶಪುರದವರೆಗೆ ಮಾತ್ರ ಪೂರ್ಣವಾಗಿದೆ. ನಂತರದ ಕೆಲಸ ವಿಳಂಬವಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಹತ್ತಾರು ಕಡೆ ನಿರಂತರವಾಗಿ ಮಣ್ಣು ಕುಸಿಯುತ್ತಲೇ ಇದೆ. ಕಾಮಗಾರಿ ಆರಂಭವಾದಾಗಿನಿಂದ ಪ್ರತಿ ವರ್ಷವೂ ಮಳೆಗಾಲದಲ್ಲಿ ಘಾಟಿ ಸಂಚಾರ ದುಸ್ತರವಾಗುತ್ತದೆ. ವಾಹನಗಳ ಸಂಚಾರ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ.
ಹೆದ್ದಾರಿ ವಿಸ್ತರಣೆಗಾಗಿ ಪಕ್ಕದ ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಕತ್ತರಿಸಲಾಗಿದ್ದು, ಕೇವಲ 6 ರಿಂದ 8 ಅಡಿ ಎತ್ತರಕ್ಕೆ ತಡೆಗೋಡೆ ನಿರ್ಮಿಸಲಾಗಿದೆ. ಇಲ್ಲಿನ ಮಣ್ಣು ಸಡಿಲವಾಗಿದೆ. ನಿಗದಿಗಿಂತ ಮೊದಲೇ ವಿಪರೀತ ಎನ್ನುವ ರೀತಿಯಲ್ಲಿ ಮಳೆ ಶುರುವಾಗಿರುವುದರಿಂದ ಬೆಟ್ಟದ ಮೇಲಿನಿಂದ ನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಬರುತ್ತಿದೆ. ಕಡಿಮೆ ಎತ್ತರದ ತಡೆಗೋಡೆ ಕತ್ತರಿಸಿಕೊಂಡು ರಸ್ತೆಯ ಮೇಲೆ ಮಣ್ಣು ಕುಸಿಯುತ್ತಿದೆ.
ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದ ದೊಡ್ಡತಪ್ಪಲೆ ಬಳಿ ಈ ಬಾರಿಯೂ ಭೂಕುಸಿತ ಮುಂದುವರಿದಿದೆ. ಆಗಾಗ್ಗೆ ಮಣ್ಣು ತೆರವು ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಈ ಪ್ರದೇಶದಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದು, ಎರಡೂ ಬದಿಯಲ್ಲಿ ವಾಹನಗಳು ಸರದಿಯಲ್ಲಿ ನಿಲ್ಲುತ್ತಿವೆ.
‘ಮಳೆಗಾಲದಲ್ಲಿ ಗುಡ್ಡ, ತಡೆಗೋಡೆ ಕುಸಿದು ಬೀಳುವುದು, ವಾಹನಗಳ ಸಂಚಾರ ಬಂದ್ ಆಗುವುದು, ಪ್ರಯಾಣಿಕರು ಪರದಾಡುವಂತಾಗಿದ್ದು, ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳು ಇದುವರೆಗೂ ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದು ಜನರು ದೂರುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಪ್ರವೀಣ್ ಕುಮಾರ್ ಅವರು ಕರೆ ಸ್ವೀಕರಿಸಲಿಲ್ಲ. ಅವರು ಸಾರ್ವಜನಿಕರ ಅಹವಾಲುಗಳಿಗೂ ಸರಿಯಾದ ರೀತಿಯಲ್ಲಿ ಸ್ಪಂದಿಸುವುದಿಲ್ಲ ಎನ್ನುವ ದೂರುಗಳಿವೆ.
ಸಕಲೇಶಪುರ–ಮಾರನಹಳ್ಳಿ ನಡುವಿನ ದೊಡ್ಡತಪ್ಪಲೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯವಸ್ಥಿತ ಚರಂಡಿ ಮಾಡದೆ ಇರುವುದರಿಂದ ಮಳೆ ನೀರು ಹಳ್ಳದಂತೆ ಹರಿಯುತ್ತಿದೆ.
ಸಕಲೇಶಪುರದ ಕೆಸಗಾನಹಳ್ಳಿ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿಯುತ್ತಿರುವುದು.
ಸಕಲೇಶಪುರದ ಕಪ್ಪಳ್ಳಿ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಮಣ್ಣು ಕುಸಿದಿರುವುದು.
ಸಕಲೇಶಪುರ ತಾಲ್ಲೂಕಿನ ಆನೆಮಹಲ್ ಬಳಿ ತಡೆಗೋಡೆ ಕುಸಿದು ಮಣ್ಣು ರಸ್ತೆಗೆ ಬೀಳುತ್ತಿದೆ.
ಇಲ್ಲಿನ ಮಣ್ಣು ತೇವಾಂಶದಿಂದ ಕೂಡಿದ್ದು ಭೂಕುಸಿತವಾಗುತ್ತಿದೆ. ಕೇಂದ್ರ ಸಾರಿಗೆ ಸಚಿವರನ್ನು ಭೇಟಿ ಮಾಡಿದ್ದು ₹13 ಕೋಟಿ ವೆಚ್ಚದಲ್ಲಿ ವೈಜ್ಞಾನಿಕ ಕಾಮಗಾರಿಗೆ ಯೋಜನೆ ಸಿದ್ಧಪಡಿಸಲಾಗಿದೆ.ಶ್ರೇಯಸ್ ಪಟೇಲ್ ಸಂಸದ
ಚತುಷ್ಪಥ ಕಾಮಗಾರಿ ಕಳಪೆಯಾಗಿದ್ದು ಪ್ರತಿವರ್ಷ ಸಾವು– ನೋವು ಅಪಘಾತ ಸಂಭವಿಸುತ್ತಲೇ ಇವೆ. ಮುಂದೆ ಅನಾಹುತ ಸಂಭವಿಸಿದರೆ ಅಧಿಕಾರಿಗಳ ವಿರುದ್ಧ ನಾನೇ ಪೊಲೀಸರಿಗೆ ದೂರು ನೀಡುತ್ತೇನೆಸಿಮೆಂಟ್ ಮಂಜು ಸಕಲೇಶಪುರ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.