ರಾಜ್ಯ ಸರ್ಕಾರವು ಕಾರ್ಮಿಕ ಕಾಯ್ದೆ–1948 ಮತ್ತು ಅದರ ಅಡಿಯಲ್ಲಿ ಬರುವ 1969ರ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಹೊರಟಿದೆ. ಉದ್ಯಮರಂಗಕ್ಕೆ ಅನುಕೂಲ ಕಲ್ಪಿಸಲು ನಿಯಮಗಳನ್ನು ಸರಳೀಕರಿಸುವುದು ಮತ್ತು ನಿಯಂತ್ರಣ ಮುಕ್ತಗೊಳಿಸುವುದು ಸರ್ಕಾರದ ಉದ್ದೇಶ. ಆದರೆ, ಕಾರ್ಮಿಕ ಸಂಘಟನೆಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರ್ಕಾರವು 2020ರಲ್ಲಿ ರೂಪಿಸಿದ್ದ ಕಾರ್ಮಿಕ ಸಂಹಿತೆಗಳಿಗೆ ತಕ್ಕಂತೆ, ಕಾರ್ಖಾನೆ ಮಾಲೀಕರ ಪರವಾಗಿ ರಾಜ್ಯವು ತಿದ್ದುಪಡಿ ತರಲು ಹೊರಟಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದ್ದಾರೆ
–––––––––
ರಾಜ್ಯ ಸರ್ಕಾರವು ‘ಕಾರ್ಖಾನೆಗಳ ಕಾಯ್ದೆ –1948’ ಅಡಿಯಲ್ಲಿನ ಕರ್ನಾಟಕ ಕಾರ್ಖಾನೆಗಳ ನಿಯಮಾವಳಿಗಳಿಗೆ (1969) ತಿದ್ದುಪಡಿ ತರಲು ಹೊರಟಿದೆ. ಈ ಬಗ್ಗೆ ಚರ್ಚಿಸಲು ಮತ್ತು ಅಭಿಪ್ರಾಯ ಸಂಗ್ರಹಿಸಲು ಗುರುವಾರ (ಮೇ 8) ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಭೆ ಕರೆದಿದೆ. ಆದರೆ, ಕಾರ್ಮಿಕ ಸಂಘಟನೆಗಳು ಸಭೆ ಕರೆದಿರುವ ರೀತಿಯ ಬಗ್ಗೆಯೇ ಆಕ್ಷೇಪಣೆ ಎತ್ತಿದ್ದು, ರಾಜ್ಯ ಸರ್ಕಾರವು ಉದ್ಯಮಿಗಳ ಲಾಬಿಗೆ ಮಣಿದಿದೆ ಎಂದು ಆರೋಪಿಸಿವೆ.
ಸಭೆಗೆ ಕಾರ್ಯಸೂಚಿಯನ್ನೂ ಇಲಾಖೆ ಪ್ರಕಟಿಸಿದೆ. ಅಪಾಯಕಾರಿ ತಯಾರಿಕಾ ಕಾರ್ಯದಲ್ಲಿ ಮಹಿಳಾ ಕಾರ್ಮಿಕರ ನೇಮಕಾತಿಗೆ ಇರುವ ನಿರ್ಬಂಧವನ್ನು ತೆಗೆದುಹಾಕುವುದು, ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರನ್ನು ನೇಮಿಸಿಕೊಳ್ಳಲು ವಿಧಿಸಲಾಗಿರುವ ನಿಬಂಧನೆಗಳನ್ನು ಬದಲಾಯಿಸುವುದು, ಕಾರ್ಮಿಕರ ದೈನಂದಿನ ಕೆಲಸದ ಅವಧಿಯನ್ನು ಹೆಚ್ಚಿಸುವುದೂ ಸೇರಿದಂತೆ ನಾಲ್ಕೈದು ಅಂಶಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಈ ಬದಲಾವಣೆಗಳು 2020–21ರಲ್ಲಿ ಕೇಂದ್ರ ಸರ್ಕಾರವು ರೂಪಿಸಿದ್ದ ಕಾರ್ಮಿಕ ಸಂಹಿತೆಗಳಿಗೆ ತಕ್ಕಂತಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ದೂರಿದೆ.
ಕಾರ್ಮಿಕ ಕಾನೂನುಗಳಿಗೆ ಬದಲಾವಣೆ ತರುವ ದಿಸೆಯಲ್ಲಿ ಕೇಂದ್ರ ಸರ್ಕಾರವು ನಾಲ್ಕು ಕಾನೂನು ಸಂಹಿತೆಗಳನ್ನು– ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಕೆಲಸದ ಸ್ಥಳದಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಸ್ಥಿತಿಗತಿ ಸಂಹಿತೆ ಮತ್ತು ಸಾಮಾಜಿಕ ಭದ್ರತಾ ಸಂಹಿತೆ– ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದಿತ್ತು. ಅವುಗಳ ಅನ್ವಯ ನಿಯಮಗಳನ್ನೂ ರೂಪಿಸಿತ್ತು. ಆದರೆ, ಕಾರ್ಮಿಕ ಕಾನೂನು ಸಮವರ್ತಿ ಪಟ್ಟಿಯಲ್ಲಿರುವುದರಿಂದ ನಿಯಮಗಳು ಜಾರಿಯಾಗಬೇಕು ಎಂದರೆ, ರಾಜ್ಯ ಸರ್ಕಾರಗಳೇ ಅಧಿಸೂಚನೆ ಹೊರಡಿಸಬೇಕು. ಬಹುತೇಕ ರಾಜ್ಯಗಳು ಈ ಸಂಬಂಧ ಕರಡು ನಿಯಮಗಳನ್ನು ಪ್ರಕಟಿಸಿದ್ದವು. ಕರ್ನಾಟಕವೂ ಎರಡು ಸಂಹಿತೆಗಳಿಗೆ ಸಂಬಂಧಿಸಿದ ಕರಡು ನಿಯಮಗಳನ್ನು 2021ರ ಮಾರ್ಚ್‌ನಲ್ಲಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಸಲ್ಲಿಸಲು 45 ದಿನ ಕಾಲಾವಕಾಶ ನೀಡಿತ್ತು. ಆದರೆ, ನಂತರ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರವು ಕಾರ್ಖಾನೆ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ಮುಂದಾಗಿದೆ ಎಂದು ಕಾರ್ಮಿಕ ಮುಖಂಡರು ವಿಶ್ಲೇಷಿಸುತ್ತಿದ್ದಾರೆ.
ಕೆಲಸದ ಅವಧಿ ವಿಸ್ತರಣೆ
ಕಾರ್ಖಾನೆಗಳ ಕಾಯ್ದೆ 1948ರ ಪ್ರಕಾರ, ಕಾರ್ಮಿಕ ವಾರಕ್ಕೆ 48 ಗಂಟೆ ಕೆಲಸ ಮಾಡಬೇಕು (ಸೆಕ್ಷನ್ 51) ಮತ್ತು ಅವರ ದೈನಂದಿನ ಕೆಲಸದ ಅವಧಿ 9 ಗಂಟೆ ಮೀರುವಂತಿಲ್ಲ (ಸೆಕ್ಷನ್ 54). ಕೇಂದ್ರವು ರೂಪಿಸಿದ್ದ ಕಾರ್ಮಿಕ ಸಂಹಿತೆಯಲ್ಲಿ ಇರುವ ಅಂಶಗಳ ಪೈಕಿ ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆವರೆಗೆ ವಿಸ್ತರಿಸುವುದೂ ಒಂದಾಗಿದೆ. ಅದಕ್ಕೆ ತಕ್ಕಂತೆ ಕರ್ನಾಟಕ ಸರ್ಕಾರವು 2023ರಲ್ಲಿ ‘ಕಾರ್ಖಾನೆಗಳ ಕಾಯ್ದೆ 1948’ಕ್ಕೆ ತಿದ್ದುಪಡಿ ತಂದಿತ್ತು. ಅದರಲ್ಲಿ ವಾರಕ್ಕೆ 48 ಗಂಟೆಗಳ ಮಿತಿಯಲ್ಲೇ ಕಾರ್ಮಿಕರು ದಿನಕ್ಕೆ 12 ಗಂಟೆಯವರೆಗೆ ಕೆಲಸ ಮಾಡಲು ಅವಕಾಶ ಕಲ್ಪಿಸುವ ನಿಯಮವನ್ನು ಅಳವಡಿಸಿತ್ತು.
ರಾಜ್ಯ ಸರ್ಕಾರವು ಕೆಲಸದ ಅವಧಿ ವಿಸ್ತರಣೆಗೆ ಮತ್ತು ಮಹಿಳೆಯರಿಗೆ ರಾತ್ರಿಪಾಳಿ ಕೆಲಸಕ್ಕೆ ಕಾರ್ಮಿಕರ ಒಪ್ಪಿಗೆ ಬೇಕು ಎಂಬ ಷರತ್ತು ಹಾಕಿತ್ತು. ಕಾರ್ಖಾನೆಗಳು ಬಲವಂತದಿಂದ ಕಾರ್ಮಿಕರ ಒಪ್ಪಿಗೆ ಪಡೆಯುತ್ತವೆ ಎಂದು ಸಿಐಟಿಯು ಅನುಮಾನ ವ್ಯಕ್ತಪಡಿಸಿತ್ತು. ಈಗ ಒಪ್ಪಿಗೆಯ ಷರತ್ತನ್ನೂ ಕೈಬಿಡುವ ಷಡ್ಯಂತ್ರ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಬೃಹತ್ ತಯಾರಿಕಾ ಗುರಿ ನಿಗದಿಪಡಿಸಿ, ಅದು ಈಡೇರಲು ಕಾರ್ಮಿಕರನ್ನು 12 ಗಂಟೆ ದುಡಿಸಿಕೊಳ್ಳಲು ಅನುಮತಿ ನೀಡುವುದು ಕಾರ್ಮಿಕ ವಿರೋಧಿ ನೀತಿಯಾಗುತ್ತದೆ; ವಾರಕ್ಕೆ ಎರಡು ದಿನ ರಜೆ ನೀಡುತ್ತೇವೆ ಎನ್ನುವುದು ಸುಳ್ಳು ಮತ್ತು ಅಪ್ರಾಯೋಗಿಕ. ಕಾರ್ಖಾನೆ ಮಾಲೀಕರ ಲಾಬಿಗೆ ಮಣಿದು ರಾಜ್ಯ ಸರ್ಕಾರವು ನಿಯಮಗಳ ತಿದ್ದುಪಡಿಗೆ ಹೊರಟಿದೆ ಎನ್ನುವುದು ಕಾರ್ಮಿಕ ಸಂಘಟನೆಗಳ ಆರೋಪ.
ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ
* 1948ರ ಕಾರ್ಖಾನೆಗಳ ಕಾಯ್ದೆಯ 66ನೇ ಸೆಕ್ಷನ್, ಕಾರ್ಖಾನೆಗಳಲ್ಲಿ ಮಹಿಳೆಯರನ್ನು ರಾತ್ರಿ ಪಾಳಿಯ ಕೆಲಸಕ್ಕೆ ನಿಯೋಜಿಸುವುದನ್ನು ನಿರ್ಬಂಧಿಸುತ್ತದೆ. ಅದರ ಪ್ರಕಾರ, ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 7 ಗಂಟೆಯ ನಡುವಿನ ಅವಧಿ ಬಿಟ್ಟು ಬೇರೆ ಸಮಯದಲ್ಲಿ ಯಾವುದೇ ಮಹಿಳೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ ಅಥವಾ ಮಹಿಳೆಯನ್ನು ಕೆಲಸಕ್ಕೆ ನಿಯೋಜಿಸುವಂತಿಲ್ಲ
* ರಾಜ್ಯ ಸರ್ಕಾರ 2023ರಲ್ಲಿ ಜಾರಿಗೆ ತಂದಿರುವ ತಿದ್ದುಪಡಿ ಕಾಯ್ದೆಯಲ್ಲಿ ಈ 66ನೇ ಸೆಕ್ಷನ್‌ಗೆ ತಿದ್ದುಪಡಿ ಮಾಡಲಾಗಿದೆ. ಅದರಲ್ಲಿ ಉಪ ಸೆಕ್ಷನ್‌ಗಳನ್ನು ಸೇರಿಸಲಾಗಿದ್ದು, ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ವಿವಿಧ ಷರತ್ತುಗಳನ್ನು ಪಾಲಿಸಿದರೆ, ಮಹಿಳೆಯರನ್ನು ರಾತ್ರಿ ಪಾಳಿಗೂ ನೇಮಕ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ
ಪ್ರಮುಖ ಷರತ್ತುಗಳು ಇಂತಿವೆ...
(i) ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳವನ್ನು ತಡೆಯುವುದು ಕಾರ್ಖಾನೆ ಮಾಲೀಕರು ಅಥವಾ ಇತರೆ ಜವಾಬ್ದಾರಿಯುತ ವ್ಯಕ್ತಿಗಳ ಕರ್ತವ್ಯ. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು
(ii) ನೇರವಾಗಿ ಲೈಂಗಿಕ ವರ್ತನೆ ಅಥವಾ ಯಾವುದೇ ರೂಪದ ಲೈಂಗಿಕ ಕಿರುಕುಳವನ್ನು ನಿರ್ಬಂಧಿಸಬೇಕು
(iii) ಮಹಿಳೆಯರಿಗೆ ಕೆಲಸಕ್ಕೆ ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಬೇಕು. ವಿಶ್ರಾಂತಿ, ಆರೋಗ್ಯ, ಸ್ವಚ್ಛತೆ ಸೌಲಭ್ಯ ಕಲ್ಪಿಸಬೇಕು
(iv) ಮಾಲೀಕರು ಕಾರ್ಖಾನೆಯಲ್ಲಿ ದೂರು ಪರಿಹಾರ ವ್ಯವಸ್ಥೆಯನ್ನು ರೂಪಿಸಬೇಕು. ಈ ವ್ಯವಸ್ಥೆಯು ನಿಗದಿತ ಸಮಯದ ಒಳಗಾಗಿ ದೂರನ್ನು ಇತ್ಯರ್ಥಪಡಿಸಬೇಕು
(v) ಕಾರ್ಮಿಕರ ಸಭೆ ಅಥವಾ ಇನ್ನಿತರ ವೇದಿಕೆಗಳಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಪ್ರಸ್ತಾಪಿಸಲು ಮಹಿಳಾ ಉದ್ಯೋಗಿಗಳಿಗೆ ಅವಕಾಶ ನೀಡಬೇಕು
(vi) ಕಾರ್ಖಾನೆಯ ಒಳಗೆ ಮಾತ್ರವಲ್ಲದೆ ಹೊರ ಆವರಣ ಮತ್ತು ಮಹಿಳಾ ಕಾರ್ಮಿಕರು ಓಡಾಡುವ ಜಾಗದಲ್ಲೆಲ್ಲ ಸಾಕಷ್ಟು ಬೆಳಕಿನ ವ್ಯವಸ್ಥೆ ಮತ್ತು ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆಯನ್ನು ಮಾಲೀಕರು ಮಾಡಬೇಕು
(vii) ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರು ಒಂದು ತಂಡದಲ್ಲಿ ಕನಿಷ್ಠ 10 ಜನರು ಇರುವುದನ್ನು ಖಾತ್ರಿಪಡಿಸಬೇಕು
ಅಪಾಯಕಾರಿ ಕೆಲಸದಲ್ಲಿ ಮಹಿಳೆಯರ ತೊಡಗುವಿಕೆ
* 1948ರ ಕಾಯ್ದೆಯ ಸೆಕ್ಷನ್ 87, ಅಪಾಯಕಾರಿ ಕೆಲಸಗಳ ಕುರಿತಾಗಿ ಇದೆ. 1969ರ ಕರ್ನಾಟಕ ಕಾರ್ಖಾನೆಗಳ ನಿಯಮಾವಳಿಗಳಲ್ಲಿ 87ನೇ ನಿಯಮ ಕೂಡ ಇದರ ಬಗ್ಗೆಯೇ ಇದೆ. ಅವುಗಳ ಪ್ರಕಾರ, ಅಪಾಯಕಾರಿ ಎಂದು ಘೋಷಿಸಲಾದ ಕೆಲವು ಕೆಲಸಗಳನ್ನು ಮಾಡುವುದಕ್ಕೆ ಮಹಿಳೆಯರನ್ನು ನಿಯೋಜಿಸಬಾರದು. ಉದಾ: ಸೋಡಾ ಸೇರಿದಂತೆ ಇನ್ನಿತರ ಏರೇಟೆಡ್ ನೀರಿನ ತಯಾರಿಕೆ, ಗಾಜು ತಯಾರಿಕೆ, ಲೋಹಗಳಿಗೆ ಹೊಳಪು ನೀಡುವುದು, ಸತುವಿನ ಸಂಸ್ಕರಣೆ ಇತ್ಯಾದಿ
* ಸುರಕ್ಷತಾ ವಿಧಾನಗಳನ್ನು ಅನುಸರಿಸಿ ಇಂತಹ ಅಪಾಯಕಾರಿ ಎಂದು ಘೋಷಿಸಲಾದ ಕೆಲಸಗಳನ್ನು ಮಾಡಲು ಮಹಿಳೆಯರಿಗೆ ಅವಕಾಶ ನೀಡಲು ಸರ್ಕಾರ ಮುಂದಾಗಿದೆ ಎಂಬುದು ಕಾರ್ಮಿಕ ಸಂಘಟನೆಗಳ ದೂರು
ಸಂಹಿತೆ ಏನು ಹೇಳುತ್ತದೆ?
* ಕೇಂದ್ರ ಸರ್ಕಾರವು ರೂಪಿಸಿರುವ ‘ಕೆಲಸ ಸ್ಥಳದಲ್ಲಿ ಸುರಕ್ಷತೆ ಮತ್ತು ಆರೋಗ್ಯ ಹಾಗೂ ಸ್ಥಿತಿಗತಿ ಸಂಹಿತೆ’ಯು ಎಲ್ಲ ರೀತಿಯ ಕಾರ್ಖಾನೆಗಳಲ್ಲಿ ಯಾವುದೇ ರೀತಿಯ ಕೆಲಸಗಳನ್ನು ಮಹಿಳೆಯರು ಮಾಡಬಹುದು
* ಬೆಳಿಗ್ಗೆ 6 ಗಂಟೆಗಿಂತ ಮೊದಲು ಮತ್ತು ರಾತ್ರಿ 7 ಗಂಟೆಯ ನಂತರವೂ ಅವರು ಕೆಲಸ ಮಾಡಬಹುದು. ಆದರೆ, ಇದಕ್ಕಾಗಿ ಮಹಿಳೆಯರ ಒಪ್ಪಿಗೆ ಬೇಕು. ಒಂದು ವೇಳೆ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಅಥವಾ ಯಾವುದೇ ರೀತಿಯ ಕೆಲಸಕ್ಕೆ ನಿಯೋಜಿಸುವುದಕ್ಕೂ ಮೊದಲು ಸುರಕ್ಷತೆ, ರಜೆಗಳು, ಕೆಲಸದ ಅವಧಿ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಸರ್ಕಾರಗಳು ನೀಡುವಂತಹ ನಿರ್ದೇಶನಗಳನ್ನು ಮಾಲೀಕರು ಕಡ್ಡಾಯವಾಗಿ ಪಾಲಿಸಬೇಕು ಎಂದೂ ಸಂಹಿತೆಯಲ್ಲಿ ಹೇಳಲಾಗಿದೆ
* ಅಪಾಯಕಾರಿ ಎಂದು ಗುರುತಿಸಲಾದ ಕೆಲಸಕ್ಕೆ ಮಹಿಳೆಯರನ್ನು
ನೇಮಿಸಿಕೊಳ್ಳುವುದಕ್ಕೂ ಮುನ್ನ ಅವರ ಸುರಕ್ಷತೆಗೆ ಬೇಕಾದ ಎಲ್ಲ ಕ್ರಮಗಳನ್ನೂ ಕಾರ್ಖಾನೆಗಳು ಕೈಗೊಳ್ಳಬೇಕು
ಅಧಿಕಾರಿಗಳು ಹೇಳುವುದೇನು?
‘ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬರಲಿವೆ. ಅಪಾಯಕಾರಿ ಕೆಲಸಗಳಲ್ಲಿ ಮಹಿಳಾ ಕಾರ್ಮಿಕರ ನೇಮಕಾತಿಗೆ ಇರುವ ನಿರ್ಬಂಧವನ್ನು ತೆಗೆದು ಹಾಕುವುದೂ ಅದರಲ್ಲೊಂದು. ಸಭೆಯಲ್ಲಿ ಸಂಘಟನೆಗಳ ಅಭಿಪ್ರಾಯವನ್ನು ಕೇಳಲಿದ್ದೇವೆ. ಮಹಿಳಾ ಕಾರ್ಮಿಕರನ್ನು ಅಪಾಯಕ್ಕೆ ದೂಡುವ ವಿಚಾರ ಇದಲ್ಲ. ಈಗ ಆಧುನಿಕ ಸುರಕ್ಷತಾ ಕ್ರಮಗಳು ಬಂದಿರುವುದರಿಂದ ಅವುಗಳನ್ನು ಬಳಸಿ ಅಪಾಯವಿಲ್ಲದಂತೆ ಕೆಲಸ ಮಾಡುವುದಕ್ಕೆ ಸಾಧ್ಯ ಇರುವಲ್ಲಿ ಮಹಿಳೆಯರಿಗೆ ಉದ್ಯೋಗ ನಿರಾಕರಣೆ ಆಗಬಾರದು ಎಂಬ ಕಾರಣಕ್ಕೆ ಆ ಅಂಶವನ್ನು ಚರ್ಚೆಗೆ ಇಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ವಾರಕ್ಕೆ 48 ಗಂಟೆ ಮೀರದಂತೆ ದೈನಂದಿನ ಕೆಲಸದ ಅವಧಿಯನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆಗಳಾಗಲಿವೆ. ಗಾರ್ಮೆಂಟ್ಸ್ ಸಹಿತ ಕೆಲವು ಕ್ಷೇತ್ರಗಳಲ್ಲಿ ವಾರಕ್ಕೆ ಎರಡು ದಿನ ರಜೆ ನೀಡಿ ಐದು ದಿನ ಕೆಲಸ ಮಾಡುವಾಗ ದಿನಕ್ಕೆ 9 ಗಂಟೆ ಕೆಲಸ ಮಾಡಿದರೆ ವಾರಕ್ಕೆ 45 ಗಂಟೆಯಷ್ಟೇ ಆಗುತ್ತದೆ. ಅದಕ್ಕೆ ದಿನಕ್ಕೆ ಒಂಬತ್ತೂವರೆ ಗಂಟೆ ಕೆಲಸ ಮಾಡಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಿಯಮಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಸಚಿವ ಸಂಪುಟ ಸಭೆ ಈ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.
––––
ಸಂಹಿತೆ ಜಾರಿಗೊಳಿಸುವ ಯತ್ನ: ಎಸ್.ವರಲಕ್ಷ್ಮಿ, ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ
ಗುರುವಾರ ಕರೆದಿರುವ ಸಭೆ ಅಭಿಪ್ರಾಯ ಸಂಗ್ರಹಿಸುವುದಕ್ಕಲ್ಲ. ಸರ್ಕಾರ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಮಹಿಳೆಯರನ್ನು ರಾತ್ರಿ ಪಾಳಿಗೆ ನೇಮಿಸುವುದು, ಅಪಾಯಕಾರಿ ಕೆಲಸದಲ್ಲಿ ಅವರನ್ನು ತೊಡಗುವಂತೆ ಮಾಡುವುದರಿಂದ ಅವರ ಸುರಕ್ಷತೆಗೆ ಧಕ್ಕೆಯಾಗುತ್ತದೆ. ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 12ಗಂಟೆವರೆಗೆ ವಿಸ್ತರಿಸುವುದಕ್ಕೂ ಸರ್ಕಾರ ಹೊರಟಿದೆ. ಕಾರ್ಮಿಕರು ಹೆಚ್ಚುವರಿ ಕೆಲಸ ಮಾಡಿದರೆ ಹೆಚ್ಚುವರಿ ವೇತನ ನೀಡುವುದಿಲ್ಲ. ಸರ್ಕಾರ ಸಂಬಂಧಿಸಿದವರಿಂದ ಅಭಿಪ್ರಾಯ ಸಂಗ್ರಹಿಸುವುದಾದರೆ ಕಾರ್ಖಾನೆಗಳ ಮಾಲೀಕರು ಮತ್ತು ಕಾರ್ಮಿಕ ಸಂಘಟನೆಗಳೊಂದಿಗೆ ಏಕಕಾಲಕ್ಕೆ ಸಭೆ ನಡೆಸುತ್ತಿತ್ತು. ಆದರೆ, ಗುರುವಾರ ಬೆಳಿಗ್ಗೆ ಮಾಲೀಕರ ಸಭೆ ನಿಗದಿಯಾಗಿದ್ದರೆ, ನಮ್ಮ ಸಭೆ ಮಧ್ಯಾಹ್ನ ನಡೆಯಲಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲು ಮುಂದಾಗಿದೆ.
-----
ಎಸ್.ವರಲಕ್ಷ್ಮಿ, ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ
‘‘ಇದು ಆಂತರಿಕ ಸಭೆ. ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸಭೆಯಲ್ಲಿ ಏನು ಚರ್ಚೆಯಾಗಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ‘‘
–ಕೆ. ಶ್ರೀನಿವಾಸ್ ನಿರ್ದೇಶಕ
ಕಾರ್ಖಾನೆಗಳು ಬಾಯ್ಲರ್‌ಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ
––––––––––
ಆಧಾರ: 1948ರ ಕಾರ್ಖಾನೆಗಳ ಕಾಯ್ದೆ 2023ರ ತಿದ್ದುಪಡಿ ಕಾಯ್ದೆ 1969ರ ಕಾರ್ಖಾನೆ ನಿಯಮಾವಳಿಗಳು ಕೆಲಸ ಸ್ಥಳದಲ್ಲಿ ಸುರಕ್ಷತೆ ಮತ್ತು ಆರೋಗ್ಯ ಹಾಗೂ ಸ್ಥಿತಿಗತಿ ಸಂಹಿತೆ
––––
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.