ADVERTISEMENT

ಆಳ–ಅಗಲ | ಅಕಾಲಿಕ ಮಳೆ: ಭವಿಷ್ಯದ ಎಚ್ಚರಿಕೆಯೇ?

ಹವಾಮಾನ ಬದಲಾವಣೆಯ ಪರಿಣಾಮ; ವರ್ಷದಿಂದ ವರ್ಷಕ್ಕೆ ವಿಪತ್ತುಗಳು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಮೇ 2025, 23:30 IST
Last Updated 25 ಮೇ 2025, 23:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
ಮುಂಗಾರುಪೂರ್ವ ಮಳೆಯು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನಾಹುತಗಳನ್ನು ಸೃಷ್ಟಿಸಿದೆ. ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಕಾಲಿಕ ಮಳೆ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ; ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ದೂರದ ದೆಹಲಿ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಸಂಕಟ ತಂದೊಡ್ಡಿದೆ. ಮುಂಗಾರು ಆಗಮನಕ್ಕೂ ಮುನ್ನವೇ, ಬಿರುಬೇಸಿಗೆ ಇರಬೇಕಾಗಿದ್ದ ಮೇ ತಿಂಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇದು ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ, ಭವಿಷ್ಯದಲ್ಲಿ ಸಂಭವಿಸಬಹುದಾದ ಪ್ರಕೃತಿ ವೈಪರೀತ್ಯಗಳ ಬಗ್ಗೆ ಎಚ್ಚರಿಕೆ ನೀಡುತ್ತಿದೆ

ಮೇ ತಿಂಗಳು ಎಂದರೆ, ಸಾಮಾನ್ಯವಾಗಿ ವಿಪರೀತ ಬಿಸಿಲು ಇರುತ್ತದೆ. ಆದರೆ, ಕೆಲವು ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ. ಈ ವರ್ಷದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದಂತೆ ಕಾಣುತ್ತಿದ್ದು, ಆಗಿಂದಾಗ್ಗೆ ಭಾರಿ ಮಳೆ ಬೀಳುತ್ತಲೇ ಇದೆ. ಮಳೆಗಾಲದಲ್ಲೂ ಅಪರೂಪ ಎನ್ನುವಂಥ ಮಳೆ ಮುಂಗಾರು ಆಗಮನಕ್ಕೂ ಮುನ್ನವೇ ಸುರಿಯುತ್ತಿದೆ. ಮಳೆಗೆ ಪೂರ್ವಸಿದ್ಧತೆ ಇಲ್ಲದಿದ್ದಕ್ಕೆ ಮತ್ತು ಮೂಲಸೌಕರ್ಯಗಳ ಕೊರತೆಯ ಕಾರಣಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪ್ರದೇಶಗಳು ಹೊಳೆಯಂತಾಗಿವೆ.

ಮಳೆಗಾಲದಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಪ್ರವಾಹ ಉಂಟಾಗುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾದ ವಿದ್ಯಮಾನವಾಗಿತ್ತು. ಆದರೆ, ಈ ಬಾರಿ ಮುಂಗಾರುಪೂರ್ವದಲ್ಲೇ ಈ ಪರಿಸ್ಥಿತಿ ತಲೆದೋರಿದ್ದು, ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದೆ. ಕರ್ನಾಟಕ ಅಷ್ಟೇ ಅಲ್ಲದೇ, ದಖ್ಖನ್‌ ಪ್ರಸ್ಥಭೂಮಿ ವ್ಯಾಪ್ತಿಯ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಅಕಾಲಿಕ ಮಳೆ ಸುರಿದು, ಸಮಸ್ಯೆಗಳು ಸೃಷ್ಟಿಯಾಗಿವೆ. ಉತ್ತರದ ದೆಹಲಿ, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಜಾರ್ಖಂಡ್,  ಮುಂತಾದೆಡೆ ಕೂಡ ಇದೇ ಪರಿಸ್ಥಿತಿ ತಲೆದೋರಿದೆ.

ಮುಂಗಾರುಪೂರ್ವದಲ್ಲಿ ಆಗೀಗ ಮಳೆ ಸುರಿಯುವುದು ಹೊಸದೇನಲ್ಲ. ಬೇಸಿಗೆಯಲ್ಲಿ ಮಳೆಯಾಶ್ರಿತ ಕೃಷಿ ಚಟುವಟಿಕೆ ಆರಂಭಕ್ಕೆ ಮುಂಗಾರು ಪೂರ್ವ ಮಳೆಯೂ ಮುಖ್ಯ. ಆದರೆ, ನಿರಂತರವಾಗಿ ಸುರಿಯುವುದು, ಅದೂ ಮೇಘ ಸ್ಫೋಟವಾದಂತೆ ಭಾರಿ ಪ್ರಮಾಣದಲ್ಲಿ ಮಳೆಯಾಗುವುದು ಹೊಸ ವಿದ್ಯಮಾನವಾಗಿದೆ.

ADVERTISEMENT

ಇದು ಮಳೆಯ ಕಥೆಯಾದರೆ, ಬಿಸಿಲಿನದ್ದು ಇನ್ನೊಂದು ಕಥೆ. ಸರಿಯಾಗಿ ವರ್ಷದ ಹಿಂದೆ, 2024ರ ಮೇನಲ್ಲಿ, ದೇಶದ 37 ನಗರಗಳಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ಅನ್ನು ದಾಟಿತ್ತು. ರಾಜಸ್ಥಾನದ ಚುರು ಎಂಬಲ್ಲಿ 50.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಬಿಸಿಲಿನ ಹೊಡೆತಕ್ಕೆ ಜನ ತತ್ತರಿಸಿದ್ದಲ್ಲದೇ, ಜೀವನೋಪಾಯಕ್ಕೂ ಪೆಟ್ಟು ಬಿದ್ದಿತ್ತು. ಅನೇಕ ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಬಿಸಿಗಾಳಿಯಿಂದಾಗಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿತ್ತು. ಏಪ್ರಿಲ್‌ನಿಂದ ಜೂನ್‌ವರೆಗೆ ದೇಶದ ವಿವಿಧ ಭಾಗಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶದಲ್ಲಿ ವ್ಯತ್ಯಾಸವಾಗಲಿದ್ದು, ಬಿಸಿಗಾಳಿಯ ಅವಧಿ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಈ ಬಾರಿಯ ಹವಾಮಾನ ಇಲಾಖೆಯ ದೀರ್ಘಾವಧಿ ಮುನ್ಸೂಚನೆ (ಎಲ್‌ಆರ್‌ಎಫ್‌) ಪ್ರಕಾರ, ಇದೇ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ವಾಡಿಕೆಗಿಂತ ಹೆಚ್ಚು ಮಳೆ (ಶೇ 105ರಷ್ಟು) ಬೀಳಲಿದೆ. 

ಒಂದೆಡೆ, ಬಿಸಿಲು ತಾರಕಕ್ಕೇರಿ ವಿಪರೀತ ಎನ್ನುವಷ್ಟು ಬಿಸಿಗಾಳಿ ಬೀಸುವುದು. ಮತ್ತೊಂದೆಡೆ, ಪ್ರವಾಹ ಉಂಟಾಗುವಂತೆ ಅಕಾಲಿಕವಾಗಿ ಮಳೆ ಸುರಿಯುವುದು. ಕೆಲವೇ ಗಂಟೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯುವುದು... ಇವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿವೆ. ಪ್ರಕೃತಿ ವೈಪರೀತ್ಯಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ ಮತ್ತು ತೀವ್ರವಾಗುತ್ತಿವೆ. ಕೆಲವು ಪ್ರದೇಶಗಳಲ್ಲಿ ಬಿಸಿಲಿನ ಅವಧಿ ಹೆಚ್ಚಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಮುಂಗಾರಿಗೂ ಮುನ್ನವೇ ಮಳೆ ಸುರಿಯಲಾರಂಭಿಸುತ್ತದೆ. ವರ್ಷದಿಂದ ವರ್ಷಕ್ಕೆ ಹವಾಮಾನ ವ್ಯವಸ್ಥೆಯು ಸಂಕೀರ್ಣಗೊಳ್ಳುತ್ತಿದ್ದು, ಅದರ ಗತಿಯನ್ನು ಅರಿಯುವುದೇ ಕಷ್ಟವಾಗಿದೆ.   

ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಅವಧಿಯಲ್ಲಿ ಇದ್ದುದಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಳಕ್ಕೆ ಸೀಮಿತಗೊಳಿಸುವುದು ಪ್ಯಾರಿಸ್ ಒಪ್ಪಂದದ ಮುಖ್ಯ ನಿರ್ಣಯವಾಗಿತ್ತು. ಆದರೆ, 2024 ಜಾಗತಿಕವಾಗಿ ಅತಿ ತಾಪಮಾನದ ವರ್ಷವಾಗಿ ದಾಖಲೆ ಮಾಡಿದ್ದು ಅಷ್ಟೇ ಅಲ್ಲದೇ, 1.5 ಡಿಗ್ರಿ ಸೆಲ್ಸಿಯಸ್ ಮಿತಿಯನ್ನೂ ದಾಟಿತ್ತು. 

ಹವಾಮಾನ ಬದಲಾವಣೆ:

ತಾಪಮಾನದ ‌‌‌ಏರಿಕೆ, ಅಕಾಲಿಕ ಮಳೆ ಇವೆಲ್ಲವೂ ಹವಾಮಾನ ಬದಲಾವಣೆಯ ಪರಿಣಾಮಗಳು. 2025ರ ಫೆಬ್ರುವರಿ/ಮಾರ್ಚ್ ಆರಂಭದಲ್ಲೇ ಭಾರತದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಬೀಸುವ ಮೂಲಕ ಹವಾಮಾನ ವೈಪರೀತ್ಯದ ಸುಳಿವು ನೀಡಿತ್ತು. ಬಿಸಿಲು ಮತ್ತು ಬಿಸಿಗಾಳಿ ದೀರ್ಘವಾಗುತ್ತಿರುವ ವಿದ್ಯಮಾನ ದೇಶದಲ್ಲಿ ಹೊಸದೇನಲ್ಲ. 20ನೇ ಶತಮಾನದ ನಂತರ ಸುಮಾರು 0.8 ಡಿಗ್ರಿ ಸೆಲ್ಸಿಯಸ್‌ನಷ್ಟು ಸರಾಸರಿ ತಾಪಮಾನ ಹೆಚ್ಚಾಗಿದೆ. ಮೇಲ್ಮೈ ಮತ್ತು ವಾಯುಮಂಡಲದ ಉಷ್ಣಾಂಶದಿಂದ ಬೇಸಿಗೆಯ ತಾಪ ಹೆಚ್ಚಾಗುತ್ತಿರುವುದಷ್ಟೇ ಅಲ್ಲ, ವಾಯುಮಂಡಲದ ತೇವಾಂಶ ಒಯ್ಯುವ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ವಾತಾವರಣದಲ್ಲಿನ ಹೆಚ್ಚಿನ ತೇವಾಂಶವು ತೀವ್ರ ಹಾಗೂ ಅಕಾಲಿಕ ಮಳೆ ಉಂಟುಮಾಡುತ್ತಿದೆ.

ದೇಶದಲ್ಲಿ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ. ಕಳೆದ 50 ವರ್ಷದಲ್ಲಿ ದೇಶದಲ್ಲಿ ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಮುಂದಿನ 50 ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಹಿಂದೆ, ಉತ್ತರದ ಕೆಲವು ರಾಜ್ಯಗಳಲ್ಲಿ ಮಾತ್ರ ಬಿಸಿಗಾಳಿ ಬೀಸುತ್ತಿತ್ತು. 20 ವರ್ಷಗಳಿಂದೀಚೆಗೆ, ಅದರ ವ್ಯಾಪ್ತಿ ವಿಸ್ತರಿಸಿದ್ದು, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯಗಳೂ ಆ ಪಟ್ಟಿ ಸೇರಿವೆ. ಹಾಗೆಯೇ ಬಿಸಿಗಾಳಿಗೆ ಹೆಸರಾಗಿದ್ದ ಉತ್ತರದ ಹಲವು ರಾಜ್ಯಗಳಲ್ಲೂ ಪ್ರವಾಹಗಳು ಘಟಿಸುತ್ತಿವೆ. 

ಅಕಾಲಿಕ ಮಳೆ, ತಾಪಮಾನ ಹೆಚ್ಚಳ, ಪ್ರವಾಹ, ಬಿಸಿಗಾಳಿ, ಮೇಘ ಸ್ಫೋಟ ಎಲ್ಲಕ್ಕೂ ಹವಾಮಾನ ಬದಲಾವಣೆ ಕಾರಣವಾಗಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ, ಭವಿಷ್ಯದಲ್ಲಿ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. 

ದೇಶದಲ್ಲಿ ಮುಂಗಾರುಪೂರ್ವ ಮಳೆ

ವರ್ಷದಿಂದ ವರ್ಷಕ್ಕೆ ಹೆಚ್ಚು ವರ್ಷಧಾರೆ

ರಾಜ್ಯದಲ್ಲಿ ಮಾರ್ಚ್‌ 1ರಿಂದ ಮೇ 31ರ ನಡುವೆ ವಾಡಿಕೆಯಲ್ಲಿ 11.96 ಸೆಂ.ಮೀ. ಮಳೆಯಾಗುತ್ತದೆ. 2021ರಿಂದೀಚೆಗೆ ಪ್ರತಿ ವರ್ಷವೂ (2023 ಹೊರತು ಪಡಿಸಿ‌) ಹೆಚ್ಚು ಮಳೆಯಾಗುತ್ತಿದೆ. ಈ ವರ್ಷ ಮೇ ಮುಕ್ತಾಯವಾಗಲು ಇನ್ನೂ ಐದು ದಿನಗಳು ಬಾಕಿ ಇವೆ. ಈಗ ಮುಂಗಾರು ಕಾಲಿಡುತ್ತಿದೆ. ಆದರೆ, ಈಗಾಗಲೇ ವಾಡಿಕೆಗಿಂತಲೂ ಹೆಚ್ಚು ವರ್ಷಧಾರೆಯಾಗಿದೆ. ಮೇ 24ರವರೆಗೆ 19.4 ಸೆಂ.ಮೀನಷ್ಟು ಮಳೆ ಬಿದ್ದಿದೆ. ಮಾರ್ಚ್‌, ಏಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳ ಎರಡನೇ ವಾರದ ನಂತರ ಭಾರಿ ಮಳೆ ಸುರಿದಿದೆ.     

ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಪ್ರದೇಶ ಸೇರಿದಂತೆ ನಾಲ್ಕೂ ವಲಯಗಳಲ್ಲಿ ಮಳೆ ಜಾಸ್ತಿಯಾಗುತ್ತಿದೆ. ಈ ಬಾರಿ ಕರಾವಳಿಯಲ್ಲಿ ಶೇ 216ರಷ್ಟು ಹೆಚ್ಚು ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ 33.91 ಸೆಂ.ಮೀನಷ್ಟು (ವಾಡಿಕೆ 10.74 ಸೆಂ.ಮೀ) ಮಳೆ ಸುರಿದಿದೆ. ಮಲೆನಾಡು ಭಾಗದಲ್ಲಿ 23.74 ಸೆಂ.ಮೀ ಮಳೆಯಾಗಿದೆ (ಶೇ 76ರಷ್ಟು ಹೆಚ್ಚು). ದಕ್ಷಿಣ ಒಳನಾಡಿನಲ್ಲಿ 20 ಸೆಂ.ಮೀ ಮತ್ತು ಉತ್ತರ ಒಳನಾಡು ಭಾಗದಲ್ಲಿ 14.75 ಸೆಂ.ಮೀ ಮಳೆ ಸುರಿದಿದೆ. ಇಲ್ಲಿ ಕ್ರಮವಾಗಿ ಶೇ 74 ಮತ್ತು ಶೇ 136ರಷ್ಟು ಹೆಚ್ಚು ವರ್ಷಧಾರೆಯಾಗಿದೆ. 

ಕರ್ನಾಟಕದಲ್ಲಿ ಪೂರ್ವಮುಂಗಾರು ಮಳೆ

ಮುಂಗಾರು ಪೂರ್ವ ಅವಧಿಯಲ್ಲಿ ಅಕಾಲಿಕವಾಗಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದು ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇಡೀ ದೇಶದಾದ್ಯಂತ ಈ ಪ್ರವೃತ್ತಿ ಕಂಡು ಬರುತ್ತಿದೆ. ಉತ್ತರದ ಲಡಾಖ್‌ನಿಂದ ದಕ್ಷಿಣದ ತಮಿಳುನಾಡಿನವರೆಗೆ ಪಶ್ಚಿಮದ ಗುಜರಾತ್‌ನಿಂದ ಪೂರ್ವದ ಪಶ್ಚಿಮ ಬಂಗಾಳದವರೆಗಿನ ಹಲವು ರಾಜ್ಯಗಳ ಬಹುತೇಕ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತದೆ. ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಹಲವು ಜಿಲ್ಲೆಗಳೂ ಹೆಚ್ಚಿನ ಪ್ರಮಾಣದ ಅಕಾಲಿಕ ಮಳೆಗೆ ಸಾಕ್ಷಿಯಾಗುತ್ತಿವೆ. 

ಭಾರತೀಯ ಹವಾಮಾನ ಇಲಾಖೆಯು ಮಾರ್ಚ್‌ 1ರಿಂದ ಮೇ 25ರವರೆಗೆ ದೇಶದಾದ್ಯಂತ ಜಿಲ್ಲೆಗಳಲ್ಲಿ ಆಗಿರುವ ಮಳೆಯ ಮಾಹಿತಿಯನ್ನು ಭಾರತದ ನಕ್ಷೆಯ ಮೂಲಕ ತೋರಿಸಿದ್ದು ದೇಶದ ಅರ್ಧಕ್ಕಿಂತಲೂ ಹೆಚ್ಚು ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ 60 ಮತ್ತು ಅದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. 

ಆಧಾರ: ಪಿಟಿಐ, ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ವಿಪತ್ತು ನಿರ್ವಹಣಾ ಕೇಂದ್ರ, ಡೌನ್ ಟು ಅರ್ಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.