ADVERTISEMENT

ಆಳ ಅಗಲ | ಅನ್ನ ಚೆಲ್ಲುವ ಮುನ್ನ...

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 0:05 IST
Last Updated 15 ಏಪ್ರಿಲ್ 2025, 0:05 IST
<div class="paragraphs"><p>ಅನ್ನ ಚೆಲ್ಲುವ ಮುನ್ನ...</p></div>

ಅನ್ನ ಚೆಲ್ಲುವ ಮುನ್ನ...

   

ಭಾರತದಲ್ಲಿ ಹಸಿವಿನ ಸಮಸ್ಯೆ ತೀವ್ರವಾಗಿದೆ. ವೈರುಧ್ಯ ಏನೆಂದರೆ, ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಆಹಾರ ಚೆಲ್ಲಲಾಗುತ್ತಿದೆ. ಜಗತ್ತಿನಲ್ಲೂ ಇದು ದೊಡ್ಡ ಸಮಸ್ಯೆ. ಆಹಾರ ಹೆಚ್ಚು ಪೋಲಾಗುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಹಬ್ಬ, ಮದುವೆ, ಜಾತ್ರೆಗಳನ್ನು ಅದ್ದೂರಿಯಾಗಿ ಆಚರಿಸುವುದು ಸೇರಿದಂತೆ ಆಹಾರವು ವ್ಯರ್ಥವಾಗಲು ಅನೇಕ ಕಾರಣಗಳಿವೆ. ಇದು ಹವಾಮಾನದ ಮೇಲೆ ಪರಿಣಾಮ ಬೀರುವುದಲ್ಲದೇ, ಆರ್ಥಿಕ ನಷ್ಟ, ಸಾವು –ನೋವುಗಳನ್ನೂ ಉಂಟುಮಾಡುತ್ತಿದೆ. ಈ ಸಮಸ್ಯೆಗೆ ಭಾರತ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಬೇಕಿದೆ

ದೇಶದಲ್ಲಿ ಈಗ ಮದುವೆ ಸಮಾರಂಭಗಳ ಸಮಯ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಗ್ರಾಮ, ಪಟ್ಟಣ, ನಗರಗಳಲ್ಲಿ ಲಕ್ಷಾಂತರ ಜೋಡಿಗಳು ಸಾಂಸಾರಿಕ ಜೀವನಕ್ಕೆ ಕಾಲಿಡುತ್ತಿವೆ. ವಿವಾಹ ಸಮಾರಂಭಗಳಲ್ಲಿ ಅತಿಥಿಗಳಿಗೆ ಭೂರಿ ಭೋಜನ ವ್ಯವಸ್ಥೆ ಮಾಡುವುದು ವಧು ವರರ ಕುಟುಂಬದವರಿಗೆ ಪ್ರತಿಷ್ಠೆಯ ವಿಚಾರ. ಆದರೆ, ಬಹುತೇಕ ಮದುವೆಗಳಲ್ಲಿ ಸಿದ್ಧಪಡಿಸಿದ ಆಹಾರ ಭಾರಿ ಪ್ರಮಾಣದಲ್ಲಿ ಉಳಿದು, ಅದನ್ನು ಚೆಲ್ಲಲಾಗುತ್ತಿದೆ. ತಿನ್ನುವ ಪದಾರ್ಥಗಳನ್ನು ವ್ಯರ್ಥ ಮಾಡುವುದು ಮದುವೆ ಸಮಾರಂಭಕ್ಕಷ್ಟೇ ಸೀಮಿತವಾಗಿಲ್ಲ. ಹಬ್ಬ, ಜಾತ್ರೆ, ಇನ್ನಿತರ ಸಮಾರಂಭಗಳಲ್ಲೂ ಈ ಪ್ರವೃತ್ತಿ ಇದೆ. 

ADVERTISEMENT

ಆಹಾರವನ್ನು ಕಸದ ಬುಟ್ಟಿಗೆ ಎಸೆಯುವುದು ಭಾರತದ ಸಮಸ್ಯೆ ಮಾತ್ರವಲ್ಲ; ಅದೊಂದು ಜಾಗತಿಕ ಸಮಸ್ಯೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಆಹಾರ ವ್ಯರ್ಥ ಸೂಚ್ಯಂಕ ವರದಿ (ಎಫ್‌ಡಬ್ಲ್ಯುಐಆರ್) 2024ರ ಪ್ರಕಾರ, 2022ರಲ್ಲಿ ಜಾಗತಿಕ ಮಟ್ಟದಲ್ಲಿ 105 ಕೋಟಿ ಟನ್‌ ಆಹಾರ ಪೋಲಾಗಿದೆ. ಇದು ಜಗತ್ತಿನ ಶೇ 20 ಮಂದಿಯ ಆಹಾರಕ್ಕೆ ಸಮನಾಗಿದೆ. ಚೀನಾ, ಅಮೆರಿಕ, ಭಾರತ ಮುಂತಾದ ರಾಷ್ಟ್ರಗಳು ತಿನ್ನುವ ಪದಾರ್ಥಗಳನ್ನು ಹೆಚ್ಚು ಪೋಲು ಮಾಡುತ್ತಿವೆ. 

ಭಾರತ ಇಂದು ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ; ಆಹಾರೋತ್ಪಾದನೆಯಲ್ಲಿಯೂ ಮುಂಚೂಣಿಯಲ್ಲಿದೆ. ಆದರೆ, ಇದೇ ವೇಳೆ ದೇಶದಲ್ಲಿ ಆಹಾರದ ಅಭದ್ರತೆಯೂ ಹೆಚ್ಚಾಗಿದೆ. ತಿನ್ನುವ ಪದಾರ್ಥಗಳನ್ನು ಎಸೆಯುವುದು ಸೇರಿದಂತೆ ಆಹಾರದ ಸರಪಳಿಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳೇ ಇದಕ್ಕೆ ಕಾರಣ. 

ದೇಶದಲ್ಲಿ ಆಹಾರವು ರೈತನ ಹೊಲದಿಂದ ಗ್ರಾಹಕನ ತಟ್ಟೆಗೆ ತಲುಪುವುದರ ನಡುವೆ ಭಾರಿ ಪ್ರಮಾಣದಲ್ಲಿ ವ್ಯರ್ಥವಾಗುತ್ತಿದೆ. ವಿಶ್ವಸಂಸ್ಥೆಯ ಪ್ರಕಾರ, ದೇಶದಲ್ಲಿ ಪ್ರತಿ ವ್ಯಕ್ತಿಯು ವಾರ್ಷಿಕವಾಗಿ 55 ಕೆಜಿಯಷ್ಟು ಆಹಾರವನ್ನು ಪೋಲು ಮಾಡುತ್ತಾರೆ.  ವಾರ್ಷಿಕವಾಗಿ 7.82 ಕೋಟಿ ಟನ್‌ಗಳಷ್ಟು ಆಹಾರ ಪ್ರತಿ ವರ್ಷ ಚೆಲ್ಲಲಾಗುತ್ತಿದೆ. ಒಂದು ವೇಳೆ ಇದನ್ನು ಉಳಿಸಿದರೆ, ದೇಶದ ಶೇ 26.5ರಷ್ಟು ಮಂದಿಗೆ ಒಂದು ವರ್ಷದ ಅವಧಿಗೆ ಸಾಕಾಗುತ್ತದೆ. 

ಭಾರತದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ, ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಆಹಾರವನ್ನು ಚೆಲ್ಲಲಾಗುತ್ತಿದೆ. ಅಂದಾಜಿನ ಪ್ರಕಾರ, ನಗರ ಸ್ಥಳೀಯ ಆಡಳಿತಗಳ ವ್ಯಾಪ್ತಿಯಲ್ಲಿ ಸೃಷ್ಟಿಯಾಗುವ ತ್ಯಾಜ್ಯದಲ್ಲಿ ಆಹಾರ ತ್ಯಾಜ್ಯದ ಪ್ರಮಾಣ ಶೇ 10ರಿಂದ 12ರಷ್ಟಿದೆ. 

ಅಮೆರಿಕದಂಥ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಪ್ರತಿ ವ್ಯಕ್ತಿ ಚೆಲ್ಲುವ ಆಹಾರದ ಪ್ರಮಾಣ ಕಡಿಮೆ ಇದೆ. ಹಾಗಿದ್ದರೂ ಇದು, ದೇಶದ ಆಹಾರ ಭದ್ರತೆ, ಪರಿಸರದ ಮೇಲೆ, ಸಂಪನ್ಮೂಲಗಳ ಮೇಲೆ ಮತ್ತು ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿದೆ.

ಪರಿಸರದ ಮೇಲೆ ಪರಿಣಾಮ: ಆಹಾರ ಧಾನ್ಯಗಳ ಉತ್ಪಾದನೆಗೆ ಭಾರಿ ಪ್ರಮಾಣದ ಸಂಪನ್ಮೂಲಗಳ ಅಗತ್ಯವಿದೆ. ಅಗಾಧ ವಿಸ್ತೀರ್ಣದ ಭೂಮಿ, ನೀರು, ಗೊಬ್ಬರ ಬೇಕಾಗುತ್ತವೆ. ಆಹಾರವನ್ನು ಪೋಲು ಮಾಡುವುದು ಎಂ‌ದರೆ, ಅದು ಸಂಪನ್ಮೂಲಗಳನ್ನು ವ್ಯರ್ಥ ಮಾಡಿದಂತೆಯೇ. ಆಹಾರ ವ್ಯವಸ್ಥೆಯು ಬೃಹತ್‌ ಪ್ರಮಾಣದಲ್ಲಿ ಹಸಿರುಮನೆ ಅನಿಲಗಳ ಬಿಡುಗಡೆಗೆ ಕಾರಣವಾಗಿದೆ. ಈ ವಿಚಾರದಲ್ಲಿ ಭಾರತವು ಚೀನಾ ಮತ್ತು ಅಮೆರಿಕದ ನಂತರದ ಸ್ಥಾನದಲ್ಲಿದೆ. ಇದರ ಜತೆಗೆ ಸಂಪನ್ಮೂಲಗಳ ಅತಿಯಾದ ಬಳಕೆ ಮತ್ತು ತ್ಯಾಜ್ಯದ ಅಸಮರ್ಪಕ ವಿಲೇವಾರಿಯಿಂದ ಹವಾಮಾನ ಬದಲಾವಣೆಗೂ ಕಾರಣವಾಗಿದೆ. 

ಸಾಮಾಜಿಕ ಸಮಸ್ಯೆ: ಭಾರತದಲ್ಲಿ ಆಹಾರವು ಎಲ್ಲರಿಗೂ ಸಮಾನವಾಗಿ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಹಸಿದ ಹೊಟ್ಟೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಾಗತಿಕ ಆಹಾರ ವ್ಯವಸ್ಥೆಗೆ ಇದು ಗಂಭೀರ ಸವಾಲುಗಳನ್ನು ಒಡ್ಡುತ್ತಿದೆ. ಅನೇಕ ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿಯೂ ಭಾರತವೂ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹಸಿವಿನಿಂದ ಇರುವವರ ಪ್ರಮಾಣ ದೊಡ್ಡದಾಗಿದೆ. ಅದಕ್ಕೆ ಆಹಾರ ಮಣ್ಣು ಪಾಲಾಗುತ್ತಿರುವುದೂ ಒಂದು ಕಾರಣ. ರಾಷ್ಟ್ರೀಯ ಆಹಾರ ಭದ್ರತೆಗೂ ಇದು ಹೊಡೆತ ನೀಡುತ್ತಿದೆ. ಈ ವಿಚಾರದಲ್ಲಿ ಭಾರತ ಹೆಚ್ಚಿನ ಜಾಗರೂಕತೆ ವಹಿಸುವುದು ಅಗತ್ಯವಾಗಿದೆ.

ಸುಸ್ಥಿರ ಗುರಿಯ ಭಾಗ

ಜಾಗತಿಕ ಮಟ್ಟದ ಈ ಸಮಸ್ಯೆಯನ್ನು ವಿಶ್ವಸಂಸ್ಥೆಯೂ ಗಂಭೀರವಾಗಿ ಪರಿಗಣಿಸಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (ಎಸ್‌ಜಿಡಿ) ಆಹಾರ ಭದ್ರತೆ ಮತ್ತು ಆಹಾರ ವ್ಯರ್ಥವಾಗುವುದನ್ನು ಕಡಿಮೆ ಮಾಡುವುದನ್ನೂ ಒಂದು ಅಂಶವನ್ನಾಗಿ ಸೇರಿಸಿದೆ. ಎಸ್‌ಡಿಜಿ 2ರ ಪ್ರಕಾರ, 2030ರ ವೇಳೆಗೆ ಜಗತ್ತು ಹಸಿವು ಮುಕ್ತವಾಗಬೇಕು. ಮತ್ತು ‘2030ರ ವೇಳೆಗೆ ಜಾಗತಿಕವಾಗಿ ಮಾರುಕಟ್ಟೆ, ಗ್ರಾಹಕರ ಮಟ್ಟದಲ್ಲಿ ಆಗುವ ಆಹಾರ ನಷ್ಟ ಮತ್ತು ವ್ಯರ್ಥವನ್ನು ಅರ್ಧದಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬೇಕು’ ಎಂದು ಎಸ್‌ಡಿಜಿ 12.3 ಹೇಳುತ್ತದೆ.

ಆಹಾರ ಹೇಗೆ ವ್ಯರ್ಥವಾಗುತ್ತಿದೆ?

* ಅಗತ್ಯಕ್ಕಿಂತ ಹೆಚ್ಚು ಆಹಾರ ಪದಾರ್ಥ/ದಿನಸಿ ಖರೀದಿಸುವುದು

* ಮನೆಗಳಲ್ಲಿ ಆಹಾರ ತಯಾರಿ/ಸೇವನೆಯ ವಿಚಾರದಲ್ಲಿ ಸರಿಯಾದ ಲೆಕ್ಕಾಚಾರದ ಕೊರತೆ

* ಸೀಮಿತ ಸಂಗ್ರಹ ವ್ಯವಸ್ಥೆ (ಸಣ್ಣ ಫ್ರಿಜ್‌ಗಳು, ಅಡುಗೆ ಮನೆಯಲ್ಲಿ ಶೀತಲ/ಒಣ ವ್ಯವಸ್ಥೆಯ ಕೊರತೆ)

* ಹಬ್ಬ, ಮದುವೆ, ಜಾತ್ರೆ ಇತ್ಯಾದಿಗಳನ್ನು ಅತ್ಯಂತ ಅದ್ದೂರಿತನದಿಂದ ಮಾಡುವುದು

* ಹೋಟೆಲ್ ಮತ್ತು ಇತರ ಸ್ಥಳಗಳಲ್ಲಿ ಸರಿಯಾದ ಆಹಾರ ಸಂಗ್ರಹಣೆ ವ್ಯವಸ್ಥೆ ಇಲ್ಲದಿರುವುದು

ತಡೆಯುವುದು ಹೇಗೆ?

ಆಹಾರ ಚೆಲ್ಲುವಿಕೆ ತಡೆಗಟ್ಟಲು ಜನರು ವೈಯಕ್ತಿಕ ನೆಲೆಗಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರ, ಸ್ಥಳೀಯ ಆಡಳಿತಗಳು, ಖಾಸಗಿ ಸಂಘ ಸಂಸ್ಥೆಗಳು ಕೂಡ ತಮ್ಮ ನೀತಿ, ನಿಯಮಗಳಲ್ಲಿ ಸುಧಾರಣೆಗಳನ್ನು ತರುವುದರ ಮೂಲಕ ಈ ಸಮಸ್ಯೆಗೆ ಕಡಿವಾಣ ಹಾಕಲು ಯತ್ನಿಸಬೇಕು ಎನ್ನುವುದು ತಜ್ಞರ ಸಲಹೆ. ಅವರ ಪ್ರಕಾರ, 

* ವೈಯಕ್ತಿಕವಾಗಿ ಸುಸ್ಥಿರ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು. ಹಿತಮಿತವಾದ ಆಹಾರ ಸೇವಿಸುವುದು. ಮನೆಗಳಲ್ಲಿ ಅಗತ್ಯಕ್ಕೆ ತಕ್ಕಷ್ಟೇ ಆಹಾರ ವಸ್ತುಗಳ ಬಳಕೆ, ಅಡುಗೆ ಸಿದ್ಧಪಡಿಸುವುದು. ಸಭೆ ಸಮಾರಂಭಗಳಲ್ಲೂ ಕೂಡ ಎಷ್ಟು ಬೇಕು ಅಷ್ಟೇ ಆಹಾರವನ್ನು ಸೇವಿಸುವುದು 

* ಮನೆಗಳಲ್ಲಿ ಆಹಾರಗಳು ಹಾಳಾಗದಂತೆ ಸಂಗ್ರಹ ಮಾಡಲು ಪರಿಣಾಮಕಾರಿ ವ್ಯವಸ್ಥೆಯನ್ನು ರೂಪಿಸುವುದು

* ಅಡುಗೆಗೆ ಬಳಸಿದ ವಸ್ತುಗಳ ಉಳಿಕೆಯನ್ನು ಕಾಂಪೋಸ್ಟ್‌
ಆಗಿ ಪರಿವರ್ತಿಸುವುದು

* ಮನೆ ಅಥವಾ ಮದುವೆ ಇನ್ನಿತರ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಅಗತ್ಯವಿರುವವರಿಗೆ ಹಂಚುವುದು. ಉದಾ: ಬಡವರಿಗೆ, ಆಶ್ರಮಗಳಿಗೆ, ಹಾಸ್ಟೆಲ್‌ಗಳಿಗೆ ಇತ್ಯಾದಿ 

* ಮದುವೆ ಸೇರಿದಂತೆ ಇತರ ಸಮಾರಂಭಗಳಲ್ಲಿ ಕಟ್ಟುನಿಟ್ಟಾಗಿ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳುವುದು

* ಉಳಿದ ಆಹಾರವನ್ನು ಡಬ್ಬದಲ್ಲಿ ತುಂಬಿಸಿ ಅತಿಥಿಗಳಿಗೆ ನೀಡಬಹುದು ಅಥವಾ ಸ್ಥಳೀಯ ಅನಾಥಾಶ್ರಮ, ವೃದ್ಧಾಶ್ರಮ ಸೇರಿದಂತೆ ಬಡವರಿಗೆ ವಿತರಿಸಬಹುದು. ಇದಕ್ಕಾಗಿ ಸರ್ಕಾರೇತರ ಸಂಸ್ಥೆಗಳ ನೆರವನ್ನೂ ಪಡೆಯಬಹುದು

* ಆಹಾರ ವ್ಯರ್ಥವಾಗುವುದನ್ನು ತಡೆಯಲು ಸರ್ಕಾರ, ಸ್ಥಳೀಯ ಸಂಸ್ಥೆಗಳು ಕಠಿಣ ನಿಯಮಗಳನ್ನು ರೂಪಿಸುವುದು 

* ಉಳಿಕೆ ಆಹಾರ ಪುನರ್‌ಹಂಚಿಕೆ ಮಾಡುವ ಸಂಸ್ಥೆ/ಜಾಲಗಳಿಗೆ ಪ್ರೋತ್ಸಾಹ ನೀಡುವುದು 

* ಜನರಲ್ಲಿ ಜಾಗೃತಿ ಮೂಡಿಸುವುದು, ಚಳವಳಿಗಳನ್ನು ರೂಪಿಸುವುದು

ಆಧಾರ: ವಿಶ್ವಸಂಸ್ಥೆಯ ವರದಿಗಳು, ಡಬ್ಲ್ಯುಆರ್‌ಐ ಇಂಡಿಯಾ, ಮಾಧ್ಯಮಗಳ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.