ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಅಮೆರಿಕದ ಅಲಾಸ್ಕದಲ್ಲಿ ಶುಕ್ರವಾರ ಭೇಟಿಯಾಗುತ್ತಿದ್ದಾರೆ. ಉಕ್ರೇನ್–ರಷ್ಯಾ ಯುದ್ಧವೇ ಮಾತುಕತೆಯ ಮುಖ್ಯ ವಿಷಯವಾಗಿದ್ದು, ಪ್ರಸ್ತುತ ಇಬ್ಬರೂ ನಾಯಕರು ಈ ಬಗ್ಗೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದಾರೆ. ತಮ್ಮ ಬೇಡಿಕೆಗಳನ್ನು ಒಪ್ಪದಿದ್ದರೆ ಉಕ್ರೇನ್ ಮೇಲೆ ಜಯ ಸಾಧಿಸಿಯೇ ತೀರುವ ಪಣವನ್ನು ಪುಟಿನ್ ತೊಟ್ಟಿದ್ದರೆ, ಯುದ್ಧವನ್ನು ನಿಲ್ಲಿಸಿ ತನ್ನ ‘ಜಾಗತಿಕ ನಾಯಕ’ನ ಪ್ರಭಾವ ಹೆಚ್ಚಿಸಿಕೊಳ್ಳುವ ಉಮೇದು ಡೊನಾಲ್ಡ್ ಟ್ರಂಪ್ ಅವರದ್ದಾಗಿದೆ
ಜಾಗತಿಕ ಮಟ್ಟದಲ್ಲಿ ಮಾತುಕತೆಗಳನ್ನು ನಡೆಸುವುದರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅವರದ್ದೇ ಆದ ವಿಶಿಷ್ಟ ಶೈಲಿ ಇದೆ. ಕಾರ್ಯಸಾಧನೆಗಾಗಿ ಅವರು ಇತರೆ ರಾಷ್ಟ್ರಗಳಿಗೆ ಬೆದರಿಕೆಯನ್ನೂ ಹಾಕಬಲ್ಲರು, ಅಗತ್ಯವೆನಿಸಿದರೆ ಕೊಂಡಾಡಲೂ ಬಲ್ಲರು. ಉಕ್ರೇನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸದಿದ್ದರೆ, ರಷ್ಯಾ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡುವ ಮೂಲಕ ಟ್ರಂಪ್ ಅವರು ಈಗಾಗಲೇ ಮಾತುಕತೆಗೆ ‘ವೇದಿಕೆ’ಯನ್ನೂ ಸಜ್ಜುಗೊಳಿಸಿದ್ದಾರೆ.
ಉಕ್ರೇನ್ ಜತೆಗೆ ಯುದ್ಧ ಆರಂಭಿಸಿದ ದಿನದಿಂದ ಪುಟಿನ್ ಅವರನ್ನು ಏಕಾಂಗಿಯನ್ನಾಗಿಸಲು ಪಶ್ಚಿಮದ ರಾಷ್ಟ್ರಗಳು ಪ್ರಯತ್ನಿಸುತ್ತಲೇ ಇವೆ. ಆದರೂ ಯಶಸ್ಸು ಸಿಕ್ಕಿಲ್ಲ. ಅಲಾಸ್ಕಾದಲ್ಲಿ ಸಭೆ ನಡೆಸಿದ ನಂತರ ಜಂಟಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಇಬ್ಬರೂ ನಾಯಕರು ಮಾತನಾಡಲಿದ್ದಾರೆ. ‘ವಿಶ್ವದ ದೊಡ್ಡಣ್ಣ’ನೊಂದಿಗೆ ವೇದಿಕೆ ಹಂಚಿಕೊಳ್ಳುವ ಮೂಲಕ ರಷ್ಯಾವನ್ನು ಮತ್ತೆ ಜಾಗತಿಕ ಮಟ್ಟದಲ್ಲಿ ಮುನ್ನೆಲೆಗೆ ತರುವುದು ಪುಟಿನ್ ಲೆಕ್ಕಾಚಾರ. ಈ ಮಾತುಕತೆಯ ಮೂಲಕ ರಷ್ಯಾ ಮತ್ತೆ ಜಾಗತಿಕ ರಾಜಕಾರಣದಲ್ಲಿ ಮಹತ್ವದ ಸ್ಥಾನ ಪಡೆಯಬಹುದು ಎನ್ನುವ ನಿರೀಕ್ಷೆ ಅವರಲ್ಲಿದೆ.
ಸಭೆ ನಡೆಯುತ್ತಿರುವ ಸ್ಥಳವೂ ಮಹತ್ವ ಪಡೆದಿದೆ. ಸಭೆಯು ಅಲಾಸ್ಕದ ಆಂಕರೇಜ್ ನಗರದ ಎಲ್ಮೆನ್‌ಡೋರ್ಫ್–ರಿಚರ್ಡ್‌ಸನ್ ಜಂಟಿ ಸೇನಾ ನೆಲೆಯಲ್ಲಿ ನಡೆಯಲಿದೆ. ಅದು ರಷ್ಯಾದ ಚುಕೊಟ್ಕಾದಿಂದ ಕೇವಲ 90 ಕಿ.ಮೀ. ದೂರ ಇದ್ದು, ತನ್ನ ವಿರೋಧಿ ರಾಷ್ಟ್ರಗಳ ವ್ಯಾಪ್ತಿಯಲ್ಲಿ ಹಾರದೆಯೇ ಪುಟಿನ್ ಅಲ್ಲಿಗೆ ತಲುಪಬಹುದಾಗಿದೆ. ಜತೆಗೆ, ಅದು ಉಕ್ರೇನ್ ಮತ್ತು ಯುರೋಪ್‌ನಿಂದ ಬಹಳ ದೂರ ಇದೆ. ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮತ್ತು ಐರೋಪ್ಯ ಒಕ್ಕೂಟದ ಮುಖಂಡರನ್ನು ದೂರವಿಟ್ಟು, ಅಮೆರಿಕದೊಂದಿಗೆ ನೇರವಾಗಿ ಮಾತುಕತೆ ನಡೆಸುವ ರಷ್ಯಾದ ಬಯಕೆಗೆ ತಕ್ಕಂತೆ ಸ್ಥಳವನ್ನು ಆಯ್ಕೆ ಮಾಡಲಾಗಿದೆ.
ಅಲಾಸ್ಕವು 19ನೇ ಶತಮಾನದ ಮಧ್ಯದವರೆಗೂ ರಷ್ಯಾಕ್ಕೆ ಸೇರಿತ್ತು. 1867ರಲ್ಲಿ ಅದನ್ನು ಅಮೆರಿಕಕ್ಕೆ ಮಾರಾಟ ಮಾಡಲಾಗಿತ್ತು; ಅದು ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ. ಆ ಕಾಲಕ್ಕೆ 72 ಲಕ್ಷ ಡಾಲರ್ (ಈಗಿನ ಮೌಲ್ಯ 16 ಕೋಟಿ ಡಾಲರ್ ಅಂದರೆ ₹1,400 ಕೋಟಿ) ನೀಡಿ ಅಮೆರಿಕ ಖರೀದಿ ಮಾಡಿತ್ತು. ಅದೀಗ ಅಮೆರಿಕದ ಅತಿ ದೊಡ್ಡ ರಾಜ್ಯ. ಅಮೆರಿಕಕ್ಕೆ ಮಾರಾಟ ಮಾಡಿದ ಬಳಿಕ ಅಲಾಸ್ಕಕ್ಕೆ ಭೇಟಿ ನೀಡುತ್ತಿರುವ ರಷ್ಯಾದ ಮೊದಲ ಅಧ್ಯಕ್ಷ ಪುಟಿನ್.
ಅಲಾಸ್ಕ ಎಲ್ಲಿದೆ?
ಒಂದು ದೇಶದ ಒಂದು ಭಾಗವು ಕಾಲಾಂತರದಲ್ಲಿ ಇನ್ನೊಂದು ದೇಶಕ್ಕೆ ಸೇರಬಹುದು ಎನ್ನುವುದನ್ನು ಅಲಾಸ್ಕ ಸಂಕೇತಿಸುತ್ತದೆ. ಇದೇ ರೀತಿ, ಉಕ್ರೇನ್‌ನ ನಾಲ್ಕು ಪ್ರಾಂತ್ಯಗಳನ್ನು ವಶಕ್ಕೆ ಪಡೆದಿರುವ ರಷ್ಯಾ, ಆ ಪ್ರಾಂತ್ಯಗಳು ತನಗೇ ಬೇಕು ಎಂದು ಪಟ್ಟು ಹಿಡಿದಿದೆ. ಆದರೆ, ಉಕ್ರೇನ್ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ವಿಚಾರದ ಬಗ್ಗೆಯೂ ಮಾತುಕತೆ ನಡೆಯಲಿದೆ.
ಈ ವಿಚಾರದಲ್ಲಿ ಟ್ರಂಪ್ ಅವರ ಬೆಂಬಲ ಪಡೆಯುವಲ್ಲಿ ರಷ್ಯಾ ಒಂದು ವೇಳೆ ಯಶಸ್ವಿಯಾದರೂ ಉಕ್ರೇನ್ ಅದಕ್ಕೆ ಸಮ್ಮತಿಸುವುದು ಅನುಮಾನ. ಆಗ ಅಮೆರಿಕವು ಉಕ್ರೇನ್ ಅನ್ನು ಬೆಂಬಲಿಸುವುದರಿಂದ ಹಿಂದೆ ಸರಿಯುತ್ತದೆ. ನಂತರ ರಷ್ಯಾ ಅಮೆರಿಕದೊಂದಿಗೆ ಆರ್ಥಿಕ ಸಹಕಾರವೂ ಸೇರಿದಂತೆ ಸಂಬಂಧ ವೃದ್ಧಿಗೆ ಪ್ರಯತ್ನಿಸಬಹುದು ಎನ್ನುವುದು ಪುಟಿನ್ ಲೆಕ್ಕಾಚಾರ ಎನ್ನಲಾಗಿದೆ.
ಇನ್ನೊಂದು ಸಾಧ್ಯತೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಪ್ರಸ್ತುತ, ರಷ್ಯಾದ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಬಜೆಟ್‌ನ ಕೊರತೆ ಹೆಚ್ಚಾಗುತ್ತಿದ್ದು, ಇಂಧನ ಮತ್ತು ಅನಿಲದ ರಫ್ತಿನ ಆದಾಯವೂ ಕುಸಿಯುತ್ತಿದೆ. ಈ ದಿಸೆಯಲ್ಲಿ ಪುಟಿನ್ ಅವರು ಯುದ್ಧ ಅಂತ್ಯ ಮಾಡುವುದಕ್ಕೆ ಸಮ್ಮತಿಸಲೂಬಹುದು. ಆದರೆ, ಇದು ಅತ್ಯಂತ ಕ್ಷೀಣ ಸಾಧ್ಯತೆ ಎನ್ನಲಾಗುತ್ತಿದೆ.
ಈ ಮಾತುಕತೆಯಿಂದ ಉಕ್ರೇನ್ ದೂರ ಉಳಿದಿದೆ. ಪುಟಿನ್ ಜತೆಗಿನ ಮಾತುಕತೆ ಯಶಸ್ವಿಯಾದರೆ, ಅದರ ಹಿಂದೆಯೇ ಝೆಲೆನ್‌ಸ್ಕಿ ಅವರನ್ನೂ ಕೂರಿಸಿಕೊಂಡು ಮಾತುಕತೆ ನಡೆಸಲಾಗುವುದು ಎಂದು ಟ್ರಂಪ್ ಹೇಳಿದ್ದರು. ನಂತರ ತಮ್ಮ ಮಾತನ್ನು ಬದಲಾಯಿಸಿರುವ ಅವರು, ಎರಡನೇ ಸುತ್ತಿನ ಮಾತುಕತೆ ಇರುವುದಿಲ್ಲ ಎಂದಿದ್ದಾರೆ.
ರಷ್ಯಾ ಮತ್ತು ಅಮೆರಿಕ ವಿರುದ್ಧ ಧ್ರುವಗಳಲ್ಲಿರುವ ರಾಷ್ಟ್ರಗಳು. ಇಷ್ಟಾದರೂ ಪುಟಿನ್ ಅವರ ಬಗ್ಗೆ ಟ್ರಂಪ್ ಅವರಿಗೆ ಮೊದಲಿನಿಂದಲೂ ಮೃದು ಧೋರಣೆ ಇದೆ. ರಷ್ಯಾ–ಉಕ್ರೇನ್ ಯುದ್ಧದ ಜತೆಗೆ ಶಸ್ತ್ರಾಸ್ತ್ರ ಖರೀದಿಯ ಬಗ್ಗೆಯೂ ಮಾತುಕತೆ ನಡೆಯಲಿದೆ ಎನ್ನುವ ಸುದ್ದಿ ಇದೆ.
ಉಕ್ರೇನ್ ಜೊತೆ ಗಡಿ ಹಂಚಿಕೊಂಡಿರುವ ರಷ್ಯಾವು ಉಕ್ರೇನ್‌ನ ಪೂರ್ವಕ್ಕಿರುವ ಹಲವು ಪ್ರದೇಶಗಳನ್ನು ತನ್ನದೆಂದು ವಾದಿಸುತ್ತಿದೆ. ಪ್ರಸ್ತುತ ಅದು ಉಕ್ರೇನ್‌ನ ಶೇ 19ರಷ್ಟು ಭೂಮಿಯನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ಕ್ರಿಮಿಯಾ, ಲುಹಾನ್‌ಸ್ಕ್ ಪ್ರಾಂತ್ಯಗಳ ಮೇಲೆ ಸಂಪೂರ್ಣ ಹಿಡಿತ ಹೊಂದಿದೆ. ಡೊನೆಟ್‌ಸ್ಕ್, ಝಪೊರಿಝ್ಝಿಯಾ ಮತ್ತು ಖೆರ್ಸನ್ ಪ್ರಾಂತ್ಯಗಳ ಶೇ 70ರಷ್ಟು ಭೂಭಾಗವನ್ನು ಆಕ್ರಮಿಸಿಕೊಂಡಿದೆ. ಹಾರ್ಕಿವ್, ಸುಮಿ, ಮೈಕೊಲೈವ್ ಮತ್ತು ನಿಪ್ರೊಪೆಟ್ರೊವ್‌ಸ್ಕ್ ಪ್ರಾಂತ್ಯಗಳ ಕೆಲವು ಭೂಭಾಗಗಳ ಮೇಲೆ ನಿಯಂತ್ರಣ ಸಾಧಿಸಿದೆ. ಈಗ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲೂ ರಷ್ಯಾ ಪಡೆಗಳು ಹಂತ ಹಂತವಾಗಿ ಉಕ್ರೇನ್‌ನ ವಿವಿಧ ಜನ ವಸತಿ ಹಾಗೂ ಇತರ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸುತ್ತಾ ಬಂದಿವೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆ, ಕದನ ವಿರಾಮದ ಪ್ರಸ್ತಾಪವಾದಗಲ್ಲೆಲ್ಲಾ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ನಾಲ್ಕು ಬೇಡಿಕೆಗಳನ್ನು ಮುಂದಿಡುತ್ತಾ ಬಂದಿದ್ದಾರೆ.
ರಷ್ಯಾ ನಿಯಂತ್ರಣದಲ್ಲಿರುವ ಪ್ರದೇಶಗಳು ಮತ್ತು ಅದು ತನ್ನದೆಂದು ಹೇಳಿಕೊಳ್ಳುವ ಉಕ್ರೇನ್‌ನ ಭೂಭಾಗವನ್ನು ತನಗೆ ನೀಡಬೇಕು.
ಉಕ್ರೇನ್‌ಗೆ ಪಶ್ಚಿಮದ ರಾಷ್ಟ್ರಗಳು ನೀಡುತ್ತಿರುವ ನೆರವನ್ನು ನಿಲ್ಲಿಸಬೇಕು.
ಉಕ್ರೇನ್ ಯಾವುದೇ ಕಾರಣಕ್ಕೂ ನ್ಯಾಟೊ ರಾಷ್ಟ್ರಗಳ ಗುಂಪಿಗೆ ಸೇರಬಾರದು. ನ್ಯಾಟೊ ಕೂಡ ಉಕ್ರೇನ್‌ಗೆ ಆಹ್ವಾನ ನೀಡಬಾರದು.
ಉಕ್ರೇನ್‌ನಲ್ಲಿ ನಾಯಕತ್ವ ಬದಲಾವಣೆಯಾಗಬೇಕು
ರಷ್ಯಾದ ವಶದಲ್ಲಿರುವ ಉಕ್ರೇನ್ ಪ್ರದೇಶಗಳು
ಮೇನಲ್ಲಿ ನಡೆದಿದ್ದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಸಂಘರ್ಷವೂ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳ ನಡುವಿನ ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಡೊನಾಲ್ಡ್ ಟ್ರಂಪ್ ಚುನಾವಣೆಗೂ ಮುನ್ನವೇ, ರಷ್ಯಾ–ಉಕ್ರೇನ್ ಯುದ್ಧವನ್ನು ನಿಲ್ಲಿಸುವುದಾಗಿ ಹೇಳುತ್ತಾ ಬಂದಿದ್ದರು. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದಕ್ಕೆ ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರು. ಆದರೆ, ರಷ್ಯಾ ಒಪ್ಪದೇ ಇದ್ದುದರಿಂದ ಆ ಪ್ರಯತ್ನಗಳು ವಿಫಲವಾಗಿದ್ದವು. ಇದು ಟ್ರಂಪ್ ಅವರನ್ನು ಕೆರಳಿಸಿತ್ತು. ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಅವರು ಹೇರಿದ್ದರು. ಆರಂಭದಿಂದಲೂ ಉಕ್ರೇನ್‌ಗೆ ಸೇನಾ ನೆರವು ನೀಡುತ್ತಾ ಬಂದಿರುವ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಿಗೂ ಯುದ್ಧ ನಿಲ್ಲುವುದು ಬೇಕಾಗಿದೆ. ಆದರೆ, ರಷ್ಯಾ ಒಪ್ಪದಿರುವುದರಿಂದ ಯುದ್ಧ ನಿಲ್ಲುತ್ತಿಲ್ಲ. ಈಗ ಮತ್ತೆ ಟ್ರಂಪ್ ಅವರು ನೇರವಾಗಿ ರಷ್ಯಾದೊಂದಿಗೆ ಮಾತುಕತೆ ನಡೆಸುವ ಮೂಲಕ ಯುದ್ಧವನ್ನು ನಿಲ್ಲಿಸುವ ಪ್ರಯತ್ನ ನಡೆಸಲಿದ್ದಾರೆ. ನೊಬೆಲ್ ಶಾಂತಿ ಪುರಸ್ಕಾರದ ಮೇಲೆ ಕಣ್ಣಿಟ್ಟಿರುವ ಟ್ರಂಪ್ ಅವರೇ ಮಾತುಕತೆಗೆ ವೇದಿಕೆ ಸಿದ್ಧಪಡಿಸಿದ್ದು, ಒಂದು ವೇಳೆ ಮುರಿದು ಬಿದ್ದರೆ ಜಾಗತಿಕ ಮಟ್ಟದಲ್ಲಿ ಅವರಿಗೆ ಮುಖಭಂಗವಾಗಲಿದೆ ಎಂದು ಹೇಳಲಾಗುತ್ತಿದೆ.
ಆಧಾರ: ಪಿಟಿಐ, ರಾಯಿಟರ್ಸ್, ಬಿಬಿಸಿ, ದಿ ನ್ಯೂಯಾರ್ಕ್ ಟೈಮ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.